ಮಹಿಳಾ ಶೋಷಣೆಯ ಹೊಸ ವಿಕೃತಿ

ಕೌಶಲಕ್ಕಿಂತಲೂ ದೇಹ ಮುಖ್ಯವಾದಾಗ...

ಸಾಮಾಜಿಕ ಜಾಲತಾಣಗಳಲ್ಲಿ ವೈಚಾರಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಒಬ್ಬ ವ್ಯಕ್ತಿಯ ಮೇಲೆ ವೈಯಕ್ತಿಕವಾಗಿ ಅಶ್ಲೀಲ ಬೈಗುಳಗಳ ಮೂಲಕ ದಾಳಿ ನಡೆಸುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಆತಂಕಕಾರಿ ವಿದ್ಯಮಾನ.

ಕೌಶಲಕ್ಕಿಂತಲೂ ದೇಹ ಮುಖ್ಯವಾದಾಗ...

ಹೀಗೆ ಅಂತರ್ಜಾಲದಲ್ಲಿ ಕಿರುಕುಳಕ್ಕೆ ಒಳಗಾಗುವವರಲ್ಲಿ ಪುರುಷರೂ ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಆದರೆ ಆ ದಾಳಿಯ ಗುರಿ ಮಹಿಳೆಯಾದಾಗ ಅದರ ಸ್ವರೂಪ, ಭಾಷೆಯ ಬಳಕೆ ಬೇರೆಯದೇ ಆಗಿರುತ್ತದೆ. ಆಧುನಿಕ ಮಾಧ್ಯಮಗಳು ಮಹಿಳಾ ಶೋಷಣೆಯ ಹೊಸ ವಿಕೃತಿಗಳನ್ನೂ ಹುಟ್ಟುಹಾಕುತ್ತಿರುವುದರ ಜ್ವಲಂತ ನಿದರ್ಶನಗಳು ದಿನವೂ ಎದುರಾಗುತ್ತಿರುತ್ತವೆ.

ಇಂಥದೊಂದು ಭಯಾನಕ ಸಂದರ್ಭವನ್ನು ಹಾದುಬಂದ ಅನುಭವವನ್ನು ಮಲಯಾಳಂ ಸುದ್ದಿ ವಾಹಿನಿಯ ಕಾರ್ಯಕ್ರಮ ನಿರೂಪಕಿ ಸಿಂಧು ಸೂರ್ಯಕುಮಾರ್‌ ಇತ್ತೀಚೆಗೆ ನಡೆದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಹಂಚಿಕೊಂಡಿದ್ದರು. ಆ ಅನುಭವಕಥನದ ನಿರೂಪಣೆ ಇಲ್ಲಿದೆ.

ನಾನು ಕಳೆದ ಇಪ್ಪತ್ತು ವರ್ಷಗಳಿಂದ ಪತ್ರಿಕೋದ್ಯಮವೃತ್ತಿಯಲ್ಲಿದ್ದೇನೆ. ನನ್ನ ಹದಿನೆಂಟನೇ ವರ್ಷದ ವೃತ್ತಿಜೀವನದ ಕೊನೆಯಲ್ಲಿ ಅಥವಾ ಹತ್ತೊಂಬತ್ತನೇ ವರ್ಷದ ಆರಂಭದಲ್ಲಿ ನನಗೆ ನನ್ನ ಜೆಂಡರ್‌ ಬಗ್ಗೆ ನೆನಪಿಸಲಾಯಿತು. ನನ್ನ ದೇಹ ಆಕಾರದ ಸೂಕ್ಷ್ಮ ವಿವರಗಳು ಹಾಗೂ ಸೌಂದರ್ಯಕ್ಕೆ ನನ್ನ ವೃತ್ತಿಕೌಶಲಕ್ಕಿಂತ ಹೆಚ್ಚು ಮಹತ್ವ ದೊರೆಯಲು ಶುರುವಾಗಿತ್ತು.

ನಾನು ಸಾಕಷ್ಟು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನ್ನದೊಂದು ಅನುಭವ ಕಥನವನ್ನು ಸಾಧ್ಯವಾದಷ್ಟೂ ಸಂಕ್ಷಿಪ್ತವಾಗಿ ನಿಮ್ಮ ಮುಂದಿಡುತ್ತೇನೆ. ನಾನು ಮಲಯಾಳಂನ ನಂಬರ್‌ ಒನ್‌ ಸುದ್ದಿವಾಹಿನಿಯಲ್ಲಿ ಅರ್ಧಗಂಟೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. ಆ ಕಾರ್ಯಕ್ರಮ ಮುಖ್ಯವಾಗಿ ಸಮಾಜೋ–ರಾಜಕೀಯ ವಿಶ್ಲೇಷಣೆಯನ್ನು ಒಳಗೊಂಡಿರುತ್ತಿತ್ತು. ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಿದ್ದ ಆ ಕಾರ್ಯಕ್ರಮದಲ್ಲಿ ಹೆಚ್ಚಾಗಿ ರಾಜಕೀಯ ವಿಷಯಗಳ ಕುರಿತು ಚರ್ಚೆಯೇ ಇರುತ್ತಿತ್ತು. (ಈಗ ನಾನು ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿಲ್ಲ.)

ಕೇರಳದ ಹಿಂದುತ್ವ ಪ್ರತಿಪಾದಕರ ಗುಂಪಿನಲ್ಲಿ ನನ್ನನ್ನು ‘ದುರ್ಗಾದೇವಿಯನ್ನು ಅಪಮಾನಿಸಿದವಳು’ ಎಂದೇ ಗುರ್ತಿಸಲಾಗುತ್ತದೆ. ನಾನು ನನ್ನ ಕಾರ್ಯಕ್ರಮದಲ್ಲಿ ದುರ್ಗಾದೇವಿಯನ್ನು ಅಪಮಾನಿಸಿದ್ದೇನೆ ಎಂದು ನನಗೆ ತಿಳಿದುಬಂದಿದ್ದೇ ಮಾರನೇ ದಿನ. ಮೊದಲ ದಿನ ಆ ಕಾರ್ಯಕ್ರಮದ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರೊಬ್ಬರು ನನಗೆ ಕರೆಮಾಡಿ, ‘ನಿನ್ನೆ ರಾತ್ರಿಯ ಕಾರ್ಯಕ್ರಮದಲ್ಲಿ ದುರ್ಗಾದೇವಿಯನ್ನು ಅಪಮಾನಿಸಿದ್ದೀರಾ ಎಂದು ನಿಮ್ಮ ವಿರುದ್ಧ ಕ್ಯಾಂಪೇನ್‌ ನಡೆಯುತ್ತಿದೆ’ ಎಂದು ಎಚ್ಚರಿಸಿದ ಮೇಲೆ! ನಾನು ಆ ಕಾರ್ಯಕ್ರಮದಲ್ಲಿ ದುರ್ಗಾದೇವಿಯ ಕುರಿತು ಒಂದು ಶಬ್ದವನ್ನೂ ಕೆಟ್ಟದಾಗಿ ಮಾತನಾಡಿರಲಿಲ್ಲ. ‘ನಾನು ಯಾವಾಗ ಮತ್ತು ಹೇಗೆ ದುರ್ಗಾದೇವಿಯನ್ನು ಅಪಮಾನಿಸಿದ್ದೇನೆ?’ ಎಂದು ನಾನು ಆ ಮುಖಂಡರನ್ನು ಪ್ರಶ್ನಿಸಿದೆ. ‘ಕಾರ್ಯಕ್ರಮದ ನಿರೂಪಕಿ ಸಿಂಧು ಸೂರ್ಯಕುಮಾರ್‌ ದುರ್ಗಾದೇವಿಯನ್ನು ಅಪಮಾನಿಸಿಲ್ಲ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ’ ಎಂದು ಅದೇ ಬಿಜೆಪಿ ಮುಖಂಡರೇ ಸ್ವತಃ ಹೇಳಿದ್ದರು.

ಆದರೆ ಅವತ್ತಿನಿಂದ ನನ್ನ ಮೇಲೆ ಅವಾಚ್ಯ ಬೈಗುಳಗಳ ಸುರಿಮಳೆ ಸುರಿಯಲು ಶುರುವಾಯ್ತು. ಇವೆಲ್ಲವೂ ನಿಲ್ಲಬಹುದು ಎಂದು ನಾನು ಒಂದು ದಿನ ಕಾದೆ. ಅಂದು ಶನಿವಾರ. ಭಾನುವಾರದ ಹೊತ್ತಿಗೆ ನನ್ನ ಕಚೇರಿಯ ದೂರವಾಣಿಗಳಿಗೆ ಕರೆಗಳು ನಿರಂತರವಾಗಿ ಬರಲು ಶುರುವಾಗಿದ್ದವು. ಕಚೇರಿಯ ಎರಡು ದೂರವಾಣಿಗಳು ನನಗೆ ಬರುತ್ತಿದ್ದ ಅಶ್ಲೀಲ ಕರೆಗಳಿಂದಲೇ ಬಿಜಿಯಾಗಿಬಿಟ್ಟಿದ್ದವು.

ನನ್ನ ತಂದೆ–ತಾಯಿ ವೃದ್ಧಾಪ್ಯದಲ್ಲಿರುವವರು. ನನ್ನಮ್ಮನಿಗೆ 73 ವರ್ಷ. ಅವರಿಗೆ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ಆಸಕ್ತಿಯೂ ಇಲ್ಲ. ಅವಳು ಟಿ.ವಿ.ಯಲ್ಲಿ ನಾನು ಹೇಗೆ ಕಾಣುತ್ತಿದ್ದೇನೆ, ನನ್ನ ಮೇಕಪ್‌ ಹೇಗಿರುತ್ತದೆ ಎಂಬುದನ್ನು ಗಮನಿಸಲಿಕ್ಕಾಗಿ ನನ್ನ ಕಾರ್ಯಕ್ರಮವನ್ನು ನೋಡುತ್ತಿದ್ದರೇ ಹೊರತು ಅದರಲ್ಲಿನ ವಿಷಯದ ಕಾರಣಕ್ಕಾಗಿ ಅಲ್ಲವೇ ಅಲ್ಲ. ‘ದುರ್ಗಾದೇವಿ’ ಪ್ರಕರಣ ಆದಂದಿನಿಂದ ನನ್ನ ಮನೆಯ ದೂರವಾಣಿಗೂ ನಿರಂತರವಾಗಿ ಅಶ್ಲೀಲ ಕರೆಗಳು ಬರಲಾರಂಭಿಸಿದವು. ಅಮ್ಮ ನಿಜಕ್ಕೂ ಭಯಗೊಂಡಿದ್ದಳು.

ಇಷ್ಟಾದಮೇಲೆ ನಾನು ಪೊಲೀಸರಿಗೆ ದೂರು ನೀಡಿದೆ. ಆ ದೂರಿನ ಪ್ರತಿಯನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ, ಕಾಂಗ್ರೆಸ್‌ ಅಧ್ಯಕ್ಷರು, ಬಿಜೆಪಿ ಅಧ್ಯಕ್ಷರು - ಹೀಗೆ ಎಲ್ಲ ರಾಜಕೀಯ ಪಕ್ಷಗಳಿಗೂ ಕಳುಹಿಸಿದೆ. ಪ್ರತಿಯೊಬ್ಬರೂ ‘ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೇಳು ಜನರನ್ನು ಬಂಧಿಸಲಾಯಿತು.

ನನ್ನ ದೂರವಾಣಿ ನಂಬರ್‌ ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗಿತ್ತು. ಎಲ್ಲ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಬರೆಯಲಾಗಿತ್ತು. ‘ಆ ಜಾಗಕ್ಕೆ ಬಾ, ಈ ಜಾಗಕ್ಕೆ ಬಾ’ ಎಂದೆಲ್ಲ ನನಗೆ ತುಂಬ ಜನ ಫೋನ್‌ ಮಾಡಿ ಕರೆಯುತ್ತಿದ್ದರು. ’ನಾವು ಭೇಟಿ ಆಗೋಣವಾ?’ ಎಂದು ಕೇಳುತ್ತಿದ್ದರು. ‘ಓ... ನೀವು ದುರ್ಗಾದೇವಿಗೆ ಅಪಮಾನ ಮಾಡಿದವರಲ್ಲವೇ?’ ಎಂದೇ ನನ್ನನ್ನು ಗುರುತು ಹಿಡಿಯುತ್ತಿದ್ದರು. ಇನ್ಯಾರೋ ‘ನೀವು ಸೂರ್ಯ ಟಿ.ವಿ.ಯಲ್ಲಿ ಕೆಲಸ ಮಾಡ್ತಿದ್ದೀರಾ?’ ಎಂದು ಕೇಳುತ್ತಿದ್ದರು. ನಾನು ‘ನೀವು ನನ್ನ ಕಾರ್ಯಕ್ರಮವನ್ನು ನೋಡಿದ್ದೀರಾ?’ ಎಂದು ಕೇಳುತ್ತಿದ್ದೆ. ಬಹುತೇಕರು ಆ ಕಾರ್ಯಕ್ರಮವನ್ನು ನೋಡಿದವರೇ ಅಲ್ಲ!

ಈ ಕಿರುಕುಳಕ್ಕೆ ಆ ಒಂದು ದಿನದ ಕಾರ್ಯಕ್ರಮವಷ್ಟೇ ಕಾರಣ ಅಲ್ಲ ಎಂದು ನಿಧಾನಕ್ಕೆ ನನಗೆ ತಿಳಿಯಿತು. ಕಳೆದ ಹತ್ತು ವರ್ಷಗಳಿಂದ ನಾನು ಒಂದು ರಾಜಕೀಯ ವಿಶ್ಲೇಷಣಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇನೆ ಎಂಬುದೇ ಈ ಎಲ್ಲದಕ್ಕೂ ಕಾರಣ ಎಂಬುದೂ ನನಗೆ ಅರಿವಾಯ್ತು. ನನ್ನ ಎದುರಿಗೆ ಯಾರೇ ಇದ್ದರೂ ಮುಖಕ್ಕೆ ಹೊಡೆದಂತೆ ಸತ್ಯ ಹೇಳುವುದಕ್ಕಾಗಿಯೇ ನಾನು ಪ್ರಸಿದ್ಧಳು.

ನಾನು ಹೆಣ್ಣು ಎಂಬ ಒಂದೇ ಕಾರಣಕ್ಕೆ ಬೈಗುಳಗಳೆಲ್ಲ ನನ್ನ ದೇಹ, ಅದರ ಆಕಾರಗಳ ಕುರಿತಾಗಿಯೇ ಇರುತ್ತಿತ್ತು.

ಇದೊಂದು ನಾಟಕೀಯ ವಿದ್ಯಮಾನ. ನಾನು ಅನುಭವಿಸಿದ ಕಿರುಕುಳವನ್ನು ಪೂರ್ತಿಯಾಗಿ ಇಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನನ್ನ ವಿರುದ್ಧ ದ್ವೇಷಮಯ ಕ್ಯಾಂಪೇನ್‌ ಶುರುವಾದ ಒಂದು ವಾರದ ನಂತರ ನಾನು ನನ್ನ ದೂರವಾಣಿ ಬದಲಾಯಿಸಿದೆ. ಇದು ಬರೀ ದೂರವಾಣಿ ಸಂಖ್ಯೆಯ ಬದಲಾವಣೆ ಅಷ್ಟೇ ಆಗಿರಲಿಲ್ಲ. ಬದಲಿಗೆ ಇಡೀ ಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳುವ ಪ್ರಕ್ರಿಯೆಯೂ ಆಗಿತ್ತು. ನಾನು ಹೊಸ ಫೋನ್‌ ನಂಬರ್‌ ತೆಗೆದುಕೊಂಡೆ. ಆದರೆ ಅದನ್ನು ಸ್ನೇಹಿತರ ಜತೆ ಹಂಚಿಕೊಳ್ಳಲೂ ಹಿಂಜರಿಯುತ್ತಿದ್ದೆ. ಆ ನಂಬರ್‌ ಕೂಡ ದುರ್ಬಳಕೆ ಆದರೆ ಎಂಬ ಭಯವೇ ಹಿಂಜರಿಕೆಗೆ ಕಾರಣ.

ನನ್ನ ದೂರಿನ ಅನ್ವಯ ಬಂಧಿಸಲಾಗಿದ್ದ ಆರೇಳು ಜನರಿಗೆ ಒಂದೇ ಗಂಟೆಯಲ್ಲಿ ಬೇಲ್‌ ಸಿಕ್ಕಿತು. ಅವರನ್ನು ಹಿಂದುತ್ವ ಸಂಘಟನೆಗಳು ಹೂವಿನ ಹಾರ ಹಾಕಿ ಕರೆದುಕೊಂಡು ಹೋದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರಿಗೆ ಪ್ರಶಂಸೆಗಳ ಮಹಾಪೂರವೇ ಹರಿದುಬಂತು. ಪೊಲೀಸರಿಗೆ ದೂರು ನೀಡಿದ್ದಕ್ಕಾಗಿ ನನ್ನನ್ನು ಹೇಡಿ ಎಂದು ಜರಿಯಲಾಯಿತು. ಮಾಧ್ಯಮವೊಂದು ನಾನು ಪತ್ರಕರ್ತೆಯೇ ಅಲ್ಲ, ಹೇಡಿ ಹೆಣ್ಣು ಎಂದು ದೂಷಿಸಿ ಅರ್ಧಗಂಟೆ ಕಾರ್ಯಕ್ರಮವನ್ನು ಪ್ರಸಾರ ಮಾಡಿತು.

2018ರ ಜನವರಿಗೆ ಈ ಪ್ರಕರಣ ನಡೆದು ಎರಡು ವರ್ಷ ಮುಗಿಯುತ್ತದೆ. ಈಗಲೂ ಪ್ರಕರಣ ಮುಗಿದಿಲ್ಲ. ಆರೋಪಪಟ್ಟಿ ಸಲ್ಲಿಸಿಲ್ಲ. ಆರ್‌ಟಿಐ ಅರ್ಜಿ ಹಾಕಿದೆ. ಪೊಲೀಸರು ‘ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಸ್ಥಿತಿಯಲ್ಲಿ ಯಾವ ಸಂಗತಿಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ. ನನಗೆ ಇನ್ನೂ ನ್ಯಾಯ ಸಿಗಬೇಕಿದೆ.

*

–ಸಿಂಧು ಸೂರ್ಯಕುಮಾರ್‌

Comments
ಈ ವಿಭಾಗದಿಂದ ಇನ್ನಷ್ಟು
‘ನಿದ್ದೆಯಲ್ಲೇ ನನ್ನ ಮಾತುಕತೆ!’

ಸಲಹೆ
‘ನಿದ್ದೆಯಲ್ಲೇ ನನ್ನ ಮಾತುಕತೆ!’

17 Mar, 2018
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

ಯೋಗ
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

17 Mar, 2018
ಯುಗದ ಆದಿ ಯುಗಾದಿ

ಭೂಮಿಕಾ
ಯುಗದ ಆದಿ ಯುಗಾದಿ

17 Mar, 2018
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

ಆಯುರ್ವೇದ
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

17 Mar, 2018
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ಭೂಮಿಕಾ
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

17 Mar, 2018