ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಲ್ ಮಿಂಚು: ಕರ್ನಾಟಕ ಉತ್ತಮ ಮೊತ್ತ

ಶತಕದಂಚಿನಲ್ಲಿ ಎಡವಿದ ಮಯಂಕ್; ಕರುಣ್, ಮನೀಷ್ ಅರ್ಧಶತಕ
Last Updated 17 ನವೆಂಬರ್ 2017, 20:09 IST
ಅಕ್ಷರ ಗಾತ್ರ

ಕಾನ್ಪುರ: ಹಸಿರು ಗರಿಕೆಗಳು ನಳ ನಳಿಸುವ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದ ಪಿಚ್‌ನಲ್ಲಿ ಶುಕ್ರವಾರ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಪಾರಮ್ಯ ಮೆರೆದರು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಪೇರಿಸಲು ಬುನಾದಿ ಹಾಕಿದರು. ‌

ನವಪ್ರತಿಭೆ ಡಿ. ನಿಶ್ಚಲ್ (ಬ್ಯಾಟಿಂಗ್ 90; 221ಎಸೆತ, 13ಬೌಂಡರಿ) ಮತ್ತು ಮಯಂಕ್ ಅಗರವಾಲ್ (90; 73ಎ, 16ಬೌಂ) ಅವರ ಬ್ಯಾಟಿಂಗ್‌ನಿಂದ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 327 ರನ್‌ಗಳನ್ನು ಗಳಿಸಿದೆ. ಮನೀಷ್ ಪಾಂಡೆ (ಬ್ಯಾಟಿಂಗ್ 63; 79ಎ, 9ಬೌಂ, 1ಸಿ) ಕ್ರೀಸ್‌ನಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡಕ್ಕೆ ಉತ್ತಮ ಆರಂಭವೂ ಲಭಿಸಿತು. ಸಮರ್ಥ್ (16 ರನ್) ಅವರನ್ನು ಬಿಟ್ಟರೆ ಕ್ರೀಸ್‌ಗೆ ಬಂದ ಬ್ಯಾಟ್ಸ್‌ಮನ್‌ಗಳೆಲ್ಲರೂ ಅರ್ಧಶತಕ ಗಳಿಸಿದ್ದು ವಿಶೇಷ. ಆತಿಥೇಯ ತಂಡದ ಮಧ್ಯಮ ವೇಗಿಗಳು ಯಾರ್ಕರ್‌, ಬೌನ್ಸರ್‌ ಮತ್ತು ಸ್ವಿಂಗ್‌ಗಳನ್ನು ಹೆಚ್ಚಾಗಿ ಪ್ರಯೋಗಿಸಲಿಲ್ಲ. ಯಾವುದೇ ಹಂತದಲ್ಲಿಯೂ ಉತ್ತಮ ಬ್ಯಾಟ್ಸ್‌ಮನ್‌ಗಳಿಗೆ ಕಠಿಣವೆನಿಸುವ ಎಸೆತಗಳನ್ನು ಹಾಕಲಿಲ್ಲ. ಸುರೇಶ್ ರೈನಾ ಬಳಗದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು.

115 ರನ್‌ಗಳ ಜೊತೆಯಾಟ: ಎರಡನೇ ರಣಜಿ ಪಂದ್ಯ ಆಡುತ್ತಿರುವ ಡೆಗಾ ನಿಶ್ಚಲ್ ಮತ್ತು ಕರುಣ್ ನಾಯರ್ (62; 123ಎ, 8ಬೌಂ) ಮೂರನೇ ವಿಕೆಟ್ ಜೊತೆಯಾಟದಲ್ಲಿ 115 ರನ್ ಪೇರಿಸಿದರು. ಊಟದ ಮುನ್ನ ಸಮರ್ಥ್ ಮತ್ತು ಮಯಂಕ್ ಪೆವಿಲಿಯನ್ ಸೇರಿದ್ದರು. ಆಗ ಜೊತೆಗೂಡಿದ ನಿಶ್ಚಲ್ ಮತ್ತು ಕರುಣ್ 158 ನಿಮಿಷಗಳವರೆಗೆ ಕ್ರೀಸ್‌ನಲ್ಲಿದ್ದರು.

ಈಚೆಗೆ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ದ ನಿಶ್ಚಲ್ ಸೊಗಸಾದ ಹೊಡೆತಗಳನ್ನು ಪ್ರಯೋಗಿಸಿದರು. ತಾಳ್ಮೆಯಿಂದ ಆಡಿದ ಅವರು 102 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ರಣಜಿ ಕ್ರಿಕೆಟ್‌ನಲ್ಲಿ ಇದು ಅವರ ಚೊಚ್ಚಲ ಅರ್ಧಶತಕ. ಪುಣೆಯಲ್ಲಿ ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಅವರು 16 ರನ್ ಗಳಿಸಿದ್ದರು. ಸ್ವಲ್ಪ ಹೊತ್ತಿನ ನಂತರ ಕರುಣ್ ನಾಯರ್ ತಮ್ಮ ವೃತ್ತಿಜೀವನದ 15ನೇ ಅರ್ಧಶತಕವನ್ನು ದಾಖಲಿಸಿದರು. ಚಹಾ ವಿರಾಮದ ನಂತರ ಧ್ರುವಪ್ರತಾಪ್ ಸಿಂಗ್ ಓವರ್‌ನಲ್ಲಿ ಆಫ್‌ಸ್ಟಂಪ್‌ನಿಂದ ಹೊರ ಹೋಗುತ್ತಿದ್ದ ಎಸೆತವನ್ನು ಹೊಡೆಯಲು ಯತ್ನಿಸಿದ ಕರುಣ್ ದಂಡ ತೆತ್ತರು. ಬ್ಯಾಟ್ ಒಳ ಅಂಚು ಸವರಿದ ಚೆಂಡು ಸ್ಟಂಪ್ ಎಗರಿಸಿತು.

ಮನೀಷ್ ಮಿಂಚು: ಅಬ್ಬರದ ಆಟಕ್ಕೆ ಹೆಸರಾದ ಮನೀಷ್ ಪಾಂಡೆ ಸಂಜೆಯ ಮಂದಬೆಳಕಿನಲ್ಲಿ ಮಿಂಚಿದರು. ಕರುಣ್ ನಂತರ ಕ್ರೀಸ್‌ಗೆ ಬಂದ ಅವರು ಬಿರುಸಿನ ಬ್ಯಾಟಿಂಗ್ ಮಾಡಿದರು. 84ನೇ ಓವರ್‌ನಲ್ಲಿ ಇಮ್ತಿಯಾಜ್ ಎಸೆತವನ್ನು ಲಾಂಗ್‌ ಆನ್‌ಗೆ ಸಿಕ್ಸರ್ ಎತ್ತಿದರು. ಅವರ ಬೀಸಾಟದಿಂದಾಗಿ ತಂಡದ ಮೊತ್ತವು ಬೇಗನೆ 300ರ ಗಡಿ ದಾಟಿತು. ಇನ್ನೊಂದೆಡೆ ನಿಶ್ಚಲ್‌ ತಾಳ್ಮೆಯಿಂದ ಆಡಿದರು. ಇಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 101 ಗಳಿಸಿದರು. 80ನೇ ಓವರ್‌ನಲ್ಲಿ ಹೊಸಚೆಂಡು ಪಡೆದ ರೈನಾ ಬಳಗದ ವಿಕೆಟ್ ಪಡೆಯುವ ಪ್ರಯತ್ನ ಯಶಸ್ವಿಯಾಗಲಿಲ್ಲ.

**

ಶತಕ ತಪ್ಪಿಸಿಕೊಂಡ ಮಯಂಕ್

ಮಯಂಕ್ ಅಗರವಾಲ್ ಕೇವಲ ಹತ್ತು ರನ್‌ಗಳಿಂದ  ಶತಕ ತಪ್ಪಿಸಿಕೊಂಡರು. ಪುಣೆಯಲ್ಲಿ ತ್ರಿಶತಕ ಮತ್ತು ದೆಹಲಿ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದ ಅವರಿಗೆ ಇಲ್ಲಿಯೂ ನೂರರ ಗಡಿ ದಾಟುವ ಅವಕಾಶ ಇತ್ತು. ಆದರೆ 90 ರನ್ ಗಳಿಸಿದ್ದ ಅವರು ಸ್ಪಿನ್ನರ್ ಆಕಾಶದೀಪ್ ನಾಥ್ ಅವರ ಎಸೆತವನ್ನು ಕಟ್ ಮಾಡಲು ಯತ್ನಿಸಿದರು.  ಚೆಂಡು ಬ್ಯಾಟ್‌ ಅಂಚು ಸವರಿ ಮೊದಲ ಸ್ಲಿಪ್‌ನಲ್ಲಿದ್ದ ಉಮಂಗ್ ಶರ್ಮಾ ಕೈಸೇರಿತು.

ಕೆ. ಎಲ್. ರಾಹುಲ್ ಇಲ್ಲದ ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಂದ ಮಯಂಕ್ ವೇಗವಾಗಿ ಆಡಿದರು. 123.29ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. 42 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ದರು.  ಆಕರ್ಷಕ ಕವರ್ ಡ್ರೈವ್‌ಗಳಿಗೆ ಬೌಂಡರಿಗಳು ಒಲಿದವು. ಈ ಋತುವಿನಲ್ಲಿ ಮಯಂಕ್ ಒಟ್ಟು ಐದು ಪಂದ್ಯಗಳ ಒಂಬತ್ತು ಇನಿಂಗ್ಸ್‌ಗಳಲ್ಲಿ 624 ರನ್‌ಗಳನ್ನು ಗಳಿಸಿದ್ದಾರೆ.

**

ದಿನದಾಟದ ಕೊನೆಯ ಆರು ಓವರ್‌ಗಳಲ್ಲಿ ಆಡುವುದು ಸ್ವಲ್ಪ ಕಷ್ಟಕರವಾಗಿತ್ತು. ಬೆಳಕು ಕಡಿಮೆ ಇತ್ತು ಮತ್ತು ಹೊಸ ಚೆಂಡಿನಲ್ಲಿ ಬೌಲಿಂಗ್ ನಡೆಯುತ್ತಿತ್ತು. ಆದ್ದರಿಂದ ನಿಧಾನವಾಗಿ ಆಡಿದೆ.

–ಡಿ. ನಿಶ್ಚಲ್, ಕರ್ನಾಟಕದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT