ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಕಂಪ್ಲಿ ತಾಲ್ಲೂಕು ರಚನೆ

Last Updated 18 ನವೆಂಬರ್ 2017, 6:17 IST
ಅಕ್ಷರ ಗಾತ್ರ

ಕಂಪ್ಲಿ: ನೂತನ ತಾಲ್ಲೂಕಾಗಿ ಕಂಪ್ಲಿ ಜನವರಿ 1ರಿಂದ ಅಸ್ತಿತ್ವಕ್ಕೆ ಬರಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನೂತನ ತಾಲ್ಲೂಕು ಕೇಂದ್ರದ ಸ್ವರೂಪ, ಆಡಳಿತ ಕಾರ್ಯ ಕ್ಷೇತ್ರ, ಭೌಗೋಳಿಕ ವಿಸ್ತೀರ್ಣವನ್ನು ಬಹುತೇಕ ಅಂತಿಮಗೊಳಿಸಿದ್ದಾರೆ.

ಕಂಪ್ಲಿ ಹೋಬಳಿ ವ್ಯಾಪ್ತಿಯ ಹಳ್ಳಿಗಳ ಜೊತೆಗೆ ಹೊಸದಾಗಿ ಸಿರುಗುಪ್ಪ ತಾಲ್ಲೂಕಿನ ಮಣ್ಣೂರು, ಸೂಗೂರು ಗ್ರಾಮಗಳನ್ನು ತಾಲ್ಲೂಕು ನಕಾಶೆಯಲ್ಲಿ ಸೇರಿಸಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಸಂಡೂರು ತಾಲ್ಲೂಕಿನ ಹೊಸದರೋಜಿ ಮತ್ತು ಬಳ್ಳಾರಿ ತಾಲ್ಲೂಕಿನ ನೆಲ್ಲೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಕಂಪ್ಲಿ ತಾಲ್ಲೂಕಿಗೆ ಸೇರಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನಕ್ಕೆ ಬರಲಿಲ್ಲ.

ಕಂಪ್ಲಿ ತಾಲ್ಲೂಕು ನಕಾಶೆ ಪ್ರಕಾರ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ, ಕಣಿವಿ ತಿಮ್ಮಲಾಪುರ, ನಂ.10 ಮುದ್ದಾಪುರ, ಬೆಳಗೋಡುಹಾಳು, ಅರಳಿಹಳ್ಳಿ ತಾಂಡಾ, ಸಣಾಪುರ, ಇಟಗಿ, ನಂ.2 ಮುದ್ದಾಪುರ, ದೇವಸಮುದ್ರ, ಮೆಟ್ರಿ, ದೇವಲಾಪುರ, ಸೋಮಲಾಪುರ, ಉಪ್ಪಾರಹಳ್ಳಿ, ಜವುಕು, ಜೀರಿಗನೂರು, ಹಿರೇಜಾಯಿಗನೂರು, ನಂ.15 ಗೋನಾಳು, ಚಿಕ್ಕಜಾಯಿಗನೂರು, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಹೊನ್ನಳ್ಳಿ, ಸಂಕ್ಲಾಪುರ, ಸಿರುಗುಪ್ಪ ತಾಲ್ಲೂಕಿನ ಮಣ್ಣೂರು, ಸೂಗೂರು ಜೊತೆಗೆ ಕಂಪ್ಲಿ ಪುರಸಭೆ ಸೇರಿದೆ.

ಸಂಕ್ಷಿಪ್ತ ಹೋರಾಟ: 1975ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪ್ಲಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷರಾಗಿ ದಿವಂಗತ ಕಲ್ಗುಡಿ ರಾಚಪ್ಪ, ಕಾರ್ಯದರ್ಶಿಯಾಗಿ ಎಚ್. ವೀರಪ್ಪ, ಮುಖಂಡ ಬಿ. ಮೋಹನಬಾಬು ಸೇವೆ ಸಲ್ಲಿಸಿದ್ದರು. ನಂತರ 1997ರಲ್ಲಿ ಅರವಿ ಬಸವನಗೌಡ ಹೋರಾಟ ಸಮಿತಿ ಅಧ್ಯಕ್ಷರಾಗಿ, ಕೆ.ಎಂ. ಹೇಮಯ್ಯಸ್ವಾಮಿ ಕಾರ್ಯಾಧ್ಯಕ್ಷರಾಗಿ, ಪಟ್ಟಣದ ಪ್ರಮುಖರು, ವಿವಿಧ ಸಂಘ ಸಂಸ್ಥೆ, ಸರ್ವಪಕ್ಷಗಳ ಮುಖಂಡರೊಂದಿಗೆ ಹೋರಾಟ ನಡೆಸಿದರು.

1975–76ನೇ ಸಾಲಿನಲ್ಲಿ ತಾಲ್ಲೂಕು ರಚನೆಗೆ ವಾಸುದೇವ ಸಮಿತಿ, 1983–84ರಲ್ಲಿ ಹುಂಡೇಕರ್ ಸಮಿತಿ, 1988ರಲ್ಲಿ ಗದ್ದಿಗೌಡರ್ ಸಮಿತಿ ಹಾಗೂ 2010–11ನೇ ಸಾಲಿನಲ್ಲಿ ಎಂ.ಬಿ. ಪ್ರಕಾಶ್‌ ಸಮಿತಿಗೆ ಕಂಪ್ಲಿ ತಾಲ್ಲೂಕು ರಚನೆಗೆ ಸಂಬಂಧಿಸಿ ಹೋರಾಟಗಾರರು ಮನವಿ ಸಲ್ಲಿಸಿದ್ದರು.

2003ರಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಸತತ 25 ದಿನಗಳ ಕಾಲ, ಮತ್ತೊಮ್ಮೆ 38ದಿನಗಳ ಪರ್ಯಂತ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. 2010 ರಲ್ಲಿ ತಾಲ್ಲೂಕು ರಚನೆ ಸಮಿತಿ ಅಧ್ಯಕ್ಷೆ ಎಂ.ಬಿ. ಪ್ರಕಾಶ್ ವರದಿಯಲ್ಲಿ ಕಂಪ್ಲಿಯನ್ನು ತಾಲ್ಲೂಕು ರಚನೆಯಿಂದ ಕೈಬಿಟ್ಟು ಕೇವಲ ವಿಶೇಷ ತಹಶೀಲ್ದಾರ್‌ ನೇಮಕ ಮಾಡಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಮತ್ತೆ ತಾಲ್ಲೂಕಿಗಾಗಿ 2010ರಲ್ಲಿ 117ದಿನಗಳ ಕಾಲ ಸತತ ಸರದಿ ಉಪವಾಸ ಸತ್ಯಾಗ್ರಹ ನಡೆಸಿ ಚುನಾಯಿತ ಪ್ರತಿನಿಧಿಗಳ ಭರವಸೆ ನಂತರ ಧರಣಿ ಹಿಂಪಡೆಯಲಾಗಿತ್ತು. ಸುದೀರ್ಘ ಹೋರಾಟದ ಫಲವಾಗಿ ಇದೀಗ ತಾಲ್ಲೂಕು ಕನಸು ನನಸಾಗಿದೆ ಎಂದು ಎಲ್ಲರೂ ಹರ್ಷ ವ್ಯಕ್ತಪಡಿಸುತ್ತಾರೆ.

ಅಂಕಿ ಅಂಶಗಳು.
2 ಜಿಲ್ಲಾ ಪಂಚಾಯ್ತಿ ಕ್ಷೇತ್ರ
8 ತಾಲ್ಲೂಕು ಪಂಚಾಯಿತಿ ಕ್ಷೇತ್ರ
9 ಗ್ರಾಮ ಪಂಚಾಯಿತಿ
1 ಪುರಸಭೆ

* * 

‘ನೆಲ್ಲೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಕಂಪ್ಲಿ ತಾಲ್ಲೂಕಿಗೆ ಸೇರ್ಪಡೆ ಮಾಡದಿದ್ದಲ್ಲಿ ಶಾಸಕರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ’.
ಜಿ. ವೆಂಕಟೇಶ್‌ಶೆಟ್ಟಿ, ಮುಖಂಡರು, ಹೊಸನೆಲ್ಲೂಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT