ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಬಾರಿ ಗಗನಕ್ಕೇರಿದ ಮೊಟ್ಟೆ ದರ!

Last Updated 18 ನವೆಂಬರ್ 2017, 6:53 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹಿಂದೆಂದಿಗಿಂತಲೂ ಕೋಳಿ ಮೊಟ್ಟೆ ದರ ಏರಿಕೆಯಾಗಿದ್ದು, ಕೋಳಿಫಾರಂ ಮಾಲೀಕರು ಸಂತಸಗೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿ ಮೊಟ್ಟೆಗೆ  ₹ 3.50ರಿಂದ ₹ 3.80 ಇರುತ್ತಿತ್ತು. ಇದು ಈಗ ₹ 5.50ಕ್ಕೆ ಏರಿಕೆಯಾಗಿರುವುದು ಅಚ್ಚರಿ ಮೂಡಿಸಿದೆ. ಇಷ್ಟೊಂದು ದರ ಕೋಳಿ ಸಾಕಣೆ ಇತಿಹಾಸದಲ್ಲಿ ಎಂದಿಗೂ ಕಂಡಿರಲಿಲ್ಲ. ಇದಕ್ಕೆ ಅನೇಕ ಕಾರಣಗಳೂ ಕಾಣಸಿಕ್ಕಿವೆ ಎಂದು ವಿಶ್ಲೇಷಿಸುತ್ತಾರೆ ಕೋಳಿ ಸಾಕಣೆದಾರರಾದ ಹಾನಗಲ್‌ನ ರಮೇಶ್‌ ಹಾಗೂ ಮೊಗಲಹಳ್ಳಿಯ ಆರ್‌.ರಾಮರೆಡ್ಡಿ.

ದಕ್ಷಿಣ ಭಾರತದಾದ್ಯಂತ ಕಳೆದ ತಿಂಗಳು ಎಡೆಬಿಡದೇ ಸುರಿದ ಮಳೆಯಿಂದಾಗಿ ಕೋಳಿಫೀಡ್‌ಗೆ ಬೇಕಾದ ಕಚ್ಚಾ ಸಾಮಗ್ರಿಗಳಾದ ಮೆಕ್ಕೆಜೋಳ, ರಾಗಿ, ಸೋಯಾಬೀನ್‌, ಮೀನು ಮುಂತಾದವುಗಳನ್ನು ಒಣಗಿಸಲು ಸಾಧ್ಯವಾಗಲಿಲ್ಲ. ಶೇ 12ಕ್ಕೂ ಕಡಿಮೆ ತೇವಾಂಶವುಳ್ಳ ಕಚ್ಚಾ ಸಾಮಗ್ರಿ ಫೀಡ್‌ಗೆ ಹಾಕಬೇಕಿದೆ. ಆದರೆ, ಸಿಕ್ಕಿದ್ದು ಶೇ 16ಕ್ಕೂ ಹೆಚ್ಚು ತೇವಾಂಶದ್ದಾಗಿದೆ. ಇದರಿಂದ ವ್ಯತ್ಯಯವಾಗಿ ಶೇ 20ರಷ್ಟು ಮೊಟ್ಟೆ ಇಳುವರಿ ಕಡಿಮೆಯಾಗಿದೆ ಎಂದು ಹೇಳಿದರು.

ಜತೆಗೆ ಮಳೆ ಹೆಚ್ಚಳವಾಗಿ ಎಲ್ಲಾ ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದ್ದರಿಂದ ತರಕಾರಿ ಸ್ಥಾನದಲ್ಲಿ ಮೊಟ್ಟೆ ಬಳಸಲಾಗುತ್ತಿದೆ. ಇದೂ ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹಿಂದೆಯೂ ಅನೇಕ ಸಾರಿ ತರಕಾರಿ ಬೆಲೆ ಹೆಚ್ಚಳವಾದಾಗ ಮೊಟ್ಟೆ ಬೆಲೆ ಏರಿಕೆ ಕಂಡಿತ್ತು. ಒಟ್ಟು ಬೇಡಿಕೆ ಪೈಕಿ ಶೇ 20–25ರಷ್ಟು ಕಡಿಮೆ ಕೊರತೆ ಉಂಟಾಗಿದೆ ಎಂದರು.

ಆರು ತಿಂಗಳ ಹಿಂದೆ ಕೋಳಿಮರಿ ಪೂರೈಕೆಯಲ್ಲಿ ತೊಂದರೆ, ಕಚ್ಚಾ ಸಾಮಗ್ರಿ ದರ ಏರಿಕೆ, ಸಾಕಣೆದಾರರ ನಿರಾಸಕ್ತಿ ಮೊಟ್ಟೆ ಕೊರತೆಯಾಗಲು ಕಾರಣವಾಗಿವೆ. ಈ ವರ್ಷ ಎಲ್ಲೆಡೆ ಉತ್ತಮ ಮಳೆಯಾಗಿರುವುದು ಬೇಡಿಕೆ ದುಪ್ಪಟ್ಟು ಮಾಡಿದೆ. ಇದೊಂದು ಅದೃಷ್ಟದ ದರವಾಗಿದ್ದು, ಎಷ್ಟು ದಿನ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಸಾಕಣೆದಾರರು.

* * 

‘ಜಿಎಸ್‌ಟಿಯಿಂದ ದರ ಏರಿಲ್ಲ’
ಮೊಟ್ಟೆ ದರ ಏರಿಕೆಗೂ ‘ಜಿಎಸ್‌ಟಿ’ಗೂ ಯಾವುದೇ ಸಂಬಂಧವಿಲ್ಲ. ಇದನ್ನು ಮೊಟ್ಟೆ ಚಿಲ್ಲರೆಯಾಗಿ ಮಾರುವವರು ಹಬ್ಬಿಸುತ್ತಿರುವ ವದಂತಿಯಷ್ಟೇ. ಮೊದಲಿನಿಂದಲೂ ಕೋಳಿ ಉದ್ಯಮ ಜಿಎಸ್‌ಟಿಯಂತಹ ತೆರಿಗೆಯಿಂದ ಮುಕ್ತವಾಗಿದೆ ಎಂದು ಸಾಕಣೆದಾರ ರಮೇಶ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT