ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಗೆ ಕಾಂಗ್ರೆಸ್ ಮಾಡುತ್ತಿರುವ ಅಪಮಾನ

36 ರಫೇಲ್ ಒಪ್ಪಂದದ ಬಗ್ಗೆ ತಕರಾರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆಕ್ರೋಶ
Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಒಂದು ಬೃಹತ್ ಹಗರಣ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಮತ್ತು ಇದು ಭಾರತೀಯ ವಾಯು ಪಡೆ ಮತ್ತು ಸೇನೆಗೆ ಕಾಂಗ್ರೆಸ್ ಮಾಡುತ್ತಿರುವ ಅಪಮಾನ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾಯುಪಡೆಯಲ್ಲಿ ಯುದ್ಧವಿಮಾನಗಳ ಸ್ಕ್ವಾಡ್ರನ್‌ಗಳ ಕೊರತೆ ಇರುವುದು ಗೊತ್ತಿದ್ದರೂ ಒಪ್ಪಂದವನ್ನು ಅಂತಿಮಗೊಳಿಸಲು 10 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿತ್ತು. ವಾಯುಪಡೆಯನ್ನು ಯುದ್ಧ ಸನ್ನದ್ಧವಾಗಿರಿಸಲು ಅಗತ್ಯವಿದ್ದ ಯಾವುದೇ ಕ್ರಮಗಳನ್ನು ಬಹಳ ಕಾಲದಿಂದ ತೆಗೆದುಕೊಂಡಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಶೋಚನೀಯವಾಗಿತ್ತು. ಹೀಗಾಗಿ ನಾವು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಾಯಿತು. ಇದು ತುರ್ತು ಖರೀದಿ ಒಪ್ಪಂದ. ಹೀಗಾಗಿ ಈ ಒಪ್ಪಂದದಲ್ಲಿ ತಂತ್ರಜ್ಞಾನ ಎರವಲಿನ ಪ್ರಶ್ನೆ ಅಸಮಂಜಸ. ಜತೆಗೆ ವಿಮಾನಕ್ಕೆ ನೀಡುತ್ತಿರುವ ಹಣದ ಬಗ್ಗೆ ತಕರಾರು ಮಾಡುವುದು ನಾಚಿಕೆಗೇಡು’ ಎಂದು ಸರ್ಕಾರದ ನಿರ್ಧಾರವನ್ನು ಸಚಿವೆ ಸಮರ್ಥಿಸಿಕೊಂಡಿದ್ದಾರೆ.

‘ಸಂಪೂರ್ಣ ಶಸ್ತ್ರಸಜ್ಜಿತ ವಿಮಾನವೊಂದಕ್ಕೆ ನಾವು ನೀಡುತ್ತಿರುವ ಬೆಲೆ, ಯುಪಿಎ ಸರ್ಕಾರ ಅಂತಿಮಗೊಳಿಸಿದ್ದ ದರಕ್ಕಿಂತ ಹೆಚ್ಚು ಲಾಭದಾಯಕ’ ಎಂದು ಅವರು ಸಮರ್ಥನೆ ನೀಡಿದ್ದಾರೆ. ಆದರೆ ಯುಪಿಎ ಸರ್ಕಾರದ ಒಪ್ಪಂದದ  ತಾಂತ್ರಿಕ ಮತ್ತು ಆರ್ಥಿಕ ವಿವರಗಳ ಮಾಹಿತಿ ಹಾಗೂ ಎನ್‌ಡಿಎ ಸರ್ಕಾರ ಮಾಡಿಕೊಂಡ ಒಪ್ಪಂದದ ಮಾಹಿತಿಗಳನ್ನು ನಿರ್ಮಲಾ ಬಹಿರಂಗಪಡಿಸಿಲ್ಲ.

ಈ ಒಪ್ಪಂದದಿಂದ ರಿಲಯನ್ಸ್ ಸಂಸ್ಥೆಗೆ ಯಾವುದೇ ಲಾಭ ಇಲ್ಲ. ನಮ್ಮ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸದೆ ನಾನೆಲ್ಲೂ ಓಡಿ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯಿಂದ 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬಗ್ಗೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2012ರಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಭಾರತ ಮತ್ತು ಫ್ರಾನ್ಸ್ ಹಲವು ವಿಷಯಗಳಲ್ಲಿ ಒಮ್ಮತಕ್ಕೆ ಬಾರದ ಕಾರಣ ಒಪ್ಪಂದ ಅಂತಿಮವಾಗಿರಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಹಳೆಯ ಒಪ್ಪಂದವನ್ನು ರದ್ದು ಮಾಡಲಾಗಿತ್ತು. 2015ರ ಏಪ್ರಿಲ್‌ನಲ್ಲಿ ಫ್ರಾನ್ಸ್‌ ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ‘36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುತ್ತೇವೆ’ ಎಂದು ಘೋಷಿಸಿದ್ದರು. 2016ರ ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು.

**

ಹಗರಣ ಮುಚ್ಚಿ ಹಾಕಲು ಬಿಜೆಪಿ ಶತಪ್ರಯತ್ನ: ಕಾಂಗ್ರೆಸ್‌ ತಿರುಗೇಟು

ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿ ಕಡೆಗಣಿಸಿ, ರಫೇಲ್‌ ಯುದ್ಧ ವಿಮಾನ ಖರೀದಿ ಯೋಜನೆಯಲ್ಲಿ ನಡೆದಿರುವ ಭಾರಿ ಅಕ್ರಮ ಮುಚ್ಚಿ ಹಾಕಲು ಬಿಜೆಪಿ ಶಕ್ತಿಮೀರಿ ಯತ್ನಿಸುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಶುಕ್ರವಾರ ತಿರುಗೇಟು ನೀಡಿದೆ.

ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಇದರಲ್ಲಿ ರಾಜಕೀಯ ಮಾಡಲಾಗದು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ಪ್ರತಿಕ್ರಿಯಿಸಿದ್ದಾರೆ.

ದುರದೃಷ್ಟವಶಾತ್‌ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೇನೆಗೆ ಸಂಬಂಧಿಸಿದ ವಿಷಯವನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘ಭಾರತೀಯ ವಾಯುಪಡೆಗೆ 36 ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರ ಪಾರದರ್ಶಕವಾಗಿಲ್ಲ. ನಿರ್ಮಲಾ ಸೀತಾರಾಮನ್‌ ಅವರು ವಿಮಾನ ಖರೀದಿಗೆ ತುರ್ತು ಅಗತ್ಯದ ಕಾರಣ ನೀಡಿದ್ದಾರೆ. ಮೊದಲೇ ವಿಮಾನ ಖರೀದಿ ಒಪ್ಪಂದ ಆಗಿತ್ತು. ಹಾಗಿರುವಾಗ,  ತುರ್ತಾಗಿ ವಿಮಾನ ಖರೀದಿ ಒಪ್ಪಂದದ ಅಗತ್ಯ ಏನು? ಅಷ್ಟೇ, ತುರ್ತು ಖರೀದಿ ಒಪ್ಪಂದ ಆಗಿ 34 ತಿಂಗಳಾದರೂ ಒಂದೇ ಒಂದು ವಿಮಾನ ಯಾಕೆ ಇಲ್ಲಿಗೆ ತಲುಪಿಲ್ಲ ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT