ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿಯೂ ಭವಿಷ್ಯ ಮಂಕು?

Last Updated 18 ನವೆಂಬರ್ 2017, 9:44 IST
ಅಕ್ಷರ ಗಾತ್ರ

ಉಡುಪಿ: ‘ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರ ವೆಷ್ಟಾಯ್ತೊ ಮಂಕು ತಿಮ್ಮ’... ಡಿವಿಜಿ ಅವರ ಮಂಕು ತಿಮ್ಮನ ಕಗ್ಗದ ಸಾಲುಗಳು ಜಿಲ್ಲೆಯ ಬಿಜೆಪಿ ಮುಖಂಡ, ಕಾಪು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸಾಮ್ಯತೆ ಆಗುವುದನ್ನು ಕಾಣಬಹುದು.

ಕಾಪು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎಂಬ ಆಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಆದರೆ ಅದು ಕಷ್ಟಸಾಧ್ಯವಾಗಬಹುದು ಎನಿಸಿದ ಪರಿ ಣಾಮವೇನೋ, ಅದರ ಮಧ್ಯೆ ನೈರುತ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಹಂಬಲ ಅವರದು.

ಅದಕ್ಕಾಗಿ ಸಣ್ಣದಾದ ತಯಾರಿ ಕೂಡಾ ಮಾಡಿದರು. ತಮ್ಮ ಫೇಸ್‌ ಬುಕ್ ಪೇಜ್‌ನಲ್ಲಿ ಪದವೀಧರರ ಚುನಾವಣೆಗೆ ಮತ ಚಲಾಯಿಸಲು ಮತಪಟ್ಟಿಗೆ ಸೇರ್ಪಡೆಯಾಗಿ ಎಂದು ಮನವಿ ಮಾಡಿದರು. ಅರ್ಹತೆಗಳೇನು ಎಂಬ ವಿವರವನ್ನೂ ನೀಡಿದರು. ಆದರೆ ಹಿರಿಯ ಮುಖಂಡ ಬಿ.ಎಸ್‌. ಯಡಿ ಯೂರಪ್ಪ ಅವರ ಆಪ್ತ ಆಯನೂರು ಮಂಜುನಾಥ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಅಧಿಕೃತ ಘೋಷಣೆ ಮಾಡಿದೆ.

ಆದ್ದರಿಂದ ಎಂಎಲ್‌ಸಿ ಕನಸು ಸದ್ಯಕ್ಕೆ ಕೈಗೂಡುವಂತೆ ಕಾಣುತ್ತಿಲ್ಲ. ಕಾಪು ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಧ ಡಜನ್ ಕಮಲ ಕಟ್ಟಾಳುಗಳು ಸಿದ್ಧ ಇರುವುದರಿಂದ ಗುರ್ಮೆ ಅವರಿಗೆ ಟಿಕೆಟ್ ಸಿಗುವ ಭರವಸೆ ಇಲ್ಲ. ಪರಿಣಾಮ ‘ಸೇವಾಕಾಂಕ್ಷಿ’ ಗುರ್ಮೆ ಸುರೇಶ್ ಶೆಟ್ಟರ ಭವಿಷ್ಯವೂ ಕೊಂಚ ಮಂಕಾದಂತೆ ಕಾಣುತ್ತಿದೆ.

2013ರ ವಿಧಾನಸಭಾ ಚುನಾವಣೆ ಯಲ್ಲಿಯೇ ಕಾಂಗ್ರೆಸ್‌ನಿಂದ ಕಾಪು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಅವರ ದ್ದಾಗಿತ್ತು. ಅದಕ್ಕೆ ತಕ್ಕಂತೆ ಭರ್ಜರಿ ಎಂಟ್ರಿಯನ್ನೂ ಅವರು ಕೊಟ್ಟಿದ್ದರು. ‘ಗಣಿ ಧಣಿ’ ಎಂಬ ಉಪ ನಾಮವೂ ಆಗ ಅಂಟಿಕೊಂಡಿದ್ದರಿಂದ ಭಾರಿ ಶ್ರೀಮಂತರಾಗಿರುವ ಅವರು ಟಿಕೆಟ್ ಪಡೆದುಕೊಳ್ಳಬಹುದು, ಕಾಂಗ್ರೆಸ್ ಅಲೆಯೂ ಸೇರಿ ಸುಲಭವಾಗಿ ಗೆಲ್ಲ ಬಹುದು ಎಂಬ ನಿರೀಕ್ಷೆಯೂ ಇತ್ತು.

ಆದರೆ, ವಿನಯಕುಮಾರ್ ಸೊರಕೆ ಅವರಿಗೆ ಪಕ್ಷದ ಟಿಕೆಟ್ ಸಿಕ್ಕಿತು. ಅವರು ಗೆದ್ದು ಸುಮಾರು 3 ವರ್ಷ ಮಂತ್ರಿಯೂ ಆಗಿ ಇಡೀ ಕ್ಷೇತ್ರ ಹಾಗೂ ಪಕ್ಷದ ಮೇಲೆ ಹಿಡಿತ ಸಾಧಿಸಿದರು. ಗುರ್ಮೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಆದ್ದರಿಂದ ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ ಅಂದುಕೊಂಡು ಅವರು ಬಿಜೆಪಿ ಸೇರಿದರು. ಆದರೆ ಇಲ್ಲಿಯೂ ‘ಕಮಲ ಅರುಳುವಂತೆ’ ಕಾಣುತ್ತಿಲ್ಲ.

ವಾಸ್ತವವಾಗಿ ಗುರ್ಮೆ ಅವರು ಗಣಿ ಉದ್ಯಮಿಯಲ್ಲ. ಸುಮಾರು 30 ವರ್ಷ ಗಳಿಂದ ಬಳ್ಳಾರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿದ್ದ ವೇಳೆ ಒಂದೆರಡು ವರ್ಷಗಳ ಕಾಲ ಮಾತ್ರ ಗಣಿ ಗುತ್ತಿಗೆ ಪಡೆದಿದ್ದರಷ್ಟೇ. ಗಣಿಗಾರಿಕೆ ಬಂದ್ ಆದ ನಂತರ ಅವರ ಗಣಿ ವ್ಯವಹಾರವೂ ಕೊನೆಯಾಯಿತು. ಈಗಲೂ ಅವರು ಹೋಟೆಲ್ ನಡೆಸುತ್ತಿದ್ದಾರೆ.

ಗುರ್ಮೆ ಅವರು ಬಿಜೆಪಿ ಸೇರುವಾಗ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯಾವುದೇ ಆಕಾಂಕ್ಷೆ ಇಲ್ಲದೆ, ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಗುರ್ಮೆ ಅವರು ಬಿಜೆಪಿ ಸೇರುತ್ತಿದ್ದಾರೆ’ ಎಂದು ಮುಖಂಡರು ಜೋರಾಗಿ ಹೇಳಿ ದ್ದರು. ಯಾರೇ ಮುಖಂಡ ಇರಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರುವಾಗ ಹಾಗೆ ಹೇಳುವುದು ವಾಡಿಕೆ ಎಂದುಕೊಂಡಿದ್ದ ಗುರ್ಮೆ ಅವರಿಗೆ, ಈಗ ಅದು ನಿಜವಾಗುತ್ತಿರುವ ಅನುಭವ ಆಗುತ್ತಿರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT