ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಇಳಿಮುಖ

Last Updated 18 ನವೆಂಬರ್ 2017, 6:25 IST
ಅಕ್ಷರ ಗಾತ್ರ

ಬೀದರ್‌: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ಜಿಲ್ಲೆಯಲ್ಲಿ ಎರಡನೇ ದಿನವಾದ ಶುಕ್ರವಾರ ಸಹ ಆಸ್ಪತ್ರೆಗಳನ್ನು ಬಂದ್‌ ಮಾಡಿ ಬೆಳಗಾವಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮಧ್ಯಾಹ್ನದ ವೇಳೆಗೆ ರೋಗಿಗಳ ಸಂಖ್ಯೆ ಕಡಿಮೆ ಆಗಿತ್ತು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶುಕ್ರವಾರ ಬಂದ್‌ಗೆ ಸೂಚನೆ ನೀಡಿರಲಿಲ್ಲ. ಜಿಲ್ಲೆಯ ಬಹುತೇಕ ವೈದ್ಯರು ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗಳನ್ನು ಬಂದ್ ಮಾಡಿದ್ದರು. ಗ್ರಾಮೀಣ ಪ್ರದೇಶಗಳಿಂದ ನಗರದ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳು ತೊಂದರೆ ಅನುಭವಿಸಬೇಕಾಯಿತು. ಕೆಲವರು ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದಿದ್ದರು. ಆಸ್ಪತ್ರೆ ಆವರಣದಲ್ಲಿಯೇ ಕುಳಿತು ಊಟ ಮಾಡಿ ಮನೆಗೆ ತೆರಳಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಅಧಿಕ ಇತ್ತು. ನೋಂದಣಿ, ವೈದ್ಯರ ಬಳಿ ತಪಾಸಣೆ ಹಾಗೂ ಔಷಧ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.

‘ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮಾತ್ರ ರೋಗಿಗಳ ಸಂಖ್ಯೆ ಅಧಿಕ ಇತ್ತು. ಮಧ್ಯಾಹ್ನದ ವೇಳೆ ಕಡಿಮೆಯಾಗಿತ್ತು. ಶುಕ್ರವಾರದ ಹೊರ ರೋಗಿಗಳ ಸಂಖ್ಯೆ ನಿತ್ಯದ ಸರಾಸರಿ ಸಂಖ್ಯೆಗಿಂತ ಕಡಿಮೆ ಇತ್ತು’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ವಿಜಯ ಅಂತಪ್ಪನವರ್ ತಿಳಿಸಿದ್ದಾರೆ.

ರೋಗಿಗಳ ಸಂಖ್ಯೆ ದ್ವಿಗುಣ
ಹುಮನಾಬಾದ್: ಕೆಪಿಎಂಸಿ ಕಾಯ್ದೆಯ ತಿದ್ದುಪಡಿ ವಿರೋಧಿಸಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿತ್ತು. ‘ನಿತ್ಯ 200–250 ಇರುತ್ತಿದ್ದ ರೋಗಿಗಳ ಸಂಖ್ಯೆ ನ.15ರಂದು–523, ನ.16ಕ್ಕೆ 612 ಮತ್ತು ಶುಕ್ರವಾರ 500ಕ್ಕೂ ಅಧಿಕ ಇತ್ತು.

ನ.15ಕ್ಕೆ 11, 16ರಂದು 8 ಮತ್ತು ಶುಕ್ರವಾರ 2 ತುರ್ತು ಹೆರಿಗೆ ಪ್ರಕರಣ ಬೀದರ್‌ಗೆ ಕಳಿಸುವ ಬದಲು ಹುಮನಾಬಾದ್‌ನಲ್ಲೇ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸಿಬ್ಬಂದಿ ಕೊರತೆಯಲ್ಲೂ ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲಾಗಿದೆ’ ಎಂದು ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ.ಅವಿನಾಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT