ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಖಾಸಗಿ ಆಸ್ಪತ್ರೆ ಪುನರಾರಂಭ

Last Updated 18 ನವೆಂಬರ್ 2017, 9:31 IST
ಅಕ್ಷರ ಗಾತ್ರ

ತುಮಕೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ(ಕೆಪಿಎಂಇ) ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಅಂತ್ಯಗೊಂಡಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಪ್ರಯೋಗಾಲಯಗಳಲ್ಲಿ ವೈದ್ಯಕೀಯ ಸೇವೆ ಎಂದಿನಂತೆ ಸೇವೆ ಪುನರಾಂಭವಾಗಲಿದೆ.

ಬೆಳಿಗ್ಗೆ 9 ಗಂಟೆಯಿಂದ ಸೇವೆ ಪ್ರಾರಂಭವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸುರೇಶ್‌ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ವೈದ್ಯರ ಹೋರಾಟಕ್ಕೆ ಜಿಲ್ಲಾಡಳಿತ, ಜಿಲ್ಲಾ ಆಸ್ಪತ್ರೆ, ಸಾರ್ವಜನಿಕರು ನೀಡಿದ ಸಹಕಾರಕ್ಕೆ ಸಂಘವು ಕೃತಜ್ಞತೆ ಸಲ್ಲಿಸುತ್ತದೆ’ ಎಂದು ಹೇಳಿದರು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಲ್ಕು ದಿನಗಳಿಂದ ಬಾಗಿಲು ಮುಚ್ಚಿದ್ದ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲವು ಶುಕ್ರವಾರ ಬೆಳಿಗ್ಗೆ ಸ್ವಲ್ಪ ಹೊತ್ತು ತೆರೆದು ಬಳಿಕ ಮುಚ್ಚಿದವು.

ಜಿಲ್ಲಾಧಿಕಾರಿಯವರ ಮನವಿ ಮೇರೆಗೆ ಡಯಾಲಿಸಿಸ್ ಸೇವೆ ಶುಕ್ರವಾರ ಪುನಃ ಪ್ರಾರಂಭಿಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಒಪ್ಪಿದ್ದರಿಂದ ಶುಕ್ರವಾರ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಮಾತ್ರ ಕಲ್ಪಿಸಲಾಗಿತ್ತು.

ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಕ್ಕೆ ಹೋಲಿಸಿದರೆ ಶುಕ್ರವಾರ ರೋಗಿಗಳ ಸಂಖ್ಯೆ ಕಡಿಮೆ ಇದ್ದುದು ಕಂಡು ಬಂದಿತು. ಆಯಾ ವಿಭಾಗಗಳ ಮುಂದೆ ರೋಗಿಗಳು ಹಾಗೂ ಅವರ ಸಂಬಂಧಿಕರು ಎಂದಿನಂತೆಯೇ ಚೀಟಿ ಹಿಡಿದು ನಿಂತಿದ್ದರೂ ಜನಸಂದಣಿ ಕಡಿಮೆ ಇತ್ತು. ಆಸ್ಪತ್ರೆಯ ಒಳಗಡೆ ಇರುವ ಜನತಾ ಬಜಾರ್ ಔಷಧಿ ಮಳಿಗೆ ಹಾಗೂ ಆಸ್ಪತ್ರೆ ಆವರಣದಲ್ಲಿನ ಜನಔಷಧಿ ಮಳಿಗೆಯಲ್ಲಿ ಔಷಧಿ ಖರೀದಿಸುವವರು ಕಡಿಮೆ ಇದ್ದರು.

‘ಆಸ್ಪತ್ರೆಯ 43 ವೈದ್ಯರೂ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಯಾರಿಗೂ ರಜೆ ನೀಡಿಲ್ಲ. ಈ ದಿನ ಚಿಕಿತ್ಸೆ ಬಂದ ರೋಗಿಗಳ ಸಂಖ್ಯೆ ಕಡಿಮೆ’ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಟಿ.ಎ.ವೀರಭದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುವಾರ ಹೊರ ರೋಗಿಗಳ ವಿಭಾಗದಲ್ಲಿ 1400 ಮಂದಿ ಚಿಕಿತ್ಸೆ ಪಡೆದಿದ್ದರು. ಶುಕ್ರವಾರ 1,238 ಮಂದಿ ಚಿಕಿತ್ಸೆ ಪಡೆದಿದ್ದಾರೆ. 94 ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಹೆರಿಗೆ, 25 ಶಸ್ತ್ರ ಚಿಕಿತ್ಸೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಬಾಗಿಲು ತೆರೆಯದ ಆಸ್ಪತ್ರೆ: ನಗರದ ಪ್ರಮುಖ ರಸ್ತೆಯ ಆಸ್ಪತ್ರೆಗಳು, ಪ್ರಯೋಗಾಲಯಗಳು ಬಂದ್ ಆಗಿದ್ದವು. ಆಸ್ಪತ್ರೆ ತೆರೆಯಬಹುದು ಎಂದು ಬಂದಿದ್ದ ರೋಗಿಗಳು, ಸಂಬಂಧಿಕರನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆಸ್ಪತ್ರೆ ಬಂದ ಇರುವ ವಿಚಾರ ತಿಳಿಸಿ ಹೊರ ಕಳಿಸುತ್ತಿದ್ದುದು ಕಂಡು ಬಂದಿತು.

ಬೆಳಿಗ್ಗೆ ಆಸ್ಪತ್ರೆ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದರು. ಆದರೆ, ಇನ್ನೂ ಚಿಕಿತ್ಸಾ ಸೇವೆ ಪ್ರಾರಂಭಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ಪಡೆಯುವ ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಮಾತನಾಡಿದರು.

ಚಿಕಿತ್ಸೆಗೆ ಬರುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಕಲ್ಪಿಸಬೇಕು ಎಂದು ವೈದ್ಯರು, ಸಿಬ್ಬಂದಿಗೆ ತಿಳಿಸಿದರು. ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ಅವರು ಚಿಕಿತ್ಸಾ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.50ರಷ್ಟು ವ್ಯವಹಾರ ಕುಸಿತ:‘ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಮುಷ್ಕರ ನಡೆಸಿದ್ದರಿಂದ ಔಷಧಿ ಅಂಗಡಿಗಳ ದೈನಂದಿನ ವ್ಯಾಪಾರದಲ್ಲಿ ಶೇ 50ರಷ್ಟು ಕಡಿಮೆಯಾಗಿದೆ’ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ ಜವಾಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಜಾರಿಗೊಳಿಸುತ್ತಿರುವ ಮಸೂದೆ ಜನಪರವಾಗಿರುವುದರಿಂದ ಸರ್ಕಾರ ನಿಲುವಿಗೆ ಸಂಘದ ಬೆಂಬಲವಿದೆ. ಅದೇ ರೀತಿ ಖಾಸಗಿ ವೈದ್ಯರ ಬೇಡಿಕೆಗಳ ಬಗ್ಗೆಯೂ ನಮ್ಮ ಸಹಾನುಭೂತಿ ಇದೆ. ಈ ವೈದ್ಯರ ಹಿತದೃಷ್ಟಿಯಿಂದ ಕೆಲ ಮಾರ್ಪಾಡು ಮಾಡಿ ಸರ್ಕಾರಿ ಜಾರಿಗೊಳಿಸಬೇಕು ಎಂದು ಹೇಳಿದರು.

ಪ್ರಯೋಗ ಶಾಲಾ ತಂತ್ರಜ್ಞರ ಬೆಂಬಲ ಖಾಸಗಿ ವೈದ್ಯರ ಮುಷ್ಕರಕ್ಕೆ ಪ್ರಯೋಗ ಶಾಲಾ ತಂತ್ರಜ್ಞರು ಶುಕ್ರವಾರ ಬೆಂಬಲಿಸಿದರು. ಮೆಡಿಕಲ್ ಲ್ಯಾಬರೋಟರಿ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಯೋಗ ಶಾಲಾ ತಂತ್ರಜ್ಞರು, ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಶುಶ್ರೂಷಕರು, ನೌಕರರಿಗೆ ಬಹಳ ತೊಂದರೆಯಾಗುತ್ತಿದೆ ಎಂದರು.

ಸರ್ಕಾರ ಕೆಪಿಎಂಇ ಮಸೂದೆ ಜಾರಿಗೊಳಿಸಿದರೆ ಖಾಸಗಿ ಆಸ್ಪತ್ರೆಗಳ ನಿರ್ವಹಣೆಗೆ ತೊಂದರೆಯಾಗಲಿದೆ. ನಗರರದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿರುವ 1500ಕ್ಕೂ ಹೆಚ್ಚಿನ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಕುಟುಂಬ ಬೀದಿ ಪಾಲಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಿತದೃಷ್ಟಿಯಿಂದ ಸರ್ಕಾರ ಮಸೂದೆಯಲ್ಲಿ ಕೆಲ ತಿದ್ದುಪಡಿ ಮಾಡಬೇಕು ಎಂದು ಮನವಿ ಮಾಡಿದರು.

ಅಸೋಸಿಯೇಷನ್ ಅಧ್ಯಕ್ಷ ಬೆಳ್ಳಿ ಲೋಕೇಶ್, ಗೌರವ ಅಧ್ಯಕ್ಷ ಕೆ.ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪವನ್‌ಕುಮಾರ್, ಖಜಾಂಚಿ ಕೆ.ಆರ್. ಮಹೇಶ್, ಎಸ್.ಎನ್.ರಾಮು, ಎನ್.ಎಸ್.ಲೋಕೇಶ್, ಪ್ರಯೋಗಶಾಲಾ ತಂತ್ರಜ್ಞರಿದ್ದರು.

ಶೇ 50ರಷ್ಟು ವ್ಯವಹಾರ ಕುಸಿತ
‘ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಮುಷ್ಕರ ನಡೆಸಿದ್ದರಿಂದ ಔಷಧಿ ಅಂಗಡಿಗಳ ದೈನಂದಿನ ವ್ಯಾಪಾರದಲ್ಲಿ ಶೇ 50ರಷ್ಟು ಕಡಿಮೆಯಾಗಿದೆ’ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ ಜವಾಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಜಾರಿಗೊಳಿಸುತ್ತಿರುವ ಮಸೂದೆ ಜನಪರವಾಗಿರುವುದರಿಂದ ಸರ್ಕಾರ ನಿಲುವಿಗೆ ಸಂಘದ ಬೆಂಬಲವಿದೆ. ಅದೇ ರೀತಿ ಖಾಸಗಿ ವೈದ್ಯರ ಬೇಡಿಕೆಗಳ ಬಗ್ಗೆಯೂ ನಮ್ಮ ಸಹಾನುಭೂತಿ ಇದೆ. ಈ ವೈದ್ಯರ ಹಿತದೃಷ್ಟಿಯಿಂದ ಕೆಲ ಮಾರ್ಪಾಡು ಮಾಡಿ ಸರ್ಕಾರಿ ಜಾರಿಗೊಳಿಸಬೇಕು ಎಂದು ಹೇಳಿದರು.

ಮಸೂದೆ ಬೆಂಬಲಿಸಿ ಮನವಿ ಸಲ್ಲಿಕೆ
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ) ಜನಪರವಾಗಿದ್ದು, ತಕ್ಷಣ ಜಾರಿಗೊಳಿಸಬೇಕು ಎಂದು ಮಧುಗಿರಿಯಲ್ಲಿ ತಾಲ್ಲೂಕಿನ ಜಯ ಕರ್ನಾಟಕ ಸಂಘಟನೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಪ್ರಗತಿಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಮಧುಗಿರಿಯಲ್ಲಿ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘಟನೆಯ ಅಧ್ಯಕ್ಷ ಆರ್. ಚಂದನ್, ಪದಾಧಿಕಾರಿ ಆನಂದ್, ಮಿಲ್ ರಾಜಣ್ಣ, ರಾಘವೇಂದ್ರ, ಹರೀಶ್, ಚಿಕ್ಕ ಕಾಮಯ್ಯ, ಶಿವಕುಮಾರ್, ಪವನ್‌ಕುಮಾರ್, ಕಾಂತರಾಜು, ರವಿ,ಸೂರಿ, ದೇವರಾಜು ಇದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ನೆಹರೂ ವೃತ್ತದಿಂದ ತಾಲ್ಲೂಕು ಕಚೇರಿಯವರೆಗೆ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿ ನಡೆಸಿದರು. ಖಾಸಗಿ ವೈದ್ಯರ ಒತ್ತಡಕ್ಕೆ ಮಣಿಯದೇ ಮಸೂದೆ ಜಾರಿಗೊಳಿಸಬೇಕು ಎಂದು ಒತ್ತಾಯ ಮಾಡಿದರು.

ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ತಾಲ್ಲೂಕು ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ, ಕುಂಚಾಕುರ ಕಲಾ ಸಂಘದ್ಷಧ್ಯಕ್ಷ ಸಿ.ಎಚ್.ಗಂಗಾಧರ್ ಮಗ್ಗದಮನೆ ನೆರಳು ಸಂಘಟನೆಯ ಮೊಹಮದ್ ಹುಸೇನ್,ಲಕ್ಷಮೀಕಾಂತ್,ಪ್ರವೀಣ್ ಇದ್ದರು.

ವೈದ್ಯರಿಂದಲೂ ಪ್ರತಿಭಟನೆ: 4 ದಿನಗಳಿಂದ ಆಸ್ಪತ್ರೆ ಬಂದ್ ಮಾಡಿದ್ದ ಖಾಸಗಿ ವೈದ್ಯರು ಶುಕ್ರವಾರ ಚಿಕ್ಕನಾಯಕನಹಳ್ಳಿಯಲ್ಲಿ ಪ್ರತಿಭಟನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT