ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದರು

Last Updated 17 ನವೆಂಬರ್ 2017, 9:13 IST
ಅಕ್ಷರ ಗಾತ್ರ

ಬೀದರ್‌: ಕೆಪಿಎಂಸಿ ಕಾಯ್ದೆಯ ತಿದ್ದುಪಡಿ ವಿರೋಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಕಾರಣ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಗುರುವಾರ ಬಾಗಿಲು ಮುಚ್ಚಿದ್ದವು. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆ ಅಬಾಧಿತವಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬಂದಿದ್ದರು. ಸರತಿ ಸಾಲಿನಲ್ಲಿ ತಾಸುಗಟ್ಟಲೇ ನಿಂತು ಚಿಕಿತ್ಸೆ ಪಡೆದುಕೊಂಡರು.

ಗ್ರಾಮೀಣ ಪ್ರದೇಶದಿಂದ ಬಂದ ರೋಗಿಗಳು ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದನ್ನು ಕಂಡು ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬಂದರು. ಅಲ್ಲಿ ರೋಗಿಗಳ ಸಂಖ್ಯೆ ಅಧಿಕ ಇದ್ದ ಕಾರಣ ತೊಂದರೆ ಅನುಭವಿಸಿದರು.

ತುರ್ತು ಚಿಕಿತ್ಸೆ ಅಗತ್ಯವಿದ್ದ ಭಾಲ್ಕಿ ಹಾಗೂ ಔರಾದ್‌ ತಾಲ್ಲೂಕಿನ ಕಮಲನಗರದ ರೋಗಿಗಳು ಮಹಾರಾಷ್ಟ್ರದ ಉಮರ್ಗಾ ಹಾಗೂ ಸೊಲ್ಲಾಪುರಕ್ಕೆ ತೆರಳಿದರೆ, ಔರಾದ್‌ ಹಾಗೂ ಹುಮನಾಬಾದ್‌ನ ರೋಗಿಗಳು ತೆಲಂಗಾಣದ ಹೈದರಾಬಾದ್‌ಗೆ ತೆರಳಿ ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರು.

‘ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ವರದಿ ನೀಡುವಂತೆ ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅಧಿಕ ಇತ್ತು. ಮಧ್ಯಾಹ್ನದ ಬಿಡುವಿನ ವೇಳೆಯಲ್ಲೂ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ತಿಳಿಸಿದರು.

‘ತುರ್ತು ಚಿಕಿತ್ಸೆ ಅಗತ್ಯ  ಇದ್ದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಸ್ವಲ್ಪ ಕೆಲಸದ ಒತ್ತಡ ಇದೆ. ಆದರೆ ಗುರುವಾರ ಸಂಜೆಯ ವರೆಗೂ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ’ ಎಂದು ಹೇಳಿದರು. ‘ಬೀದರ್ ನಗರದ ಕುಂಬಾರವಾಡ, ಚಿದ್ರಿ ಕಾಲೊನಿ ಸೇರಿ ಐದು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಖಾಸಗಿ ವೈದ್ಯರ ಮುಷ್ಕರದಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿತ್ತು. ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಆರೋಗ್ಯ ಇಲಾಖೆಯ ಆಯುಕ್ತರಿಗೆ ವರದಿ ಕಳಿಸಲಾಗಿದೆ’ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಸಿ.ಎಸ್‌.ರಗಟೆ ಹೇಳಿದರು.

ಸರ್ಕಾರಿ ವೈದ್ಯರು, ಸಿಬ್ಬಂದಿಗೆ ರಜೆ ನೀಡದಿರಲು ಸೂಚನೆ
ಬೀದರ್‌: ‘ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಕಾರಣ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ವೈದ್ಯರು, ಸಿಬ್ಬಂದಿಗೆ ರಜೆ ನೀಡಬಾರದು. ಆಂಬುಲನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು’ ಎಂದು ತಿಳಿಸಿದರು.

‘ರೋಗಿಗಳಿಗೆ ಅನಾನುಕೂಲ ಆಗದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ರಕ್ತದಾನ ಶಿಬಿರ ಏರ್ಪಡಿಸುತ್ತಿದ್ದಾರೆ’ ಎಂದು ಬ್ರಿಮ್ಸ್ ನಿರ್ದೇಶಕ ಡಾ. ಸಿ.ಚನ್ನಣ್ಣ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಮಾತನಾಡಿ, ‘ರಜೆ ಮೇಲೆ ತೆರಳದಂತೆ ಎಲ್ಲ ಸರ್ಕಾರಿ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾತ್ರಿ ವೇಳೆಯಲ್ಲಿಯೂ ರೋಗಿಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ.ಷಣ್ಮುಖ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್.ರಗಟೆ, ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನೋರ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ, ಆರ್‌ಸಿಎಚ್ ಅಧಿಕಾರಿ ಡಾ.ರವಿ ಸಿರ್ಸೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಾರ್ಥಂಡರಾವ್ ಖಾಶೆಂಪೂರಕರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಶಂಕರ ಬಿ ಭಾಗವಹಿಸಿದ್ದರು.

* * 

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿದ್ದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಡಾ.ಎಂ.ಎ.ಜಬ್ಬಾರ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT