ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಲಕ್ಷ ದೀಪದಲ್ಲಿ ಬೆಳಗುವ ಎಡೆಯೂರು

Last Updated 18 ನವೆಂಬರ್ 2017, 9:37 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಎಡೆಯೂರಿನ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಜರುಗುವ ಲಕ್ಷ ದೀಪೋತ್ಸವ ನಾಡಿನ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಂಭ್ರಮ ಎಡೆಯೂರಿನಲ್ಲಿ ಶನಿವಾರ (ನ.18) ಜರುಗಲಿದೆ. ರಾಜ್ಯದ ನಾನಾ ಭಾಗಗಳ ಭಕ್ತರು ಈ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಬಂದಿದ್ದಾರೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ದೀಪೋತ್ಸವ ಉದ್ಘಾಟಿಸುವರು. ಸಿದ್ಧಲಿಂಗೇಶ್ವರಸ್ವಾಮಿ ಹವ್ಯಾಸಿ ಕಲಾ ಸಂಘ ಮತ್ತು ರಾಜ್ಯ ವಿಶ್ವ ಕರ್ಮ ಸಮಾಜದ ಜಿಲ್ಲಾ ನಿರ್ದೇಶಕ ಕೋದಂಡರಾಮಾಚಾರ್ ಅವರಿಂದ ಹಗಲು ಮತ್ತು ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ದೀಪೋತ್ಸವದ ಹಾದಿ: ಶಾಸಕ ಡಿ.ನಾಗರಾಜಯ್ಯ 1985 -86ರಲ್ಲಿ (ಆಗ ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರ) ಅಂದಿನ ದೇವಾಲಯ ಸಮಿತಿಯ ಆಡಳಿತಾಧಿಕಾರಿ ಮಾಲಿ ಪಾಟೀಲ್ ಬಸವರಾಜಪ್ಪ, ಜಿಲ್ಲಾಧಿಕಾರಿ ಎ.ಪಿ.ಜೋಷಿ ಅವರ ಜತೆ ಚರ್ಚಿಸಿ ಲಕ್ಷ ದೀಪೋತ್ಸವ ಆಚರಣೆಗೆ ಮುನ್ನುಡಿ ಬರೆದರು. ಗದಗ ಡಂಬಳ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಬೆಂಬಲವಾಗಿ ನಿಂತರು. ಈಗ ಲಕ್ಷಾಂತರ ಭಕ್ತರು ಕುಟುಂಬದೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ.

ಕೊಪ್ಪಳದ ಕೆಂಡದ ಷಣ್ಮುಖಪ್ಪ ಅವರು ಪ್ರತಿ ವರ್ಷ 2 ಲಕ್ಷ ದೀಪದ ಬತ್ತಿಗಳನ್ನು ದಾನ ನೀಡುತ್ತಿದ್ದಾರೆ. ಎಣ್ಣೆಯನ್ನು ಸಿದ್ದಬಸಪ್ಪ ಶೆಟ್ಟರ ವಂಶಜರು ನೀಡುತ್ತಿದ್ದಾರೆ. ದೀಪಾಲಂಕಾರ ಸೇವೆಯನ್ನು ಜಯಣ್ಣ ಅವರು ನಿರ್ವಹಿಸುವರು. ಆರಂಭದಲ್ಲಿ ಅಡಿಕೆ ದಬ್ಬೆಗಳನ್ನು ಕಟ್ಟಿ ಅದರ ಮೇಲೆ ದೀಪ ಹಚ್ಚಲಾಗುತ್ತಿತ್ತು. ನಂತರ ಬಿ.ಬಿ.ರಾಮಸ್ವಾಮಿ ಗೌಡ ಅವರು ಶಾಸಕರಾದಾಗ ಸ್ಟೀಲ್ ಸ್ಟ್ಯಾಂಡ್‌ಗಳನ್ನು ಸಿದ್ಧಗೊಳಿಸಿ ದೀಪ ಇಡುವ ವ್ಯವಸ್ಥೆ ಮಾಡಿದರು. ಆರಂಭದಲ್ಲಿ ಸೇವೆಯ ರೂಪದಲ್ಲಿ ಒಂದು ದೀಪ ಹಚ್ಚಲು ಭಕ್ತರಿಂದ ₹ 11 ಪಡೆಯಲಾಗುತ್ತಿತ್ತು. ಈಗ ಅದು ₹ 35 ಇದೆ.

ದೇಶ ಸಂಚಾರ: 12ನೇ ಶತಮಾನದಲ್ಲಿ ಶರಣರಿಂದ ನಡೆದ ಸಾಮಾಜಿಕ ಪರಿವರ್ತನೆಯ ವಚನ ಚಳಿವಳಿಯ ಪುನರುಜ್ಜೀವನವಾಗಿದ್ದು 15ನೇ ಶತಮಾನದಲ್ಲಿ. ಎಡೆಯೂರು ಸಿದ್ಧಲಿಂಗೇಶ್ವರ ಯತಿಗಳ ನೇತೃತ್ವದಲ್ಲಿ. 700 ವಿರಕ್ತರ ಹಾಗೂ ಮೂರು ಸಾವಿರ ಚರಮೂರ್ತಿಗಳ ಜತೆ ಸಿದ್ಧಲಿಂಗೇಶ್ವರರು ದೇಶ ಪರ್ಯಟನೆ ಮಾಡಿದರು. ವಿರಕ್ತ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಶರಣರ ತತ್ವಗಳನ್ನು ಪ್ರಸಾರ ಮಾಡಿದರು.

ಸಿದ್ಧಲಿಂಗೇಶ್ವರ ಯತಿಗಳು ತುಳಿತಕ್ಕೆ ಒಳಗಾದವರಿಗೆ ಧ್ವನಿಯಾಗಿ, ಸಾಮಾಜಿಕ ಅಸಮಾನತೆ ವಿವಾರಿಸಿದರು. ಶೂದ್ರರಿಗೆ ಲಿಂಗಧಾರಣೆ ಮಾಡಿ ಸಹ ಜೀವನದ ಸಮಾನತೆಯ ಅರಿವು ಮೂಡಿಸಿದರು.

ದಾಸೋಹದ ಮಹಾ ಮನೆ: ಎಡೆಯೂರಿನ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ದಾಸೋಹ ಸೇವಾ ಸಂಘವು ದಾನಿಗಳು ಮತ್ತು ಭಕ್ತರ ಸಹಾಯದಿಂದ 50 ವರ್ಷಗಳಿಂದ ದಾಸೋಹ ವ್ಯವಸ್ಥೆ ನಡೆಸಿಕೊಂಡು ಬರುತ್ತಿದೆ. ಗದುಗಿನ ಸ್ವಾಮೀಜಿ ದಾಸೋಹ ಸೇವಾ ಸಂಘ ಹುಟ್ಟು ಹಾಕಿದರು. ನಿತ್ಯ ಕನಿಷ್ಠ 5 ಸಾವಿರ ಜನರು ಪ್ರಸಾದ ಸ್ವೀಕರಿಸುತ್ತಾರೆ.

ಲಕ್ಷ ದೀಪೋತ್ಸವ ಸಂದರ್ಭದಲ್ಲಿ 50 ಸಾವಿರ ಜನರು ಪ್ರಸಾದ ಸ್ವೀಕರಿಸುವರು. ಒಂದು ತಿಂಗಳ ದಾಸೋಹಕ್ಕೆ ₹ 16 ಲಕ್ಷ ವೆಚ್ಚವಾಗುತ್ತಿದೆ. 45 ನೌಕರರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ದಾನಿ ವಾಸದ ಅರಸರು ‌ಸಿದ್ಧಲಿಂಗೇಶ್ವರರ ಶಿಷ್ಯರಾಗಿದ್ದ ಚಿಟ್ಟಿಗೆ ದೇವರಿಗೆ ನಿತ್ಯ ಅನ್ನದಾಸೋಹ ನಡೆಯಬೇಕು ಎಂದು ಮನವಿ ಮಾಡಿ ದಾನ ದತ್ತಿ ನೀಡಿದ್ದರು. ಈ ಬಗ್ಗೆ ಶಿಲಾ ಶಾಸನದಲ್ಲಿ ಮಾಹಿತಿ ಇದೆ. ಅಂದು ದಾಸೋಹವನ್ನು ಹಳೆಯ ಕಲ್ಲುಚಪ್ಪಡಿಗಳ ಮೇಲೆ ನಡೆಸಲಾಗುತ್ತಿತ್ತು.

25 ಜನ ಊಟ ಮಾಡುವಷ್ಟು ಸ್ಥಳ ಮಾತ್ರ ಇತ್ತು. ಮೊದಲು ದೇವಸ್ಥಾನದ ಮುಂಭಾಗ ಸಮುದಾಯ ಭವನದಲ್ಲಿ ದಾಸೋಹ ನಡೆಯುತ್ತಿತ್ತು. ಎಸ್.ಆರ್.ಬೊಮ್ಮಾಯಿ ಅವರು ಕಂದಾಯ ಸಚಿವರಾಗಿದ್ದಾಗ ಸ್ವಾಮಿಯ ಗದ್ದುಗೆ ಹಿಂಭಾಗದ ಜಾಗವನ್ನು ಸಂಘಕ್ಕೆ ಮಂಜೂರು ಮಾಡಿಕೊಟ್ಟರು. ಸ್ವಾಮೀಜಿ ಮತ್ತು ಭಕ್ತರು ನೀಡಿದ ₹ 2 ಕೋಟಿ‌ ಹಣದಿಂದ ಕಟ್ಟಡ ನಿರ್ಮಾಣವಾಯಿತು.

ದಾಸೋಹಕ್ಕೆ ₹ 100ರಿಂದ ಹಿಡಿದು ₹ 2001 ಹಣವನ್ನು 15 ಸಾವಿರ ಜನರು ಜನ ಠೇವಣಿ ಇಟ್ಟಿದ್ದಾರೆ. ಇದರ ಒಟ್ಟು ಮೊತ್ತ ₹ 2.50 ಕೋಟಿ ದಾಟಿದೆ. ರಾಜ್ಯವಲ್ಲದೆ ಮಹಾರಾಷ್ಟ್ರದ ಸಾಂಗ್ಲಿ, ಕೋಲ್ಲಾಪುರ ಹಾಗೂ ನಿಪ್ಪಾಣಿಯ ಭಕ್ತರು ದಾಸೋಹದಲ್ಲಿ ಸೇವಾ ನಿರತರಾಗಿದ್ದಾರೆ. ದಾಸೋಹ ಸಂಗ್ರಹಕ್ಕೆ ನಾಲ್ಕು ಸರಕು ಸಾಗಣೆ ವಾಹನಗಳು ಇದ್ದು ಧಾನ್ಯಗಳನ್ನು ಭಕ್ತರಿಂದ ಸಂಗ್ರಹಿಸುತ್ತವೆ. ಕಗ್ಗೆರೆ ಕ್ಷೇತ್ರಕ್ಕೂ ದಾಸೋಹ ವಿಸ್ತರಿಸಿದೆ. ದಾಸೋಹ ಸಮಿತಿ ಹರದನಹಳ್ಳಿ ಕ್ಷೇತ್ರ ಅಭಿವೃದ್ಧಿಗೂ ಮುಂದಾಗಿದೆ.

ಬರುವ ಮಾರ್ಗ: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಿಂದ 20 ಕಿ.ಮೀ ದೂರದಲ್ಲಿ ಕ್ಷೇತ್ರ ಇದೆ. ರಾಷ್ಟ್ರೀಯ ಹೆದ್ದಾರಿ 75ರಿಂದ ಸಾರಿಗೆ ವ್ಯವಸ್ಥೆ ಇದೆ. ಯಶವಂತಪುರ- ಹಾಸನ ರೈಲು ಮೂಲಕವೂ ಎಡೆಯೂರು ತಲುಪಬಹುದು. ಎಡೆಯೂರಿಗೆ ಬಂದವರು ಸಮೀಪದ ಜಲಧಿಗೆರೆ ಚಿಕ್ಕಮ್ಮ, ದೊಡ್ಡಮ್ಮ ದೇವಾಲಯ, ಹಟ್ಟಿ ಲಕ್ಕಮ್ಮ, ಮಾರ್ಕೋನಹಳ್ಳಿ ಜಲಾಶಯ ಮತ್ತು ಕಗ್ಗೆರೆ ಸಹ ವೀಕ್ಷಿಸಬಹುದು.

ದೇವಾಲಯ ಅಭಿವೃದ್ಧಿಗೆ ಒತ್ತು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಆದ್ಯತೆ ನೀಡಿದರು. ಕ್ಷೇತ್ರದ ಅಭಿವೃದ್ಧಿಗೆ ₹ 40 ಕೋಟಿ ಯೋಜನೆ ಸಿದ್ಧಪಡಿಸಲಾಯಿತು. ಸಿದ್ಧಲಿಂಗೇಶ್ವರ ಸ್ವಾಮಿ ಯಡಿಯೂರಪ್ಪ ಅವರ ಮನೆದೇವರು.

ದೇವಾಲಯವನ್ನು ಎರಡು ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ವಾಣಿಜ್ಯ ಮಳಿಗೆಗಳ ಸಂಕೀರ್ಣ, ಸಾಮೂಹಿಕ ವಸತಿ ಸಮುಚ್ಚಯ, ಆಡಳಿತ ಭವನ, ವಿವಿಐಪಿ ವಸತಿ ಗೃಹಗಳು, ದೇವಾಲಯದ ಮುಖ್ಯರಸ್ತೆಯ ವಿಸ್ತರಣೆ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ.

‘ಯಡಿಯೂರಪ್ಪ ಮೊದಲು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜಕೀಯವಾಗಿ ಮುಂದುವರಿಯುವರು. ಪರಿವರ್ತನಾ‌ ಯಾತ್ರೆ ಸಮಯದಲ್ಲಿ ಎಡೆಯೂರಿನಲ್ಲಿ ವಾಸ್ತವ್ಯ ಹೊಡಿದರು’ ಎಂದು ಬಿಜೆಪಿ ಮುಖಂಡ ರಾಜೇಶ್ ಗೌಡ ತಿಳಿಸಿದರು. ದೇವಾಲಯದ ಪಕ್ಕದಲ್ಲಿರುವ ಬಾಳೆಹೊನ್ನೂರು ಶಾಖಾ ಮಠದಲ್ಲಿ ಸಹ ದಾಸೋಹದ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ.

ಪಾದಯಾತ್ರೆಗೆ ಶತಮಾನದ ಸಡಗರ
ಪ್ರತಿ ವರ್ಷದ ಜಾತ್ರೆ ಸಮಯದಲ್ಲಿ ಉತ್ತರ ಕರ್ನಾಟಕದಿಂದ ಭಕ್ತರು ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ಬರುವರು. 1917ರಲ್ಲಿ ತೋಂಟದ ಸಿದ್ಧೇಶ್ವರ ಜಗದ್ಗುರು ಅವರ ನೇತೃತ್ವದಲ್ಲಿ ಹಾನಗಲ್ ಕುಮಾರ ಸ್ವಾಮೀಜಿ, ಹಾವೇರಿ ಶಿವಬಸವ ಸ್ವಾಮೀಜಿ, ನಾಗನೂರು ಸ್ವಾಮೀಜಿ ಅವರನ್ನು ಒಳಗೊಂಡಂತೆ ನೂರಾರು ಮಠಾಧೀಶರು ಹಾಗೂ ಸಾವಿರಾರು ಭಕ್ತರು ಡಂಬಳ-ಗದಗದಿಂದ ಶ್ರೀಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದರು. ಇದು ಮೊದಲ ಬಾರಿಗೆ ಆ ಭಾಗದಿಂದ ಇಲ್ಲಿಗೆ ಬಂದ ಪಾದಯಾತ್ರೆ.

ನಂತರದ ವರ್ಷಗಳಲ್ಲಿ ಪಾದಯಾತ್ರೆ ನಿಯಮಿತವಾಗಿರಲಿಲ್ಲ. ಈಗಿನ ತೋಂಟದ ಶ್ರೀಗಳವರು ಸಹ 1974ರಲ್ಲಿ ಉತ್ತರ ಕರ್ನಾಟಕದ ಭಕ್ತ ಮಂಡಳಿಯ ಪಾದಯಾತ್ರೆಗೆ ಪ್ರೇರಣೆ ನೀಡಿದರು. ಅವರೂ ಕಗ್ಗೆರೆಯಿಂದ ಎಡೆಯೂರಿಗೆ ಪಾದಯಾತ್ರೆ ಮಾಡಿದರು. ಈ ಪಾದಯಾತ್ರೆ ಈಗ 42ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿವರ್ಷ 500ಕ್ಕೂ ಹೆಚ್ಚು ಭಕ್ತರು 15 ದಿನಗಳ ಪಾದಯಾತ್ರೆ ಕೈಗೊಂಡು ಕ್ಷೇತ್ರ ತಲುಪುವರು.

ಪಾದಯಾತ್ರಿಗಳನ್ನು ಜನರು ಸಿದ್ಧಲಿಂಗೇಶ್ವರನ ಪ್ರತಿನಿಧಿಗಳು ಎಂದು ಗೌರವಿಸುವರು. ಕ್ಷೇತ್ರದ ಆಡಳಿತ ಮಂಡಳಿಯವರು, ಎಡೆಯೂರಿನ ಭಕ್ತರು ಮತ್ತು ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ಹಾಗೂ ದಾಸೋಹ ಸಮಿತಿಯವರು ಪಾದಯಾತ್ರಿಗಳನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳುತ್ತಾರೆ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಿಂದಲೂ ಪಾದಯಾತ್ರೆ ಮೂಲಕ ಬರುವರು.

ಯೋಗಿ ಸಿದ್ಧಲಿಂಗೇಶ್ವರರ ಪವಾಡಗಳು
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಿದ್ಧಲಿಂಗೇಶ್ವರರು ಜನಿಸಿದರು. ಶಿವಭಕ್ತ ದಂಪತಿ ಜ್ಞಾನಾಂಬೆ ಮತ್ತು ಮಲ್ಲಿಕಾರ್ಜುನ ಅವರಿಗೆ ಮಕ್ಕಳು ಇರುವುದಿಲ್ಲ. ದೇವರಿಗೆ ಮೊರೆ ಇಟ್ಟ ಈ ದಂಪತಿಗೆ ಹೂ ತೋಟದಲ್ಲಿ ಸಿಕ್ಕ ಮಗುವೇ ಸಿದ್ಧಲಿಂಗರು.

ಧರ್ಮ, ಅಧ್ಯಾತ್ಮಕ್ಕೆ ಮನವನ್ನು ಒಪ್ಪಿಸಿ ದೇಶವನ್ನು ಪರ್ಯಟನೆ ಮಾಡುವರು. ಜಿಲ್ಲೆಯ ಕಗ್ಗೆರೆಯ ತೋಟದಲ್ಲಿ 12 ವರ್ಷ ತಪಸ್ಸು ಮಾಡಿದರು. ಆದ್ದರಿಂದಲೇ ಅವರಿಗೆ ತೋಂಟದ ಸಿದ್ಧಲಿಂಗಸ್ವಾಮಿ ಎಂಬ ಹೆಸರು ಬಂದಿತು.

ಕಗ್ಗರೆ ತೋಟದಲ್ಲಿ ತಪ್ಪಸ್ಸಿಗೆ ಕುಳಿತ ಸ್ವಾಮಿ ಅವರ ಸುತ್ತ ಹುತ್ತ ಬೆಳೆದು ಹಸುವೊಂದು ನಿತ್ಯ ಹಾಲು ಕರೆಯುತ್ತಿತ್ತು. ಇದನ್ನು ನೋಡಿದ ಹಸುವಿನ ಮಾಲೀಕ 701 ಬಿಂದಿಗೆ ಹಾಲಿನ ಅಭಿಷೇಕ ಮಾಡಿ ಹುತ್ತ ಕರಗಿಸಿದ. ಯತಿಗಳನ್ನು ಉಪಚರಿಸಿದ. ಆದ್ದರಿಂದ ಕಗ್ಗರೆ ಇಂದಿಗೂ ತಪೋಕ್ಷೇತ್ರ ಎಂದು ಖ್ಯಾತಿ ಪಡೆದಿದೆ. ಕಗ್ಗೆರೆಯಲ್ಲಿ ತಪಸ್ಸಿಗೆ ಕೂಡುವ ಮುನ್ನ ಸಿದ್ಧಗಂಗಾ ಬೆಟ್ಟಕ್ಕೆ ಬರುವ ಸಿದ್ಧಲಿಂಗೇಶ್ವರರು ಅಲ್ಲಿನ ಬಂಡೆಯೊಂದನ್ನು ಸ್ಪರ್ಶಿಸಿದಾಗ ಅದರಲ್ಲಿ ನೀರುಕ್ಕಿ ಸಿದ್ಧಗಂಗಾ ಆಯಿತು ಎನ್ನುವ ಪ್ರತೀತಿ ಇದೆ. ಯತಿಗಳು ಎಡೆಯೂರಿನಲ್ಲಿ ನಿರ್ವಿಕಲ್ಪ ಸಮಾಧಿಯಾದರು.

ವ್ಯವಸ್ಥಾಪನಾ ಸಮಿತಿ: ಹಗ್ಗ ಜಗ್ಗಾಟ
ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಸಮಾರಂಭಗಳಿಗೆ ಮಠಾಧಿಪತಿಗಳನ್ನು ಆಹ್ವಾನಿಸದೆ, ಪರಿಸರ ಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸಿರುವುದಕ್ಕೆ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಹಗ್ಗ ಜಗ್ಗಾಟ ನಡೆದಿದೆ.

ಸಮಿತಿ ಮೊದಲಿಗೆ ಕಗ್ಗರೆಯಲ್ಲಿ ಏಕದಶ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಸಾಲು ಮರದ ತಿಮ್ಮಕ್ಕ ಅವರನ್ನು ಕರೆಸಿತ್ತು. ಈ‌ ಸಲ ಎಚ್.ಎಸ್.ದೊರೈಸ್ವಾಮಿ ಉದ್ಘಾಟಿಸುವರು. ಎಡೆಯೂರು
ದೇವಾಲಯ ಇತಿಹಾಸದ ಪ್ರಕಾರ ಧಾರ್ಮಿಕ ಸಭೆ ಸಮಾರಂಭಗಳಿಗೆ ಜಿಲ್ಲೆಯ ಮತ್ತು ಉತ್ತರ ಕರ್ನಾಟಕ ಮಠಾಧೀಶರನ್ನು ಆಹ್ವಾನಿಸುವ ಪದ್ಧತಿ ಇತ್ತು.

‘ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಒಮ್ಮತ ಮೂಡದ ಕಾರಣ ಸ್ವಾಮೀಜಿ ಅವರನ್ನು ಆಹ್ವಾನಿಸುವ ವಿಚಾರವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ’ ಎಂದು ಸಮಿತಿ ಸದಸ್ಯರಾದ ಎಸ್.ಆರ್.ಚಿಕ್ಕಣ್ಣ ಮತ್ತು ಪಟ್ಟಣಶೆಟ್ಟಿ ತಿಳಿಸಿದ್ದಾರೆ.

‘ಪೂರ್ವಭಾವಿ ಸಭೆಗಳಲ್ಲಿ ಕೆಲ ಸದಸ್ಯರು ಪ್ರಮುಖ ಐವರು ಸ್ವಾಮೀಜಿಗಳನ್ನು ಆಹ್ವಾನಿಸಲು ಸೂಚಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿ ‘ಕರೆದವರನ್ನೇ ಕರೆಯಬೇಡಿ ಎಲ್ಲ ಸ್ವಾಮೀಜಿಗಳಿಗೂ ಅವಕಾಶ ನೀಡಿ’ ಎಂದು ಆಗ್ರಹಿಸಿದರು.

ವಿವಾದ ಉಂಟು ಆಗುತ್ತದೆ ಎಂದು ಈ ಬಾರಿ ಸ್ವಾಮೀಜಿಗಳಿಗೆ ಆಹ್ವಾನ ನೀಡಿಲ್ಲ. ‘ಗದಗ–ಡಂಬಳ ಮಠದ ಸ್ವಾಮೀಜಿ ಹಾಗೂ ಹಿರಿಯ ಗಣ್ಯರನ್ನು ಕರೆಯಬೇಕಾಗಿತ್ತು. ಆದರೆ ವ್ಯವಸ್ಥಾಪನಾ ಸಮಿತಿ ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕು’ ಎಂದು ಉತ್ತರ ಕರ್ನಾಟಕ ಭಕ್ತರಾದ ಸಿದ್ಧಲಿಂಗ ಶೆಟ್ಟರ್ಮ, ಮಹಾಂತೇಶ್ ತಿಳಿಸಿದರು.

* * 

ಕುಡಿಯುವ ನೀರಿನ ಯೋಜನೆಯಿಂದ ಸಮಸ್ಯೆ ಬಗೆಹರಿಯುತ್ತಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲಿದೆ.
 ಡಿ.ನಾಗರಾಜಯ್ಯ ಶಾಸಕ

ಟಿ.ಎಚ್‌.ಗುರಚರಣಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT