ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಬಳಿಗೊಂದು ಕರ್ನಾಟಕ ಪಬ್ಲಿಕ್‌ ಶಾಲೆ

Last Updated 17 ನವೆಂಬರ್ 2017, 8:57 IST
ಅಕ್ಷರ ಗಾತ್ರ

ಬೆಳಗಾವಿ: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಪ್ರತಿ ಹೋಬಳಿಯಲ್ಲಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ ಹೆಸರಿನಲ್ಲಿ ಮಾದರಿ ಶಾಲೆ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಅನುಷ್ಠಾನದಲ್ಲಿ ಕೇರಳ ಮಾದರಿಯನ್ನು ಅನುಸರಿಸುವ ಸಂಬಂಧ ವಿಧಾನ ಪರಿಷತ್ತಿನಲ್ಲಿ ಗುರುವಾರ ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಪ್ರಸ್ತಾಪಿಸಿದ ವಿಚಾರಕ್ಕೆ ಸಚಿವರು ಉತ್ತರಿಸಿದರು.

‘ಈಗಾಗಲೇ 74 ಕಡೆ ಮಾದರಿ ಶಾಲೆಗಳನ್ನು ಆರಂಭಿಸಿದ್ದೇವೆ. 760 ಹೋಬಳಿಗಳಲ್ಲೂ ಇಂತಹ ಶಾಲೆ ಆರಂಭಿಸುವ ಚಿಂತನೆ ನಮ್ಮದು. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಕಾಲೇಜಿನವರೆಗೆ ಶಿಕ್ಷಣ ಒದಗಿಸುವ ಗುರಿ ನಮ್ಮದು. ಮುಂದಿನ ಬಜೆಟ್‌ನಲ್ಲೇ ಇದಕ್ಕೆ ಅನುದಾನ ಒದಗಿಸಲಿದ್ದೇವೆ’ ಎಂದರು.

ಮಾದರಿ ಶಾಲೆಗಳ ಸ್ಥಾಪನೆಗೆ ಎಲ್ಲಿ ಸಾಕಷ್ಟು ಜಾಗ ಲಭ್ಯ ಇದೆ. ಎಲ್ಲಿ ಮೂಲಸೌಕರ್ಯಗಳಿವೆ ಎಂಬ ಬಗ್ಗೆ ಈಗಾಗಲೇ ಲೋಕೋಪಯೋಗಿ, ಪಂಚಾಯತ್‌ರಾಜ್‌ ಹಾಗೂ ಶಿಕ್ಷಣ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿವೆ ಎಂದು ಅವರು ತಿಳಿಸಿದರು. 

‘ಆರ್‌ಟಿಇ ಕಾಯ್ದೆ ಮೂಲ ಆಶಯದಂತೆ ಅನುಷ್ಠಾನ ಆಗುತ್ತಿಲ್ಲ. ಸರ್ಕಾರದ ಹಣವನ್ನು ಖಾಸಗಿ ಶಾಲೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇನ್ನೊಂದೆಡೆ ಸರ್ಕಾರಿ ಶಾಲೆಗಳ ಸುಧಾರಣೆಗೆ ಇದರಿಂದ ಪರೋಕ್ಷವಾಗಿ ಏಟು ಬೀಳುತ್ತಿದೆ’ ಎಂದು ಕೆ.ಸಿ.ಕೊಂಡಯ್ಯ ಆರೋಪಿಸಿದರು.

‘ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಸೀಟು ನೀಡುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಅವರ ಶುಲ್ಕವನ್ನು ಒಂದೋ ಪೋಷಕರಿಂದ ವಸೂಲಿ ಮಾಡಿ ಅಥವಾ ಆಡಳಿತ ಮಂಡಳಿಗಳೇ ಭರಿಸಲಿ’ ಎಂದು ಅವರು ಸಲಹೆ ನೀಡಿದರು. ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ವಿ.ಎಸ್‌.ಉಗ್ರಪ್ಪ ಅವರೂ ಇದಕ್ಕೆ ಬೆಂಬಲ ಸೂಚಿಸಿದರು.

‘ಆರ್‌ಟಿಇ ಕಾಯ್ದೆಯಿಂದಾಗಿ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಒದಗಿಸುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಿದ ಬಳಿಕವಷ್ಟೇ ಈ ಯೋಜನೆ ಸ್ಥಗಿತಗೊಳಿಸಿ’ ಎಂದು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು. ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಇದಕ್ಕೆ ದನಿಗೂಡಿಸಿದರು.

‘ಆರ್‌ಟಿಇ ಕಾಯ್ದೆ ಜಾರಿಯಿಂದಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇದನ್ನು ರದ್ದುಪಡಿಸುವ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಶಿಕ್ಷಕರ ವರ್ಗಾವಣೆ ಶೀಘ್ರ:
‘ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅವರ ಕುಟುಂಬಗಳಿಗೆ ತೊಂದರೆಯಾಗದಂತೆ ಶಿಕ್ಷಕರ ವರ್ಗಾವಣೆಯನ್ನು ಶೀಘ್ರವೇ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ವಿಧಾನಪರಿಷತ್ತಿನಲ್ಲಿ  ಹೇಳಿದರು.

ಬಿಜೆಪಿಯ ಎಸ್‌.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ‘ವರ್ಗಾವಣೆ ಕರಡು ನಿಯಮಕ್ಕೆ 5,339 ಆಕ್ಷೇಪಣೆಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಲಾಗಿದೆ. ಅಂತಿಮ ನಿಯಮಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಅಲ್ಪಸಂಖ್ಯಾತ ಶಾಲೆಗಳಲ್ಲೂ ಆರ್‌ಟಿಇ ಸೀಟು
‘ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಡಳಿತದ ಶಾಲೆಗಳು ಆರ್‌ಟಿಇ ಅಡಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದರೆ ಅವರಿಗೂ ಅವಕಾಶ ಕೊಡಲಾಗುವುದು’ ಎಂದು ತನ್ವೀರ್‌ ಸೇಠ್‌ ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟು ಪಡೆದ ವಿದ್ಯಾರ್ಥಿಗಳನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳುವುದನ್ನು ತಡೆಯುವುದಕ್ಕೂ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

‘ಕೇರಳ ಮಾದರಿಯಲ್ಲಿ ಆರ್‌ಟಿಇ ಕಾಯ್ದೆ ಅನುಷ್ಠಾನ’
‘ಆರ್‌ಟಿಇ ಕಾಯ್ದೆಯಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಮುಕ್ತ ಮನಸ್ಸು ಹೊಂದಿದ್ದೇನೆ. ಕೇರಳ ಮಾದರಿಯ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ತನ್ವೀರ್‌ ಸೇಠ್‌ ಭರವಸೆ ನೀಡಿದರು.

‘ಕಾಯ್ದೆ ಪ್ರಕಾರ ಸೀಟು ಬಯಸುವ ವಿದ್ಯಾರ್ಥಿಗೆ ಮೊದಲು ಸರ್ಕಾರಿ ಶಾಲೆಯಲ್ಲೇ ಅವಕಾಶ ಕಲ್ಪಿಸಬೇಕು. ಅಲ್ಲಿ ಸೀಟು ಲಭ್ಯವಿಲ್ಲದಿದ್ದರೆ ಅನುದಾನಿತ ಶಾಲೆಯಲ್ಲಿ, ಅಲ್ಲೂ ಸೀಟು ಲಭ್ಯವಿಲ್ಲದಿದ್ದರೆ ಅನುದಾನ ರಹಿತ ಶಾಲೆಗಳಲ್ಲಿ ಅವಕಾಶ ಕಲ್ಪಿಸಬೇಕು. ಇದನ್ನು ಕೇರಳದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ನಮ್ಮಲ್ಲೂ ಇದನ್ನು ಜಾರಿಗೆ ತರಬೇಕು’ ಎಂದು ಕೆ.ಸಿ.ಕೊಂಡಯ್ಯ ಸಲಹೆ ನೀಡಿದರು.

ಅಂಕಿ ಅಂಶ

5.19 ಲಕ್ಷ

ಇದುವರೆಗೆ ಆರ್‌ಟಿಇ ಕಾಯ್ದೆ ಅಡಿ ಹಂಚಿಕೆ ಮಾಡಿದ ಸೀಟು

₹ 685 ಕೋಟಿ

ಖಾಸಗಿ ಶಾಲೆಗಳಿಗೆ ಮರುಪಾವತಿ ಮಾಡಿರುವ ಶುಲ್ಕ

11,917

ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟು ಹಂಚಿಕೆ

* * 

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಶಾಲೆ ಉದ್ಧಾರ ಮಾಡುವುದು ಏಕೆ?
ಪ್ರತಾಪ ಚಂದ್ರ ಶೆಟ್ಟಿ
ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT