ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ, ರಾಷ್ಟ್ರಪ್ರೇಮ ಸಾರಿದ ಜೋಡಿ...

Last Updated 18 ನವೆಂಬರ್ 2017, 9:22 IST
ಅಕ್ಷರ ಗಾತ್ರ

ಭದ್ರಾವತಿ: ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಮಹಾಪುರುಷರ ಕುರಿತು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುವುದು ಸುಲಭ ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿದಿನ ಚಿತ್ರಗಳ ಮೂಲಕ ಇದನ್ನು ನೆನಪು ಮಾಡಿಕೊಡುವ ವಿಶಿಷ್ಟ ಪ್ರಯತ್ನ ನಡೆಸಿದ್ದಾರೆ ಸ್ನೇಹಿತರಿಬ್ಬರು.

ಹೌದು! ಇಲ್ಲಿನ ನಗರಸಾರಿಗೆ ಬಸ್ಸಿನ ಚಾಲಕ ಪಿ.ಪ್ರಕಾಶ್, ನಿರ್ವಾಹಕ ಟಿ.ಎನ್.ರಮೇಶ್ ಅವರ ವಿನೂತನ ಪ್ರಯೋಗ ದಿನನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವ ನಾಗರಿಕರ ಮನಗೆದ್ದಿದೆ.

ನಗರ ಸಾರಿಗೆ ಎಂದರೆ ಹಾಡು, ವಿಡಿಯೋಗಳ ಹಾವಳಿಯೇ ಹೆಚ್ಚಿರುತ್ತದೆ ಎಂಬ ಭಾವನೆ ಇರುವ ಇಂದಿನ ದಿನದಲ್ಲಿ ಎಲ್ಲರ ಮನಮುಟ್ಟವ ಕೆಲಸವನ್ನು ಈ ಜೋಡಿ ಸ್ನೇಹಿತರು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹಾಗಾದರೆ ಇವರು ಮಾಡಿರುವ ಕೆಲಸ ಆದರೂ ಏನೂ ಎಂದು ಗಮನಿಸಿದರೆ ಬಸ್ಸಿನ ಒಳಭಾಗದ ನಾಲ್ಕು ಭಾಗದಲ್ಲೂ ರಾಜ್ಯ, ರಾಷ್ಟ್ರದ ಯಶಸ್ಸಿಗೆ ವಿವಿಧ ಕ್ಷೇತ್ರದಲ್ಲಿ ದುಡಿದು ಗಣನೀಯ ಸಾಧನೆ ಮಾಡಿದವರ ಭಾವಚಿತ್ರ, ವಿವಿಧ ಪ್ರೇಕ್ಷಣೀಯ ಸ್ಥಳಗಳ ಚಿತ್ರ ಅದರೊಂದಿಗೆ ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರ ಸೈನಿಕರ ಸ್ಮರಣೆಯ ಚಿತ್ರದರ್ಶಿನಿ.

ಈ ಎಲ್ಲದರ ಅಚ್ಚುಕಟ್ಟಿನ ನಿರ್ವಹಣೆ, ಅಳವಡಿಕೆಗೆ ಸಹಸ್ರಾರು ರೂಪಾಯಿ ವೆಚ್ಚ ಮಾಡಿರುವ ಈ ಜೋಡಿಗೆ ತಮ್ಮ ಆಸಕ್ತಿಯ ಕುರಿತು ಪ್ರಶ್ನಿಸಿದರೆ ಉತ್ತರಕ್ಕಿಂತ ಜಾಸ್ತಿ ಮಂದಹಾಸದ ಸಂಕೋಚದ ಮೌನ.

ಆದರೂ ‘ಪ್ರಜಾವಾಣಿ’ ಇವರ ಪ್ರಯತ್ನದ ಹಿಂದಿನ ಆಸಕ್ತಿಯನ್ನು ಕೇಳಿದಾಗ ಹೇಳಿದ್ದು ‘ಇಲ್ಲಿರುವ ಮಹಾನ್ ವ್ಯಕ್ತಿಗಳ ರೀತಿಯಲ್ಲಿ ನಾವಾಗಲಿಲ್ಲ ಬದಲಾಗಿ ಬಸ್ಸಿನಲ್ಲಿ ಸಾಗುವ ಯುವಕರು, ವಿದ್ಯಾರ್ಥಿಗಳಿಗೆ ಈ ಚಿತ್ರಗಳು ಸ್ಪೂರ್ತಿ ನೀಡಲಿ ಎಂಬುದೇ ನಮ್ಮ ಸದಾಶಯ’ ಎಂದರು.

ನಗರಸಾರಿಗೆ ಆರಂಭವಾಗಿ ಏಳು ತಿಂಗಳು ಮುಗಿದಿದೆ. ನಾವಿಬ್ಬರು ಹೊಸ ಆಲೋಚನೆ ಜತೆಗೆ ಈ ಪ್ರದರ್ಶನ ಮಾಡಿದ್ದೇವೆ. ಇದಕ್ಕೆ ನಮ್ಮ ಕೆಲವು ಸ್ನೇಹಿತರು, ಸಿಬ್ಬಂದಿಗಳು, ಪ್ರಯಾಣಿಕರು ಸಹ ಸಹಕಾರ ನೀಡಿದ್ದಾರೆ ಎಂದು ಸ್ಮರಿಸುತ್ತಾರೆ.

ಒಟ್ಟಿನಲ್ಲಿ ಸ್ವಚ್ಛತೆಯ ಜಪ ಜಪಿಸುತ್ತಿರುವ ಇಂದಿನ ದಿನದಲ್ಲಿ ಅದರೊಂದಿಗೆ ನಮ್ಮ ರಾಷ್ಟ್ರ, ರಾಜ್ಯ ಪ್ರೇಮದ ಪ್ರತೀಕವಾದ ವ್ಯಕ್ತಿಗಳನ್ನು ನೆನಪಿಸುವ ಪ್ರಯತ್ನ ಸಹ ನಮ್ಮದಾಗಿದೆ ಎಂಬ ಜವಾಬ್ದಾರಿಯನ್ನು ಈ ಜೋಡಿ ಸಾರುವ ಮೂಲಕ ಜನ ಪ್ರೀತಿ ಸಂಪಾದಿಸಿದ್ದಾರೆ.

* * 

ಪ್ರಯತ್ನ ಶ್ಲಾಘನೀಯ...
‘ಸ್ವಾರ್ಥದ ಬದುಕು ನಡೆಸಿರುವ ಇಂದಿನ ದಿನದಲ್ಲಿ ಸರ್ಕಾರಿ ಉದ್ಯೋಗದ ಜತೆಗೆ ತಾವು ನಿರ್ವಹಿಸುವ ಕೆಲಸ ಜಾಗದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿರುವುದು ಶ್ಲಾಘನೀಯ’
ವಿದ್ಯಾ ವಿಠಲ್ ಬೇಕಲ್, ಹೊಸಮನೆ, ಭದ್ರಾವತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT