ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಮುಂದುವರಿದ ಬಂದ್‌

Last Updated 17 ನವೆಂಬರ್ 2017, 9:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕ ಗುರುವಾರದಿಂದ ಅನಿರ್ದಿಷ್ಟ ಧರಣಿ ಮುಂದುವರಿದಿದೆ.

ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್‌ಗೆ ಬೆಂಬಲ ಸೂಚಿಸಿ ಬಾಗಿಲು ಮುಚ್ಚಿವೆ, ಒಪಿಡಿ, ತುರ್ತು ಚಿಕಿತ್ಸೆ, ಡಯಾಬಿಟಿಸ್‌, ಡೆಂಟಲ್‌ ಕ್ಲಿನಿಕ್‌ಗಳು ಸೇರಿದಂತೆ ಪ್ರಯೋಗಾಲಯಗಳು ಎಲ್ಲ ತಪಾಸಣೆಗಳನ್ನು ಸ್ಥಗಿತಗೊಸಿವೆ. ನಗರದಲ್ಲಿ ಬಂದ್‌ನಿಂದ ರೋಗಿಗಳಿಗೆ ತೊಂದರೆ ಉಂಟಾದ ವರದಿಯಾಗಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿನ ಒಳರೋಗಿಗಳ ಸಂಖ್ಯೆ ಮುಗಿ ಬಿದ್ದಿದ್ದ ಸಂಖ್ಯೆ ಹೆಚ್ಚು ಕಂಡು ಬಂತು.

‘ಬಂದ್‌ನಿಂದ ಉಂಟಾಗ ಬಹುದಾದ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಸರ್ಕಾರ ಆದೇಶ ನೀಡಿದರೂ ಬೆಳಿಗ್ಗೆ 9.30ಕ್ಕೆ ಕರ್ತವ್ಯಕ್ಕೆ ಬರಬೇಕಿದ್ದ ವೈದ್ಯರು 10ಗಂಟೆ ಆದರೂ ಆಸ್ಪತ್ರೆಗೆ ಬಂದಿರಲಿಲ್ಲ. ಇದರಿಂದಾಗಿ ಬೆಳಿಗ್ಗೆ 8 ಗಂಟೆಯಿಂದಲ್ಲೇ ಆಸ್ಪತ್ರೆಯ ಕೌಂಟರ್‌ನಲ್ಲಿ ಚೀಟಿ ಪಡೆದು ವೈದ್ಯರ ಕೊಠಡಿ ಸರತಿ ಸಾಲಿನಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಿದ ದೃಶ್ಯ ಕಂಡು ಬಂತು.

‘ಖಾಸಗೀ ವೈದ್ಯರ ಮುಷ್ಕರದಿಂದಾಗಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ನವೆಂಬರ್‌ 3 ರಂದು 52 ಜನ ಒಳರೋಗಿಗಳಿದ್ದು, 993 ಜನ ಹೊರರೋಗಿಗಳು ದಾಖಲಾಗಿದ್ದರು. 13 ಹೆರಿಗೆಯಾಗಿವೆ. ಒಬ್ಬರಿಗೆ ಜನರಲ್ ಸರ್ಜರಿ ನಡೆದಿದೆ. ನ.14 ರಂದು 53 ಒಳರೋಗಿಗಳು, 710 ಹೊರರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 16 ಹೆರಿಗೆಯಾಗಿವೆ. ನ.15ರಂದು 44 ಒಳರೋಗಿಗಳು ದಾಖಲಾಗಿದ್ದಾರೆ, 716 ಹೊರರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 11 ಹೆರಿಗೆ, 7 ಸರ್ಜರಿ ನಡೆದಿದೆ. ಈ ಸಂಖ್ಯೆ ಗುರುವಾರ ಒಟ್ಟು ರೋಗಿಗಳ ಸಂಖ್ಯೆ ಶೇ 35 ರಷ್ಟುಏರಿಕೆ ಕಂಡಿದೆ’ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌ ತಿಳಿಸಿದರು.

‘ಸರ್ಕಾರ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರದಿಂದ ಎರಡು ಬಾರಿ ಆದೇಶ ಬಂದಿದೆ. ಒಟ್ಟು 42 ವೈದ್ಯರು ಜಿಲ್ಲಾಸ್ಪತ್ರೆಯಲ್ಲಿದ್ದಾರೆ, ಇದರಲ್ಲಿ ಈಗಾಗಲೇ ರಜೆ ಪಡೆದಿರುವ 4 ವೈದ್ಯರು ಹುಷಾರಿಲ್ಲದ ಕಾರಣ ರಜೆ ಕೊಟ್ಟಿದ್ದೇವೆ. ಆದರೆ, ಹೊಸದಾಗಿ ಯಾರಿಗೂ ರಜೆ ನೀಡಿಲ್ಲ. ಬೆಳಗ್ಗೆ 9.30ಕ್ಕೆ ಬರಬೇಕಿದ್ದ ವೈದ್ಯರು 10ಗಂಟೆಗೆ ತಡವಾಗಿ ಬಂದಿರುವ ವೈದ್ಯರಿಗೆ ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ಜಿಲ್ಲಾಸ್ಪತ್ರೆಯಲ್ಲಿ 7 ಜನ ವೈದ್ಯರ ಕೊರತೆ ಇದೆ. ಶೇ 50 ರಷ್ಟು ಸಿಬ್ಬಂದಿ ಕೊರತೆ ಇದೆ. ಇತಂಹ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಚಿಕಿತ್ಸೆ ನೀಡಬೇಕಾದ ಜವಾಬ್ದಾರಿ ವೈದ್ಯರ ಮೇಲಿದೆ. ಖಾಸಗಿ ವೈದ್ಯರ ಮುಷ್ಕರ ಅಂತ್ಯಗೊಳ್ಳುವವರೆಗೂ ದಿನವೀಡಿ ಕರ್ತವ್ಯ ನಿರ್ವಹಿಸಬೇಕಿದೆ’ ಎಂದು ತಿಳಿಸಿದರು.

‘ಕೆ.ಪಿ.ಎಂ.ಇ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಗುರುವಾರ ರಾತ್ರಿ ಜಿಲ್ಲೆಯಿಂದ ತಾಲ್ಲೂಕಿನಿಂದ 40 ಜನ ವೈದ್ಯರು ಬೆಳಗಾವಿಯ
ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲು ಹೊರಟಿದ್ದೇವೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಜತೆಗೆ ಅಲ್ಲಿಯವರೆಗೂ ವೈದ್ಯಕೀಯ ಸೇವೆ ನೀಡುವುದಿಲ್ಲ’ ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ‘ಪ್ರಜಾವಾಣಿ‘ಗೆ ತಿಳಿಸಿದರು.

ವೈದ್ಯರ ಪಾಲಿಗೆ ಮರಣ ಶಾಸನ
ಬಾಗೇಪಲ್ಲಿ: 'ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ವೈದ್ಯರ ಪಾಲಿಗೆ ಮರಣ ಶಾಸನವಾಗಿದೆ' ಎಂದು ಎಸ್ಎಲ್ವಿ ಹೆರಿಗೆ ಆಸ್ಪತ್ರೆಯ ಮಾಲೀಕ ಡಾ.ಎಸ್.ಟಿ.ರವೀಂದ್ರ ಗುರುವಾರ ತಿಳಿಸಿದ್ದಾರೆ.

'ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಾಪಸ್ಸು ಪಡೆಯುವವರೆಗೂ ಪ್ರತಿಭಟನೆ ಮುಂದುವರೆಸಲು ತಾಲ್ಲೂಕು ವೈದ್ಯರ ಸಂಘ ನಿರ್ಧರಿಸಿದೆ' ಎಂದರು. 'ಈ ಭಾಗದಲ್ಲಿ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಭಿಸಿದ್ದಾರೆ ಸರ್ಕಾರದ ನಿರ್ಧಾರ ಖಾಸಗಿ ವೈದ್ಯರ ಮೇಲೆ ಮರಣ ಶಾಸನವಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು
ಚಿಂತಾಮಣಿ: ಸರ್ಕಾರ ಹೊರತರಲು ನಿರ್ಧರಿಸಿರುವ ಕೆ.ಪಿ.ಎಂ.ಇ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವುದರಿದ ಸರ್ಕಾರಿ ಆಸ್ಪತ್ರೆಗಳು ಗುರುವಾರ ತುಂಬಿ ತುಳುಕುತ್ತಿದ್ದವು.

ನಗರ ಹಾಗೂ ತಾಲ್ಲೂಕಿನ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿತ್ತು. ಯಾವುದೇ ಖಾಸಗಿ ಆಸ್ಪತ್ರೆ ಇಂದು ಕೆಲಸ ಮಾಡಲಿಲ್ಲ. ಇದರಿಂದಾಗಿ ಕಾಯಿಲೆಪೀಡಿತ ಜನರು ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡಿದರು.

ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದು ಚಿಕಿತ್ಸೆ ನೀಡಿದರು. ವೈದ್ಯರು ಮತ್ತು ಸಿಬ್ಬಂದಿಯ ಎಲ್ಲ ಸಭೆ, ತರಬೇತಿ, ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸಿ ಇಡೀ ಯಂತ್ರಾಂಗ ರೋಗಿಗಳಿಗೆ ಚಿಕಿತ್ಸೆ ಕೊಡುವ ಕಡೆಗೆ ಗಮನಹರಿಸಲಾಗಿತ್ತು ಎಂದು ತಾಲ್ಲೂಕು ವೈದ್ಯಾಧಿಕಾರಿ ರಾಮಚಂದ್ರರೆಡ್ಡಿ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶಕ್ತಿಮೀರಿ ಚಿಕಿತ್ಸೆಯನ್ನು ನೀಡುವುದರಲ್ಲಿ ಮಗ್ನರಾಗಿರುವ ದೃಷ್ಯ ಸಾಮಾನ್ಯವಾಗಿತ್ತು. ಸರ್ಕಾರ ಮತ್ತು ವೈದ್ಯರ ನಡುವಿನ ಪ್ರತಿಷ್ಠೆಯಿಂದ ರೋಗಿಗಳು ಪರದಾಡಬೇಕಾಗಿದೆ. ಕೂಡಲೇ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡು, ಆಸ್ಪತ್ರೆಗಳು ಎಂದಿನಂತೆ ನಡೆಯುವಂತಾಗಬೇಕು’ ಎಂದು ಹಿರಿಯ ನಾಗರಿಕ ನಾರಾಯಣಸ್ವಾಮಿ ಹೇಳಿದರು.

‘ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಸರ್ಕಾರದ ಮೊಂಡಿತನದಿಂದ ವೈದ್ಯರ ಗೌರವವನ್ನು ಉಳಿಸಿಕೊಳ್ಳುವ ದೃಷ್ಠಿಯಿಂದ ಅಪಾರವಾದ ನೋವಿನಿಂದ ಬೇರೆ ದಾರಿ ಕಾಣದೆ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೇವೆ’ ಎಂದು ವೈದ್ಯರ ಸಂಘದ ತಾಲ್ಲೂಕು ಕಾರ್ಯದರ್ಶಿ ಡಾ.ಶ್ರೀಧರ್‌ ತಿಳಿಸಿದರು.

* * 

ಸರ್ಕಾರದ ನಿದೇರ್ಶನದ ಮೇರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ನೀಡಲು ಎಲ್ಲಾ ಸರ್ಕಾರಿ ವೈದ್ಯರಿಗೆ ಸೂಚನೆ ನೀಡಲಾಗಿದೆ.
ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT