ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಪ್ರಯೋಗದ ಸಂಗೀತ ನೃತ್ಯ ಉತ್ಸವ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಯಕ್ಷಗಾನ ಕಲಾ ಪ್ರಪಂಚದಲ್ಲಿ ಹೆಣ್ಣಿನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಜನಪ್ರಿಯರಾದವರು ಮಂಟಪ ಪ್ರಭಾಕರ ಉಪಾಧ್ಯಾಯ. ತಾಳಕ್ಕೆ ಹೆಜ್ಜೆ ಹಾಕುತ್ತಾ ಹೆಣ್ಣಿನ ಭಾವನೆಗಳನ್ನು ಅಭಿವ್ಯಕ್ತಿಸುವ ಅವರ ಕಲಾ ನೈಪುಣ್ಯ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.

ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಯೋಗ ಮಾಡಿ ಯಶಸ್ವಿ ಕಂಡಿರುವ ಅವರು ಶನಿವಾರ ಶತಾವಧಾನಿ ಆರ್.ಗಣೇಶ್‌ ರಚನೆಯ ‘ಹುಚ್ಚು ಹೆಣ್ಣಿನ ಹತ್ತು ಮುಖಗಳು’ ಕಾರ್ಯಕ್ರಮದಲ್ಲಿ ಹೆಣ್ಣಿನ ಮನಸ್ಸಿನ ತೊಳಲಾಟವನ್ನು ಅಭಿವ್ಯಕ್ತಿಸಲಿದ್ದಾರೆ.

ಇದುವರೆಗೆ ಯಕ್ಷಗಾನದ ಧಾಟಿಗೆ ಹೆಜ್ಜೆ ಹಾಕುತ್ತಿದ್ದ ಮಂಟಪ ಅವರು ಈ ಬಾರಿ ಕರ್ನಾಟಕ ಶಾಸ್ತ್ರೀಯ ಸಂಗೀತದ

ಇಂಪಿಗೆ ಹೆಜ್ಜೆ ಹಾಕುತ್ತಿದ್ದಾರೆ. ವಸುಧಾ ಬಾಲಕೃಷ್ಣ ಅವರ ಗಾಯನವಿರಲಿದ್ದು, ಕೊಳಲಿನಲ್ಲಿ ಜಯರಾಮ್‌ ಕಿಕರಿ ಸಹಕಾರ ನೀಡಲಿದ್ದಾರೆ.

‘ಯಕ್ಷಗಾನದಲ್ಲಿ ಕಲಾವಿದನ ಹೆಜ್ಜೆಯನ್ನು ಗಮನಿಸಿ ವಾದ್ಯದವರೂ ನಾದ ಹೊಮ್ಮಿಸುತ್ತಾರೆ. ಹೀಗಾಗಿ ಈ ಕಾರ್ಯಕ್ರಮದಲ್ಲಿಯೂ ಮದ್ದಳೆ ಲಯವನ್ನು ಬಿಡಲು ಸಾಧ್ಯವಾಗಲಿಲ್ಲ’ ಎನ್ನುವ ಮಂಟಪ ಅವರ ಈ ಕಾರ್ಯಕ್ರಮಕ್ಕೆ ಎ.ಪಿ.ಪಾಠಕ್‌ ಅವರ ಮದ್ದಳೆಯ ನಾದ ಇರಲಿದೆ.

ಮೊದಲ ಪ್ರಯೋಗ, ಹೊಸಬಗೆಯ ಸಂಗೀತಕ್ಕೆ ಹೆಜ್ಜೆ ಹಾಕಬೇಕು, ಭಾವನೆಗಳ ವಿಸ್ತಾರಕ್ಕೆ ಸಂಗೀತ ಸ್ಪಂದಿಸಬೇಕು. ಹೀಗಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿರಬಹುದು ಎಂದು ನಿರೀಕ್ಷಿಸಿದರೆ ಅದು ತಪ್ಪು. ಈ ಪ್ರಶ್ನೆಗೆ ಮಂಟಪ ಅವರು ಉತ್ತರಿಸಿದ್ದು ಹೀಗೆ.

‘ನಾನು ಮೊದಲೇ ಯಕ್ಷಗಾನದವನು. ಯಕ್ಷಗಾನ ಎಂದರೆ ಎಲ್ಲರೂ ಸೇರಿ ಅಭ್ಯಾಸ ಮಾಡುವುದು ಎಂಬ ಕಲ್ಪನೆಯೇ ಇಲ್ಲ. ಇಲ್ಲಿಯೂ ಅಷ್ಟೇ ನಾವೆಲ್ಲರೂ ಕೂತು ಒಂದು ದಿನ ಕಾರ್ಯಕ್ರಮ ಹೀಗಿರಬೇಕು ಎಂದು ಚರ್ಚಿಸಿದ್ದೇವೆ. ಶ್ರೀವತ್ಸ ಶಾಂಡಿಲ್ಯ ಅವರು ಬಂದು ಹೊಸಬಗೆಯ ಕಾರ್ಯಕ್ರಮ ಮಾಡಿಕೊಡಲೇಬೇಕು ಎಂದು ಒತ್ತಾಯಿಸಿದರು.

ಅದೇ ಯೋಚನೆಯಲ್ಲಿದ್ದವ ಆರ್‌.ಗಣೇಶ್‌ ಅವರ ಮನೆಗೆ ಹೋದಾಗ ಈ ವಿಷಯ ಪ್ರಸ್ತಾಪಿಸಿದೆ. ಹೆಣ್ಣಿನ ಮನಸ್ಸಿನ ಭಾವನೆಗಳನ್ನು ಹೇಳುವ ಒಂದಿಷ್ಟು ಹಾಡುಗಳನ್ನು ಬರೆದಿರುವುದನ್ನು ತೋರಿಸಿದರು. ಅಲ್ಲಿಂದ ಆರು ಹಾಡುಗಳನ್ನು ಎತ್ತಿಕೊಂಡು ಕಾರ್ಯಕ್ರಮಕ್ಕೆ ಅಣಿಯಾದೆ.

ಹೆಣ್ಣಿನ ಭಾವನೆಗಳನ್ನು ಯಾವೆಲ್ಲಾ ರೀತಿಯಲ್ಲಿ ತೋರಿಸಬಹುದು ಎಂದು ನನ್ನ ಮನಸ್ಸಿನಲ್ಲಿ ಯೋಚಿಸಿದ್ದೇ ತಯಾರಿ. ಈ ಕಾರ್ಯಕ್ರಮ ಹೇಗೆ ಆಗಬಹುದು? ಎನ್ನುವ ನಿರೀಕ್ಷೆ ನನ್ನಲ್ಲೂ ಇದೆ. ಕುಳಿತ ಪ್ರೇಕ್ಷಕರು ನೃತ್ಯದೊಂದಿಗೆ ತಾವೂ ಹೆಣ್ಣಾಗಿ ಅವಳ ಭಾವನೆಗಳನ್ನು ಅನುಭವಿಸಬೇಕು. ಹೆಣ್ಣಿನ ಮನಸ್ಸಿನ ತೊಳಲಾಟವನ್ನು ಕಂಡು ನೋಡುಗರ ಕಣ್ಣಂಚು ಒದ್ದೆಯಾದರೆ ನಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬುದು ನನ್ನ ಭಾವನೆ’. ಅಂದಹಾಗೆ ಇಲ್ಲಿ ‘ಪ್ರೇಮವೇ ಪರಿಶುದ್ಧ’ ಎನ್ನುವುದನ್ನು ಪ್ರಸ್ತುತಪಡಿಸಲಾಗುತ್ತದೆ.

ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಉತ್ಸವ
ಪ್ರತಿಬಾರಿಯೂ ವಿಭಿನ್ನ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಅಂತರರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು, ಸಂಸ್ಥೆಯ ಐದನೇ ವರ್ಷದ ಸಂಭ್ರಮದಲ್ಲಿ ‘ಶಾಂಡಿಲ್ಯ ರಾಷ್ಟ್ರೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಉತ್ಸವವನ್ನು’ ಶನಿವಾರ (ನವೆಂಬರ್‌ 18) ಹಮ್ಮಿಕೊಂಡಿದೆ. ಶತಾವಧಾನಿ ಆರ್‌. ಗಣೇಶ್‌ ರಚನೆಯ ‘ಹುಚ್ಚು ಹೆಣ್ಣಿನ ಹತ್ತು ಮುಖಗಳು’ ಹಾಗೂ ‘ಮಧುರಾದ್ವೈತಂ’ ಹಾಡನ್ನು ಕಲಾವಿದರು ಪ್ರಸ್ತುತಪಡಿಸುತ್ತಾರೆ. ಕಾರ್ಯಕ್ರಮದ ಉದ್ದಕ್ಕೂ ಗಣೇಶ್‌ ಅವರ ವಿವರಣೆ ಇರಲಿದೆ. ಸ್ಥಳ– ಸೇವಾಸದನ ಸಭಾಂಗಣ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 5.30. ಉಚಿತ ಪ್ರವೇಶ.

*
ಹಿಂದಿನ ಕಾಲದ ಅನೇಕ ಹೆಣ್ಣುಮಕ್ಕಳ ಮನಸ್ಸಿನ ಭಾವನೆಗಳನ್ನು ಯೋಚನೆಯಲ್ಲಿಟ್ಟುಕೊಂಡು ಹಾಡು ಬರೆದಿದ್ದೇನೆ. 106 ಹಾಡುಗಳಲ್ಲಿ ಆರು ಹಾಡುಗಳಿಗೆ ಪ್ರಭಾಕರ್‌ ಅವರು ಅಭಿನಯಿಸಲಿದ್ದಾರೆ. ಮಧುರಾದ್ವೈತಂ ಕೂಡ ರಾಧಾಕೃಷ್ಣರ ಮೂಲಕ ಅದ್ವೈತ ಚಿಂತನೆ ಹೇಳುವಂಥದ್ದು.
–ಶತಾವಧಾನಿ ಆರ್‌.ಗಣೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT