ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ 18–11–1967

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಡಿ. 18ಕ್ಕೇ ಬಂಗಾಳ ವಿಧಾನಸಭೆ ಅಧಿವೇಶನ

ಕಲ್ಕತ್ತ, ನ. 17– ಪಶ್ಚಿಮ ಬಂಗಾಳ ಸಚಿವ ಮಂಡಲಿಯು ಇಂದು ಎರಡೂವರೆ ಗಂಟೆ ಕಾಲ ಸಮಾವೇಶ ನಡೆಸಿದ ಬಳಿಕ ರಾಜ್ಯ ವಿಧಾನ ಸಭೆಯನ್ನು, ತನ್ನ ಮುಂಚಿನ ನಿರ್ಧಾರದಂತೆ ಡಿಸೆಂಬರ್ 18 ರಂದೇ ಕರೆಯಬೇಕೆಂದು ಪುನಃ ನಿರ್ಧರಿಸಿತು.

ಇಂದು ರಾತ್ರಿ ಇಲ್ಲಿಗೆ ಆಗಮಿಸಲಿರುವ ಬಂಗಾಳ ರಾಜ್ಯಪಾಲ ಶ್ರೀ ಧರ್ಮವೀರ ಅವರಿಗೆ ರಾಜ್ಯ ಸಚಿವ ಮಂಡಲ ತನ್ನ ನಿರ್ಧಾರವನ್ನು ಔಪಚಾರಿಕವಾಗಿ ತಿಳಿಸಲಿದೆ.

ರಾಜ್ಯಪಾಲರ ಕ್ರಮಕ್ಕೆ ಸಕಾಲ ಎಂದು ಸೆನ್

ಕಲ್ಕತ್ತ, ನ. 17– ರಾಜ್ಯಪಾಲರು ಈಗ ತಮ್ಮ ವಿವೇಚನೆಗೆ ಬಿಡಲಾದ ಅಧಿಕಾರವನ್ನು ಚಲಾಯಿಸಿ ಕ್ರಮ ಕೈಗೊಳ್ಳುವರೆಂಬ ನಂಬಿಕೆಯನ್ನು ಮಾಜಿ ಮುಖ್ಯಮಂತ್ರಿ ಶ್ರೀ ಪಿ.ಸಿ. ಸೆನ್ ಅವರು ವ್ಯಕ್ತಪಡಿಸಿದ್ದಾರೆ.

ಬಂಗಾಳ ಸಂಪುಟದ ನಿರ್ಧಾರವನ್ನು ‘ದುರದೃಷ್ಟಕರ’ ಎಂದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಕೆ.ಎನ್. ದಾಸಗುಪ್ತ
ರವರು ದುಃಖಿಸಿದ್ದಾರೆ.

ಪತ್ರವನ್ನು ನೇರವಾಗಿ ರಾಷ್ಟ್ರಪತಿಗೆ ಕಳುಹಿಸಿ ಸಂಯುಕ್ತ ರಂಗ ಸರ್ಕಾರವು ‘ಅಗೌರವ’ ತೋರಿದೆ ಎಂದು ಬಂಗಾಳ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ. ಪ್ರತಾಪ್ ಚಂದ್ರ ಅವರು ಟೀಕಿಸಿದ್ದಾರೆ.

ಸಂವಿಧಾನ ಸಂಬಂಧ ವಿವಾದ ಸುಪ್ರೀಂ ಕೋರ್ಟ್ ಪರಿಶೀಲನೆಗೆ

ಕಲ್ಕತ್ತ, ನ. 17– ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿಯಿಂದ ತಲೆದೋರಿರುವ ಸಂವಿಧಾನಕ್ಕೆ ಸಂಬಂಧಿಸಿದ ವಿವಾದವನ್ನು ಸುಪ್ರೀಂ ಕೋರ್ಟಿಗೆ ಒಪ್ಪಿಸಿ, ಅದರ ಅಭಿಪ್ರಾಯವನ್ನು ಪಡೆಯಬೇಕೆಂದು ರಾಷ್ಟ್ರಪತಿಗೆ ತುರ್ತು ಪತ್ರ ಬರೆದು ಮನವಿ ಮಾಡಿಕೊಳ್ಳಬೇಕೆಂದು ಪಶ್ಚಿಮ ಬಂಗಾಳ ಸರ್ಕಾರವು ನಿರ್ಧರಿಸಿದೆ.

ಇಂದು ರಾತ್ರಿ ಮೂರು ಗಂಟೆ ಕಾಲ ನಡೆದ ಸಂಪುಟದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ ದೂತನೊಬ್ಬನು ರಾಷ್ಟ್ರಪತಿ ಡಾ. ಜಾಕಿರ್ ಹುಸೇನರಿಗೆ ಅಜಯ್ ಮುಖರ್ಜಿ ಅವರು ಬರೆದ ಪತ್ರವನ್ನು ನಾಳೆ ಬೆಳಿಗ್ಗೆ ದೆಹಲಿಗೆ ಕೊಂಡೊಯ್ಯುವನು.

ಪಶ್ಚಿಮ ಬಂಗಾಳ ಸರ್ಕಾರ ವಜಾ ಆದರೆ ಪೂರ್ಣ ಮುಷ್ಕರ: ಸಚಿವರ ಕರೆ

ಬರ್ದ್ವಾನ್, ನ. 17– ಪಶ್ಚಿಮ ಬಂಗಾಳದ ಸಂಯುಕ್ತ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿದರೆ, ರಾಜ್ಯದ ಜನರು ಒಗ್ಗಟ್ಟಾಗಿ ರೈಲ್ವೆಗಳು ಮತ್ತಿತರ ವಾಹನ ಸಂಚಾರಗಳ ಚಟುವಟಿಕೆ ಸ್ತಬ್ಧಗೊಳ್ಳುವಂತೆ ಮಾಡಬೇಕೆಂದು ರಾಜ್ಯದ ಕಂದಾಯ ಸಚಿವ ಶ್ರೀ ಹರೇ ಕೃಷ್ಣ ಕೊನಾಠ್ (ಎಡ ಕಮ್ಯುನಿಸ್ಟ್) ಕರೆಯಿತ್ತರು.

ಭಾಷಾ ಮಸೂದೆ ವಿರೋಧಿಸಲು ಕರೆ

ಪಟ್ಣ, ನ. 17– ಪ್ರಸ್ತುತ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಭಾಷಾ ತಿದ್ದುಪಡಿ ಮಸೂದೆ (1967) ಮಂಡಿಸುವುದನ್ನು ಪ್ರತಿಭಟಿಸಲು ಜನರು ದೆಹಲಿಗೆ ಜಾಥಾ ಹೋಗಬೇಕೆಂದು ಸಂಸತ್ ಸದಸ್ಯ ಶ್ರೀ ರಾಜ್‌ನಾರಾಯಣ್ (ಎಸ್.ಎಸ್.ಪಿ.) ಅವರು ನಿನ್ನೆ ಇಲ್ಲಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT