ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆ ಶೇ 80 ರಷ್ಟು ಪ್ರಗತಿ

Last Updated 17 ನವೆಂಬರ್ 2017, 10:13 IST
ಅಕ್ಷರ ಗಾತ್ರ

ಹಾಸನ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲೆ ಗಣನೀಯ ಸಾಧನೆ ಮಾಡಿದ್ದು, ಈಗಾಗಲೇ ಶೇ 80ಕ್ಕೂ ಅಧಿಕ ಪ್ಲಾಟ್‌ಗಳು ಮುಕ್ತಾಯಗೊಂಡಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ವಿವಿಧ ತಾಲ್ಲೂಕುಗಳಲ್ಲಿ 900ಕ್ಕೂ ಅಧಿಕ ಸಿಬ್ಬಂದಿ ಪ್ರತಿ ದಿನ 14 ತಾಸು ನಿರಂತರ ಕೆಲಸ ಮಾಡಿ ಬೆಳೆ ಸಮೀಕ್ಷೆ ದಾಖಲೆ ಬಹುತೇಕ ಮುಕ್ತಾಯಗೊಳಿಸಿದ್ದಾರೆ.
ಮೊಬೈಲ್ ಆ್ಯಪ್‌ಆಧಾರಿತ ಬೆಳೆ ಸಮೀಕ್ಷೆ ಇದಾಗಿದ್ದು, ಪ್ರತಿ ಗ್ರಾಮವಾರು ಸರ್ವೆ ನಂಬರ್ ವಾರು ಬೆಳೆಗಳ ವಿವರ ದಾಖಲಿಸಿ ತಂತ್ರಾಂಶದಲ್ಲಿ ಫೋಟೊ ಸಹ ಅಪ್ ಲೋಡ್ ಮಾಡಲಾಗುತ್ತಿದೆ.

ಜಿಲ್ಲೆಯ 2,581 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕೈ ಗೊಂಡಿದ್ದು, ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು ಒಳಗೊಂಡಂತೆ ಒಟ್ಟು 930 ಸಿಬ್ಬಂದಿ ನಿಯೋಜಿಸಲಾಗಿದೆ. ಈವರೆಗೂ ಒಟ್ಟು 11,43,891 ಪ್ಲಾಟ್ ಮಾಹಿತಿ ಕ್ರೋಢಿಕರಿಸಿ ಮಾಹಿತಿ ಅಪ್ ಡೇಟ್ (ನವೀಕರಣ) ಮಾಡಲಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಪ್ಲಾಟ್‌ಗಳಲ್ಲಿ ಡೇಟಾ ಕ್ರೋಢಿಕರಿಸಿ ಮಾಹಿತಿ ಅಪ್ ಡೇಟ್ ಮಾಡಿರುವುದರಲ್ಲಿ ಜಿಲ್ಲೆ ಮುಂಚೂಣಿಯಲ್ಲಿರುವುದು ಹೆಗ್ಗಳಿಕೆ.

‘ಹಾಸನ ತಾಲ್ಲೂಕು ಒಂದರಲ್ಲಿಯೆ 205 ಜನರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿತ್ತು. 2.95 ಲಕ್ಷ ಪ್ಲಾಟ್‌ಗಳಲ್ಲಿ 5 ಗುಂಟೆಗಿಂತ ಕಡಿಮೆ ಇರುವ ಹಾಗೂ ಭೂ ಪರಿವರ್ತನೆಯಾಗಿರುವ ಅಥವಾ ಕೃಷಿಯೇತರ ಉದ್ದೇಶಕ್ಕೆ ಬಳಸಿರುವ ಜಮೀನು ಹೊರತುಪಡಿಸಿ ಈಗಾಗಲೇ 2.22 ಲಕ್ಷ ಪ್ಲಾಟ್‌ಗಳ ಸರ್ವೆ ಕಾರ್ಯ ಮುಗಿದಿದೆ’ ಎಂದು ತಹಶೀಲ್ದಾರ್ ಶಿವಶಂಕರಪ್ಪ ತಿಳಿಸಿದರು.

ಸಾತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಗ್ರಾಮ ಲೆಕ್ಕಿಗ ಸೋಮಶೇಖರ್, ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಅನುಸರಿಸಲಾಗಿರುವ ಮಾರ್ಗವನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಗ್ರಾಮದ ಎಲ್ಲಾ ಪಹಣಿ ವಿವರಗಳನ್ನು ಮೊಬೈಲ್ ನಲ್ಲಿ ಡೌನ್‌ಲೋಡ್ ಮಾಡಿ ನಿಗದಿಪಡಿಸಿರುವ ತಂತ್ರಾಂಶದಲ್ಲಿ ಬೆಳೆ ವಿವರ ಹಾಗೂ ಆಧಾರ್ ಸಂಖ್ಯೆ ನಮೂದಿಸಲಾಗುವುದು. ಮುಂಗಾರು, ಹಿಂಗಾರು, ಬೆಸಿಗೆ ಬೆಳೆ, ಮಿಶ್ರ ಬೆಳೆಗಳು ಬಿತ್ತನೆಯಾಗಿದೆಯೇ, ಕಟಾವು ಮಾಡಲಾಗಿದೆಯೇ ಎಂಬ ಮಾಹಿತಿ ದಾಖಲಿಸಲಾಗುವುದು ಎಂದು ವಿವರಿಸಿದರು.

ಭೂಮಿಯನ್ನು ವಿವಿಧ ಬೆಳೆ ಸ್ವರೂಪಗಳಿಗೆ ಸಮೀಕರಿಸವುದು; ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯಧನದ ಅಂದಾಜು ಪ್ರಕ್ರಿಯೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ; ಪಹಣಿ ಮತ್ತು ವಿಮೆ ದಾಖಲೆಗಳಲ್ಲಿ ಪರಸ್ಪರ ನೈಜ ಮತ್ತು ದಾಖಲೆ ಮಾಹಿತಿಗಳ ನೀಡುವುದು ಉದ್ದೇಶವಾಗಿದೆ. ತ್ವರಿತ ಪ್ರಗತಿ ಸಾಧಿಸಿದ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಭಿನಂದಿಸಿದ್ದಾರೆ.

ನ. 16ರ ಅಂತ್ಯಕ್ಕೆ ಬೆಳೆ ಸಮೀಕ್ಷೆ ಪ್ರಗತಿ

ಆಲೂರು - ಶೇ 98.89
ಬೇಲೂರು - ಶೇ 86.02
ಅರಸೀಕೆರೆ - ಶೇ 84.36
ಸಕಲೇಶಪುರ - ಶೇ 83.74
ಹಾಸನ - ಶೇ 75.47
ಚನ್ನರಾಯಪಟ್ಟಣ - ಶೇ 74.10
ಅರಕಲಗೂಡು - ಶೇ 72.20
ಹೊಳೆನರಸೀಪುರ - ಶೇ 65

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT