ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಡ್ತಿ ಮೀಸಲಾತಿ ರಕ್ಷಿಸಲು ಆಗ್ರಹ

Last Updated 17 ನವೆಂಬರ್ 2017, 8:53 IST
ಅಕ್ಷರ ಗಾತ್ರ

ಬೆಳಗಾವಿ: ’ಪರಿಶಿಷ್ಟ ಜಾತಿ ಹಾಗೂ ಪಂಗಡ ಮುಂಬಡ್ತಿ ಮೀಸಲಾತಿ ರಕ್ಷಿಸಬೇಕು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರಿಗೂ ಈ ಸೌಲಭ್ಯ ವಿಸ್ತರಿಸಬೇಕು’ ಎಂದು ಆಗ್ರಹಿಸಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಒಕ್ಕೂಟದಿಂದ ಸುವರ್ಣ ವಿಧಾನಸೌಧ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ‘ದಲಿತ ನೌಕರರ ಮೀಸಲಾತಿ ರಕ್ಷಿಸಲು ಮಂಡಿಸಲಾಗಿರುವ ತಿದ್ದುಪಡಿ ಮಸೂದೆಗೆ ಚಳಿಗಾಲದ ಅಧಿವೇಶನದಲ್ಲಿಯೇ ಅನುಮೋದನೆ ನೀಡಬೇಕು. ಈ ವರ್ಗದವರ ಹಿತ ಕಾಪಾಡಬೇಕು’ ಎಂದು ಕೋರಿದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಸಮಾಜಕಲ್ಯಾಣ ಸಚಿವ ಎಚ್‌. ಆಂಜನೇಯ, ‘ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತಹ ಸರ್ಕಾರ ನಮ್ಮದು. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪರವಿದ್ದಾರೆ. ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗಿದೆ. ನಮ್ಮ ಪರವಾಗಿಯೇ ಎಲ್ಲವೂ ಆಗಲಿದೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.

ಖಾತೆಗೆ ವೇತನ ಹಾಕಿ: 1982ರ ಅಂಗವಿಕಲರ ಅನುದಾನ ಸಂಹಿತೆಯಡಿ ಅನುದಾನ ಪಡೆಯುತ್ತಿರುವ ಶಾಲೆಗಳ ನೌಕರರನ್ನು ಎಚ್‌ಆರ್‌ಎಂಎಸ್‌ಗೆ ಅಳವಡಿಸಿ ಪ್ರತಿ ತಿಂಗಳೂ ಅವರವರ ಖಾತೆಗೆ ವೇತನ ಜಮಾ ಮಾಡುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಅನು ದಾನಿತ ಶಾಲೆಗಳ ನೌಕರರ ಸಂಘದಿಂದ ‌ಗುರುವಾರ ಪ್ರತಿಭಟನೆ ನಡೆಯಿತು.

ಈ ಶಾಲೆಗಳಲ್ಲಿ ನಿವೃತ್ತಿ ಹೊಂದಿದವರಿಗೆ ನ್ಯಾಯಾಲಯದ ಆದೇಶದ ಪ್ರಕಾರ ಪಿಂಚಣಿ ನೀಡಬೇಕು. ಅನುದಾನಿತ ವಿಶೇಷ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಾಲೆಗಳಿಗೆ ಬರಬೇಕಾದ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸಚಿವ ಎಚ್‌. ಆಂಜನೇಯ ಮನವಿ ಸ್ವೀಕರಿಸಿದರು. ಅಧ್ಯಕ್ಷ ಎಂ.ಎಸ್‌. ದೊಡ್ಡಮನಿ ನೇತೃತ್ವ ವಹಿಸಿದ್ದರು.

ಕುಡಿಯುವ ನೀರು ಪೂರೈಸಿ: ಹುಕ್ಕೇರಿ ತಾಲ್ಲೂಕಿನ ಶಿಪ್ಪೂರ ಹಾಗೂ ಇತರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸ್ವಾಭಿಮಾನಿ ವೇದಗಂಗಾ ಏತ ನೀರಾವರಿ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

‘ಸಮಸ್ಯೆ ಪರಿಹಾರಕ್ಕಾಗಿ ಮಂಜೂರಾದ ₹ 17.4 ಕೋಟಿ ರೂಪಾಯಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕು. ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಗಡಹಿಂಗ್ಲಜ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ಹುಕ್ಕೇರಿ ತಾಲ್ಲೂಕಿನ 12 ಹಳ್ಳಿಗಳ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಬೇಕು. ಹಿರಣ್ಯಕೇಶಿ ನದಿ ಪಾತ್ರದ ಹಳ್ಳಿಗಳನ್ನು ನೀರಾವರಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಮುಖಂಡ ಎ.ಎಸ್. ಹಿರೇಮಠ ನೇತೃತ್ವ ವಹಿಸಿದ್ದರು.

ಅನುದಾನಕ್ಕೆ ಒಳಪಡಿಸಲು ಒತ್ತಾಯ:  1995ರ ನಂತರ ಪ್ರಾರಂಭವಾದ ಶಾಲಾ–ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುದಾನ ರಹಿತ ಶಾಲೆ ಹಾಗೂ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣ ನೀಡುತ್ತಿವೆ. 1987ರಿಂದ 1995ರವರೆಗೆ ವೇತನ ಅನುದಾನವನ್ನು ಅಂದಿನ ಸರ್ಕಾರಗಳು ನೀಡಿವೆ. ಆದರೆ, ಈಚಿನ ದಿನಗಳಲ್ಲಿ ಅನುದಾನ ನೀಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ನೌಕರರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

‘ಸರ್ಕಾರಿ ಶಾಲಾ, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಮಕ್ಕಳ ನಡುವೆ ತಾರತಮ್ಯ ಮಾಡಬಾರದು’ ಎಂದು ಕೋರಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಕಡೊಳ್ಳಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT