ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ- ಸರ್ಕಾರಿ ವೈದ್ಯರಿಂದ ಸ್ಪಂದನೆ

Last Updated 17 ನವೆಂಬರ್ 2017, 9:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಯಿಂದಾಗಿ ಗುರುವಾರ ನಗರದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಯಿತು. ಖಾಸಗಿ ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಆಸ್ಪತ್ರೆಗಳ ಬಾಗಿಲು ಬಂದ್‌ ಮಾಡಲಾಗಿತ್ತು. ಚಿಕಿತ್ಸೆ, ವೈದ್ಯಕೀಯ ಸೇವೆ ಲಭ್ಯ ಇಲ್ಲ ಎಂಬ ಫಲಕಗಳನ್ನು ಬಾಗಿಲು, ಗೇಟುಗಳಲ್ಲಿ ಹಾಕಲಾಗಿತ್ತು. ಚಿಕಿತ್ಸೆಗೆ ಬಂದಿದ್ದ ರೋಗಿಗಳು ಜಿಲ್ಲಾಸ್ಪತ್ರೆ ಕಡೆ ಮುಖ ಮಾಡಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ನಿತ್ಯಕ್ಕಿಂತ ಶೇ 40 ರಷ್ಟು ದಟ್ಟಣೆ ಹೆಚ್ಚು ಇತ್ತು. ಹೊರರೋಗಿಗಳ ವಿಭಾಗದಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದರು. ಒಳರೋಗಿ ವಿಭಾಗವೂ ಭರ್ತಿಯಾಗಿತ್ತು.

ಕಡೂರು ವರದಿ: ಖಾಸಗಿ ವೈದ್ಯರ ಮುಷ್ಕರದಿಂದ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಹೊರ ರೋಗಿ ವಿಭಾಗದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದ್ದು, ಮಾಮೂಲಿಗಿಂತ ಶೇ 30 ರಷ್ಟು ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

ಖಾಸಗಿ ವೈದ್ಯರ ಮುಷ್ಕರದ ಆರಂಭಕ್ಕೆ ಮೊದಲು ಪ್ರತಿದಿನ 450 ರಿಂದ 500 ಹೊರ ರೋಗಿಗಳು ಮತ್ತು 35 ರಿಂದ 40 ಒಳರೋಗಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ 700ಕ್ಕೂ ಹೆಚ್ಚು ಹೊರರೋಗಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 60ಕ್ಕೂ ಹೆಚ್ಚು ಜನ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಪ್ರತಿದಿನ 40 ರಿಂದ 45 ಜನ ತುರ್ತು ಚಿಕಿತ್ಸೆಗೆ ಬರುತ್ತಿದ್ದರು. ಮೂರು ದಿನಗಳಿಂದ 90ಕ್ಕೂ ಹೆಚ್ಚು ತುರ್ತು ಚಿಕಿತ್ಸೆ ಪ್ರಕರಣಗಳು ಬಂದಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಒಟ್ಟು 9 ವೈದ್ಯರು ಇರುವ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ರೋಗಿಗಳಿಗೆ ಸ್ಪಂದಿಸುತ್ತಿದ್ದಾರೆ. ಸ್ತ್ರೀರೋಗ ತಜ್ಞರು ಇಲ್ಲದೆ ಇರುವುದು ಹೆರಿಗೆ ಸಮೀಪಿಸಿರುವ ಮಹಿಳೆಯರಿಗೆ ತೊಂದರೆಯಾಗುವ ಸಂಭವವಿದೆ. ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ತಜ್ಞರು ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಶಿವಮೊಗ್ಗದ ಜನರಿಕ್ ಮೆಡಿಕಲ್ ಸ್ಟೋರ್‌ನಿಂದ ಅಗತ್ಯ ಪ್ರಮಾಣದ ಔಷಧಿಗಳನ್ನು ತರಿಸಲಾಗಿದೆ.

ಈ ಆಸ್ಪತ್ರೆಯ ಪ್ರಯೋಗಶಾಲೆಯಲ್ಲಿ ವಿವಿಧ ಪರೀಕ್ಷೆಗಳಿಗಾಗಿ ಬರುವವರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಗುರುವಾರ ಒಂದೇ ದಿನಕ್ಕೆ 500ಕ್ಕೂ ಹೆಚ್ಚು ರಕ್ತ ಪರೀಕ್ಷೆ ನಡೆದಿದೆ. ಪ್ರತಿ ದಿನದ ಒಳ ಮತ್ತು ಹೋರರೋಗಿಗಳ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ವರದಿ ನೀಡಲಾಗುತ್ತಿದೆ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್ ತಿಳಿಸಿದರು.

ಕ್ಲಿನಿಕ್‌ ಬಂದ್‌: ಪರದಾಟ
ಕಳಸ: ಖಾಸಗಿ ವೈದ್ಯರ ಪ್ರತಿಭಟನೆಯ ಕಾರಣಕ್ಕೆ ಪಟ್ಟಣದ ಎಲ್ಲ ಖಾಸಗಿ ವೈದ್ಯರ ಕ್ಲಿನಿಕ್‌ಗಳು ಗುರುವಾರ ಬಾಗಿಲು ಮುಚ್ಚಿದ್ದವು. ಇದರ ಫಲವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿತ್ತು.

ಆಸ್ಪತ್ರೆಯಲ್ಲಿ ಇರುವ ಒಬ್ಬ ವೈದ್ಯರು ರೋಗಿಗಳ ತಪಾಸಣೆ ನಡೆಸ ಬೇಕಾಗಿರುವುದರಿಂದ ರೋಗಿಗಳು ಸಾಲಿನಲ್ಲಿ ಕಾಯಬೇಕಾಯಿತು. ಪಟ್ಟಣದ ದಂತ ಚಿಕಿತ್ಸಾಲಯಗಳು ಮತ್ತು ಖಾಸಗಿ ನರ್ಸಿಂಗ್‌ ಹೋಮ್‌ ಕೂಡ ಬಾಗಿಲು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT