ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸ್ವಾವಲಂಬನೆಗೆ ಆಧಾರ

Last Updated 18 ನವೆಂಬರ್ 2017, 6:46 IST
ಅಕ್ಷರ ಗಾತ್ರ

ಕಡೂರಿನಿಂದ ಪಟ್ಟಣಗೆರೆಗೆ ಹೋಗುವ ರೈಲ್ವೆ ಮೇಲ್ಸೆತುವೆ ಪಕ್ಕದಲ್ಲಿರುವ ವಿಶಾಲ ಗೋಡನ್‌ನಲ್ಲಿ ಹತ್ತಿ ಬಟ್ಟೆ ತಯಾರಿಸುವ ಘಟಕ ಹಲವರ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಟ್ಟಿದೆ. ಈ ಘಟಕದ ಆರಂಭಕ್ಕೆ ನಾಂದಿ ಹಾಡಿದ್ದು ಆರ್.ರಮಣಿ. ಇಂದಿನ ತಾಂತ್ರಿಕ ಯುಗದಲ್ಲೂ ಮಾನವ ಶ್ರಮದಿಂದಲೇ ಇಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳು ತಯಾರಾಗುತ್ತಿವೆ.

ಕೃಷಿ ವೃತ್ತಿಯನ್ನು ಮಾಡುವ ಆಸೆಯಿಂದ ಹಲವೆಡೆ ಪ್ರಯತ್ನಿಸಿದರೂ ಯಶಸ್ವಿಯಾಗದೆ ಇದ್ದಾಗ ಮನಸ್ಸಿನಲ್ಲಿ ಕೈಮಗ್ಗ ಸ್ಥಾಪನೆ ಮಾಡಲು ರಮಣಿ ಅವರು ಮನಸ್ಸು ಮಾಡಿದರು. ಟೆಕ್ಸ್‌ಟೈಲ್ಸ್ ಇಂಡಸ್ಟ್ರಿಸ್, ನೇಕಾರ ನಿಗಮ ಮುಂತಾದ ಕಡೆ ಈ ಘಟಕ ಸ್ಥಾಪಿಸಲು ಬೇಕಾದ ಮಾಹಿತಿ ಸಂಗ್ರಹಿಸಿದರು. ಜೊತೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಹ ಹುಡುಕಾಟ ನಡೆಸಿ ಕೈಮಗ್ಗಗಳ ಕಾರ್ಯನಿರ್ವಹಣೆ ಬಗ್ಗೆ ಜ್ಞಾನ ಸಂಪಾದಿಸಿದರು. ದಾವಣಗೆರೆ, ಬೆಂಗಳೂರು ಮುಂತಾದ ಕಡೆಗಳಲ್ಲಿರುವ ಕೈಮಗ್ಗ ಘಟಕಗಳಿಗೆ ಸ್ವತಃ ಭೇಟಿ ನೀಡಿ ಅದರ ಕಾರ್ಯನಿರ್ವಹಣೆಯ ಬಗ್ಗೆ ಜ್ಞಾನ ಸಂಪಾದಿಸಿದರು. ಅದೇ ಈ ಘಟಕ ಸ್ಥಾಪನೆಗೆ ನಾಂದಿಯಾಯಿತು.

2 ವರ್ಷದ ಹಿಂದೆ ಸುಮಾರು 3 ಸಾವಿರ ಚದರ ಅಡಿ ವಿಸ್ತೀರ್ಣದ ಗೋಡನ್‌ನಲ್ಲಿ ಈ ಕೈಮಗ್ಗ ಘಟಕವು ಕಡೂರು ಕುರಿ ಉಣ್ಣೆ ಮತ್ತು ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘದ ಮೂಲಕ ಸ್ಥಾಪನೆಯಾಯಿತು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿ ಬಂದಾಗ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಯಿತು.

ಪ್ರಸ್ತುತ ಈ ಘಟಕದಲ್ಲಿ ನಾಲ್ಕು ಕೈಮಗ್ಗಗಳಿವೆ. ಸಾಂಪ್ರದಾಯಿಕವಾಗಿ ಮಾನವ ಶಕ್ತಿಯಿಂದಲೇ ಈ ಮಗ್ಗಗಳು ಕೆಲಸ ಮಾಡುತ್ತವೆ. ಈ ಘಟಕದಲ್ಲಿ ಸದ್ಯ ಎಂಟು ಜನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ಈ ಘಟಕ ಕಾರ್ಯನಿರ್ವಹಿಸುತ್ತದೆ. ಉತ್ತಮ ಗುಣಮಟ್ಟದ ಟವಲ್ ಮತ್ತು ಬೆಡ್‌ಶೀಟ್‌ಗಳನ್ನು ಮತ್ತು ಕೈ ಚೀಲಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಬೆಂಗಳೂರು, ದಾವಣಗೆರೆ, ಮೈಸೂರು, ಶಿವಮೊಗ್ಗ ಮುಂತಾದ ಕಡೆ ಬೇಡಿಕೆಯಿದೆ.

ಬಟ್ಟೆಗಳನ್ನು ತಯಾರಿಸಲು ಬೇಕಾದ ಹತ್ತಿಯ ನೂಲು ಮುಂತಾದ ಕಚ್ಚಾವಸ್ತುಗಳನ್ನು ರಾಣಿಬೆನ್ನೂರಿನಿಂದ ತರಿಸಲಾಗುತ್ತದೆ. ಪ್ರತಿಯೊಬ್ಬರು ದಿನಕ್ಕೆ 30ರಷ್ಟು ಟವಲ್‌ಗಳನ್ನು ತಯಾರಿಸುತ್ತಾರೆ. ಸದ್ಯದಲ್ಲಿಯೇ ಸೀರೆಗಳನ್ನು ತಯಾರಿಸುವ ಕೈಮಗ್ಗಗಳ ಸ್ಥಾಪನೆಯಾಗಲಿದೆ. ಬಟ್ಟೆಗಳ ವಿನ್ಯಾಸವನ್ನು ಸ್ವತಃ ಇಲ್ಲಿ ಕೆಲಸ ಮಾಡುವ ಮಹಿಳೆಯರೇ ಮಾಡುತ್ತಾರೆ ಎಂಬುದು ವಿಶೇಷ.

ಇದಲ್ಲದೇ ಚಿಕ್ಕ ಮಕ್ಕಳಿಗೆ ಉಪಯೋಗಿಸುವ ಡೈಪರ್ ಬದಲಿಗೆ ಕಡಿಮೆ ಖರ್ಚಿನಲ್ಲಿ ಮರು ಉಪಯೋಗಿಸುವಂತಹ ಹತ್ತಿಯ ಡೈಪರ್‌ಗಳನ್ನು ಇಲ್ಲಿ ತಯಾರಿಸುತ್ತಿದೆ. ಅದಕ್ಕೆ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇದಲ್ಲದೇ ಕೈಮಗ್ಗಗಳಲ್ಲಿ ಬಟ್ಟೆಗಳನ್ನು ನೇಯುವ ತರಬೇತಿಯನ್ನು ಸುಮಾರು 50 ಜನಗಳಿಗೆ ನೀಡಲಾಗಿದೆ. ಇಲ್ಲಿ ಕೆಲಸ ಮಾಡುತ್ತಿರುವ ರೂಪ, ಲಾವಣ್ಯ, ಕಾವ್ಯ ಮತ್ತಿತರರು ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡುತ್ತಾರೆ. ಮಹಿಳೆಯರು ಸ್ವಾವಲಂಬಿಯಾಗಲು ರಮಣಿ ಅವರ ಈ ಕೈಮಗ್ಗ ಉಳಿದವರಿಗೆ ಪ್ರೇರೇಪಣೆಯಾಗಿದೆ.

* * 

ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಆರ್ಥಿಕವಾಗಿ ಸಹಾಯಕವಾಗಿದೆ. ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ.
ರೂಪ
ಕೈಮಗ್ಗದ ಕೆಲಸಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT