ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ ಬಾಲೆ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪುಟ್ಟ ಪಾದಗಳನ್ನು ಪುಟಿಸುತ್ತ, ತುಂಬು ಕೈಗಳನ್ನು ಲಯಕ್ಕೆ ತಕ್ಕಂತೆ ಹೊರಳಿಸುತ್ತ, ಕಮಲದ ಕಂಗಳಲ್ಲೆ ಕಣ್ಣಿಗೆ ಕಟ್ಟುವಂತಹ ದೃಶ್ಯಗಳನ್ನು ಹಾವಭಾವಗಳಲ್ಲಿ ಮಿಳಿತಗೊಳಿಸಿ ನೋಡುಗರನ್ನು ತನ್ನೆಡೆಗೆ ಸೆಳೆಯುವ ಈ ಪುಟಾಣಿ ಕಲಾವಿದೆ ತುಳಸಿ ಹೆಗಡೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮೀಣ ಪ್ರತಿಭೆ ಈ ತುಳಸಿ. ತನ್ನ ಮೂರರ ಎಳೆ ವಯಸ್ಸಿನಲ್ಲಿಯೇ ಯಕ್ಷಗಾನಕ್ಕೆ ಬಣ್ಣಹಚ್ಚಿ ಭಾರವಾದ ವೇಷತೊಟ್ಟು ಹೆಜ್ಜೆ ಹಾಕಿದವಳು. ತನ್ನ ಐದನೇ ವರ್ಷಕ್ಕೇ ಯಕ್ಷಗಾನದಲ್ಲಿ ವಿಶ್ವಶಾಂತಿ ಸಂದೇಶ ರೂಪಕ ಪ್ರದರ್ಶಿಸಿದ್ದಾಳೆ.

ರಾಘವೇಂದ್ರ ಹಾಗೂ ಗಾಯತ್ರಿ ದಂಪತಿಗಳ ಮಗಳಾಗಿ 2009ರಲ್ಲಿ ಜನಿಸಿರುವ ಈ ಪುಟ್ಟ ಬಾಲೆ, ತನ್ನ ಎರಡುವರೆ ವರ್ಷಕ್ಕೇ ಸ್ವತಂತ್ರವಾಗಿ ಸಂಗೀತೋಪಕರಣಗಳ ಜೊತೆ ಹಾಡಿದ ಕಿಶೋರಿ... ಕವಿತೆ ಬರೆಯುವುದು ಮತ್ತು ಚಿತ್ರಕಲೆ ಇವಳ ಹವ್ಯಾಸ. ಓದಿನಲ್ಲೂ ಎತ್ತಿದ ಕೈ.

ನಗರದಲ್ಲಿ ಈಚೆಗೆ ನಡೆದ ‘ಕೌಮುದಿ ಉತ್ಸವ’ದಲ್ಲಿ ಪಾಲ್ಗೊಂಡಿದ್ದ ತುಳಸಿ ಅರಳು ಹುರಿದಂತೆ ಮಾತನಾಡಿದಳು.

ಹುಟ್ಟಿನಿಂದಲೇ ಆಸಕ್ತಿ: ತುಳಸಿ ಅವರ ಅಮ್ಮ ಗಾಯತ್ರಿ ಅವರು ಗರ್ಭವತಿಯಾಗಿದ್ದಾಗ ಯಕ್ಷಗಾನದ ಪದ್ಯಗಳನ್ನೇ ಹೆಚ್ಚಾಗಿ ಕೇಳುತ್ತಿದ್ದರಂತೆ. ಮಗುವಾದ ಮೇಲೆಯೂ ತುಳಸಿಯ ಅಳುವನ್ನು ನಿಲ್ಲಿಸಲು ಅಮ್ಮ ಯಕ್ಷಗಾನದ ಪದ್ಯಗಳನ್ನು ಹಾಕುತ್ತಿದ್ದರು. ಹಾಡು ಕಿವಿಗೆ ಬೀಳುತ್ತಿದ್ದಂತೆ ಮಗು ಶಾಂತಸ್ವರೂಪಿಯಾಗಿ, ತದೆಕಚಿತ್ತದಿಂದ ಆಲಿಸುತ್ತಿತ್ತಂತೆ. ಮನೆಯವರಿಗೆ ಇದು ನಿಜಕ್ಕೂ ಆಶ್ವರ್ಯವನ್ನು ಉಂಟು ಮಾಡಿತ್ತು ಎಂಬ ಸಂಗತಿಯನ್ನು ತಂದೆ ರಾಘವೇಂದ್ರ ಅವರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ತುಳಸಿಗೆ ಯಕ್ಷಗಾನದ ಮೊದಲ ಗುರುವಾದವರು ಅವಳ ಅಮ್ಮ. ಸಿ.ಡಿ, ಕ್ಯಾಸೆಟ್‌, ವಿಡಿಯೊಗಳ ಮೂಲಕ ಪಾಠ ಹೇಳುತ್ತಿದ್ದರಂತೆ. ಮುಂದಿನ ಶಿಕ್ಷಣವನ್ನು ಗುರು ಜಿ.ಎಸ್.ಭಟ್ಟ ಪಂಚಲಿಂಗ ಅವರಿಂದ ಪಡೆದುಕೊಳ್ಳುತ್ತಿದ್ದಾಳೆ. ತುಳಸಿ ಈಗ ಶಿರಸಿಯ ಪ್ರತಿಷ್ಠಿತ ಲಯನ್ಸ್‌ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾಳೆ.

ವಿಶ್ವಶಾಂತಿಗಾಗಿ ಗೆಜ್ಜೆ ಕಟ್ಟಿದ ಬಾಲೆ: ವಿಶ್ವದೆಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಲು ಬಾಲೆಯೊಬ್ಬಳು ಗೆಜ್ಜೆ ಕಟ್ಟಿರುವುದು ಇದೇ ಮೊದಲು. ದೇಶದಲ್ಲೇ ಪ್ರಥಮ ಪ್ರಯೋಗ ಇದು. ತುಳಸಿ ಐದನೇ ವರ್ಷಕ್ಕೇ ವಿಶ್ವಶಾಂತಿಗೆ ಗೆಜ್ಜೆ ಕಟ್ಟಿದವಳು. ಒಂದುತಾಸಿನ ಯಕ್ಷ ನೃತ್ಯ ರೂಪಕ ನೀಡುವ ಮೂಲಕ ವಿಶ್ವಶಾಂತಿಯ ಜಾಗೃತಿ ಮೂಡಿಸುತ್ತಿದ್ದಾಳೆ.

ಬಾಲೆಯೊಬ್ಬಳು ವಿಶ್ವಶಾಂತಿ ಸಂದೇಶ ಸಾರಿದ ಬೇರೆ ಉದಾಹರಣೆಗಳು ಸದ್ಯಕ್ಕಿಲ್ಲ. ಅತೀ ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ವೇಷತೊಟ್ಟು ರಂಗಪ್ರವೇಶಿಸಿದ ಕೀರ್ತಿಯೂ ಈಕೆಯದ್ದು. ಈಗಾಗಲೇ ವಿಶ್ವಶಾಂತಿ ರೂಪಕದ 25 ಪ್ರದರ್ಶನಗಳನ್ನು ಈಕೆ ನೀಡಿದ್ದಾಳೆ. ಸದ್ಯ ‘ಶ್ರೀಕೃಷ್ಣ ವಂದೇ’ ಎಂಬ ಹೊಸ ರೂಪಕ ಡಿ.13ಕ್ಕೆ ಲೋಕಾರ್ಪಣೆಯಾಗಲಿದೆ.

ವಿಶ್ವಶಾಂತಿ ಸರಣಿಯಲ್ಲಿ ಎರಡು ಯಕ್ಷ ನೃತ್ಯ ರೂಪಕ ನೀಡುತ್ತಾಳೆ ತುಳಸಿ. ಪ್ರತಿ ರೂಪಕವು ಐವತ್ತು ನಿಮಿಷಗಳದ್ದು. ಯಕ್ಷಗಾನದಲ್ಲಿ ವಿಶ್ವಶಾಂತಿಯ ಸಂದೇಶ ಒಂದಾದರೆ ಇನ್ನೊಂದು ಅಂತಃಶುದ್ಧಿ, ಬಾಹ್ಯ ಶುದ್ಧಿ ಪ್ರತಿಪಾದಿಸುವ ವಿಶ್ವ ಶಂಕರಾಕ್ಷರ. ಎರಡನೇ ರೂಪಕದಲ್ಲಿ
ತುಳಸಿ ದ್ವಿಪಾತ್ರದಲ್ಲಿ ಶಂಕರ ಹಾಗೂ ಶಂಕರಾಚಾರ್ಯರಾಗಿ ಕಾಣಿಸಿಕೊಳ್ಳುವಳು.

ಎಂಟು ಕೆ.ಜಿ ಭಾರವಾದ ವೇಷಭೂಷಣ ತೊಟ್ಟು ಗಂಟೆಗಳ ಕಾಲ ಕುಣಿಯುತ್ತಾಳೆ. ಅಷ್ಟೇ ಅಲ್ಲ ರಂಗ ಪ್ರವೇಶ ಮಾಡುವುದಕ್ಕೂ ಒಂದೂವರೆ ಗಂಟೆ ಮುಂಚೆಯಿಂದಲೇ ಬಣ್ಣ ಹಚ್ಚಿಸಿಕೊಳ್ಳಲು ಕೂರುತ್ತಾಳೆ. ಯಕ್ಷಗಾನದ ದಿಗ್ಗಜರ ಪ್ರೋತ್ಸಾಹದಿಂದ ಹೊಸ ರೂಪಕಗಳಿಗೆ ಈಕೆ ಸಾಕ್ಷಿಯಾಗಿದ್ದಾಳೆ.

ಕೃಷ್ಣಾರ್ಜುನದ ಅಭಿಮನ್ಯು, ಹರಿಶ್ಚಂದ್ರದ ಲೋಹಿತಾಶ್ವ, ಕರ್ಣಪರ್ವದ ವೃಷಸೇನ, ಭೀಷ್ಮ ಪರ್ವದ ಅಭಿಮನ್ಯು ಪಾತ್ರಗಳಲ್ಲಿ ಗಮನ ಸೆಳೆದಿದ್ದಾಳೆ. ತಿರುಪತಿ, ಮುಂಬೈ, ಮಂಗಳೂರು, ಬೆಂಗಳೂರು, ಮೂಡುಬಿದರೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ನೀಡಿರುವುದು ಕೂಡ ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT