ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಬೆಲೆಗೆ ಬಿತ್ತನೆ ಈರುಳ್ಳಿ ಮಾರಾಟ

Last Updated 17 ನವೆಂಬರ್ 2017, 9:26 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ತಮಿಳುನಾಡಿನಿಂದ ಬರುವ ವ್ಯಾಪಾರಿಗಳು ಎಪಿಎಂಸಿ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರಕ್ಕೆ ಬಿತ್ತನೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ’ ಎಂದು ರೈತರು ಆರೋಪಿಸಿದ್ದಾರೆ. ‘ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ನೆರೆರಾಜ್ಯದ ವ್ಯಾಪಾರಿ ಗಳದ್ದೇ ಕಾರುಬಾರು ನಡೆಯುತ್ತಿದೆ’ ಎನ್ನುವುದು ರೈತರ ದೂರು.

‘ಮಾರುಕಟ್ಟೆಗೆ ತಮಿಳುನಾಡಿನಿಂದ ವ್ಯಾಪಾರಸ್ಥರು 10ಕ್ಕೂ ಹೆಚ್ಚು ಲಾರಿಗಳಲ್ಲಿ ಬಿತ್ತನೆ ಈರುಳ್ಳಿ ತರುತ್ತಾರೆ. ಬೆಳಿಗ್ಗೆಯೇ ಮಾರುಕಟ್ಟೆಗೆ ಬಂದರೂ, ಮಧ್ಯಾಹ್ನದವರೆಗೂ ಈರುಳ್ಳಿಯನ್ನು ಇಳಿಸುವುದಿಲ್ಲ. ಬಳಿಕ ದರ ಏರಿಸತೊಡಗುತ್ತಾರೆ. ಖರೀದಿಗಾಗಿಯೇ ಅಲ್ಲಿಗೆ ಬರುವ ರೈತರು ಅವರು ಮಾರಾಟ ಮಾಡುವವರೆಗೂ ಕಾದು, ಹೇಳಿದ ಬೆಲೆ ತೆತ್ತು ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೇಳಿದರೆ, ಬೇಕಾದರೆ ತೆಗೆದುಕೊಳ್ಳಿ ಬೇಡವಾದರೆ ಹೋಗಿ ಎಂದು ವ್ಯಾಪಾರಿಗಳು ಅಹಂಕಾರದಿಂದ ಹೇಳುತ್ತಾರೆ. ತಾವು ನಿಗದಿ ಮಾಡಿದ ಬೆಲೆಗೆ ಕೊಳ್ಳಲು ಮುಂದಾದರೆ ಮಾತ್ರ ಮೂಟೆಗಳನ್ನು ಲಾರಿಗಳಿಂದ ಇಳಿಸುತ್ತಾರೆ’ ಎಂದು ರೈತ ಮಾದಪ್ಪ ಆರೋಪಿಸಿದರು.

‘ಹೆಸರಿಗೆ ಮಾತ್ರ ರೈತರ ಸಂತೆ. ಆದರೆ ಇಲ್ಲಿ ವ್ಯಾಪಾರಿಗಳದ್ದೇ ದರ್ಬಾರು ನಡೆಯುತ್ತದೆ. ರೈತರು ಬೆಳೆದ ಬೆಳೆಗಳಿಗೆ ಬೆಲೆಯೇ ಇಲ್ಲ. ವ್ಯಾಪಾರಿಗಳು ಮನಸ್ಸಿಗೆ ಬಂದಂತೆ ಬೆಲೆ ನಿಗದಿ ಮಾಡುತ್ತಾರೆ. ಈ ರೀತಿ ವಂಚನೆ ನಡೆಯುತ್ತಿದ್ದರೂ ಎಪಿಎಂಸಿ ಅಧಿಕಾರಿಗಳು ಇತ್ತ ಸುಳಿಯು ತ್ತಿಲ್ಲ’ ಎಂದು ರೈತರು ದೂರಿದರು.

ಬಿತ್ತನೆ ಈರುಳ್ಳಿಯು ಗುಣಮಟ್ಟದ ಮೇಲೆ ಗುರುವಾರ ಕ್ವಿಂಟಲ್‌ಗೆ ₹13,000ದಿಂದ 14,000ವರೆಗೂ ಮಾರಾಟವಾಗಿದೆ. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ರೈತರ ಹಣ ತಮಿಳುನಾಡಿನ ವ್ಯಾಪಾರಿಗಳ ಪಾಲಾಗಿದೆ ಎಂದು ತಿಳಿಸಿದರು.

‘ನಾವು ಬೆಳೆದ ಈರುಳ್ಳಿ ಗುಣಮಟ್ಟ ಹೊಂದಿದ್ದರೂ ಕಳಪೆಯಾಗಿದೆ ಎಂದು ವ್ಯಾಪಾರಸ್ಥರು ಬೆಲೆ ಇಳಿಸುತ್ತಾರೆ. ಆದರೆ ಬಿತ್ತನೆ ಈರುಳ್ಳಿ ಕೊಳ್ಳವಾಗ ಮಾತ್ರ ಸಾವಿರಾರು ರೂಪಾಯಿ ಬೆಲೆ ಏರಿಸುತ್ತಾರೆ. ಅವರನ್ನು ನಿಯಂತ್ರಿಸುವವರು ಯಾರೂ ಇಲ್ಲ’ ಎಂದು ರೈತರು ತಿಳಿಸಿದರು.

‘ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು ಇದಕ್ಕೆ ಪರಿಹಾರ ಹುಡುಕಿ, ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸಂತೆ ತುಂಬಾ ವ್ಯಾಪಾರಿಗಳದ್ದೇ ಪಾರುಪತ್ಯ. ಹೆಸರಿಗೆ ಮಾತ್ರ ರೈತರ ಸಂತೆ. ಈ ವ್ಯಾಪಾರಿಗಳ ಜೊತೆ ಇಲ್ಲಿನ ಅಧಿಕಾರಿಗಳು ಶಾಮಿಲಾಗಿ ರೈತರನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT