ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗೆ ವಿದ್ಯೆಯೆಂಬ ಅಂತಸ್ತಿನ ಅಡ್ಡಿ!

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ಎಂ.ಎ., ಬಿ.ಎಡ್. ಓದಿದ್ದೇನೆ. ನಾನು ನನ್ನ ಪಕ್ಕದ ಮನೆಯವವನ್ನು 15 ವರ್ಷದಿಂದ ಪ್ರೀತಿಸುತ್ತಿದ್ದೇನೆ; ಅವನು ಕೂಡ. ಆದರೆ ಇಬ್ಬರು ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲ. ಎರಡು ವರ್ಷಗಳ ಹಿಂದೆ ಇಬ್ಬರಿಗೂ ವಿಷಯ ತಿಳಿಯಿತು. ಆಗ ಆ ಹುಡುಗ ಕೂಲಿ ಕೆಲಸ ಮಾಡುತ್ತಿದ್ದ. ನಾನು ಜೀವನ ನಡೆಸಲು ಇದು ಸಾಲುವುದಿಲ್ಲ. ಬೇರೆ ಕೆಲಸ ಮಾಡು ಎಂದಿದ್ದಕ್ಕೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ್ದಾನೆ. ಅವನು ನನ್ನ ಯಾವ ಮಾತನ್ನು ತೆಗೆದುಹಾಕುವುದಿಲ್ಲ. ನಾನು ತುಂಬಾ ಕೋಪಿಷ್ಠೆ. ಸದಾ ಅವನಿಗೆ ಬೈದು ಅಳುವ ಹಾಗೆ ಮಾಡುತ್ತೇನೆ. ಇತ್ತೀಚೆಗೆ ನನ್ನ ಮನೆಯವರು ಮತ್ತು ಸುತ್ತಮತ್ತಲಿನವರು ‘ಅವನು ನಿನಗೆ ಸರಿ ಹೊಂದುವುದಿಲ್ಲ, ಬೇರೆ ಹುಡುಗನನ್ನು ನೋಡಿ ಮದುವೆ ಆಗು’ ಅನ್ನುತ್ತಿದ್ದಾರೆ. ನಾನು ಗೊಂದಲದಿಂದಿದ್ದೇನೆ. ಪರಿಹಾರ ತಿಳಿಸಿ.
–ಹೆಸರು, ಊರು ಬೇಡ

ಉತ್ತರ:  ಮದುವೆ ಎಂದರೆ ಹೀಗೆ ಆಗಬೇಕು, ಇಂತಹವರು ಇಂತಹವರನ್ನೇ ಆಗಬೇಕು ಎಂಬ ಕೆಲವು ಸಮಾಜಿಕ ಕಟ್ಟುಪಾಡುಗಳನ್ನು ಸಮಾಜ ರೂಪಿಸಿದೆ. ಅದರಲ್ಲಿ ಕೆಲವೊಂದು ಪ್ರಸ್ತುತವಾಗಿದೆ. ನೀವು ವ್ಯತ್ಯಾಸವನ್ನು ಗುರುತಿಸುವಷ್ಟು ಪ್ರೌಢತೆ ಮತ್ತು ಶಿಕ್ಷಣವನ್ನು ಪಡೆದಿದ್ದೀರಿ. ನೀವು ಒಬ್ಬ ವಿದ್ಯಾವಂತ ಮತ್ತು ಒಳ್ಳೆಯ ಕೆಲಸದಲ್ಲಿರುವವರನ್ನು ಮದುವೆಯಾಗುವುದು ಎಷ್ಟು ಉತ್ತಮ ಎಂಬುದು ನಿಮಗೆ ತಿಳಿದಿದೆ. ಇದರಿಂದ ನೀವು ಸಮತೋಲಿತ ಹಾಗೂ ಸುಭದ್ರ ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಮನಸ್ಸಿನ ಹೊಂದಾಣಿಕೆ ಹಾಗೂ ಸುಭದ್ರ ಕುಟುಂಬದ ಹಿನ್ನೆಲೆ ಮದುವೆಯ ಬಂಧವನ್ನು ಶಾಶ್ವತವಾಗಿರಿಸುತ್ತದೆ. ಕೇವಲ ಎರಡು ವರ್ಷದಿಂದ ಅವನು ನಿಮಗೆ ಪರಿಚಯ, ಅವನು ನೀವು ಹೇಳಿದ ಮಾತು ಕೇಳುತ್ತಾನೆ, ನಿಮ್ಮ ಕೋಪವನ್ನು ಸಹಿಸಿಕೊಳ್ಳುತ್ತಾನೆ ಎಂದ ಮಾತ್ರಕ್ಕೆ ಅದು ಪ್ರೀತಿಯಲ್ಲ ಅಥವಾ ಅದೇ ಮದುವೆಗೆ ಬುನಾದಿಯಲ್ಲ. ನೀವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ, ನಿರ್ಧರಿಸಿ.

2. ನಾನು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಕಳೆದ ಕೆಲವು ವರ್ಷದಿಂದ ಉಗುರು ಕಡಿಯುವ ಅಭ್ಯಾಸ. ಯಾರೋ ಉಗುರು ಕಡಿಯುವುದು ನೋಡಿ ಕಲಿತಿದ್ದು, ಆದರೆ ಈಗ ಉಗುರು ಕಡಿಯುವುದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಟೆನ್ಷನ್ ಆದರೆ ಕೈ ಬಾಯಿಯತ್ತ ಹೋಗುತ್ತದೆ. ಎಷ್ಟರ ಮಟ್ಟಿಗೆ ಉಗುರು ಕಡಿಯುತ್ತೇನೆ ಎಂದರೆ ಉಗುರೆಲ್ಲಾ ಖಾಲಿಯಾಗಿ ಚರ್ಮವನ್ನು ಕಚ್ಚಿ ರಕ್ತ ಸುರಿಯುತ್ತದೆ ಅಷ್ಟರ ಮಟ್ಟಿಗೆ ಉಗುರು ಕಡಿಯುತ್ತೇನೆ. ನಾನೇ ಎಷ್ಟೋ ಸಲ ಕಡಿಯಬಾರದು ಅಂದುಕೊಂಡರೂ ಹಾಗಿರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಇದಕ್ಕೆ ಡಾಕ್ಟರ್ ನೀಡಿದ ಔಷಧವನ್ನು ಕೂಡ ಸೇವಿಸಿದ್ದೇನೆ, ಆದರೂ ಬಿಡಲೂ ಆಗಿಲ್ಲ. ನಾನು ಯಾರಾದರೂ ಮನಃಶಾಸ್ತ್ರಜ್ಞರನ್ನು ನೋಡಬೇಕೆ?
–ಮನಸ್ವಿ, ಬೆಂಗಳೂರು

ಉತ್ತರ: ನೀವು ನಿಮಗಿರುವ ಕೆಟ್ಟ ಚಟವನ್ನು ಬಿಡಬೇಕೆಂದು ಕೊಂಡಿದ್ದೀರಿ ಅದೇ ನನಗೆ ಖುಷಿ ನೀಡಿದೆ. ಚಟ ಮಿತಿ ಮೀರಿದರೆ ಯಾವತ್ತಿದ್ದರೂ ಕೆಟ್ಟದ್ದೇ. ಆದರೂ ನೀವು ಈಗಾಗಲೇ ಅದನ್ನು ಬಿಡಲು ಅನೇಕ ಮಾರ್ಗಗಳನ್ನು ಅನುಸರಿಸಿದ್ದೀರಿ. ಉಗುರು ಕಡಿಯುವುದನ್ನು ಬಿಡಲು ಈ ಕೆಳಗಿನ ಉಪಾಯಗಳನ್ನೂ ನೀವು ಅನುಸರಿಸಬಹುದು. ನಿಮಗೆ ಏನು ಅಡ್ಡಿ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮನ್ನು ಉಗುರು ಕಡಿಯುವಂತೆ ಮಾಡುವ ಒತ್ತಡ, ಭಯ ಹಾಗೂ ಆತಂಕ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಅದರಿಂದ ನಿಮ್ಮನ್ನು ತಪ್ಪಿಸಿಕೊಳ್ಳಿ. ಮತ್ತು ಅದನ್ನು ನಿಲ್ಲಿಸಲು ಒಂದು ಯೋಜನೆ ರೂಪಿಸಿಕೊಳ್ಳಿ. ನಿಮಗೆ ಉಗುರು ಕಡಿಯಲು ಪ್ರೇರಿಪಿಸುವಂತೆ ಮಾಡುವ ಕಾರಣವನ್ನು ತಿಳಿದುಕೊಂಡರೆ ಅದನ್ನು ನಿಲ್ಲಿಸಲು ನಿಮಗೆ ಸಹಾಯವಾಗಬಹುದು. ನಿಮ್ಮ ಉಗುರುಗಳನ್ನು ಸ್ಟಿಕರ್ ಅಥವಾ ಟೇಪ್‌ನಿಂದ ಸುತ್ತಿ. ಒಂದೊಂದೇ ಉಗುರುನಿಂದ ಪ್ರಾರಂಭಿಸಿ. ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದಲೂ ಇದರಿಂದ ಪಾರಾಗಬಹುದು. ಹೇಗೆಂದರೆ ಯಾವಾಗ ನಿಮಗೆ ಉಗುರು ಕಡಿಯಬೇಕು ಎಂದು ಅನ್ನಿಸುತ್ತದೋ ಆಗ ಸ್ಟ್ರೆಸ್‌ ಬಾಲ್‌ನೊಂದಿಗೆ ಆಟ ಆಡವಾಡಿ. ಇದು ನಿಮ್ಮ ಕೈಯನ್ನು ಬ್ಯುಸಿಯಾಗಿಸಿ ಬಾಯಿಂದ ಕೈಯನ್ನು ದೂರವಿರಿಸುತ್ತದೆ.

3. ನನಗೆ 23 ವರ್ಷ, ನಾನು ಸ್ವಲ್ಪ ಸಿಟ್ಟಿನ ಸ್ವಬಾವದವನು. ಯಾರಿಗಾದರೂ ಬೈಯಲು ಪ್ರಾರಂಭಿಸಿದರೆ ಹಿಂದೆ ಮುಂದೆ ಯೋಚಿಸದೆ ಬೈಯುತ್ತೇನೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ ನಾನು ನನ್ನ ಗೆಳೆಯರೊಂದಿಗೆ ಹೆಚ್ಚು ಕೋಪ ಮಾಡಿಕೊಳ್ಳುತ್ತೇನೆ. ತಿಂಗಳುಗಟ್ಟಲೇ ಮಾತನಾಡದೇ ಪಶ್ಚಾತ್ತಾಪ ಪಟ್ಟಿದ್ದು ಇದೆ. ಆದರೆ ಮತ್ತೆ ಮತ್ತೆ ಹಾಗೆಯೇ ಮಾಡುತ್ತೇನೆ, ಇದಕ್ಕೆ ಏನಾದರೂ ಪರಿಹಾರ ತಿಳಿಸಿ.
–ಶರಣು ಕಲ್ಮನಿ, ಶಹಾಪುರ

ಉತ್ತರ: ನಿಮ್ಮ ಸಮಸ್ಯೆ ಏನು ಎಂಬುದು ನಿಮಗೆ ತಿಳಿದಿದೆ. ನಿಮ್ಮ ಸಮಸ್ಯೆಗಳಿಗೆ ನೀವೆ ಪರಿಹಾರ ಕಂಡುಕೊಳ್ಳಬಹುದು. ಅದು ನಿಮಗೆ ಕಷ್ಟದ ವಿಷಯವಲ್ಲ. ನೀವು ನಿಮ್ಮ ಮನಸ್ಸನ್ನು ಶಾಂತವಾಗಿಸಿ, ದೃಢವಾಗಿರಿಸಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯ, ನಿಮ್ಮ ಸಿಟ್ಟಿಗೆ ಏನು ಪ್ರಚೋದನೆ ನೀಡುತ್ತಿದೆ ಎಂಬುದನ್ನು ಗಮನಿಸಿ ಮತ್ತು ಅಂತಹ ಪರಿಸ್ಥಿತಿಯಿಂದ ಆದಷ್ಟು ದೂರವಿರಿ. ಇವೆಲ್ಲವೂ ಕ್ಷಣಿಕವಷ್ಟೇ. ಹಾಗಾಗಿ ಅದನ್ನು ನಿರ್ಲಕ್ಷಿಸಿ ದೂರ ನಡೆಯಿರಿ. ಮನಸ್ಸನ್ನು ಶಾಂತವಾಗಿಸಿ, ಸಮತೋಲನದಲ್ಲಿರಿಸಿಕೊಂಡು ಮನಸ್ಸಿನ ದೃಢತೆ ಕಾಯ್ದುಕೊಳ್ಳಲು ನೀವು ಕೆಲವು ವರ್ಕೌಟ್‌ಗಳನ್ನು ಮಾಡಿ, ಯೋಗ ಮತ್ತು ಧ್ಯಾನ ಇವರೆಡರಿಂದಲೇ ನೀವು ಇದರಿಂದ ಹೊರಗಡೆ ಬರಲು ಸಾಧ್ಯ.

4. ನನಗೆ ಮದುವೆ ಆಗಿ ಎರಡು ವರ್ಷವಾಯಿತು, ಒಂದು ವರ್ಷದ ಮಗುವಿದೆ. ನನಗೆ ಇತ್ತೀಚೆಗೆ ಜೀವನವೇ ಬೇಸರವಾಗಿದೆ. ಅದಕ್ಕೆ ಕಾರಣ ನನ್ನ ಅತ್ತೆ. ನನ್ನ ಅತ್ತೆ ಹೇಳಿದ್ದೇ ನಮ್ಮ ಮನೆಯಲ್ಲಿ ನಡೆಯಬೇಕು. ನನ್ನ ಗಂಡನಿಗೂ ಅತ್ತೆ ಎಂದರೆ ಪಂಚಪ್ರಾಣ, ಅವರ ಹೇಳಿದ್ದನ್ನೇ ಕೇಳಿಕೊಂಡು ಇರುತ್ತಾರೆ. ನನ್ನ ಗಂಡ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನನಗೆ ನನ್ನ ಅಮ್ಮ ತುಂಬಾ ನೆನಪಾಗುತ್ತಾರೆ. ಆದರೆ ಅಮ್ಮನ ಮನೆಗೆ ಹೋಗುವುದು ಬಿಡುವುದಿಲ್ಲ. ‘ನಿಂಗೇನು ಕಮ್ಮಿ, ಇಲ್ಲೇ ಇರು’ ಎನ್ನುತ್ತಾರೆ. ನನ್ನ ಗಂಡನನ್ನು ನನ್ನ ಮನೆಗೆ ಬರುವುದಕ್ಕೆ ಬಿಡುವುದಿಲ್ಲ. ನನ್ನ ಅಪ್ಪ–ಅಮ್ಮನಿಗೂ ನನ್ನ ಗಂಡನೆಂದರೆ ತುಂಬಾ ಪ್ರೀತಿ. ಆದರೆ ಅದನ್ನು ಅವರ ಅಮ್ಮ ಸಹಿಸುವುದಿಲ್ಲ. ಒಟ್ಟಾರೆ ಇವೆಲ್ಲದರಿಂದ ನನ್ನ ಜೀವನ ನರಕವಾಗಿದೆ. ನಾನೇನು ಮಾಡಬೇಕು ತಿಳಿಸಿ.
–ಕವಿತಾ, ಊರು ಬೇಡ

ಉತ್ತರ: ಮದುವೆ ಎಂದರೆ ಕೇವಲ ಗಂಡ ಹೆಂಡತಿಯ ನಡುವಿನ ಸಂಬಂಧವಲ್ಲ. ಕುಟುಂಬದ ಸದಸ್ಯರು ಹಾಗೂ ಅವರ ನಡುವಿನ ಬಾಂಧವ್ಯವೂ ಇದರ ಜೊತೆ ತಳುಕು ಹಾಕಿಕೊಂಡಿದೆ. ಹಾಗಾಗಿ ಹಿರಿಯರಿಗೆ ಬೆಲೆ ಕೊಡುವುದು ಮತ್ತು ಆರೋಗ್ಯಕರ ಸಂಬಂಧವೂ ಇಲ್ಲಿ ಮುಖ್ಯ ಎನ್ನಿಸುತ್ತದೆ. ನಿಮ್ಮ ಮನೆ, ಮನೆಯ ಜನರು ಹೇಗಿದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳಿ. ಆಗ ಮಾತ್ರ ನೀವು ಅವರನ್ನು ಪ್ರೀತಿಸಲು ಸಾಧ್ಯ, ಅವರನ್ನು ಪ್ರೀತಿಸುವುದು, ಅವರು ಹೇಗಿದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳುವುದರಿಂದ ನೀವು ಅವರ ಜೊತೆ ಹೆಚ್ಚು ಬೆರೆಯಬಹುದು. ಸದ್ಯ ನಿಮ್ಮ ಮೊದಲ ಹಾಗೂ ಪ್ರಮುಖ ಆದ್ಯತೆ ಎಂದರೆ ನಿಮ್ಮ ಮಗು. ಹಾಗಾಗಿ ನಿಮ್ಮ ಎಲ್ಲಾ ಸಮಯ ಹಾಗೂ ಗಮನವನ್ನು ನಿಮ್ಮ ಮಗುವಿನ ಮೇಲೆ ಹರಿಸಿ. ಮಗು ನಿಮ್ಮೆಲ್ಲರ ನಡುವೆ ಬಂಧವನ್ನು ಹುಟ್ಟಿ ಹಾಕುವ ಮಧ್ಯವರ್ತಿ. ನಿಮ್ಮ ನಿರೀಕ್ಷೆಯ ಮಟ್ಟವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಅತ್ತೆಯವರ ಜೊತೆ ಪ್ರೀತಿಯಿಂದ, ಆರೋಗ್ಯಕರವಾಗಿ ಮಾತನಾಡಿ, ಖಂಡಿತ ಇದು ನಿಮಗೆ ಸಹಾಯ ಮಾಡುತ್ತದೆ. ತಾಳ್ಮೆಯಿಂದ ಕಾಯಿರಿ. ಸಮಯ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT