ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಜನಜಂಗುಳಿ

Last Updated 18 ನವೆಂಬರ್ 2017, 6:31 IST
ಅಕ್ಷರ ಗಾತ್ರ

ಚಾಮರಾಜನಗರ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ನಡೆಸುತ್ತಿರುವ ವೈದ್ಯರ ಮುಷ್ಕರ ಜಿಲ್ಲೆಯಲ್ಲಿ ಶುಕ್ರವಾರವೂ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಡಯಾಗ್ನೊಸ್ಟಿಕ್‌ ಕೇಂದ್ರ ಮತ್ತು ಲ್ಯಾಬೊರೇಟರಿಗಳಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆ ಸ್ಥಗಿತಗೊಳಿಸಲಾಗಿದ್ದು, ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸುವಂತಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ತಪಾಸಣೆ ಮತ್ತು ಚಿಕಿತ್ಸೆಗಾಗಿ ರೋಗಿಗಳು ಗಂಟೆಗಟ್ಟಲೆ ಕಾಯುವಂತಾಯಿತು. ಗುಂಡ್ಲುಪೇಟೆಯಲ್ಲಿ ಬೆಳಿಗ್ಗೆ ತೆರೆದಿದ್ದ ಕೆಲವು ಕ್ಲಿನಿಕ್‌ಗಳನ್ನು ಸ್ವಲ್ಪ ಸಮಯದ ಬಳಿಕ ಮುಚ್ಚಲಾಯಿತು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ದಿನಗಳಿಂದ ಜನ ಸಂದಣಿ ಹೆಚ್ಚಾಗಿದ್ದು, ಈವರೆಗೆ 2,340 ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 79 ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯ ಎಲ್ಲ ವಾರ್ಡ್‌ಗಳು ರೋಗಿಗಳಿಂದ ತುಂಬಿ ತುಳುಕುತ್ತಿದೆ.

‘ಖಾಸಗಿ ಆಸ್ಪತ್ರೆಯ ವೈದ್ಯರ ಮುಷ್ಕರದಿಂದ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ, ಸಮುದಾಯ ಕೇಂದ್ರ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡಬೇಕು. ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಕೇಂದ್ರದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಿಲ್ಲ. ಹಾಗಾಗಿ, ಹೊರ ರೋಗಿ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಸೇವೆಗೆ ಬರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಸಲಹೆ ನೀಡುತ್ತಿದ್ದೇವೆ. ಒಳ ರೋಗಿಗಳಿಗೆ ಮಾತ್ರ ಕಿರಿಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಬಸವರಾಜೇಂದ್ರ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಕೊಳ್ಳೇಗಾಲ ವರದಿ: ಖಾಸಗಿ ವೈದ್ಯರ ಮುಷ್ಕರದಿಂದ ಪಟ್ಟಣದಲ್ಲಿ 12 ಕ್ಲಿನಿಕ್ ಮತ್ತು 8 ನರ್ಸಿಂಗ್ ಹೋಂಗಳು ಶುಕ್ರವಾರ ಸಂಪೂರ್ಣ ಬಂದ್ ಆಗಿದ್ದವು. ಇದರಿಂದ ಸರ್ಕಾರಿ ಆಸ್ಪತ್ರೆಯತ್ತ ರೋಗಿಗಳು ದೌಡಾಯಿಸಿದರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ 550ರಷ್ಟಿದ್ದ ಹೊರರೋಗಿಗಳ ಸಂಖ್ಯೆ ಶುಕ್ರವಾರ 900 ದಾಟಿತ್ತು. ನೂರಾರು ರೋಗಿಗಳು ಸಂಜೆಯವರೆಗೂ ಸರದಿಯಲ್ಲಿ ಕಾದಿದ್ದ ದೃಶ್ಯ ಕಂಡುಬಂತು.

ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆ ಪಡೆದವರ ವಿವರ

1140 ಚಿಕಿತ್ಸೆ ಪಡೆದ ಹೊರ ರೋಗಿಗಳು

39 ದಾಖಲಾದ ಒಳ ರೋಗಿಗಳು

10 ಹೆರಿಗೆ

4 ಶಸ್ತ್ರ ಚಿಕಿತ್ಸೆ

ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ ವಿವರ

ತಾಲ್ಲೂಕು ಖಾಸಗಿ ಆಸ್ಪತ್ರೆ ಕ್ಲಿನಿಕ್‌
ಚಾಮರಾಜನಗರ 5 28
ಕೊಳ್ಳೇಗಾಲ 12 48
ಯಳಂದೂರು 2 12
ಗುಂಡ್ಲುಪೇಟೆ 3 12

* * 

ತಿಭಟನೆ ಹಿಂಪಡೆಯುವಂತೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ, ಒಪಿಡಿ ಕಾರ್ಯಾರಂಭ ಮಾಡಿಲ್ಲ
ಡಾ. ರಿಚರ್ಡ್‌ ಪಿಕಾರ್ಡೋ,
ವೈದ್ಯ, ಆರ್‌.ಕೆ. ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT