ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿಯಲ್ಲಿ ಮಾದರಿ ಗ್ರಂಥಾಲಯ

Last Updated 18 ನವೆಂಬರ್ 2017, 6:11 IST
ಅಕ್ಷರ ಗಾತ್ರ

ಹೂವಿನಹಡಗಲಿ : ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ಹಲವು ವೈಶಿಷ್ಟ್ಯಗಳೊಂದಿಗೆ ಜಿಲ್ಲೆಗೆ ಮಾದರಿಯಾಗಿದೆ. ವಿಶಾಲ ಕಟ್ಟಡ, ಓದುಗರ ಪ್ರತ್ಯೇಕ ವಿಭಾಗ, ಅಗತ್ಯ ಸೌಕರ್ಯ ಒಳಗೊಂಡಿರುವ ವಾಚನಾಲಯ ಓದುಗರನ್ನು ಆಕರ್ಷಿಸುತ್ತಿದೆ.

1965ರಲ್ಲಿ ಪ್ರಾರಂಭವಾದ ವಾಚನಾಲಯವು 35 ವರ್ಷಗಳ ಕಾಲ ಪುರಸಭೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು. 2001ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪಕ್ಕದಲ್ಲಿ ನಿರ್ಮಾಣಗೊಂಡ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಓದುಗರಿಗೆ ಹೆಚ್ಚಿನ ಸೇವೆ ನೀಡುತ್ತಿದೆ.

ಅನೇಕ ಕಡೆ ತಾಲ್ಲೂಕು ಕೇಂದ್ರಗಳ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಪುಸ್ತಕ, ಅಮೂಲ್ಯ ಗ್ರಂಥಗಳನ್ನು ಸುಸ್ಥಿತಿಯಲ್ಲಿಡಲು ಸ್ಥಳಾವಕಾಶವೂ ಇರುವುದಿಲ್ಲ. ಆದರೆ, ಇಲ್ಲಿ ಒಂದೂವರೆ ದಶಕದ ಹಿಂದೆ ₹25 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದೆ. ಆವರಣದಲ್ಲಿ ಗಿಡಮರಗಳನ್ನು ಬೆಳೆಸಿ ಓದುಗರಿಗೆ ಆಹ್ಲಾದಕರ ವಾತಾವರಣ ರೂಪಿಸಲಾಗಿದೆ.

ಗ್ರಂಥಾಲಯದಲ್ಲಿ ಪ್ರತ್ಯೇಕವಾಗಿ ಮಕ್ಕಳ ವಿಭಾಗ, ಮಹಿಳಾ ವಿಭಾಗ, ನಿಯಕಾಲಿಕೆ ವಿಭಾಗ, ಪುಸ್ತಕ ವಿಭಾಗ, ಪರಾಮರ್ಶೆ ವಿಭಾಗ ಹಾಗೂ ಎರವಲು ಕೌಂಟರ್‌ ತೆರೆಯಲಾಗಿದೆ. ಎಲ್ಲ ವಿಭಾಗಗಳಲ್ಲೂ ಸುಸಜ್ಜಿತ ಪೀಠೋಪಕರಣ ವ್ಯವಸ್ಥೆ ಇದೆ. ಸುದೀರ್ಘ ಕಾಲ ಇಲ್ಲಿ ಗ್ರಂಥಪಾಲಕರಾಗಿದ್ದ ಬಸವರಾಜ ಕೊಳ್ಳಿ ಅವರ ವಿಶೇಷ ಕಾಳಜಿಯಿಂದ ಮಾದರಿ ಗ್ರಂಥಾಲಯ ರೂಪುಗೊಂಡಿದೆ.

ಹೂವಿನಹಡಗಲಿ ಓದುಗರ ಪಾಲಿಗೆ ಜ್ಞಾನಾರ್ಜನೆಯ ಕೇಂದ್ರವಾಗಿರುವ ಗ್ರಂಥಾಲಯದಲ್ಲಿ 24482 ಅಮೂಲ್ಯ ಪುಸ್ತಕಗಳು, ಆಕರ ಗ್ರಂಥಗಳು ಇವೆ. 16 ದಿನಪತ್ರಿಕೆಗಳು, 7 ವಾರ ಪತ್ರಿಕೆ, 4 ಪಾಕ್ಷಿಕ, 9 ಮಾಸ ಪತ್ರಿಕೆಗಳು ಓದುಗರಿಗೆ ದೊರೆಯುತ್ತವೆ. ಮರೆಯಾಗುತ್ತಿರುವ ಓದುವ ಸಂಸ್ಕೃತಿಯನ್ನು ಮರು ಸ್ಥಾಪಿಸುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಗ್ರಂಥಾಲಯ ಸಿಬ್ಬಂದಿಯ ಜತೆಗೆ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಪದಾಧಿಕಾರಿಗಳು, ಸದಸ್ಯರು ಇದರ ಬೆಳವಣಿಗೆಗೆ ಶ್ರಮಿಸಿದ್ದಾರೆ.

2100 ಜನರು ಗ್ರಂಥಾಲಯ ಸದಸ್ಯತ್ವ ಪಡೆದಿದ್ದಾರೆ. ಸಾಹಿತಿ, ಬರಹಗಾರರು ಸೇರಿದಂತೆ 300ಕ್ಕೂ ಹೆಚ್ಚು ಓದುಗರು ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ಕೊಡುತ್ತಾರೆ. ಗ್ರಂಥಾಲಯ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಸೇವೆಗೆ ಸೇರಿದ್ದಾರೆ. ಅವರೆಲ್ಲರೂ ಕೂಡ ಗ್ರಂಥಾಲಯಕ್ಕೆ ಋಣಿಯಾಗಿದ್ದಾರೆ.

ಸಂಜೆ ವೇಳೆ ವಿದ್ಯುತ್ ಕಡಿತವಾದಾಗಲೂ ಓದುಗರು ಕದಲುವುದಿಲ್ಲ. ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಓದು ಮಂದುವರಿಸುತ್ತಾರೆ. ಹೀಗಾಗಿ ಗ್ರಂಥಾಲಯಕ್ಕೆ ಅವಶ್ಯವಿರುವ ಯುಪಿಎಸ್‌ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಬೇಕು ಎಂಬುದು ಓದುಗರ ಅಭಿಲಾಷೆ.

ಗ್ರಂಥಾಲಯ ಸಪ್ತಾಹ ಸಮಾರೋಪ ಇಂದು
ಗ್ರಂಥಾಲಯ ಸಪ್ತಾಹ ಸಮಾರೋಪ ಅಂಗವಾಗಿ 18 ರಂದು ಬೆಳಗ್ಗೆ ವಿದ್ಯಾರ್ಥಿಗಳ ಜಾಥಾ, ಸದಸ್ಯತ್ವ ಆಂದೋಲನ, ಪುಸ್ತಕ ಪ್ರದರ್ಶನ ಏರ್ಪಡಿಸಿದೆ. ಜೆಸಿಐ ಹೂವಿನಹಡಗಲಿ ರಾಯಲ್‌ನ ಅಧ್ಯಕ್ಷ ಮಹಾಬಲೇಶ್ವರ ದಿವಾಕರ ಅವರ ನೆರವಿನಲ್ಲಿ 101 ವಿದ್ಯಾರ್ಥಿಗಳಿಗೆ ಉಚಿತ ಸದಸ್ಯತ್ವ ಗುರುತಿನ ಚೀಟಿ ನೀಡಲಾಗುತ್ತಿದೆ. ನಿವೃತ್ತ ಶಿಕ್ಷಣ ಸಂಯೋಜಕ ಹುಲುಗಪ್ಪ ಪೂಜಾರ್, ಇಟ್ಟಿಗಿ ಗ್ರಾಮ ಪಂಚಾಯಿತಿ ಪಿಡಿಒ ಶಶಿಕಲಾ ಕೊಪ್ಪದ ಅವರಿಗೆ ‘ಉತ್ತಮ ಓದುಗ’ ಪ್ರಶಸ್ತಿ ನೀಡಲಾಗುತ್ತಿದೆ.

ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಟಿ.ಜನಾರ್ದನ, ವೈ.ಜಿ.ಅಂಗಡಿ, ಬಳ್ಳಾರಿ ನಗರ ಕೇಂದ್ರದ ಗ್ರಂಥಪಾಲಕ ಬಸವರಾಜ ಕೊಳ್ಳಿ ಅವರಿಗೆ ಗೌರವ ಸನ್ಮಾನ ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶಕುಮಾರ್ ಹೊಸಮನಿ, ಉಪ ನಿರ್ದೇಶಕ ಡಿ.ಎಚ್.ಕೇಸರಿ, ನಿವೃತ್ತ ನಿರ್ದೇಶಕ ಟಿ.ಮಲ್ಲೇಶಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಗ್ರಂಥಪಾಲಕ ಮಂಜುನಾಥ ಬೋವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT