ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾರ್ಮಿಕರಿಗೆ ಇನ್ನಿಲ್ಲದ ಬೇಡಿಕೆ

Last Updated 18 ನವೆಂಬರ್ 2017, 8:18 IST
ಅಕ್ಷರ ಗಾತ್ರ

ಅರಸೀಕೆರೆ: ಕೊಯ್ಲಿಗೆ ಬಂದಿರುವ ರಾಗಿ ಫಸಲು ಕಟಾವಿಗೆ ಕೃಷಿ ಕಾರ್ಮಿಕರಿಗೆ ಈ ಬಾರಿ ತಾಲ್ಲೂಕಿನಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆಹಾರ ಹಾಗೂ ಜಾನುವಾರುಗಳಿಗೆ ಮೇವಿನ ಆಸರೆಯಾಗಿ ತಾಲ್ಲೂಕಿನಲ್ಲಿ ರಾಗಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಕೃಷಿ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ತಾಲ್ಲೂಕಿನಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

ರಾಗಿ ಬೆಳೆ ವಡೆ (ತೆನೆ) ಬಿಚ್ಚುವ ಹಂತದಲ್ಲಿ ಇದ್ದಾಗ ಉತ್ತಮವಾಗಿ ಮಳೆಯಾಯಿತು. ರೈತರೂ ಯೂರಿಯಾ, ಡಿಎಪಿ ಗೊಬ್ಬರ ನ್ನು ಕೊಟ್ಟಿದ್ದರಿಂದ ಬೆಳೆ ಹುಲುಸಾಗಿ ಬೆಳೆಯಿತು. ರಾಗಿ ಕಾಳುಗಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಹುಲುಸಾಗಿ ಬೆಳೆದಿದ್ದ ರಾಗಿ ತೊಂಡೆ ಕೆಲವೆಡೆ ಉರುಳಿ ಬಿದ್ದಿದೆ. ಹೀಗೆ ಬಾಗಿದ ರಾಗಿ ಬೆಳೆ ಕೊಯ್ಲು ಮಾಡಲು ಕೂಲಿಕಾರರಿಗೆ ಕಷ್ಟವಾಗುತ್ತದೆ. 4 ಮಂದಿ ಕೊಯ್ಯುವ ಫಸಲಿಗೆ 6 ಮಂದಿ ಬೇಕು ಎನ್ನುತ್ತಾರೆ ಮಾಡಾಳು ಗ್ರಾಮದ ಕಲ್ಲತ್ತೇಗೌಡ.

ಮೋಡಕವಿದ ವಾತಾವರಣ: ರಾಗಿ ಬೆಳೆ ಕೊಯ್ಲಿಗೆ ಬಂದಿರುವ ಈ ಹಂತದಲ್ಲಿ ಮೋಡ ಕವಿದ ವಾತಾವಣವಿದ್ದು, ರೈತರಿಗೆ ಆತಂಕಮೂಡಿಸಿದೆ. ಬಿಸಿಲು ಬೀಳದಿದ್ದರೆ ನೆಲಕ್ಕೆ ಬಾಗಿರುವ ತೆನೆಯಲ್ಲಿರುವ ರಾಗಿ ಕಾಳು ಕಪ್ಪಾಗುವ ಸಾಧ್ಯತೆಯಿದೆ. ಅಲ್ಲದೆ, ನೆಲಕ್ಕೆ ಬಾಗಿರುವ ತೆನೆ ಮೊಳಕೆಯಾಗುವ ಜತೆಗೆ ಮಣ್ಣುಪಾಲಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ದೋಣನಕಟ್ಟೆಯ ರೈತ ಬಸವರಾಜ್‌.

ಕೂಲಿ ಕಾರ್ಮಿಕರ ಕೊರತೆ: ಐದಾರು ವರ್ಷ ಬರಗಾಲ ಬಂದಿದ್ದರಿಂದ ಗ್ರಾಮೀಣ ಭಾಗದ ಸಾಕಷ್ಟು ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗಿದ್ದಾರೆ. ಈಗ ಕೃಷಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಹೀಗಾಗಿ ಈ ಕೆಲಸ ಮಾಡಲು ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ.

ರಾಗಿ ಕಟಾವಿಗೆ 10 ದಿನಗಳ ಮೊದಲೇ ಕಾರ್ಮಿಕರನ್ನು ನಿಗದಿಮಾಡಿಕೊಳ್ಳಬೇಕು.ಇಲ್ಲದಿದ್ದರೆ ರೈತನ ಕೈಗೆ ಸಿಗುವುದಿ ಲ್ಲ. ಕೊಯ್ಲಿಗೆ ಬಂದ ರಾಗಿ ಸಮಯಕ್ಕೆ ಸರಿಯಾಗಿ ಕಟಾವು ಮಾಡದಿದ್ದರೆ ನೆಲಕ್ಕೆ ಉದುರಿ ನಷ್ಟವಾಗುತ್ತದೆ ಎನ್ನುತ್ತಾರೆ ಜಿ.ರಾಮೇನಹಳ್ಳಿ ರೈತ ಮಲ್ಲಿಕಾರ್ಜುನ.

ಹೆಚ್ಚಿನ ಬೇಡಿಕೆ: ಕೊಯ್ಲಿಗೆ ಬದಿರುವ ಒಂದು ಎಕರೆ ರಾಗಿ ಬೆಳೆ ಕಟಾವಿಗೆ ಪ್ರತಿಕೂಲಿ ಕಾರ್ಮಿಕ ₹ 350 ರಿಂದ ₹ 400 ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ರಾಗಿ ಬಿತ್ತನೆ ಬೀಜ, ಗೊಬ್ಬರ ಖರೀದಿ, ಕೃಷಿ ಕೂಲಿಕಾರರಿಂದ ಎಡೆಕುಂಟೆ ಹೊಡೆಸಿರುವುದು ಸೇರಿ ಎಕರೆ ರಾಗಿ ಬೆಳೆಯಲು ₹ 15 ಸಾವಿರ ಖರ್ಚು ಮಾಡಲಾಗಿದೆ. ಎಕರೆಗೆ 6ರಿಂದ 10 ಕ್ವಿಂಟಲ್‌ ರಾಗಿ ಸಿಗಬಹುದು.

ಮಾರುಕಟ್ಟೆ ದರ ನೋಡಿದರೆ ಬೆಳೆಗೆ ಖರ್ಚು ಮಾಡಿರುವ ಹಣವೂ ಕೈ ಸೇರುವುದಿಲ್ಲ ಎಂಬ ಲೆಕ್ಕಾಚಾರವಿದೆ. ಏಕೆಂದರೆ ಆದಾಯಕ್ಕಿಂತ ಖರ್ಚೆ ಹೆಚ್ಚಿರುವ ಕಾರಣ ರಾಗಿ ಬೆಳೆಯಬಾರದು ಎನ್ನುವಷ್ಟು ಬೇಸರವಾಗಿದೆ ಎನ್ನುತ್ತಾರೆ ರೈತ ಎಸ್‌.ಮಲ್ಲಿಕಾರ್ಜುನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT