ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ವಿರುದ್ಧ ಕಾನೂನು ಕ್ರಮ?

Last Updated 18 ನವೆಂಬರ್ 2017, 6:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ 10 ವರ್ಷಗಳಿಂದ ಈವರೆಗೆ ಬಾಕಿ ಉಳಿಸಿಕೊಂಡಿರುವ ₹ 94.50 ಲಕ್ಷ ಕಂದಾಯ ಬಾಕಿ ಪಾವತಿಸಿ ಎಂಬ ನಗರಸಭೆ ಮನವಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್‌.ಆರ್‌.ಟಿ.ಸಿ) ಅಧಿಕಾರಿಗಳು ಸ್ಪಂದಿಸದ ಕಾರಣಕ್ಕೆ ನಗರಸಭೆ ಇದೀಗ ತೆರಿಗೆ ಬಾಕಿ ವಸೂಲಿಗೆ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದೆ.

ಈಗಾಗಲೇ ಕೆ.ಎಸ್‌.ಆರ್‌.ಟಿ.ಸಿ ಬಾಕಿ ಪಾವತಿಗೆ ನೋಟಿಸ್‌ ಕೊಟ್ಟು ಔಪಚಾರಿಕ ಪ್ರಕ್ರಿಯೆ ಮುಗಿಸಿರುವ ನಗರಸಭೆ, ಅತ್ತ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿರುವ ಕಾರಣಕ್ಕೆ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ. ಈಗಾಗಲೇ ವಕೀಲರಿಗೆ ಅಗತ್ಯ ದಾಖಲೆಗಳನ್ನು ನೀಡಿರುವ ನಗರಸಭೆ, ಬಸ್‌ಗಳನ್ನು ಜಪ್ತಿ ಮಾಡಿಯಾದರೂ ವಸೂಲಿ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.

ಏನಿದು ಪ್ರಕರಣ?: ‘ಈ ಹಿಂದೆ ಕೆ.ಎಸ್‌.ಆರ್‌.ಟಿ.ಸಿ ಬಸ್ಸುಗಳಿಗೆ ಸ್ವಂತ ನಿಲ್ದಾಣ ಇರಲಿಲ್ಲ. ಆ ವೇಳೆ ಅದರ ಬಸ್‌ಗಳೆಲ್ಲ ನಗರಸಭೆ ಖಾಸಗಿ ಬಸ್‌ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿದ್ದವು. ಅದಕ್ಕಾಗಿ ಕೆ.ಎಸ್‌.ಆರ್‌.ಟಿ.ಸಿ ನಗರಸಭೆಗೆ ಕಂದಾಯ ಕಟ್ಟಬೇಕಿತ್ತು. ಆದರೆ 10 ವರ್ಷಗಳಿಂದ ಅದನ್ನು ಕಟ್ಟಿಲ್ಲ. ಇದೀಗ ಬಾಕಿ ಮೊತ್ತ ಮತ್ತು ಬಡ್ಡಿ ಸೇರಿ ಕೆ.ಎಸ್‌.ಆರ್‌.ಟಿ.ಸಿ ₹ 87 ಲಕ್ಷ ಕರ ಕಟ್ಟಬೇಕಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಇದರೊಂದಿಗೆ, ‘ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಬಸ್‌ ನಿಲ್ದಾಣದ 1.69 ಲಕ್ಷ ಚದರಡಿ ಜಾಗಕ್ಕೆ ನಿಗದಿ ಮಾಡಿರುವ ಕಂದಾಯದಲ್ಲಿ ₹ 7.50 ಲಕ್ಷ ಬಾಕಿ ಕಟ್ಟಬೇಕಿದೆ. ಆದರೆ, ಇನ್ನೂ ಬಸ್‌ ನಿಲ್ದಾಣವೇ ಕಾರ್ಯಾರಂಭ ಮಾಡಿಲ್ಲ. ತೆರಿಗೆ ಏಕೆ ಕಟ್ಟಬೇಕು ಎಂದು ಕೆ.ಎಸ್‌.ಆರ್‌.ಟಿ.ಸಿ ಅವರು ವಾದಿಸುತ್ತಿದ್ದಾರೆ. ನಾವಂತೂ ಬಿಡುವುದಿಲ್ಲ. ವಸೂಲಿ ಮಾಡುತ್ತೇವೆ’ ಎನ್ನುತ್ತಾರೆ ನಗರಸಭೆ ಆಯುಕ್ತ ಉಮಾಕಾಂತ್‌.

‘ಹೊಸ ಬಸ್‌ ನಿಲ್ದಾಣಕ್ಕೆ ಸರ್ಕಾರದಿಂದ 1.3 ಲಕ್ಷ ಚದರಅಡಿ ಜಾಗ ಮಂಜೂರಾಗಿದೆ. ನಾವೇಕೆ ಹೆಚ್ಚುವರಿಯಾಗಿ ಸುಮಾರು 60 ಸಾವಿರ ಚದರಡಿ ಜಾಗಕ್ಕೆ ತೆರಿಗೆ ಕಟ್ಟಬೇಕು ಎಂದು ಅಧಿಕಾರಿಗಳು ವಾದಿಸುತ್ತಾರೆ. ಆದರೆ ಅವರ ಕಾಂಪೌಂಡ್‌ ಒಳಗೆ ಇರುವ ಪ್ರದೇಶವನ್ನು ಅಳತೆ ಮಾಡಿದ್ದೇವೆ ಅದು 1.69 ಲಕ್ಷ ಚದರಡಿ ಇದೆ. ಹಾಗಿದ್ದ ಮೇಲೆ ಅವರು ನಮಗೆ 60 ಸಾವಿರ ಚದರಡಿ ಜಾಗ ಬಿಟ್ಟು ಕೊಡಲಿ’ ಎಂದು ಕೇಳಿದರು.

‘ಈ ಹಿಂದೆ ಇದ್ದ ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು (ಡಿ.ಸಿ) ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೆರಿಗೆ ಬಾಕಿಯಲ್ಲಿ ಸ್ವಲ್ಪ, ಸ್ವಲ್ಪ ಪಾವತಿಸುತ್ತ ಬಂದಿದ್ದರು. ಅದು ಸಹ ಸರ್ಕಾರಿ ಸಂಸ್ಥೆಯಾದ್ದರಿಂದ ನಾವು ಬಾಕಿ ವಸೂಲಿಗೆ ಹೆಚ್ಚು ಒತ್ತಾಯ ಮಾಡಿರಲಿಲ್ಲ. ಆದರೆ ಈಗಿರುವ ಡಿಸಿ ಅವರು ಹಳೆಯ ಲೆಕ್ಕವನ್ನೆಲ್ಲ ಕೇಳುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗೆ 70 ಪುಟಗಳ ಮಾಹಿತಿ ನೀಡಿದ್ದೇವೆ’ ಎಂದು ಹೇಳಿದರು.

‘ಹೊಸ್ ನಿಲ್ದಾಣದಲ್ಲಿ ಅನೇಕ ಬಗೆಯ ವಾಣಿಜ್ಯ ಚಟುವಟಿಕೆಗಳಿಗೆ ಜಾಗವನ್ನು ಬಾಡಿಗೆ ನೀಡಲು ಉದ್ದೇಶಿಸಲಾಗಿದೆ. ಹೀಗಾಗಿ ನಾವು ಅಲ್ಲಿ ವಾಣಿಜ್ಯ ಕಟ್ಟಡದ ಲೆಕ್ಕದಲ್ಲಿ ತೆರಿಗೆ ನಿಗದಿ ಮಾಡಿದ್ದೇವೆ. ಅದಕ್ಕೆ ಅವರು ಒಪ್ಪುತ್ತಿಲ್ಲ. ನಾವು ಇದೊಂದು ಸಂಸ್ಥೆ ಮಾತ್ರವಲ್ಲ ದೊಡ್ಡ ಮೊತ್ತ ಬಾಕಿ ಉಳಿಸಿಕೊಂಡಿರುವ ಇಲಾಖೆಗಳು, ಮಾಲೀಕರಿಂದ ಕೂಡ ಬಾಕಿ ವಸೂಲಿಗೆ ಮುಂದಾಗಿದ್ದೇವೆ’ ಎಂದು ಉಮಾಕಾಂತ್ ತಿಳಿಸಿದರು.

ವಾದವೇನು?: ‘1984 ರಿಂದ 2012 ರವರೆಗೆ ಕೆ.ಎಸ್‌.ಆರ್‌.ಟಿ.ಸಿ ₹ 47 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ. ಅದಕ್ಕೆ ₹ 40 ಲಕ್ಷ ಬಡ್ಡಿಯಾಗಿದೆ. ಎರಡೂ ಸೇರಿ ₹ 87 ಲಕ್ಷ ಪಾವತಿಸಿ ಎಂದು ನಗರಸಭೆಯವರು ಹೇಳುತ್ತಿದ್ದಾರೆ. ಅವರು ಹೇಳಿದಂತೆ ನಮ್ಮ ಬಸ್‌ಗಳು ಖಾಸಗಿ ಬಸ್‌ ನಿಲ್ದಾಣದಲ್ಲಿ ನಿಲುಗಡೆ ಮಾಡಿರಲಿಲ್ಲ. ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗಿವೆ’ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಆ್ಯಂಟನಿ ಜಾರ್ಜ್‌.

‘ನಗರಸಭೆ ಬಳಿ ಯಾವ ಲೆಕ್ಕವೂ ಇಲ್ಲ. ಆದರೂ ನಿತ್ಯ 110 ಬಸ್‌ಗಳಂತೆ 350 ದಿನಗಳಿಗೆ ಲೆಕ್ಕ ಹಾಕಿ ತೆರಿಗೆ ಬಾಕಿ ನಿಗದಿ ಮಾಡಿದ್ದಾರೆ. ನಾವು ಈವರೆಗೆ ಸರಿಯಾಗಿ ಕಂದಾಯ ಕಟ್ಟುತ್ತ ಬಂದಿದ್ದೇವೆ. ಈ ಸಮಸ್ಯೆ ಸಾರಿಗೆ ಸಚಿವರ ಗಮನಕ್ಕೆ ಕೂಡ ಬಂದಿದೆ. ಅವರು ಸಹ ನಗರಸಭೆ ಅಧಿಕಾರಿಗಳನ್ನು ಶೀಘ್ರದಲ್ಲೇ ಕರೆಯಿಸಿ, ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

* *

ತೆರಿಗೆ ಬಾಕಿ ಉಳಿಸಿಕೊಂಡು ಕಾನೂನು ಮಾತನಾಡುವ ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳಿಂದ ಕಾನೂನು ರೀತಿಯಲ್ಲೇ ಬಾಕಿ ವಸೂಲಿ ಮಾಡಿಕೊಳ್ಳುತ್ತೇವೆ. ಉಮಾಕಾಂತ್, 
ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT