ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ: ಯೋಜನೆ ಅಪೂರ್ಣ!

Last Updated 18 ನವೆಂಬರ್ 2017, 8:23 IST
ಅಕ್ಷರ ಗಾತ್ರ

ಹಾವೇರಿ: ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಅಪೌಷ್ಟಿಕತೆ ನಿವಾರಣೆಗಾಗಿ ಅಂಗನವಾಡಿಗಳಲ್ಲಿ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆಯೇ ಗೊಂದಲದ ಗೂಡಾಗಿದೆ. ಅಕ್ಟೋಬರ್ 2ರಂದು ರಾಜ್ಯಾದ್ಯಂತ ಚಾಲನೆ ಸಿಕ್ಕಿದ್ದು, ತಿಂಗಳು ಕಳೆದರೂ ಸಮಸ್ಯೆಗಳೇ ಹೆಚ್ಚಿವೆ.

ಉದ್ದೇಶ: ಶಿಶು ಮತ್ತು ತಾಯಿ ಮರಣ ಪ್ರಮಾಣ ತಗ್ಗಿಸುವುದು, ಕಡಿಮೆ ತೂಕದ ಮಕ್ಕಳ ಜನನ ನಿಯಂತ್ರಣ, ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಹೆಚ್ಚಳ, ರಕ್ತ ಹೀನತೆ ನಿವಾರಣೆ, ಕಬ್ಬಿಣಾಂಶದ ಮಾತ್ರೆ ಸೇವನೆ, ಆಹಾರ ಸೇವನೆ ಬಗ್ಗೆ ನಿಗಾ ವಹಿಸುವುದು ಯೋಜನೆಯ ಉದ್ದೇಶವಾಗಿದೆ. ಕಾಲಕಾಲಕ್ಕೆ ಗರ್ಭಿಣಿಯ ಆರೋಗ್ಯ ತಪಾಸಣೆ, ವೈದ್ಯಕೀಯ ಉಪಚಾರವೂ ಉದ್ದೇಶಗಳಲ್ಲಿ ಒಂದು.

ಎರಡು ಮೊಟ್ಟೆ: ‘ಪ್ರತಿ ಫಲಾನುಭವಿಗೆ ಒಂದು ಮೊಟ್ಟೆ ನೀಡಲಾಗುತ್ತದೆ. ಆದರೆ, ಎರಡನೇ ಬಾರಿಯ ಗರ್ಭಿಣಿ ಅಥವಾ ಬಾಣಂತಿಯರ ಜೊತೆ ಮೊದಲ ಮಗುವೂ ಬರುತ್ತದೆ. ತಾಯಂದಿರು ಮೊಟ್ಟೆಯನ್ನು ಆ ಮಗುವಿಗೆ ನೀಡುತ್ತಾರೆ. ಆ ಬಳಿಕ ಇನ್ನೊಂದು ಮೊಟ್ಟೆ ಕೇಳುತ್ತಾರೆ. ಇದು ನಮ್ಮನ್ನು ಉಭಯ ಸಂಕಟಕ್ಕೆ ಒಡ್ಡುತ್ತದೆ’ ಎಂದು ಶಿಗ್ಗಾವಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಹೊರಗೆ ಬರುವುದಿಲ್ಲ: ‘ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಹೊರಗೆಡೆ ಕಳುಹಿಸಲು ಕೆಲವು ಕುಟುಂಬಗಳ ಹಿರಿಯರು ಒಪ್ಪುವುದಿಲ್ಲ. ಅವರನ್ನು ಕರೆಯಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ’ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು. ‘ಅಂಗನವಾಡಿಗಿಂತ ದೂರದಲ್ಲಿ ಇರುವವರು ಮಧ್ಯಾಹ್ನದ ಬಿಸಿಲಿನಲ್ಲಿ ಬರುವುದು ಹೇಗೆ?’ ಎಂಬುದು ಹಾವೇರಿ ನಗರದ ಲಲಿತಾ ಅವರ ಪ್ರಶ್ನೆ.

ಜಾಗದ ಕೊರತೆ: ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪಾಠ, ಊಟ ನೀಡುವುದೇ ಕಷ್ಟ. ಈ ನಡುವೆಯೇ ಗರ್ಭಿಣಿಯರನ್ನು ಕುಳ್ಳಿರಿಸಬೇಕಾದ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ. ಹಲವು ಅಂಗನವಾಡಿಗಳು ದೇವರ ಗುಡಿ ಬಳಿ, ಜನನಿಬಿಡ ಸ್ಥಳಗಳಲ್ಲಿದ್ದು, ಗರ್ಭಿಣಿ, ಬಾಣಂತಿಯರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಬುತ್ತಿ ಕೊಡಿ: ‘ಇನ್ನೂ ಹಲವೆಡೆ, ‘ಬುತ್ತಿಯಲ್ಲಿ ಕೊಡಿ’ ಎಂದು ಅವರ ಮನೆಯವರು ಬರುತ್ತಾರೆ. ಕೊಡದಿದ್ದರೆ, ಜಗಳಕ್ಕೆ ನಿಲ್ಲುತ್ತಾರೆ. ಆದರೆ, ಯೋಜನೆಯ ಮೂಲ ಉದ್ದೇಶದ ಪ್ರಕಾರ ಆಹಾರವನ್ನು ಕಳುಹಿಸಿಕೊಡುವಂತಿಲ್ಲ’ ಎಂದು ಕಾರ್ಯಕರ್ತೆಯೊಬ್ಬರು ತಿಳಿಸಿದರು.

ಹೆಚ್ಚಿನ ವೇತನವಿಲ್ಲ: ಜಿಲ್ಲೆಯಲ್ಲಿ ಒಟ್ಟು 1,918 ಅಂಗನವಾಡಿಗಳಿದ್ದು, 27ರಲ್ಲಿ ಸಹಾಯಕಿಯರು ಇಲ್ಲ. ಗರ್ಭಿಣಿ, ಬಾಣಂತಿಯರ ತೂಕ, ಆರೋಗ್ಯ ಮತ್ತಿತರ ವಿಚಾರಗಳನ್ನೂ ಕಾರ್ಯಕರ್ತೆಯರು ಪ್ರತಿ ವಾರ ದಾಖಲಿಸಬೇಕಾಗಿದೆ. ಈ ಕಾರ್ಯಕ್ಕೆ ಸರ್ಕಾರ ಹೆಚ್ಚುವರಿ ವೇತನ ನೀಡಿಲ್ಲ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನವು ಕನಿಷ್ಠ ಕೂಲಿಗಿಂತ ಕಡಿಮೆ ಇದೆ. ಮಕ್ಕಳಿಗೆ ನೀಡುವ ಕೋಳಿ ಮೊಟ್ಟೆ, ಅಡುಗೆ ಅನಿಲ ಸಿಲಿಂಡರ್ ಮತ್ತಿತರ ವಸ್ತುಗಳ ಬಿಲ್ ಪಾವತಿಯೂ ವಿಳಂಬವಾಗುತ್ತಿವೆ ಎಂದು ಹಲವು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಮಸ್ಯೆ ತೋಡಿಕೊಂಡರು.

ಕಾರ್ಯಕರ್ತೆಯರೇ ಹೆತ್ತರೆ: ‘ಕಾರ್ಯಕರ್ತೆಯರು ಅಥವಾ ಸಹಾಯಕಿಯರು ಹೆರಿಗೆಗೆ ಹೋದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮಾವಳಿ ಇದೆ. ಆದರೆ, ಪರ್ಯಾಯ ವ್ಯವಸ್ಥೆಗೆ ಅನುದಾನ ಇಲ್ಲ. ಇನ್ನೊಂದೆಡೆ ಆರು ತಿಂಗಳ ಹೆರಿಗೆ ರಜೆಯನ್ನೂ ಸರ್ಕಾರ ನಿಗದಿಗೊಳಿಸಿದೆ. ಆಗ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿ ಬಾಣಂತಿಯರಿಗೆ ಆಹಾರ ನೀಡುವವರು ಯಾರು’ ಎಂದು ಕಾರ್ಮಿಕ ಮುಖಂಡ ಹೊನ್ನಪ್ಪ ಮರೆಮ್ಮನವರ ಕೇಳಿತ್ತಾರೆ.

‘ಸರ್ಕಾರವು ಅಗತ್ಯ ಮೂಲಸೌಕರ್ಯ, ಗೌರವಧನ ಹೆಚ್ಚಳ, ಅಂಗನವಾಡಿಯ ಖಾತೆಗೆ ಮುಂಗಡ ಅನುದಾನ ಹಾಕುವ ಮೂಲಕ ಯೋಜನೆ ಜಾರಿ ಮಾಡಬೇಕು’ ಎಂಬುದು ಅವರ ಒತ್ತಾಯ.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ ಒಳಪಡುವವರು
ತಾಲ್ಲೂಕು ಗರ್ಭಿಣಿಯರು –ಬಾಣಂತಿಯರು
ಹಾನಗಲ್ –2,898 –2,557
ರಾಣೆಬೆನ್ನೂರು –3,273 –3,252
ಹಿರೇಕೆರೂರು –2,244 –2,240
ಸವಣೂರು –2,196 – 1,978
ಶಿಗ್ಗಾವಿ –2,407 –2207
ಬ್ಯಾಡಗಿ –1,400 –1250
ಹಾವೇರಿ –3,403 –3,115
ಜಿಲ್ಲೆಯಲ್ಲಿ –17,871 –16,599

ಏನೇನು ಆಹಾರ?
ಪ್ರತಿ ಫಲಾನುಭವಿಗೆ ₹ 21 ವೆಚ್ಚದಲ್ಲಿ ಮಧ್ಯಾಹ್ನ ಅನ್ನ –ಸಾಂಬಾರು, 200 ಮಿ.ಲೀ ಹಾಲು, ಒಂದು ಕೋಳಿ ಮೊಟ್ಟೆ ಹಾಗೂ ಶೇಂಗಾ ಚಿಕ್ಕಿ ನೀಡುವುದು. 100 ಐ.ಎಫ್.ಎ. ಮಾತ್ರೆ ಸೇವನೆ ಖಚಿತಪಡಿಸಿಕೊಳ್ಳುವುದು ಹಾಗೂ ಮೊಟ್ಟೆ ಸೇವಿಸದವರಿಗೆ 65ಗ್ರಾಂ ಮೊಳಕೆ ಭರಿಸಿದ ಹೆಸರು ಕಾಳು ನೀಡುವುದು

ಜಿಲ್ಲೆಯಲ್ಲಿ ಶೇ 65 ಯಶಸ್ಸು!
‘ಹಲವು ಸಮಸ್ಯೆಗಳಿವೆ. ಆದರೆ, ಜಿಲ್ಲೆಯಲ್ಲಿ ಶೇ 65ರಷ್ಟು ಯಶಸ್ಸು ಸಾಧಿಸಿದ್ದೇವೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎನ್‌.ಮಾಳಿಗೇರ. ‘8 ತಿಂಗಳ ಬಳಿಕ ಗರ್ಭಿಣಿಯರಿಗೆ ಹಾಗೂ ಒಂದೂವರೆ ತಿಂಗಳ ಒಳಗಿನ ಬಾಣಂತಿಯರಿಗೆ ರಿಯಾಯಿತಿ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT