ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ 5, 6ನೇ ಘಟಕ ಸ್ಥಾಪನೆಗೆ ಸಿದ್ಧತೆ: ಸಂಜಯ ಕುಮಾರ್‌

Last Updated 18 ನವೆಂಬರ್ 2017, 8:42 IST
ಅಕ್ಷರ ಗಾತ್ರ

ಕಾರವಾರ: ಕೈಗಾ ಅಣು ವಿದ್ಯುತ್‌ ಸ್ಥಾವರದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆಗೆ ಅಗತ್ಯ ಸಿದ್ಧತೆ ನಡೆದಿದೆ ಎಂದು ಕೈಗಾ ಅಣು ಸ್ಥಾವರದ ಪ್ರಭಾರ ಸ್ಥಾನಿಕ ನಿರ್ದೇಶಕ ಸಂಜಯಕುಮಾರ್‌ ಶುಕ್ರವಾರ ತಿಳಿಸಿದರು.

‘ದೇಶದಾದ್ಯಂತ 10 ಅಣು ವಿದ್ಯುತ್‌ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಕೈಗಾದಲ್ಲಿ ತಲಾ 700 ಮೆಗಾವಾಟ್‌ ಸಾಮರ್ಥ್ಯದ ಎರಡು ಘಟಕಗಳು ನಿರ್ಮಾಣವಾಗಲಿವೆ. ಇದಕ್ಕೆ ಪೂರಕವಾಗಿ ಕಳೆದ ಮೂರು ವರ್ಷಗಳಿಂದ ಮೆಕಾನ್‌ ಎಂಬ ಸಂಸ್ಥೆ ಕೈಗಾದಲ್ಲಿ ಸಮೀಕ್ಷೆ ನಡೆಸಿದ್ದು, ಜನವರಿಯಲ್ಲಿ ಪರಿಸರ ಅಧ್ಯಯನ ಕುರಿತ ವರದಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆಗೆ ಸಲ್ಲಿಸಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ವರದಿ ಸಲ್ಲಿಸಿದ ನಂತರ ಸಾರ್ವಜನಿಕ ಅಹವಾಲು ಸಭೆ ನಡೆಸಲಾಗುವುದು. ಈ ವರದಿಯನ್ನು ಭಾರತೀಯ ಅಣು ವಿದ್ಯುತ್ ನಿಗಮವು (ಎನ್‌ಪಿಸಿಐಎಲ್‌) ಕೇಂದ್ರ ಪರಿಸರ ಸಚಿವಾಲಯ ಹಾಗೂ ಅರಣ್ಯ ಸಚಿವಾಲಯಕ್ಕೆ ಅನುಮತಿಗಾಗಿ ಕಳುಹಿಸಲಿದೆ’ ಎಂದು ಹೇಳಿದರು.

ಹೊಸದಾಗಿ ಭೂಸ್ವಾಧೀನ ಇಲ್ಲ: ಆರು ಘಟಕಗಳಿಗೆ ಬೇಕಾದಷ್ಟು ಭೂಮಿಯನ್ನು ಮೊದಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೀಗಾಗಿ ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ. ವಿದ್ಯುತ್‌ ಮಾರ್ಗಕ್ಕೂ ಭೂಮಿಯ ಅಗತ್ಯವಿಲ್ಲ. ಇರುವ ಮಾರ್ಗವನ್ನೇ ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಘಟಕಗಳು ಸುರಕ್ಷಿತ: ಭಾರತದಲ್ಲಿ ಅಣು ವಿದ್ಯುತ್‌ ಸ್ಥಾವರ ಘಟಕಗಳು ಅತ್ಯಂತ ಸುರಕ್ಷಿತವಾಗಿವೆ. ಕಲ್ಲಿದ್ದಲು ಆಧಾರಿತ ವಿದ್ಯುತ್‌ ಘಟಕಗಳಿಗೆ ಹೆಚ್ಚು ಭವಿಷ್ಯವಿಲ್ಲ. ಆದರೆ ಯುರೇನಿಯಂ ಮತ್ತು ಥೋರಿಯಂ ಸಾಕಷ್ಟು ಲಭ್ಯವಿರುವ ಕಾರಣ ಅಣು ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು.

553 ದಿನಗಳ ನಿರಂತರ ಉತ್ಪಾದನೆ
‘ಕೈಗಾ ಅಣು ಸ್ಥಾವರದಲ್ಲಿನ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 1ನೇ ಘಟಕ 553 ದಿನಗಳಿಂದ ನಿರಂತರವಾಗಿ ವಿದ್ಯುತ್‌ ಉತ್ಪಾದಿಸುತ್ತಿದೆ. 2, 3 ಹಾಗೂ 4ನೇ ಘಟಕಗಳು ಕ್ರಮವಾಗಿ 529, 409 ಹಾಗೂ 541 ದಿನಗಳನ್ನು ಪೂರೈಸಿವೆ. ರಾಜಸ್ಥಾನದಲ್ಲಿನ ಅಣು ವಿದ್ಯುತ್‌ ಘಟಕವೊಂದು 700 ದಿನಗಳನ್ನು ಪೂರೈಸಿ, ಅತ್ಯಂತ ಹೆಚ್ಚು ದಿನಗಳು ಕಾರ್ಯನಿರ್ವಹಿಸಿದ ಸಾಧನೆಯನ್ನು ಈ ಹಿಂದೆ ಮಾಡಿದೆ’ ಎಂದು ಸಂಜಯಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT