ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ: ಸಗಟು, ಚಿಲ್ಲರೆ ದರದಲ್ಲಿ ಭಾರಿ ವ್ಯತ್ಯಾಸ

Last Updated 18 ನವೆಂಬರ್ 2017, 5:45 IST
ಅಕ್ಷರ ಗಾತ್ರ

ಮೈಸೂರು: ಈರುಳ್ಳಿಯ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗದೆ ಇದ್ದರೂ ಚಿಲ್ಲರೆ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ, ಸಗಟು ಧಾರಣೆಯಲ್ಲಿ ಹೆಚ್ಚಿನ ಏರಿಳಿತಗಳು ಕಂಡು ಬಂದಿಲ್ಲ.

ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ ಅಂತ್ಯದಲ್ಲಿ ನಿತ್ಯ 800 ಕ್ವಿಂಟಲ್‌ನಷ್ಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈಗ ಇದರ ಪ್ರಮಾಣ 1,610 ಕ್ವಿಂಟಲ್‌ನಷ್ಟು ಇದೆ. ಕೆ.ಜಿಗೆ ಕನಿಷ್ಠ ₹ 20ರಿಂದ ₹ 36ರ ವರೆಗೆ ದರ ಇದೆ. ಇದರ ಮಾದರಿ ಬೆಲೆಯು ₹ 28 ಇದೆ. ಹೀಗಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಕನಿಷ್ಠ ₹ 50ರಿಂದ ₹ 70ರವರೆಗೆ ಏರಿಕೆಯಾಗಿದೆ.

ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ದರ ಏರಿಕೆಯಾದ ಸುದ್ದಿ ತಿಳಿದು ವ್ಯಾಪಾರಸ್ಥರು ಇಲ್ಲಿ ದರ ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ದರ ಏರಿಕೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಕಳೆದ ವರ್ಷ ಇದೇ ತಿಂಗಳಿನಲ್ಲಿ ಈರುಳ್ಳಿಯ ಸಗಟು ಧಾರಣೆ ಕನಿಷ್ಠ ₹ 2ರಿಂದ ₹ 10ರವರೆಗೆ ಇತ್ತು. ಚಿಲ್ಲರೆ ಧಾರಣೆ ₹ 10ರಿಂದ ₹ 15ರವರೆಗೆ ಇತ್ತು. ಆದರೆ, ಈ ಬಾರಿ ಮಾತ್ರ ಚಿಲ್ಲರೆ ದರದಲ್ಲಿ ದಿಢೀರನೆ ವ್ಯತ್ಯಾಸ ಕಾಣಿಸಿಕೊಂಡಿದೆ.

ಅಕ್ಕಿಯ ದರ ಹೆಚ್ಚಳ: ಒಂದು ವರ್ಷದ ಅವಧಿಯಲ್ಲಿ ಅಕ್ಕಿಯ ದರದಲ್ಲಿ ಕ್ವಿಂಟಲ್‌ಗೆ ₹ 2 ಸಾವಿರದಷ್ಟು ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತಮ ದರ್ಜೆಯ ಅಕ್ಕಿಯ ಗರಿಷ್ಠ ದರ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 4,700 ಇತ್ತು. ಇದು ಈ ತಿಂಗಳ ಆರಂಭದಲ್ಲಿ ₹ 6,400ರವರೆಗೂ ತಲುಪಿತ್ತು. ಸದ್ಯ ಇದರ ಗರಿಷ್ಠ ಧಾರಣೆ ₹ 5,600 ಇದೆ.

ಏರುಗತಿಯಲ್ಲೇ ಕೋಳಿಮೊಟ್ಟೆ ಧಾರಣೆ: ಕೋಳಿ ಮೊಟ್ಟೆ ಧಾರಣೆ ಏರುಗತಿಯಲ್ಲಿಯೇ ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕೋಳಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಕೋಳಿಗಳೂ ಈ ಸಮಯದಲ್ಲಿ ಕಡಿಮೆ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಸಹಜವಾಗಿಯೇ ಬೆಲೆಗಳು ದುಬಾರಿಯಾಗುತ್ತವೆ.

ಆದರೆ, ಈ ವರ್ಷ ಪೂರ್ತಿ ಕೋಳಿ ಮೊಟ್ಟೆ ಉತ್ಪಾದಕರು ನಷ್ಟವನ್ನೇ ಅನುಭವಿಸಿದ್ದಾರೆ. ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿದ ನಂತರವಂತೂ ತೀವ್ರತರವಾದ ನಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಈಗ ಸಿಗುತ್ತಿರುವ ಬೆಲೆ ಹಿಂದಿನ ನಷ್ಟವನ್ನು ತುಂಬಿ ಕೊಡುತ್ತಿದೆ ಎಂದು ಕೋಳಿ ಫಾರಂವೊಂದರ ಮಾಲೀಕ ಅಬ್ದುಲ್ ತಿಳಿಸಿದರು.

ಏರಿಕೆಯತ್ತ ಟೊಮೆಟೊ ಬೆಲೆ
ಟೊಮೆಟೊ ದರ ಇಳಿಯುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಈ ತಿಂಗಳ ಆರಂಭದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇದು ಕೆ.ಜಿಗೆ ಸಗಟು ದರ ₹ 25ರಿಂದ 27 ಇತ್ತು. ಈಗ ಇದು ₹ 32ರಿಂದ 33ಕ್ಕೆ ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 50 ದಾಟಿದೆ. ಹಾಪ್‌ಕಾಮ್ಸ್‌ನಲ್ಲೂ ಇದೇ ದರ ಇದೆ.

ಈರುಳ್ಳಿ ದರ

ದಿನಾಂಕ  ಕನಿಷ್ಠ    ಗರಿಷ್ಠ    ಆವಕ    (ಕ್ವಿಂಟಲ್)

ನ. 13     21        36       3,600

ನ. 14     20        36       1,000

ನ. 15     20        36       2,800

ನ.  16    20        36       1,610

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT