ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಹಂದಿ ಹಾವಳಿಯಿಂದ ಮುಕ್ತ

Last Updated 18 ನವೆಂಬರ್ 2017, 9:01 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ವಿಪರೀತ ತ್ಯಾಜ್ಯ ಹಾಗೂ ಕಲ್ಮಶ ವಾತಾವರಣ ಪೋಷಿಸಿದ ಹಂದಿಗಳನ್ನು ಎತ್ತಂಗಡಿ ಮಾಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಕಳೆದ ಅಕ್ಟೋಬರ್‌ 30ರಿಂದ ಹಂದಿಗಳ ಎತ್ತಂಗಡಿ ಕಾರ್ಯ ನಿರಂತರ ನಡೆದಿದೆ. ಇಲ್ಲಿಯವರೆಗೂ 3,808 ಹಂದಿಗಳನ್ನು ಬೇರೆ ಕಡೆಗೆ ಸಾಗಿಸಲಾಗಿದೆ.

ಹುಬ್ಬಳ್ಳಿ ಹಾಗೂ ತುಮಕೂರು ಜಿಲ್ಲೆಗಳಿಂದ ಹಂದಿ ಹಿಡಿದೊಯ್ಯುವ ತಂಡಗಳು ಬರುತ್ತಿದ್ದು, ಪ್ರತಿದಿನ ನೂರಾರು ಹಂದಿಗಳನ್ನು ಕ್ಯಾಂಟರ್‌ನಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಹಂದಿ ಹಿಡಿಯುವುದಕ್ಕೆ ನಗರಸಭೆಯಿಂದ ಯಾವುದೇ ಹಣ ಕೊಡುತ್ತಿಲ್ಲ. ಮಾಂಸ ಉದ್ದೇಶಕ್ಕಾಗಿ ಬಳಸುವ ಹಂದಿಗಳು ಉಚಿತವಾಗಿ ಸಿಗುತ್ತಿವೆ ಎನ್ನುವ ಕಾರಣಕ್ಕಾಗಿ ಹಂದಿಗಳ ಭೇಟೆಯನ್ನು ತಂಡವು ಉತ್ಸಾಹದಿಂದ ಮುಂದುವರಿಸಿದೆ.

ಸಣ್ಣ ಹಂದಿಗಳನ್ನು ಹಗ್ಗ ಹಾಕಿ ಹಿಡಿಯಲಾಗುತ್ತಿದೆ. ದೊಡ್ಡ ಹಂದಿಗಳನ್ನು ಬಲೆಬೀಸಿ ಹಿಡಿದು ವಾಹನಕ್ಕೆ ತುಂಬಲಾಗುತ್ತದೆ. ಹಂದಿಗಳ ಅರಚಾಟ ವಿಪರೀತ. ವಾಹನದಲ್ಲಿ ತುಂಬಿಸಿದ ಬಳಿಕವಷ್ಟೆ ಹಂದಿಗಳ ಅಂಕಿ–ಅಂಶಗಳನ್ನು ನಗರಸಭೆ ಸಿಬ್ಬಂದಿ ದಾಖಲಿಸಿ, ಅವುಗಳನ್ನು ತೆಗೆದುಕೊಂಡು ಹೋಗಲು ಹಸಿರುನಿಶಾನೆ ತೋರಿಸುತ್ತಿದ್ದಾರೆ.

ಹಂದಿಗಳನ್ನು ಹಿಡಿಯುವುದು ಹಾಗೂ ವಾಹನಗಳಲ್ಲಿ ಹಂದಿಗಳನ್ನು ತೆಗೆದುಕೊಂಡು ಹೋಗುವುದನ್ನು ನಗರಸಭೆ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡಿದ್ದಾರೆ. ಛಾಯಾಚಿತ್ರ, ವಿಡಿಯೋ ಚಿಕ್ರೀಕರಣ ಹಾಗೂ ಅಂಕಿ–ಅಂಶವನ್ನು ದಾಖಲು ಮಾಡಿಕೊಳ್ಳಲಾಗಿದೆ.

2012ರ ಜಾನುವಾರು ಗಣತಿ ಪ್ರಕಾರ ನಗರದಲ್ಲಿ 5,630 ಹಂದಿಗಳಿದ್ದವು. ಕಳೆದ ಐದು ವರ್ಷಗಳಲ್ಲಿ ಹಂದಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಹೀಗಾಗಿ ಹಂದಿಗಳನ್ನು ಹಿಡಿಯುವ ಕೆಲಸ ಇನ್ನಷ್ಟು ದಿನಗಳು ಮುಂದುವರಿಯಲಿದೆ.

ಮಾಲೀಕರ ಸಹಕಾರ: ಹಂದಿಗಳ ಎತ್ತಂಗಡಿ ಆರಂಭಿಸುವ ಪೂರ್ವ ಹಂದಿ ಸಾಕಣೆದಾರರಿಗೆ ಅನೇಕ ಸಲ ಸೂಚನೆ ನೀಡಲಾಗಿತ್ತು. ಮೂರು ತಿಂಗಳು ಗಡುವು ನೀಡಲಾಗಿತ್ತು. ಕೆಲವಷ್ಟು ಹಂದಿಗಳನ್ನು ಅವರೇ ಬೇರೆ ಕಡೆಗೆ ಸ್ಥಳಾಂತರ ಮಾಡಿಕೊಂಡಿದ್ದಾರೆ. ಆದರೆ ನಗರವನ್ನು ಸಂಪೂರ್ಣ ಹಂದಿ ಮುಕ್ತ ಮಾಡಬೇಕಿದ್ದು, ನಗರಸಭೆಯಿಂದಲೇ ಹಂದಿಗಳನ್ನು ಹಿಡಿಸುವ ಕೆಲಸ ಆರಂಭಿಸಲಾಗಿದೆ. ಇದಕ್ಕೆ ಹಂದಿಗಳ ಮಾಲೀಕರು ಸಹಕಾರ ನೀಡುತ್ತಿದ್ದಾರೆ.

ತುಮಕೂರು ಮತ್ತು ಹುಬ್ಬಳ್ಳಿಗಳಿಂದ ಕ್ಯಾಂಟರ್‌ ವಾಹನಗಳನ್ನು ತಂದು ಹಂದಿಗಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ ಯಾವುದೇ ಹಣವನ್ನು ನಗರಸಭೆಯಿಂದ ಕೊಡುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

5,630 ಹಂದಿಗಳು
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯು 2012 ರಲ್ಲಿ ನಡೆಸಿದ ಜಾನುವಾರು ಗಣತಿ ಪ್ರಕಾರ ರಾಯಚೂರು ನಗರದಲ್ಲಿ 5,630 ಹಂದಿಗಳಿವೆ. ಜಿಲ್ಲೆಯಲ್ಲಿ 14,072 ಹಂದಿಗಳಿವೆ. ಒಟ್ಟು ಹಂದಿಗಳಲ್ಲಿ ಶೇ 40 ರಷ್ಟು ರಾಯಚೂರು ನಗರವೊಂದರಲ್ಲೆ ಬಿಡುಬಿಟ್ಟಿವೆ. ಇಂದಿರಾನಗರ, ಕೆಇಬಿ ಕಾಲೋನಿ, ಡ್ಯಾಡಿ ಕಾಲೋನಿ, ಎಲ್‌ಬಿಎಸ್‌ ನಗರ ಹಾಗೂ ಜಹೀರಾಬಾದ್‌ ಕಾಲೋನಿಗಳಲ್ಲಿ ಸದ್ಹಂಯ ದಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.

10 ಎಕರೆ ಭೂಮಿ
ಹಂದಿಗಳ ಸಾಕಾಣಿಕೆಯನ್ನು ಉಪಜೀವನ ಮಾಡಿಕೊಂಡಿರುವ ನೂರಾರು ಕುಟುಂಬಗಳು ನಗರದಲ್ಲಿವೆ. ಪ್ರತ್ಯೇಕ ಹಂದಿದೊಡ್ಡಿ ಮಾಡಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಅವರಿಗೆ ಜಾಗದ ಅನುಕೂಲ ಮಾಡಿಕೊಡುವುದು ಮಾನವೀಯತೆ ಪ್ರಶ್ನೆಯಾಗುತ್ತದೆ. ನಗರಸಭೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಹಂದಿ ಸಾಕಾಣಿಕೆಗೆ ಅನುಕೂಲ ಮಾಡಿಕೊಡಲು 10 ಎಕರೆ ಭೂಮಿ ಒದಗಿಸಲು ಪ್ರಸ್ತಾಪವಿದೆ ಎಂದು ನಗರಸಭೆ ಅಧ್ಯಕ್ಷ ಜಯಣ್ಣ ಹೇಳಿದರು.

* * 

ಹಂದಿಗಳಿಂದ ಜನರಿಗೆ ಮೆದುಳು ಜ್ವರ ಹರಡುವ ಮುನ್ಸೂಚನೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ನೀಡಿದೆ. ಹಂದಿ ಮುಕ್ತ ಮಾಡುವುದು ಅನಿವಾರ್ಯ.
ಎಚ್‌.ವಿ.ದರ್ಶನ್‌
ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT