ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಸಂಪು ಸಮಾಪ್ತಿ, ಸೇವೆ ಶುರು

Last Updated 17 ನವೆಂಬರ್ 2017, 20:17 IST
ಅಕ್ಷರ ಗಾತ್ರ

ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆಗೆ ಪ್ರಮುಖ ತಿದ್ದುಪಡಿಗಳನ್ನು ತರಲು ಒಪ್ಪಿಕೊಂಡ ಬೆನ್ನಲ್ಲೇ ವೈದ್ಯರು ಮುಷ್ಕರ ಕೈಬಿಟ್ಟಿದ್ದಾರೆ.

ಮುಷ್ಕರ ನಿರತ ವೈದ್ಯರ ಸಂಘಟನೆಗಳ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮೂರುಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಎಚ್‌.ಎನ್. ರವೀಂದ್ರ, ‘ನಾವು ಅಂದುಕೊಂಡಂತೆ ನಮಗೆ ಯಶಸ್ಸು ಸಿಕ್ಕಿದೆ. ಕುಂದು ಕೊರತೆ ಪರಿಹಾರ ಸಮಿತಿಯಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಮುಷ್ಕರ ಕೈಬಿಡುತ್ತಿದ್ದೇವೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ವೈದ್ಯರಿಗೂ ಸಮಾಧಾನ ತರುವ ಹಾಗೂ ಶ್ರೀಸಾಮಾನ್ಯನ ಹಿತ ಬಲಿ ಕೊಡದ ರೀತಿಯಲ್ಲಿ ಮಸೂದೆಗೆ ಕೆಲವು ತಿದ್ದುಪಡಿ ತರಲಾಗುವುದು. ಸೋಮವಾರ (ನ.20) ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲೂ ಮಂಡಿಸಲಾಗುವುದು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಈಗ ಇರುವ ವಿವಿಧ ಹೆಸರಿನ ಆರೋಗ್ಯ ಯೋಜನೆಗಳನ್ನು ಒಂದೇ ಯೋಜನೆಯಡಿ ತಂದು, ಸಾರ್ವತ್ರಿಕ ಆರೋಗ್ಯ ಕಾರ್ಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲ ಸಮುದಾಯ, ವರ್ಗದವರೂ ಈ ಯೋಜನೆಯಡಿ ಬರಲಿದ್ದು ಇಂಥದೊಂದು ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಜಾರಿಗೊಳಿಸುತ್ತಿದೆ’ ಎಂದು ಪ್ರತಿಪಾದಿಸಿದರು.

ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಸಾರ್ವತ್ರಿಕ ಆರೋಗ್ಯ ಕಾರ್ಡ್ ಯೋಜನೆ ಜಾರಿಗೊಂಡರೆ ಈಗಿರುವ ದರ ಪಟ್ಟಿಯ ಪ್ರಕಾರ ಸರ್ಕಾರಕ್ಕೆ ದೊಡ್ಡ ಹೊರೆಯಾಗಲಿದೆ. ಈಗಿರುವ ಒಡಂಬಡಿಕೆ ಇಟ್ಟುಕೊಂಡು ಅದನ್ನು ಅನುಷ್ಠಾನ ಮಾಡುವುದು ಕಷ್ಟ. ಈಗ ನೀಡುತ್ತಿರುವ ಮೊತ್ತದಲ್ಲೇ, ಎಲ್ಲರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು, ಬಡವರಿಗೆ ನೆರವಾಗಲು ಮಸೂದೆ ಅವಕಾಶ ಕಲ್ಪಿಸಲಿದೆ. ವೈದ್ಯರ ತಪ್ಪುಗ್ರಹಿಕೆಯ ಕಾರಣಕ್ಕೆ ಆತಂಕ ಸೃಷ್ಟಿಯಾಗಿತ್ತು. ಈಗ ಎಲ್ಲವೂ ಬಗೆಹರಿದಿದೆ ಎಂದು ಹೇಳಿದರು.

ಪ್ರಮುಖ ಬದಲಾವಣೆ:

*ಜಿಲ್ಲಾಧಿಕಾರಿ ನೇತೃತ್ವದಲ್ಲಿ ವೈದ್ಯ ವೃತ್ತಿ ಪರಿಣತರು, ತಾಂತ್ರಿಕ ತಜ್ಞರು, ಸಾಮಾಜಿಕ ಕಾರ್ಯಕರ್ತರು ಇರುವ ಕುಂದು ಕೊರತೆ ಪರಿಹಾರ ಸಮಿತಿ ರಚಿಸಲು ಮೂಲ ಮಸೂದೆ ಪ್ರಸ್ತಾವಿಸಿತ್ತು. ಅದರ ಬದಲು ಈಗ ಇರುವ ಸಮಿತಿಯನ್ನೇ ಮತ್ತಷ್ಟು ಬಲಿಷ್ಠಗೊಳಿಸುವ ತಿದ್ದುಪಡಿ ತರಲು ಸಭೆ ನಿರ್ಧರಿಸಿದೆ.

*ಚಿಕಿತ್ಸಾ ವೈಫಲ್ಯದಿಂದ ರೋಗಿಯ ಸಾವು, ವೈದ್ಯರ ನಿರ್ಲಕ್ಷ್ಯದ ಪ್ರಕರಣಗಳ ಬಗ್ಗೆ ಕುಂದುಕೊರತೆ ಸಮಿತಿಗೆ ದೂರು ಸಲ್ಲಿಸಬಹುದಿತ್ತು. ಚಿಕಿತ್ಸಾ ವೈಫಲ್ಯ, ತಾಂತ್ರಿಕ ತೊಂದರೆಯಂತಹ ಕ್ಲಿನಿಕಲ್‌ ದೂರುಗಳನ್ನು ಸಲ್ಲಿಸಲು ಇದ್ದ ಅವಕಾಶವನ್ನು ಕೈಬಿಡಲಾಗಿದೆ. ಅಂತಹ ದೂರುಗಳನ್ನು ಭಾರತೀಯ ವೈದ್ಯಕೀಯ ಪರಿಷತ್ತಿಗೆ ಸಲ್ಲಿಸಲು ಮಸೂದೆಯಲ್ಲಿ ಅವಕಾಶ ಇರಲಿದೆ.

*ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಪದೇ ಪದೇ ದೂರು ಸಲ್ಲಿಸುವ ವ್ಯಕ್ತಿಗಳ ಬಗ್ಗೆ ಪ್ರತಿದೂರು ಸಲ್ಲಿಸುವ ಅವಕಾಶ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಗೆ ಇರುವಂತೆ ತಿದ್ದುಪಡಿ ತರಲು ಒಪ್ಪಿಕೊಳ್ಳಲಾಗಿದೆ.

*ಚಿಕಿತ್ಸೆ ಅಥವಾ ಸೇವೆಗೆ ದುಬಾರಿ ದರ ವಸೂಲಿ ಮಾಡಿದ ಬಗ್ಗೆ ಸೂಕ್ತ ದಾಖಲಾತಿಗಳು ಇದ್ದರೆ, ಈ ಸಂಬಂಧ ಕುಂದುಕೊರತೆ ಸಮಿತಿಗೆ ದೂರು ಸಲ್ಲಿಸಬಹುದು. ದೂರು ಇತ್ಯರ್ಥವಾದ ಮೇಲೆ ವೈದ್ಯರು ಅಥವಾ ಆಸ್ಪತ್ರೆ ಇದನ್ನು ಹಣ ವಾಪಸ್‌ ಕೊಡಲು ಮಸೂದೆ ಅವಕಾಶ ಕಲ್ಪಿಸಲಿದೆ.

*ಖಾಸಗಿ ಆಸ್ಪತ್ರೆಗಳಲ್ಲಿನ ಎಲ್ಲ ಸೇವೆಗಳಿಗೆ ದರ ನಿಗದಿ ಹಾಗೂ ಎಲ್ಲ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯವಾಗಿತ್ತು. ಅದನ್ನೀಗ ಕೈಬಿಡಲಾಗಿದೆ.

*ಸಾರ್ವತ್ರಿಕ ಆರೋಗ್ಯ ಕಾರ್ಡ್ ಅಥವಾ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ ನೀಡುವ ಸೇವೆಗೆ ಮಾತ್ರ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇರಲಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ (ಬಿಪಿಎಲ್‌)  ಸೇವೆ ಸಿಗಲಿದೆ.

*ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಎಲ್ಲರಿಗೂ ದರ ನಿಗದಿ ಪಟ್ಟಿ ಅನ್ವಯವಾಗುವುದಿಲ್ಲ. ಬಡತನ ರೇಖೆಗಿಂತ ಮೇಲಿನ ಕುಟುಂಬದವರು (ಎಪಿಎಲ್) ಪಡೆಯುವ ಚಿಕಿತ್ಸಾವೆಚ್ಚದಲ್ಲಿ ಶೇ 30ರಷ್ಟನ್ನು ಸರ್ಕಾರ ಭರಿಸಲಿದೆ. ಉಳಿದ ಮೊತ್ತ  ನಿಗದಿ ಮಾಡುವುದನ್ನು ಖಾಸಗಿ ಆಸ್ಪತ್ರೆ, ವೈದ್ಯರ ವಿವೇಚನೆಗೆ ಬಿಡಲಾಗುತ್ತದೆ.

*ರೋಗಿ ಅಥವಾ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮೊದಲೇ ಮುಂಗಡ ಹಣ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ. ರೋಗಿ ಚೇತರಿಸಿಕೊಂಡ ಬಳಿಕವಷ್ಟೇ ಮುಂಗಡ ಹಣ ಪಾವತಿಸಲು ಅವಕಾಶ ಇರಲಿದೆ.

*ಚಿಕಿತ್ಸೆ ಫಲಿಸದೇ ರೋಗಿ ಮೃತಪಟ್ಟರೆ, ಬಾಕಿ ಬಿಲ್ಲು ಪಾವತಿಸುವವರೆಗೂ ಹೆಣ ನೀಡುವುದಿಲ್ಲ ಎಂದು ಷರತ್ತು ಹಾಕುವಂತಿಲ್ಲ. ಮೊದಲು ಹೆಣ ನೀಡಬೇಕು. ರೋಗಿಯ ಸಂಬಂಧಿಕರಿಗೆ ಶಕ್ತಿ ಇಲ್ಲದಿದ್ದರೆ ಅದನ್ನು ಭರಿಸಲು ಸರ್ಕಾರ ಬದ್ಧವಾಗಿರುತ್ತದೆ ಎಂಬುದು ಮಸೂದೆಯ ಭಾಗವಾಗಿರುತ್ತದೆ.

ವೈದ್ಯರಿಗೆ ಹೈಕೋರ್ಟ್‌ ಚುಚ್ಚುಮದ್ದು...!

ಬೆಂಗಳೂರು: ‘ಖಾಸಗಿ ವೈದ್ಯರು ಎಂದರೆ ಸಮಾಜದ ಕೆನೆಪದರಕ್ಕೆ ಸೇರಿದ ವರ್ಗದವರು. ಅವರೇನೂ ಕಾರ್ಮಿಕರಲ್ಲ. ವಿದ್ಯಾವಂತರು, ಸುಶಿಕ್ಷಿತರು. ಉದ್ದೇಶಿತ ಮಸೂದೆಯಿಂದ ತೊಂದರೆ ಆಗುತ್ತದೆ ಎಂಬ ಬೇಗುದಿ ಇದ್ದರೆ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಯಬಹುದು. ಅವರೇಕೆ ಈ ರೀತಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆಯೊ ನಮಗೆ ಅರ್ಥವಾಗುತ್ತಿಲ್ಲ’ ಎಂದು ಹೈಕೋರ್ಟ್‌ ಖಾಸಗಿ ವೈದ್ಯ ಸಂಘಗಳ ವರ್ತನೆಗೆ ತೀವ್ರ ಆತಂಕ ವ್ಯಕ್ತಪಡಿಸಿತು.

ವೈದ್ಯರ ಪ್ರತಿಭಟನೆ ಪ್ರಶ್ನಿಸಿ ನೆಲಮಂಗಲದ ಡಿ.ವಿ.ಆದಿನಾರಾಯಣ ಶೆಟ್ಟಿ, ವಕೀಲ ಎನ್‌.ಪಿ.ಅಮೃತೇಶ್ ಹಾಗೂ ನಗರದ ಸರಸ್ವತಿಪುರಂ ನಿವಾಸಿ ಮಾಯಿಗೆ ಗೌಡ ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಖಾಸಗಿ ವೈದ್ಯ ಸಂಘಗಳನ್ನು ಒಂದೇ ಸಮನೆ ತರಾಟೆಗೆ ತೆಗೆದುಕೊಂಡ ರಮೇಶ್‌, ‘ಬಹುಶಃ ಈ ವೈದ್ಯರಿಗೆ ಯಾರೂ ಸರಿಯಾದ ಕಾನೂನು ಸಲಹೆ ಕೊಟ್ಟಿಲ್ಲ ಎಂದು ಕಾಣಿಸುತ್ತದೆ. ಮಸೂದೆಯಲ್ಲಿ ಒಪ್ಪಲಾರದ ಅಂಶಗಳಿವೆ ಎಂದಾದರೆ ಅದನ್ನು ಪ್ರಶ್ನಿಸಲು ಸೂಕ್ತ ಮಾರ್ಗಗಳಿವೆ. ಮಸೂದೆ ಕುರಿತಂತೆ ನಿಮಗೆ ಏನೇ ಸಂಕಟ ಇದ್ದರೆ ಕೋರ್ಟ್‌ಗೆ ಬನ್ನಿ. ನಾವು ಆಲಿಸುತ್ತೇವೆ’ ಎಂದರು.

‘ಮುಗ್ಧ ಜನರ ಜೀವ ಪಣಕ್ಕಿಟ್ಟು ಪ್ರತಿಭಟನೆ ನಡೆಸುವುದು ಸುಶಿಕ್ಷಿತರು ಎನಿಸಿದ ನಿಮಗೆ ಶೋಭೆ ತರುವುದಿಲ್ಲ. ವೈದ್ಯವೃತ್ತಿ ಉದಾತ್ತವಾದದ್ದು. ವೈದ್ಯ ಸಮೂಹದ ಬಗ್ಗೆ ಕೋರ್ಟ್‌ಗೆ ಗೌರವ ಇದೆ. ಅದನ್ನು ಅವರು ಉಳಿಸಿಕೊಳ್ಳಬೇಕು. ಅದಕ್ಕೇ ನಾವು ಅವರಿಗೆ ಮನವಿ ಮಾಡಿದ್ದು’ ಎಂದು ರಮೇಶ್‌ ಕಿಡಿ ಕಾರಿದರು.

ಖಾಸಗಿ ವೈದ್ಯರ ಸಂಘ ಹಾಗೂ ನರ್ಸಿಂಗ್ ಹೋಂಗಳ ಪರ ವಕೀಲ ಎಸ್.ಬಸವರಾಜು ‘ಬೆಂಗಳೂರಿನಾದ್ಯಂತ ಈಗಾಗಲೇ ಪ್ರತಿಭಟನೆ ಹಿಂಪಡೆಯಲಾಗಿದೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಎಚ್‌.ಎನ್‌.ರವೀಂದ್ರ ಪ್ರತಿಭಟನೆಯಿಂದ ಹಿಂದೆ ಸರಿದರೆ ಉಳಿದವರೆಲ್ಲಾ ಹಿಂದೆ ಸರಿಯುತ್ತಾರೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐಎಂಎ ಪರ ವಕೀಲ ಎಂ.ಸಿ.ಮೋಹನ್, ‘ಐಎಂಎ ಸದಸ್ಯರು ಯಾರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ರಾಜ್ಯ ಘಟಕದ ಅಧ್ಯಕ್ಷರು ಮಾತ್ರವೇ ಸತ್ಯಾಗ್ರಹ ನಡೆಸುತ್ತಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಅದೆಲ್ಲಾ ಬೇಡ. ನಿಮ್ಮ ಅಹವಾಲು ಏನೇ ಇದ್ದರೂ ಕೋರ್ಟ್‌ಗೆ ಬಂದು ಬಗೆಹರಿಸಿಕೊಳ್ಳಿ. ಪ್ರತಿಭಟನೆ ಕೈಬಿಡಿ’ ಎಂದು ತಾಕೀತು ಮಾಡಿತು.

ಆದೇಶ:

‘ಬದುಕುವ ಹಕ್ಕು ಮಾನವ ಹಕ್ಕು. ಅಂತೆಯೇ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕು. ರೋಗಿಗಳಿಗೆ ನೀಡಿದ ವಚನವನ್ನು ಉಳಿಸಿಕೊಳ್ಳುವ ಸೂಕ್ಮತೆ ವೈದ್ಯರಿಗೆ ಇರಬೇಕು. ಈ ನಿಟ್ಟಿನಲ್ಲಿ ವೈದ್ಯರು ಪ್ರತಿಭಟನೆ ಹಿಂಪಡೆಯಲು ಕೋರ್ಟ್‌ ಮತ್ತೊಮ್ಮೆ ಮನವಿ ಮಾಡುತ್ತಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚಿಕಿತ್ಸೆ ದೊರೆಯದೆ 18 ಮಂದಿ ಸಾವು

ಬೆಂಗಳೂರು: ಬಹುತೇಕ ಖಾಸಗಿ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಸ್ಥಗಿತಗೊಂಡಿದ್ದರಿಂದ ಚಿಕಿತ್ಸೆ ಸಿಗದೆ  ರಾಜ್ಯದಾದ್ಯಂತ 18 ಮಂದಿ ಮೃತಪಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ಐದು, ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು, ದಕ್ಷಿಣ ಕನ್ನಡ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಎರಡು ಮತ್ತು ಚಿಕ್ಕಬಳ್ಳಾಪುರ, ಗದಗ ಹಾಗೂ ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT