ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಮುಟ್ಟಿದ ಖಾಸಗಿ ವೈದ್ಯರ ಮುಷ್ಕರ ಬಿಸಿ

Last Updated 17 ನವೆಂಬರ್ 2017, 9:44 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದ ಬಿಸಿ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕಿನ ರೋಗಿಗಳಿಗೆ ಗುರುವಾರ ತಟ್ಟಿದೆ.

ಮುಷ್ಕರಕ್ಕೆ ಕರೆ ನೀಡಿದ ದಿನದಿಂದಲೂ ತಾಲ್ಲೂಕಿನಲ್ಲಿ ಖಾಸಗಿ ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರು. ಆದ್ದರಿಂದ ರೋಗಿಗಳ ಮೇಲೆ ಪರಿಣಾಮವಾಗಿರಲಿಲ್ಲ. ಆದರೆ, ಗುರುವಾರ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಳಗಾವಿಗೆ ತಾಲ್ಲೂಕಿನ ಎಲ್ಲಾ ಖಾಸಗಿ ವೈದ್ಯರು ಹೋದ ಕಾರಣ ಕ್ಲಿನಿಕ್‌ಗಳು ಪೂರ್ಣ ಪ್ರಮಾಣದಲ್ಲಿ ಬಾಗಿಲು ಮುಚ್ಚಿದ್ದವು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತುಳಸಿ ರಂಗನಾಥ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಗುರುವಾರ ಖಾಸಗಿ ವೈದ್ಯರ ಮುಷ್ಕರ ರೋಗಿಗಳಿಗೆ ತಟ್ಟಿರುವುದು ನಿಜ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಹೊರ ರೋಗಿಗಳ ಸಂಖ್ಯೆ ಪ್ರತಿದಿನ 350 ಇರುತ್ತಿತ್ತು. ಆದರೆ, ಗುರುವಾರ 750 ದಾಟಿದೆ. ಆಸ್ಪತ್ರೆ ಒಳರೋಗಿಗಳ ವಿಭಾಗದಲ್ಲಿ 50 ಹಾಸಿಗೆಗಳು ಲಭ್ಯವಿದ್ದು, ಎಲ್ಲವೂ ಭರ್ತಿಯಾಗಿವೆ’ ಎಂದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸೂಚನೆ ಹಿನ್ನೆಲೆಯಲ್ಲಿ ಯಾವುದೇ ಸಿಬ್ಬಂದಿಗೆ ರಜೆ ನೀಡುವಂತಿಲ್ಲ. ಮುಷ್ಕರ ಮುಗಿಯುವ ತನಕ ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಈವರೆಗೆ ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಹೇಳಿದರು.

ಖಾಸಗಿ ವೈದ್ಯರ ಸಂಘದ ಪದಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ‘ತಾಲ್ಲೂಕಿನ ಎಲ್ಲಾ ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಗುರುವಾರ ಹೋಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT