ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ಗೆ ಜೆಡಿಎಸ್‌ ಮುಚ್ಚಿದ ಬಾಗಿಲು

Last Updated 18 ನವೆಂಬರ್ 2017, 5:38 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕು ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಕಾಂಗ್ರೆಸ್‌ ಅಭ್ಯರ್ಥಿಯಾದರೆ, ಅಂಬರೀಷ್‌ ಜೆಡಿಎಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಅಂಬರೀಷ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜೆಡಿಎಸ್ ಮುಖಂಡರೇ ಆಸಕ್ತಿ ತೋರುತ್ತಿಲ್ಲ.

ಶಾಸಕರಾದ ನಂತರ ಕ್ಷೇತ್ರದ ಕಡೆಗೆ ಬಂದಿದ್ದು ಅಪರೂಪ. ರೈತರ ಸರಣಿ ಆತ್ಮಹತ್ಯೆ ನಡೆದರೂ ಕ್ಷೇತ್ರಕ್ಕೆ ಬಾರದ ಅಂಬರೀಷ್‌ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಜೆಡಿಎಸ್‌ಗೆ ಬಂದರೆ ಜನಾಕ್ರೋಶಕ್ಕೆ ಜೆಡಿಎಸ್‌ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಅಂಬರೀಷ್‌ಗೆ ಜೆಡಿಎಸ್‌ ವರಿಷ್ಠರು ಟಿಕೆಟ್‌ ನೀಡುವುದಿಲ್ಲ ಎಂಬ ಅಭಿ ಪ್ರಾಯ ಜೆಡಿಎಸ್‌ ವಲಯದಲ್ಲಿ ಇದೆ.

‘ಅಂಬರೀಷ್‌ ಜೆಡಿಎಸ್‌ನಿಂದಲೇ ಮೊದಲ ಗೆಲುವು ದಾಖಲಿಸಿದರು. ನಂತರ ಅವರು ಕಾಂಗ್ರೆಸ್‌ ಸೇರಿದರು. ಮೊದಲು ಇದ್ದ ವರ್ಚಸ್ಸು ಇಲ್ಲ. ಸಿನಿಮಾ ನಟ ಎಂಬ ಚರಿಷ್ಮಾ ಕೂಡ ಈಗ ಉಳಿದಿಲ್ಲ. ಈಗ ಕಾಂಗ್ರೆಸ್‌ಗೇ ಬೇಡವಾಗಿದ್ದಾರೆ. ಮತ್ತೆ ಜೆಡಿಎಸ್‌ಗೆ ಏಕೆ ಬೇಕು? ಜೆಡಿಎಸ್‌ಗೆ ಸೇರುವ ಪ್ರಸ್ತಾವ ಜೆಡಿಎಸ್‌ ವರಿಷ್ಠರ ಮುಂದೆ ಇಲ್ಲ. ಹಲವು ವರ್ಷಗಳ ಕಾಲ ಜೆಡಿಎಸ್‌ಗೆ ದುಡಿದಿರುವ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಇದೆ. ಅವರನ್ನು ಬಿಟ್ಟು ಅಂಬರೀಷ್‌ಗೆ ಟಿಕೆಟ್‌ ನೀಡುವ ಪ್ರಸ್ತಾವ ಇಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಕಾಂಗ್ರೆಸ್‌ ಕೃಪಾಪೋಷಿತ ನಾಟಕ: ಅಂಬರೀಷ್‌, ಜೆಡಿಎಸ್‌ ಸೇರುವ ಯಾವುದೇ ಪಸ್ತಾವ ಇಲ್ಲ, ಆದರೆ ಕಾಂಗ್ರೆಸ್‌ನ ಕೆಲವರು, ಜೆಡಿಎಸ್‌ ಸೇರುತ್ತಾರೆ. ಅಂಬರೀಷ್‌ ಮತ್ತು ರಮ್ಯಾ ನಡುವೆ ಸ್ಪರ್ಧೆ ಏರ್ಪಡಲಿದೆ ಎಂಬ ಗಾಳಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅಂಬರೀಷ್‌ ಅವರಿಗೂ ಜೆಡಿಎಸ್‌ ಸೇರುವ ಮನಸ್ಸು ಇಲ್ಲ. ಕಾಂಗ್ರೆಸ್‌ನಲ್ಲಿ ಇರುವ ಬಣಗಳ ರಾಜಕಾರಣದಿಂದ ಬೇಸತ್ತು ರಮ್ಯಾ ದೆಹಲಿ ಸೇರಿದ್ದಾರೆ. ಮತ್ತೆ ಬಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಕಾಂಗ್ರೆಸ್‌ ಮುಖಂಡರೇ ಹಬ್ಬಿಸುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

‘ಅಂಬರೀಷ್‌ಗೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಹೀಗಾಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ರಾಜ್ಯ ಮುಖಂಡರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಿದ್ದಾರೆ. ಅದಕ್ಕೆ ರಮ್ಯಾ ಸಮ್ಮತಿಸಿದ್ದು ಶೀಘ್ರ ಅವರ ಹೆಸರು ಘೋಷಣೆಯಾಗಲಿದೆ’ ಎಂದು ಕಾಂಗ್ರೆಸ್‌ನ ಮಹಿಳಾ ಮುಖಂಡರೊಬ್ಬರು ತಿಳಿಸಿದರು.

‘ರಮ್ಯಾ ಮಂಡ್ಯಕ್ಕೆ ಬರುವುದಿಲ್ಲ. ಅವರು ರಾಷ್ಟ್ರ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಅಂಬರೀಷ್‌ ಮಂಡ್ಯದಿಂದಲೇ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಕಳೆದ ವಾರ ಬಂದಿದ್ದ ವೇಳೆ ಅಂಬರೀಷ್‌ ತಿಳಿಸಿದರು’ ಎಂದು ಅಂಬರೀಷ್‌ ಅಭಿಮಾನಿ ಬಳದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಹೇಳಿದರು.

ಸಂಸತ್‌ನತ್ತ ರಮ್ಯಾ ಕಣ್ಣು
‘ರಾಜ್ಯ ರಾಜಕಾರಣಕ್ಕೆ ಬರಲು ಹಾತೊರೆಯುತ್ತಿರುವ ಸಂಸದ ಸಿ.ಎಸ್‌.ಪುಟ್ಟರಾಜು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರು ಗೆದ್ದು ವಿಧಾನಸಭೆ ಪ್ರವೇಶಿಸಿದರೆ ಲೋಕಸಭಾ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಉಪಚುನಾವಣೆಯಲ್ಲಿ ರಮ್ಯಾ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಒಲವು ತೋರಿಸಿದ್ದಾರೆ. ಆ ಮೂಲಕ ಅವರು ರಾಷ್ಟ್ರ ರಾಜಕಾರಣಕ್ಕೆ ಹಿಂದಿರುಗಲಿದ್ದಾರೆ. ರಮ್ಯಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ‌’ ಎಂದು ಕಾಂಗ್ರೆಸ್‌ ಮತ್ತೊಂದು ಗುಂಪಿನ ನಡುವೆ ಚರ್ಚೆ ನಡೆದಿದೆ.

28ರಂದು ರಮ್ಯಾ ಮೆರವಣಿಗೆ: ನ. 29ರಂದು ರಮ್ಯಾ ಜನ್ಮದಿನವಿದ್ದು, 28ರಂದೇ ನಗರಕ್ಕೆ ಬರಲಿದ್ದಾರೆ. ಜಿಲ್ಲೆಯ ಗಡಿ ನಿಡಘಟ್ಟಕ್ಕೆ ಬರುತ್ತಾರೆ. ಅಲ್ಲಿಂದ ತೆರದ ಕಾರಿನಲ್ಲಿ ಮೆರವಣಿಗೆ ಮೂಲಕ ನಗರಕ್ಕೆ ಬರಲಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಸ್ವಾಗತಿಸಲಿದ್ದಾರೆ.

ನ.28ರಂದು ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿ ವಿದ್ಯಾನಗರದ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ನ. 29ರಂದು ಅನಾಥಾಶ್ರಮವೊಂದರಲ್ಲಿ ಸರಳವಾಗಿ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಾರೆ. ಕಾರ್ಯಕರ್ತರು ಮಿಮ್ಸ್‌ ಆಸ್ಪತ್ರೆಯ ರೋಗಿಗಳಿಗೆ ಹಾಲು– ಹಣ್ಣು ವಿತರಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT