ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೊಪ್ಪುವ ಉದ್ದನೆಯ ಸ್ವೆಟರ್‌

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೆಂತ್ಯ ಬಣ್ಣದ ಉದ್ದದ ಸ್ವೆಟರ್‌ ಧರಿಸಿ ಮೋಹಕವಾಗಿ ಕಂಗೊಳಿಸುತ್ತಿದ್ದ ಫೋಟೊವೊಂದನ್ನು ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಾಕಿಕೊಂಡಿದ್ದರು. ಇವರ ಸ್ಟೈಲ್‌ ಕಂಡು ಹಲವರು ಹಾಡಿ ಹೊಗಳಿದ್ದರು. ಸಿನಿಮಾ ಮಂದಿ ತೊಟ್ಟ ಉಡುಪು ಫ್ಯಾಷನ್‌ ಕ್ಷೇತ್ರದಲ್ಲಿ ಬಹುಬೇಗನೆ ಪ್ರಚುರತೆ ಗಳಿಸುತ್ತದೆ. ಚಳಿಗಾಲ ಬಂತೆಂದರೆ ಉಡುಪಿನ ಚಿಂತೆಯೂ ಶುರುವಾಗುತ್ತದೆ. ಫ್ಯಾಷನ್‌ ಪ್ರಜ್ಞೆ ಹೆಚ್ಚುತ್ತಿರುವ ಕಾರಣಕ್ಕೆ ಉಡುಪಿನ ಆಯ್ಕೆಯಲ್ಲಿಯೂ ವೈವಿಧ್ಯತೆ ಲಭಿಸುತ್ತಿದೆ.

ಚಳಿಗಾಲದ ಫ್ಯಾಷನ್ನಿನಲ್ಲಿ ಸ್ವೆಟ್‌ ಡ್ರೆಸ್‌ಗಳು ಮುಂಚೂಣಿ ಪಡೆದಿದೆ. ಎಲ್ಲಾ ವಯೋಮಾನದವರಿಗೂ ಹೊಂದುವ, ಜೊತೆಗೆ ಇದರ ಆಯ್ಕೆಯಲ್ಲಿ ವೈವಿಧ್ಯತೆ ಇರುವುದು ಇದಕ್ಕೆ ಕಾರಣ.

ಋತುಮಾನಕ್ಕೆ ಅನುಗುಣವಾದ ಉಡುಪು ಧರಿಸುವ ಜಾಯಮಾನ ನಮ್ಮದು. ಚಳಿಗಾಲ ಬಂದಾಗ ದೇಹವನ್ನು ಬೆಚ್ಚಗಿಡುವ ಉಡುಪು ತೊಡುವುದು ಸಾಮಾನ್ಯ. ಸ್ವೆಟರ್‌, ಸ್ಕಾರ್ಫ್‌, ಶಾಲು... ಹೀಗೆ ಎಲ್ಲದರಲ್ಲೂ ಹೊಸತನ ಹುಡುಕುವ ಕಾಲವಿದು. ಮೈಬೆಚ್ಚಗಾಗಿಸಲು ಉಡುಪಿನ ಮೇಲೆ ಹಾಕಿಕೊಳ್ಳುತ್ತಿದ್ದ ಸ್ವೆಟರ್‌ಗಳೇ ಉಡುಪಾಗಿ ತುಂಬಾ ದಿನಗಳಾಗಿವೆ. ಹಾಗೆಯೇ ಇದು ಮಹಿಳೆಯರ ಮೆಚ್ಚುಗೆಯನ್ನು ಪಡೆದಿದೆ. ಚಳಿಗಾಲದಲ್ಲಿ ಮುಂಚೂಣಿಯಲ್ಲಿರುವ ಸ್ವೆಟ್‌ ಡ್ರೆಸ್‌ಗಳು ವಿಭಿನ್ನತೆಯ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಚಳಿಗಾಲದ ಒಣಹವೆಗೆ ಮೈಯನ್ನು ತೆರೆದುಕೊಂಡಷ್ಟೂ ಚರ್ಮದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದಕ್ಕಾಗಿ ದೇಹಕ್ಕೆ ಬೆಚ್ಚಗಿನ ರಕ್ಷಣೆ ನೀಡುವ
ಸ್ವೆಟರ್‌ ಒಳ್ಳೆಯ ಆಯ್ಕೆಯಾಗಬಲ್ಲದು. ಈ ಬಗೆಯ ಉಡುಪಿನಲ್ಲಿ ನಾನಾ ಆಯ್ಕೆಗಳಿವೆ. ಬಿಗಿಯಾಗಿರುವ ಜೊತೆಗೆ ಜೋತುಬಿದ್ದಂತೆ ಕಾಣುವ ದೊಗಲೆ ಸ್ವೆಟರ್‌ಗಳು ಟ್ರೆಂಡ್‌ ಸೃಷ್ಟಿಸಿವೆ.

ದೊಗಲೆ ಸ್ವೆಟರ್‌ಗಳಿಗೆ ಸೊಂಟಕ್ಕೆ ಬೆಲ್ಟ್‌ ಹಾಕಿಕೊಂಡರೆ ಚೆನ್ನಾಗಿ ಒಪ್ಪುತ್ತದೆ. ಹಿಂದೆಲ್ಲ ಪಾಶ್ಚಾತ್ಯ ದೇಶಗಳಲ್ಲಿ ಚಳಿಗಾಲದ ರಕ್ಷಣೆಗೆ ಈ ರೀತಿಯ ಉಡುಪುಗಳನ್ನು ಹೆಚ್ಚು ಧರಿಸುತ್ತಿದ್ದರು. ಈಗ ಅದು ಭಾರತದಲ್ಲಿಯೂ ಪ್ರಚುರತೆ ಪಡೆದುಕೊಳ್ಳುತ್ತಿದೆ.

ಚುಮುಚುಮು ಚಳಿಯಲ್ಲಿ ಶುದ್ಧ ಹತ್ತಿ, ರೇಷ್ಮೆ, ಉಣ್ಣೆ ಮತ್ತು ಲೆನಿನ್‌ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ. ಹಿಂದೆಲ್ಲ ಸ್ವೆಟರ್‌ನಲ್ಲಿ ಹೆಚ್ಚು ಆಯ್ಕೆಗಳಿರಲಿಲ್ಲ. ಈಗ ಫಿನಿಕ್ಸ್‌ನಷ್ಟು ವೇಗ ಪಡೆದಿರುವ ಫ್ಯಾಷನ್‌ ಕ್ಷೇತ್ರದಲ್ಲಿ ಸ್ವೆಟರ್‌ಗೂ ಆದ್ಯತೆ ಬಂದಿದೆ.

ಈಗಂತೂ ಎಲ್ಲಾ ಬಗೆಯ ಉಡುಪಿನಲ್ಲಿಯೂ ಕೋಲ್ಡ್‌ ಶೋಲ್ಡರ್‌ ಪ್ರಚುರತೆ ಗಳಿಸಿದೆ. ಇದು ಗ್ಲಾಮರ್‌ ನೋಟವನ್ನು ನೀಡುವುದು ಇದಕ್ಕೆ ಕಾರಣ. ಸ್ವೆಟರ್‌ ಉಡುಪಿನಲ್ಲಿಯೂ ಕೋಲ್ಡ್‌ ಶೋಲ್ಡರ್‌ ಆಯ್ಕೆಯಿದೆ. ರಾತ್ರಿ ಪಾರ್ಟಿಗಳಿಗೆ ಇದು ಹೇಳಿಮಾಡಿಸಿದಂತಿರುತ್ತದೆ.

ದೊಡ್ಡವರಿಗಾಗಿಯೇ ಸ್ವೆಟರ್‌ ಚೂಡಿದಾರಗಳಿವೆ. ಇದು ಕೋಟ್‌ ರೀತಿಯಲ್ಲಿರುವುದರಿಂದ ಹೆಚ್ಚು ಚಳಿಯಿದ್ದಾಗ ಚೂಡಿದಾರ, ಕುರ್ತಾದ ಮೇಲೆಯೂ ಇದನ್ನು ಹಾಕಿಕೊಳ್ಳಬಹುದು. ಫಿಟ್‌ ಆಗಿರುವವರು ಬಿಗಿಯಾದ ಸ್ವೆಟರ್‌ ಉಡುಪುಗಳನ್ನು ಅಯ್ಕೆ ಮಾಡಿಕೊಳ್ಳಬಹುದು. ಇದು ದೇಹ ಸಿರಿಗೆ ಇನ್ನಷ್ಟು ಮೆರುಗು ನೀಡುತ್ತದೆ. ಸಪೂರ ಇರುವವರು ದೊಗಲೆ ಉಡುಪು ತೊಟ್ಟಾಗ ಬೆಲ್ಟ್‌ ಹಾಕಿಕೊಂಡರೆ ಚೆಂದ ಕಾಣುತ್ತದೆ.

ಮೊಣಕಾಲಿನವರೆಗೆ ಬರುವ ಉಡುಪಿಗೆ ಸಾಕ್ಸ್‌ ಧರಿಸಿ, ಶೂ ಹಾಕಿಕೊಳ್ಳುವ ಜೊತೆಗೆ ಅದಕ್ಕೊಪ್ಪುವ ಸ್ಕಾರ್ಫ್‌ ಧರಿಸಿದರೆ ಶ್ರೀಮಂತ ನೋಟ ನೀಡುತ್ತದೆ. ಬಾಡಿ ಕಾರ್ನ್‌, ಲ್ಯಾಡರ್‌ ಕಟೌಟ್‌, ಟ್ರಂಪೆಟ್ ಸ್ಲೀವ್ ಬಾಡಿಕಾನ್, ಓವರ್‌ ಸೈಸ್ಡ್‌ ರಿಪ್ಡ್‌ ಕ್ನಿಟ್‌, ಸ್ಕೂಪ್‌ ನೆಕ್‌, ಸ್ಟ್ರೀಪ್ಡ್‌ ಸ್ವೆಟರ್‌ ಹೀಗೆ ಇದರಲ್ಲಿ ಹಲವು ಬಗೆಗಳಿವೆ.

*


ಬೆಂಗಳೂರು ಮಂದಿ ಫ್ಯಾಷನ್‌ ಪ್ರಿಯರು. ಹಾಗಾಗಿ ಸ್ವೆಟರ್‌ ತುಂಬಾ ಟ್ರೆಂಡಿಯಾಗಿದೆ. ಬಾಡಿಕಾರ್ನ್‌ ಉಡುಪಿಗೆ ಹೈಹೀಲ್ಡ್‌ ಧರಿಸಿದರೆ ಬೆಚ್ಚಗಾಗುವ ಜೊತೆಗೆ ಸ್ಟೈಲಿಷ್‌ ನೋಟ ನೀಡುತ್ತದೆ. ದಪ್ಪ ಇರುವವರು ತೆಳುವಾಗಿರುವ ಸ್ವೆಟರ್‌ ಉಡುಪನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರ ಮೇಲೆ ಓವರ್‌ ಕೋಟ್‌ ಹಾಕಿಕೊಳ್ಳುವುದರಿಂದ ಆರಾಮದಾಯಕ ಎನಿಸುತ್ತದೆ. ಹಾಗೆಯೇ ಉದ್ದಗೆರೆ ಇರುವ ಉಡುಪನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಅಡ್ಡಡ್ಡ ಗೆರೆ ಇರುವ ಉಡುಪು ಧರಿಸುವುದರಿಂದ ಇನ್ನಷ್ಟು ದಪ್ಪ ಕಾಣುತ್ತಾರೆ.
–ಇಂಚರಾ, ವಸ್ತ್ರವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT