ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯತ್ತ ಹರಿದುಬಂದ ಜನಸಾಗರ

Last Updated 17 ನವೆಂಬರ್ 2017, 9:59 IST
ಅಕ್ಷರ ಗಾತ್ರ

ಧಾರವಾಡ: ಕೆಪಿಎಂಇ ಮಸೂದೆ ತಿದ್ದುಪಡಿ ವಿರೋಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಪರಿಣಾಮ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಗುರುವಾರ ಬಾಗಿಲು ಹಾಕಿದ್ದವು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್‌ಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆಯಲ್ಲಿ ಶೇ 20ರಷ್ಟು ಹೆಚ್ಚಳ ಕಂಡುಬಂದಿದೆ. ಇದಕ್ಕೆ ಅನುಗುಣವಾಗಿ ಒಳರೋಗಿಗಳ ವಿಭಾಗದಲ್ಲೂ ಏರಿಕೆಯಾಗಿತ್ತು. ಸರ್ಕಾರಿ ವೈದ್ಯರ ರಜೆ ರದ್ದು ಮಾಡಿದ್ದರಿಂದಾಗಿ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ರೋಗಿಗಳು ಕೇಂದ್ರ ಸ್ಥಾನದಲ್ಲಿದ್ದು ರೋಗಿಗಳ ಆರೈಕೆಯಲ್ಲಿ ತಲ್ಲೀನರಾಗಿದ್ದರು.

ಬುಧವಾರ ಮಧ್ಯಾರಾತ್ರಿಯಿಂದ ಗುರುವಾರ ಸಂಜೆಯವರೆಗೆ ಕಿಮ್ಸ್‌ನಲ್ಲಿ ಹೊರರೋಗಿಗಳಾಗಿ 2600 ಮಂದಿ ಚಿಕಿತ್ಸೆ ಪಡೆದರೆ, 256 ಜನ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಂತೆಯೇ ಜಿಲ್ಲಾ ಆಸ್ಪತ್ರೆಯಲ್ಲಿ 1325 ಹೊರರೋಗಿಗಳು, 56 ಒಳರೋಗಿಗಳು, ಸಾಮಾನ್ಯ ಹೆರಿಗೆ 11 ಮತ್ತು ಸಿಜೇರಿಯನ್‌ 4 ಆಗಿವೆ.

ತಾಲ್ಲೂಕು ಪ್ರದೇಶಗಳಲ್ಲಿರುವ ಆಸ್ಪತ್ರೆಗಳು ಹಾಗೂ ಪಟ್ಟಣ ಪ್ರದೇಶ ಆಸ್ಪತ್ರೆಗಳಲ್ಲೂ ಹೊರರೋಗಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಗುರುವಾರ ಎಸ್‌ಡಿಎಂ ಕೂಡಾ ಹೊರರೋಗಿ ವಿಭಾಗವನ್ನು ಬಂದ್‌ ಮಾಡಿದ್ದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಜನ ಕಂಡುಬಂತು. ಬೆಳಿಗ್ಗೆ 8ರಿಂದ ರಾತ್ರಿ 8.30ರವರೆಗೆ ಎಲ್ಲಾ ವೈದ್ಯರು ಆಸ್ಪತ್ರೆಯಲ್ಲೇ ಇದ್ದು ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ಎಂ.ದೊಡ್ಡಮನಿ, ‘ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ಸರ್ಕಾರಿ ವೈದ್ಯರು ಈಗ ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. 5 ತಾಲ್ಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಹಾಗೂ 6 ಕಾರ್ಯಕ್ರಮ ಅಧಿಕಾರಿಗಳನ್ನೂ ಈಗ ಚಿಕಿತ್ಸೆಗಾಗಿ ನಿಯೋಜಿಸಲಾಗಿದೆ. ಪಟ್ಟಣ ಪ್ರದೇಶದ ಕ್ಲಿನಿಕ್‌ಗಳಲ್ಲಿ 19 ಹಾಗೂ ಮೂರು ತಾಲ್ಲೂಕು ಆಸ್ಪತ್ರೆಗಳಲ್ಲಿ 19 ವೈದ್ಯರು ಲಭ್ಯವಿದ್ದಾರೆ. ಅಗತ್ಯ ಬಿದ್ದರೆ ನಾನೂ ಚಿಕಿತ್ಸೆ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ರೋಗಿಗಳ ಸಂಖ್ಯೆ ಹೆಚ್ಚಳ
ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಗಿರಿಧರ ಕುಕನೂರ ಮಾತನಾಡಿ, ‘ಒಟ್ಟಾರೆಯಾಗಿ ಚಿಕಿತ್ಸೆಗಾಗಿ ಬರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ವಾತಾವರಣದಲ್ಲಿನ ಬದಲಾವಣೆಯೂ ಇದಕ್ಕೆ ಕಾರಣವಾಗಿದೆ. ಶೀತ, ಕೆಮ್ಮು ಹಾಗೂ ಜ್ವರ ಸಂಬಂಧಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆ ದೊಡ್ಡದಿದೆ. ವಾತಾವರಣ ತಂಪಾಗಿರುವುದರಿಂದ ಕಫ ಹಾಗೂ ಉಸಿರಿನ ತೊಂದರೆಯಿಂದ ಬಳಲುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಕ್ಷ–ಕಿರಣ ಕೇಂದ್ರವನ್ನು 24 ಗಂಟೆಯೂ ತೆರೆಯಲು ತೀರ್ಮಾನಿಸಲಾಗಿದೆ. ಜತೆಗೆ ಪ್ರಯೋಗಾಲಯವೂ ದಿನವಿಡೀ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.

ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ಎರವಲು ಸೇವೆ ಮೇಲೆ ನಿಯೋಜಿಸಲಾಗಿದೆ. ತಂತ್ರಜ್ಞರು, ಔಷಧ ಪರಿಣಿತರನ್ನು ಪಟ್ಟಣ ಪ್ರದೇಶದ ಆಸ್ಪತ್ರೆಗಳಿಂದ ಕರೆಯಿಸಲಾಗಿದೆ. ಶುಶ್ರೂಷಕಿಯರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 35 ಹೆಚ್ಚುವರಿ ಹಾಸಿಗೆಯನ್ನು ಹಾಕಲಾಗಿದೆ. ಹೀಗಾಗಿ ಯಾವುದೇ ಸವಾಲನ್ನು ಎದುರಿಸಲು ಜಿಲ್ಲಾ ಆಸ್ಪತ್ರೆ ಸಜ್ಜಾಗಿದೆ’ ಎಂದು ಹೇಳಿದರು.

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ
ನಗರದ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಒಕ್ಕೂಟದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಸದಸ್ಯರು, ‘ಈ ಕಾಯ್ದೆ ವೈದ್ಯರ ಪಾಲಿಗೆ ಮರಣ ಶಾಸನವಾಗಲಿದೆ. ಹೀಗಾಗಿ ಸರ್ಕಾರ ತನ್ನ ಹಟ ಬಿಡಬೇಕು. ಇಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಗಳು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದು ನೇರವಾಗಿ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಲಿದೆ’ ಎಂದು ತಿಳಿಸಿದ್ದಾರೆ.

‘ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಯೋಗಿಕತೆ ಅತ್ಯಗತ್ಯ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಪ್ಪುಗಳು ಆಗುವುದು ಸಹಜ. ಹಾಗೆಂದ ಮಾತ್ರಕ್ಕೆ ಯಾವ ವೈದ್ಯರು ರೋಗಿಯ ಪ್ರಾಣದ ಜತೆಗೆ ಚೆಲ್ಲಾಟವಾಡುವುದಿಲ್ಲ. ಸರ್ಕಾರ ಮಸೂದೆಯನ್ನು ಜಾರಿಗೆ ತರುವುದು ಎಷ್ಟು ಸರಿ. ಕಾಯ್ದೆಯನ್ನು ವಿರೋಧಿಸಿ ಈಗಾಗಲೇ ಖಾಸಗಿ ವೈದ್ಯರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ರೋಗಿಗಳಿಗೂ ಸಹ ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ನೀಡಬೇಕೆನ್ನುವ ಉದ್ದೇಶ ವೈದ್ಯರಿಗಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸರ್ಕಾರ ಮಸೂದೆ ಮಂಡನೆಯ ವಿಷಯ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಮಂಜುನಾಥ ಶಿಗ್ಗಾಂವಿ, ಸಂತೋಷ ಬಡಿಗೇರ, ಜಿ.ಜಿ. ಚಿಕ್ಕಾಪೂರ, ಯುವರಾಜ ಪೂಜಾರ, ಪ್ರಕಾಶ ಶಿರಸಂಗಿ, ಮಾಣಿಕರಾವ್ ಭೋಸಲೆ, ಶಶಿ ಮೂಲೆಮಠ, ಭೀಮಾಜಿ ಜೋಶಿ, ಕುಮಾರ ಹಿರೇಮಠ, ಸಂಬಾಜಿ ಸಾಳುಂಕೆ, ದಾವಲಸಾಬ ನಾಗರಾಳ, ಮಂಜುನಾಥ ಪಟ್ಟಿಹಾಳ ಇದ್ದರು.

ಹುಬ್ಬಳ್ಳಿ ವರದಿ:
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ವೈದ್ಯರು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಅವಳಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಗುರುವಾರ ಎಲ್ಲ ಸೇವೆಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಇದರಿಂದ ರೋಗಿಗಳ ಬವಣೆ ಹೇಳತೀರದಾಯಿತು.

ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಮತ್ತು ತುರ್ತು ಸೇವೆಯನ್ನು ಬಂದ್‌ ಮಾಡಿ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಹೊರರೋಗಿ ವಿಭಾಗ ಮತ್ತು ತುರ್ತು ಸೇವೆ ಅಗತ್ಯ ಇದ್ದವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋದರು. ಹೀಗಾಗಿ, ಕಿಮ್ಸ್‌ ಸೇರಿದಂತೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಂದ ತುಂಬಿ ತುಳುಕಿದವು.

ಕಿಮ್ಸ್‌ ಹೊರರೋಗಿಗಳ ವಿಭಾಗದ ಮುಂದೆ ರೋಗಿಗಳು ಮತ್ತು ಸಂಬಂಧಿಕರು ಸಾಲುಗಟ್ಟಿ ನಿಂತಿದ್ದರು. ಹೆಸರು ನೋಂದಣಿ ಮಾಡಿಸಲು ನೂಕುನುಗ್ಗಲು ಉಂಟಾಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ರೋಗಿಗಳು ವಿವಿಧೆಡೆಯಿಂದ ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದರು. ಜನದಟ್ಟಣೆ ಸರಿದೂಗಿಸಲು ಒಪಿಡಿ ವಿಭಾಗದಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಕಿಮ್ಸ್‌ನ 1,200 ಬೆಡ್‌ಗಳು ಸಂಪೂರ್ಣ ಭರ್ತಿ ಆಗಿದ್ದವು.

ರೋಗಿಗಳ ಸಂಖ್ಯೆ ಅಧಿಕವಾಗಿದ್ದರಿಂದ ರಜೆ ಮೇಲೆ ತೆರಳಿದ್ದವರು ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು. ಹೊರರೋಗಿ ವಿಭಾಗದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ರೋಗಿಗಳ ಸಂಖ್ಯೆ ಕಡಿಮೆ ಆಗಲಿಲ್ಲ. ನೋಂದಣಿ ಚೀಟಿ ಹಿಡಿದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು.

2,000 ಗಡಿ ದಾಟಿದ ನೋಂದಣಿ:
ಕಿಮ್ಸ್‌ ಹೊರರೋಗಿ ವಿಭಾಗದಲ್ಲಿ ಮಧ್ಯಾಹ್ನ 12.45 ಹೊತ್ತಿಗೆ ಚಿಕಿತ್ಸೆಗೆ ನೋಂದಣಿ ಮಾಡಿಸಿದವರ ಸಂಖ್ಯೆ 1,500ರ ಗಡಿ ದಾಟಿತ್ತು. ಸಂಜೆ ಹೊತ್ತಿಗೆ ಹಳೇ ಚೀಟಿಗಳು ಸೇರಿದಂತೆ ಒಟ್ಟು 2,210 ಹೆಸರು ನೋಂದಣಿ ಆಗಿದ್ದವು. ಬುಧವಾರ ಒಟ್ಟು 1,779 (ಹಳೇ ಚೀಟಿ ಸೇರಿ) ಮಂದಿ ಚಿಕಿತ್ಸೆಗೆ ಹೆಸರು ನೋಂದಣಿ ಮಾಡಿಸಿದ್ದರು ಎಂದು ಕಿಮ್ಸ್‌ ಸಿಬ್ಬಂದಿ ತಿಳಿಸಿದರು.

ಬಿಕೋ ಎಂದ ಆಸ್ಪತ್ರೆಗಳು:
ನಗರದ 700ಕ್ಕೂ ಹೆಚ್ಚು ವೈದ್ಯರು ಬೆಳವಾವಿ ಸುವರ್ಣ ಸೌಧದ ಎದುರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಖಾಸಗಿ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದವು. ಕೆಲವೇ ಸಿಬ್ಬಂದಿ ಮಾತ್ರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದೃಶ್ಯ ಕಂಡುಬಂತು. ತುರ್ತು ಸೇವೆ ಮತ್ತು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಬಂದವರಿಗೆ ‘ಸೇವೆ ಸ್ಥಗಿತಗೊಳಿಸಲಾಗಿದೆ’ ಎಂದು ಸಿಬ್ಬಂದಿ ಸಿದ್ಧ ಉತ್ತರ ಹೇಳಿ ಕಳುಹಿಸುತ್ತಿದ್ದರು.

* * 

ವೈದ್ಯರ ಹಾಗೂ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದ್ದು, ವೈದ್ಯರು ಪ್ರತಿಭಟನೆ ಮುಂದುವರಿಸಲಿದ್ದಾರೆ. ಹೀಗಾಗಿ ಶುಕ್ರವಾರವೂ ಎಲ್ಲಾ ಖಾಸಗಿ ಆಸ್ಪತ್ರೆಗಳು ಸೇವೆಯನ್ನು ಸ್ಥಗಿತಗೊಳಿಸಲಿವೆ
ಡಾ. ಶಿವಕುಮಾರ ಕುಂಬಾರ,
ಉಪಾಧ್ಯಕ್ಷ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT