ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್‌ ಜನರ ಜೀವನಾಡಿ ಆನಿಕೆರೆ

Last Updated 18 ನವೆಂಬರ್ 2017, 8:28 IST
ಅಕ್ಷರ ಗಾತ್ರ

ಹಾನಗಲ್‌: ಪಟ್ಟಣದ ಹೊರ ವಲಯದ ಆನಿಕೆರೆ ಹಾನಗಲ್‌ ಪಟ್ಟಣದ ಕುಡಿಯುವ ನೀರಿನ ಪ್ರಮುಖ ಮೂಲಗಳಲ್ಲೊಂದು. ಧರ್ಮಾ ಜಲಾಶಯದಿಂದ ನೀರೆತ್ತುವ ವ್ಯವಸ್ಥೆಯಡಿ ಕಾಲ–ಕಾಲಕ್ಕೆ ಮಾಡಲಾದ ಸುಧಾರಣೆಗಳ ಫಲವಾಗಿ ಇದೀಗ ಆ ಕೆರೆಯು ಮೈದುಂಬಿದೆ.

ಕೇವಲ ಕೃಷಿ ಬಳಕೆಗೆ ಸೀಮಿತವಾಗಿದ್ದ ಕೆರೆ ನೀರನ್ನು ಕುಡಿಯಲು ಬಳಸಲು ಸ್ಥಳೀಯ ಪುರಸಭೆಯು 12 ವರ್ಷಗಳ ಹಿಂದೆ ನಿರ್ಧರಿಸಿತ್ತು. ಈ ಸಂಬಂಧ 2005ರಲ್ಲಿ ಕೆರೆಯನ್ನು ಮಾರ್ಪಾಡು ಮಾಡಿತು. 2012ರಿಂದ ಕುಡಿಯುವ ಉದ್ದೇಶಕ್ಕಾಗಿ ಕಡ್ಡಾಯವಾಗಿ ನೀರು ಸಂಗ್ರಹಣೆಗೆ ಕ್ರಮ ಕೈಗೊಂಡಿತು.

ಅದಕ್ಕಾಗಿ ಪಟ್ಟಣಕ್ಕೆ ಹೊಂದಿಕೊಂಡು ಧರ್ಮಾ ನದಿಯಲ್ಲಿ ಚಿಕ್ಕ ಪ್ರಮಾಣದ ಬ್ಯಾರೇಜ್‌ ನಿರ್ಮಿಸಿ ಅಲ್ಲಿಂದ ಆನಿಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿತ್ತು. ಅಂದಾಜು ₹4 ಕೋಟಿ ವೆಚ್ಚದಲ್ಲಿ ಧರ್ಮಾ ನದಿಯ ನೀರು ಕೆರೆಗೆ ಹರಿಸಿ, ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ರವಾನಿಸಲಾಯಿತು. ಇದೀಗ ಶುದ್ಧೀಕರಣ ಘಟಕದಿಂದ ಪಟ್ಟಣದ ಬಡಾವಣೆಗಳಿಗೆ ಕುಡಿಯುವ ನೀರು ಹರಿಯುತ್ತಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಆದ ಮಳೆಯ ಅಭಾವದಿಂದ ಕೆರೆಯ ನೀರಿನ ಪ್ರಮಾಣ ಕುಸಿದಿರುವುದನ್ನು ಮನಗಂಡು ಕಳೆದ ಮೇ ತಿಂಗಳಲ್ಲಿ ₹75 ಲಕ್ಷ ವೆಚ್ಚದಲ್ಲಿ ಧರ್ಮಾ ನದಿಯ ನೀರು ಪಂಪ್‌ ಮಾಡಲು ಮತ್ತೊಂದು ಪೈಪ್‌ಲೈನ್‌ ಹಾಗೂ ಮೋಟಾರ್‌ ಅನ್ನು ಅಳವಡಿಸಲಾಗಿದೆ. ಇದೀಗ 75 ಎಚ್.ಪಿ ಸಾಮರ್ಥ್ಯದ ಎರಡು ಮೋಟಾರ್‌ಗಳಿಂದ ಪ್ರತಿ ಸೆಕೆಂಡ್‌ಗೆ 150 ಲೀಟರ್‌ ನೀರು ಕೆರೆ ಸೇರುತ್ತಿದೆ.

ಬೃಹತ್ ಕೆರೆ: 119 ಎಕರೆ ವಿಸ್ತೀರ್ಣದ ಆನಿಕೆರೆಯು 1,500 ದಶ ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಚಿಕ್ಕ ನೀರಾವರಿ ಇಲಾಖೆ ಸುಪರ್ದಿಯ ಈ ಕೆರೆ ಮೊದಲು ಸುತ್ತಲಿನ ತೋಟಗಾರಿಕೆ ಬೆಳೆಗಳಿಗೆ ನೀರುಣಿಸುತ್ತಿತ್ತು. ಆದರೆ, ಕುಡಿಯುವ ನೀರಿನ ಮೂಲವಾಗಿ ಬಳಸಲು ನಿರ್ಧರಿಸಿದ ಬಳಿಕ, ಕೆರೆಯ ಸುತ್ತಲೂ ಕಬ್ಬಿಣದ ಮೆಸ್‌(ಬೇಲಿ) ಅಳವಡಿಸಿ ಪುರಸಭೆಯಿಂದ ಕಾವಲುಗಾರನನ್ನು ನೇಮಿಸಲಾಗಿದೆ. ಜೊತೆಗೆ ಕೆರೆಯಲ್ಲಿ ಎಲ್ಲ ಬಗೆಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

‘ಪಟ್ಟಣಕ್ಕೆ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಗಾಗಿ 14 ಕಿ.ಮೀ ಅಂತರದ ಗೊಂದಿ ಭಾಗದಲ್ಲಿ ವರದಾ ನದಿಯಿಂದ ಆನಿಕೆರೆಗೆ ನೀರು ತುಂಬಿಸುವ ₹75 ಕೋಟಿ ಅಂದಾಜು ವೆಚ್ಚದ ಯೋಜನೆಗೆ ನಗರ ನೀರು ಸರಬರಾಜು(ಕೆಯುಡಬ್ಲ‌್ಯು ಆ್ಯಂಡ್‌ ಡಿಬಿ) ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹಾನಗಲ್ ಪುರಸಭೆ ಎಂಜಿನಿಯರ್‌ ನಾಗರಾಜ ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನ ಪ್ರಮಾಣ ತೃಪ್ತಿಕರವಾಗಿದ್ದರೂ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಪುರಸಭೆ ವಿಫಲವಾಗಿದೆ. 4 ದಿನಕ್ಕೊಮ್ಮೆ ನೀರು ಬೀಡುತ್ತಾರೆ. ಅದೂ ಸಾಕಾಗುವಷ್ಟು ಸಮಯ ಬಿಡುವುದಿಲ್ಲ. ಅಲ್ಲದೆ, ನೀರಿನ ಕರ ಹೆಚ್ಚಿಸಲಾಗಿದೆ’ ಎಂದು ಪಟ್ಟಣದ ನಿವಾಸಿ ಮಾರ್ತಾಂಡರಾವ್‌ ಪಾರಗಾವಕರ ದೂರುತ್ತಾರೆ.

‘ಆನಿಕೆರೆ ಸ್ವಚ್ಛತೆಯ ವಿಷಯದಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ. ಕೆರೆಯಲ್ಲಿ ತ್ಯಾಜ್ಯ ಎಸೆಯುವುದು ಸೇರಿದಂತೆ ನೀರು ಮಲೀನಗೊಳಿಸುವ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು’ ಎಂಬುದು ಸ್ಥಳೀಯ ನಿವಾಸಿ ಮಖಬೂಲ್‌ಅಹ್ಮದ್ ಹುಲಗೂರ ಒತ್ತಾಯ.
 

ಬಾಗಿನ ಸಂಭ್ರಮ
ಸತತ ಬರದಿಂದ ಬರಿದಾಗಿದ್ದ ಆನಿಕೆರೆ ಈ ಬಾರಿ ತುಂಬಿರುವುದು ಪಟ್ಟಣದ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ, ತುಂಬಿದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಇದೇ 18 ರಂದು ಶನಿವಾರ ಬೆಳಿಗ್ಗೆ ಪುರಸಭೆ ಇಟ್ಟುಕೊಂಡಿದೆ. ಶಾಸಕ ಮನೋಹರ ತಹಸೀಲ್ದಾರ್‌, ಪುರಸಭೆ ಅಧ್ಯಕ್ಷೆ ಹಸಿನಾಭಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ ಸೇರಿದಂತೆ ಸದಸ್ಯರು ಮತ್ತು ಗಣ್ಯರು ಹಾಜರಿರುತ್ತಾರೆ.

ಅಂಕಿ–ಅಂಶ:
*ಹಾನಗಲ್‌ ಪಟ್ಟಣದ ಜನಸಂಖ್ಯೆ–30 ಸಾವಿರ
*4 ಸಾವಿರ ನಲ್ಲಿಗಳು
*ಪ್ರತಿದಿನ 40 ಲಕ್ಷ ಲೀಟರ್‌ ನಲ್ಲಿ ಮೂಲಕ ನೀರು ಪೂರೈಕೆ
*6 ಜನ ವಾಟರ್‌ಮನ್‌

* * 

ಕಳೆದ ಎರಡು ವರ್ಷದಿಂದ ಕೆರೆ ಪೂರ್ಣ ತುಂಬಿಸಲು ಸಾಧ್ಯವಾಗಿರಲಿಲ್ಲ. ಐದು ತಿಂಗಳ ಹಿಂದೆ ಅಳವಡಿಸಲಾದ ಮತ್ತೊಂದು ಮೋಟಾರ್‌ನಿಂದಾಗಿ ಕೆರೆ ಈ ಬಾರಿ ಸಂಪೂರ್ಣ ಭರ್ತಿಯಾಗಿದೆ
ಗಣೇಶ ಮೂಡ್ಲಿಯವರ
ಪುರಸಭೆ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT