ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಪಾಳಿ ಪದ್ಧತಿಗೆ ಅಲ್ಪವಿರಾಮ

Last Updated 17 ನವೆಂಬರ್ 2017, 9:08 IST
ಅಕ್ಷರ ಗಾತ್ರ

ಬಳ್ಳಾರಿ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರಿದಿರುವುರಿಂದ, ಇಲ್ಲಿನ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರ ಪಾಳಿ ಪದ್ಧತಿಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಇದೇ ವೇಳೆ ಎರಡೂ ಕಡೆ ಎಲ್ಲ ರೋಗಿಗಳಿಗೂ ಹಾಸಿಗೆ ಸೌಕರ್ಯ ಕಲ್ಪಿಸಲು ಸಾಧ್ಯವಾಗದ ಸನ್ನಿವೇಶವೂ ಮೂಡಿದೆ.

ಎಲ್ಲ ವೈದ್ಯರೂ ಪಾಳಿ ಸಮಯ ಸೇರಿ ಸಾಧ್ಯವಾದಷ್ಟು ರೀತಿಯಲ್ಲಿ ದಿನವಿಡೀ ಆಯಾ ವಿಭಾಗಗಳಲ್ಲಿ ಹಾಜರಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ. ಕೆಲಸ ಕಾರ್ಯಭಾರ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಾಗೂ ಅಗತ್ಯ ಕಂಡರೆ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಯನ್ನು ಆಸ್ಪತ್ರೆಗಳಿಗೆ ನಿಯೋಜಿಸುವ ಪ್ರಯತ್ನವೂ ನಡೆದಿದೆ.

‘ತುರ್ತು ಚಿಕಿತ್ಸೆ ಅನಿವಾರ್ಯವಾಗಿರುವ ರೋಗಿಗಳು ಹೆಚ್ಚು ಬರುತ್ತಿದ್ದಾರೆ. ಇಲಾಖೆಯಿಂದ ಸುತ್ತೋಲೆಯು ಬಂದಿದ್ದು. ಕಡಿಮೆ ಕಾರ್ಯಭಾರ ಇರುವ ಕೇಂದ್ರ ಮತ್ತು ಸಿಬ್ಬಂದಿಯನ್ನು ಗುರುತಿಸಲಾಗುತ್ತಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಬಸರೆಡ್ಡಿ ಗುರುವಾರ ತಿಳಿಸಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ 210 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆಯ ಔಷಧಿ, ಶಸ್ತ್ರಚಿಕಿತ್ಸೆ ಮತ್ತು ಮೂಳೆ ರೋಗ ಚಿಕಿತ್ಸೆ, ಗರ್ಭಿಣಿ ಮತ್ತು ಪ್ರಸೂತಿ ಚಿಕಿತ್ಸೆ ವಿಭಾಗಗಳಿಗೆ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ. ಎಂದಿಗಿಂತ ಶೇ 30ರಷ್ಟು ರೋಗಿಗಳು ಹೆಚ್ಚಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಶುಶ್ರೂಶಕಿಯರ ಕೊರತೆ: ಆಸ್ಪತ್ರೆಗೆ 26 ವೈದ್ಯರ ಹುದ್ದೆ ಮಂಜೂರಾಗಿದ್ದು 30 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಶುಶ್ರೂಶಕಿಯರ ಕೊರತೆ ತೀವ್ರವಾಗಿದೆ’ ಎಂದರು.

ಶೇ 20ರಷ್ಟು ಹೆಚ್ಚಳ: ವಿಮ್ಸ್‌ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ವೈದ್ಯಕೀಯ ಅಧೀಕ್ಷಕ ಡಾ.ಮರಿರಾಜ ಜೀರ, ‘ಆಸ್ಪತ್ರೆಗೆ ದಿನವೂ 1000 ರೋಗಿಗಳು ಬರುತ್ತಿದ್ದಾರೆ. ಮುಷ್ಕರಕ್ಕೆ ಮುನ್ನ ಪ್ರತಿ ದಿನ ಸರಾಸರಿ 800 ರೋಗಿಗಳು ಬರುತ್ತಿದ್ದರು’ ಎಂದರು.

‘1017 ಹಾಸಿಗೆ ಸೌಕರ್ಯವುಳ್ಳ ಆಸ್ಪತ್ರೆಯಲ್ಲಿ ಮೂರು ದಿನದಿಂದ 250 ಹೆಚ್ಚುವರಿ ಬೆಡ್‌ ಸೌಕರ್ಯ ಕಲ್ಪಿಸಲಾಗಿದೆ. ಆದರೂ ಬೇಡಿಕೆ ಪೂರೈಸಲು ಆಗುತ್ತಿಲ್ಲ’ ಎಂದರು. ‘ಚಿಕಿತ್ಸೆ ಪಡೆಯುತ್ತಿದ್ದಾಗಲೇ ನ.13ರಿಂದ 15ರವರೆಗೆ ಆಸ್ಪತ್ರೆಯಲ್ಲಿ 30 ಮಂದಿ ಮೃತಪಟ್ಟರು’ ಎಂದರು.

* * 

ಪ್ರತಿದಿನ ಮಕ್ಕಳ ವಿಭಾಗಕ್ಕೆ 200ರಿಂದ 300 ಮಕ್ಕಳು ದಾಖಲಾಗುತ್ತಿದ್ದರು. ಮುಷ್ಕರದ ಪರಿಣಾಮವಾಗಿ ಸರಾಸರಿ 400 ಮಕ್ಕಳು ದಾಖಲಾಗುತ್ತಿದ್ದಾರೆ.
ಡಾ.ಬಿ.ಎಸ್‌.ಶ್ರೀಕಾಂತ್‌, ವಿಮ್ಸ್‌ ಆಸ್ಪತ್ರೆ

ಮುಷ್ಕರ ಇನ್ನೂ ಮುಂದುವರಿದರೆ ಮಾತ್ರ ಸರ್ಕಾರಿ ಆಸ್ಪತ್ರೆಗಳು ಒತ್ತಡವನ್ನು ತಡೆದುಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ
ಡಾ.ಬಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ

ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲ ವಿಭಾಗಗಳಲ್ಲೂ ವೈದ್ಯ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ.
ಡಾ.ಗಿರಿರಾಜ ಜೀರ, ವಿಮ್ಸ್‌ ಆಸ್ಪತ್ರೆ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT