ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೋಟೊ’ಮೇನಿಯಾ?

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇದ್ದಕ್ಕಿದ್ದಂತೆ ನಮ್ಮಲ್ಲಿ ಕೆಲವರಿಗೆ (ಅಥವಾ ಹೆಚ್ಚಿನವರಿಗೆ?) ವಿಶ್ವಸುಂದರಿ/ವಿಶ್ವಸುಂದರರಾಗುವ ಮತ್ತು ಪರಿಚಿತರು ಮಾತ್ರವಲ್ಲ, ನೂರಕ್ಕೆ ನೂರರಷ್ಟು ಅಪರಿಚಿತರಿಂದಲೂ ಸುಂದರಿ/ಸುಂದರ ಎಂದು ಹೊಗಳಿಸಿಕೊಳ್ಳುವ ಒಂಥರದ (ಎಂದಿಗೂ ವಾಸಿಯೇ ಆಗದ!) ಆಳದ ತಲುಬು ಹುಟ್ಟಿದೆ ಅನ್ನುವುದು ನೂರಕ್ಕೆ ನೂರರಷ್ಟು ಖಾತ್ರಿಯಾಗುವಷ್ಟರ ಮಟ್ಟಿಗೆ ಫೇಸುಬುಕ್ಕಿನ ಪ್ರೊಫೈಲ್ ಪಿಕ್ ಹಾಗೂ ಗೋಡೆಯಲ್ಲಿ, ವಾಟ್ಸಾಪಿನ ಡಿಪಿಯಲ್ಲಿ ವದನಾರವಿಂದಗಳು ನೂರಾರು ಭಾವ ಭಂಗಿಯೊಳು ಜಗಮಗಿಸುತ್ತ ಲಕಲಕಿಸಲು ಶುರುವಾಗಿವೆ.

ಅಲ್ಲವೇ ಮತ್ತೆ... ನಮ್ಮ ‘ಆನ್ಲೈನ್ ಪ್ರಸೆನ್ಸ್’ಅನ್ನು ಭೂಲೋಕಕ್ಕೆಲ್ಲ (ಮತ್ತು ಜೀವಿಗಳಿರಬಹುದಾದ ಅನ್ಯಗ್ರಹಗಳಿಗೂ ಹಾಗೂ ಮುಂದೆಂದೋ ಜೀವಿಗಳು ಅವತರಿಸಬಹುದಾದ ಸಕಲ ಗೆಲಾಕ್ಸಿಗಳಿಗೂ!) ಸಾರಿ ಸಾರಿ ಹೇಳಲು ಒಂದು ಸುಂದರಾತಿಸುಂದರ ಫೋಟೋ ಹಾಕದಿದ್ದರೆ ಹೇಗೆ... ಹೆಸರೇ ‘ಮುಖಪುಟ’ವಾಗಿರುವಾಗ ಅದರ ಗೋಡೆಗೆ ಆಗೀಗಲಾದರೂ ಚಂದದ ‘ಮುಖಪಟ’ವನ್ನು ಅಂಟಿಸದಿದ್ದರೆ ಹೇಗೆ... ಪತ್ರಿಕೆಗಳಲ್ಲಿ ‘ಕಳೆದುಕೊಂಡಿದ್ದಾರೆ’ ಶೀರ್ಷಿಕೆಯಡಿ ಬರುವ ಫೋಟೋ ಥರದ್ದೇ ಫೋಟೋವನ್ನೇ ಯಾವಾಗಲೂ ಹಾಕಿಕೊಳ್ಳಬೇಕೆ, ಅದೂ ನಾವು ಇಷ್ಟೆಲ್ಲ ಸರ್ವಾಂಗ (?) ಸುಂದರವಾಗಿರುವಾಗ...

ಎಲ್ಲಕ್ಕಿಂತ ಮುಖ್ಯವೆಂದರೆ ಒಂದೇ ಹೆಸರಿನ ಹತ್ತಾರು ಜನರಿರುವಾಗ ಯಾರೆಂದು ಗುರುತಿಸಲು ಮುಖಪುಟದ ಕಿರುಗೋಡೆಗೆ ಪ್ರೊಫೈಲ್ ಫೋಟೋ ಒಂದು ಬೇಡವೇ... ಅಲ್ಲದೇ ಎಷ್ಟೋ ವರ್ಷಗಳ ಹಿಂದೆ ನಮ್ಮನ್ನು ನೋಡಿದ ಸಹಪಾಠಿಗಳೋ, ಸಹೋದ್ಯೋಗಿಗಳೋ, ನೆಂಟರಿಷ್ಟರೋ, ಬಾಲ್ಯದ ಸ್ನೇಹಿತರೋ, ಕೈಬಿಟ್ಟ ಪ್ರಿಯತಮೆಯರೋ ಪ್ರಿಯತಮರೋ ಗುರುತಿಸಲು ಒಂದು ಚಂದಾತಿಚಂದದ ಫೋಟೋ ಹಾಕುವುದು ಬೇಡವೇ... ಆಯ್ತಪ್ಪ, ಈ ಎಲ್ಲ ವಾದಗಳನ್ನೂ ಒಪ್ಪೋಣ. ಒಂದೇ ಫೋಟೋ ನೋಡಿ ನೋಡಿ ಬೇಜಾರು ಬರುವುದಿಲ್ಲವೇ (ಯಾರಿಗೆ ಬೇಜಾರು ಎಂದು ಕೇಳಬೇಡಿ!), ಅದಕ್ಕೇ ಆಗೀಗ ಬೇರೆಬೇರೆ ಫೋಟೋ ಅಪ್ಲೋಡಿಸುವುದಪ್ಪ ಎಂಬ ವಾದವನ್ನೂ ಒಪ್ಪೋಣ. ಆದರೆ ದಿನಕ್ಕೊಮ್ಮೆ ಅಥವಾ ಎರಡು ಮೂರು ದಿನಕ್ಕೊಮ್ಮೆ ವಿವಿಧ ಕೋನಗಳಲ್ಲಿ, ವಿವಿಧ ಉಡುಗೆಗಳಲ್ಲಿ, ವಿವಿಧ ಸ್ಥಳಗಳಲ್ಲಿ, ವಿವಿಧ ಭಾವಭಂಗಿಗಳಲ್ಲಿ ಸ್ವಂತಿಯನ್ನೋ, ಫೋಟೋವನ್ನೋ ಹಾಕಿಕೊಳ್ಳುವ ‘ವೈವಿಧ್ಯಮಯ ಗೀಳಿ’ಗೆ ಏನನ್ನೋಣ? ಒಂಥರದ ‘ಮೇನಿಯಾ’ವೇ?

ಈ ಫೋಟೊ ಅಪ್ಲೋಡಿಸುತ್ತಲೇ ಇರುವ ಗೀಳು ಏನೆಲ್ಲವನ್ನು ಸೂಚಿಸಬಹುದು... ನೋಡಿ, ಇಷ್ಟು ವರ್ಷಗಳಾದರೂ ಇನ್ನೂ ಎಷ್ಟು ಚಂದ(?)ವಿದ್ದೇನೆ, ಈ ನಗು, ಈ (ಬಾಹ್ಯ) ಸೌಂದರ್ಯ ಯಾರಿಗಿದೆ, ಸಂತೋಷ, ನೆಮ್ಮದಿಯೆಂದರೆ ಇದೇ ಎಂದೆಲ್ಲ ಸಾರಿ ಹೇಳುವುದೇ? ಫೋಟೊ ನೋಡಿ ಪರಿಚಿತರೋ, ಅಪರಿಚಿತರೋ ಒಟ್ರಾಶಿ ನೂರಾರು ಲೈಕುಗಳು, ಹೊಗಳಿಕೆಯ ಕಾಮೆಂಟುಗಳು ಬಂದಾಗ ಖುಷಿಗೊಂಡು, ಆ ಕಾಮೆಂಟುಗಳಿಗೆ ಮತ್ತೆ ಲೈಕೊತ್ತುತ್ತ, ನಿಜಕ್ಕೂ ಭಾರೀ ಸೌಂದರ್ಯವಂತರು ಎಂದು ಸಂಭ್ರಮಿಸುವುದರ ಹಿಂದೆ ಒಂಥರದ ಆತ್ಮರತಿಯಿದೆಯೇ? ಸ್ವಂತದ ಫೋಟೊಗಳನ್ನು ಮೇಲಿಂದ ಮೇಲೆ ಹಾಕುತ್ತ, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಇರುವುದೇ (ಆನ್‍ಲೈನ್) ಕ್ರಿಯಾಶೀಲತೆಯ ಇನ್ನೊಂದು ಹೆಸರೇ? ಖುಷಿಖುಷಿಯಾಗಿರುವುದು ಎಂದರೆ ಈ ಬಗೆಯ ಮೆಚ್ಚಿಗೆ ಗಳಿಸುತ್ತಲೇ ಇರುವುದು ಎಂಬ ಒಂಥರದ ಭ್ರಮೆಯೆ?

ತೀರಾ ಖಾಸಗಿ ಅನ್ನಿಸುವ ಕ್ಷಣಗಳನ್ನು ಹಿಡಿದಿಡುವ ಫೋಟೋಗಳು ಮೊದಮೊದಲೆಲ್ಲ ಕುಟುಂಬದ ಆಲ್ಬಮ್ಮಿನಲ್ಲಿ ಇರುತ್ತಿದ್ದವು. ಆಮೇಲೆ ಮದುವೆ ಆಲ್ಬಮ್‍ಗಳು ಬಂದವು. ಒಡವೆ, ಅಲಂಕಾರ, ದೊಡ್ಡಸ್ತಿಕೆ ಇತ್ಯಾದಿಗಳ ಪ್ರದರ್ಶನದ ಕ್ಷಣಗಳನ್ನು ಹಿಡಿದಿಟ್ಟು ಮತ್ತೆ ಮತ್ತೆ ಪರಿಚಿತರ ಎದುರು ಆಲ್ಬಮ್ ಹರಡುವುದರಲ್ಲಿಯೂ ತೀರಾ ಅತಿ ಎನ್ನಿಸುವ ಗೀಳು ಇರುತ್ತಿರಲಿಲ್ಲ. ಎಷ್ಟೇ ಆದರೂ ಮದುವೆ ಆಲ್ಬಮ್‍ನಲ್ಲಿ ಮದುವೆಯ ಆಚರಣೆಗಳ ಸಾಮೂಹಿಕ ಅಥವಾ ಗುಂಪು ಫೋಟೊಗಳೇ ಹೆಚ್ಚು ತಾನೆ. ಅಲ್ಲದೆ ಮದುವೆ ಆಲ್ಬಮ್‍ಗಳಲ್ಲಿ ಕೊನೆಗೂ ನಾಯಕ-ನಾಯಕಿಯಾಗಿ ಮಿಂಚುವವರು ಮದುಮಗ-ಮಗಳು. ಉಳಿದವರು ಏನಿದ್ದರೂ ಪೋಷಕ ಪಾತ್ರದಲ್ಲಿ.

ಆಮೇಲೆ ಬಂತು ನೋಡಿ, ನಮಗೆ ನಾವೇ ನಾಯಕಿ/ನಾಯಕನ ಫೋಸಿನಲ್ಲಿ ಪೋಸ್ಟರು ಅಂಟಿಸಿಕೊಳ್ಳಬಹುದಾದ ಫೇಸುಬುಕ್ಕು, ವಾಟ್ಸಾಪು, ಟ್ವಿಟರು, ಇನ್‍ಸ್ಟಾಗ್ರಾಮುಗಳು ತೆರೆದಿಟ್ಟ ಭ್ರಾಮಕ ‘ಮಾಯಾ'ಲೋಕ. ಗಂಡಸರಿಗಿಂತ ಹೆಂಗಸರಿಗೆ ಹೀಗೆ ಫೋಟೊ ಅಪ್‍ಲೋಡಿಸುತ್ತಲೇ ಇರುವ ಗೀಳು ಹೆಚ್ಚಿದೆಯೇನೋ (ಅದೂ ಕೆಲವು ಮಧ್ಯವಯಸ್ಸಿನ ಹೆಂಗಳೆಯರಿಗೆ ಮತ್ತು ಹದಿಹರೆಯದ ಹುಡುಗಿಯರಿಗೆ ಈ ಗೀಳು ಹೆಚ್ಚು ಎಂದು ನನ್ನ ಬಲವಾದ ಅನುಮಾನ ಎಂದರೆ ಟ್ರಾಲ್ ಆಗಲಿಕ್ಕಿಲ್ಲ ಅಥವಾ ಕಲ್ಲು ಬೀಳಲಿಕ್ಕಿಲ್ಲ ಎಂದು ನಂಬಿರುವೆ!). ಸೋಶಿಯಲ್ ಮೀಡಿಯಾದಲ್ಲಿ ‘ಅಗದಿ ಭಯಂಕರ’ ಸದಾ ಸಕ್ರಿಯರಾಗಿರುವ ನಿಮಗೆ ಗೊತ್ತಿರುವ ನಾಲ್ಕಾರು ಜನರನ್ನು ಸುಮ್ಮನೆ ಗಮನಿಸುತ್ತಿರಿ, ಹೀಗೆ ಫೋಟೊ ಅಪ್ಲೋಡಿಸುವುದರಲ್ಲಿಯೂ ಅವರ ನಡುವೆ ಒಂಥರದ ಪೈಪೋಟಿಯಿರುತ್ತದೆ ಎನ್ನುವುದು ಥಟ್ಟನೆ ನಿಮ್ಮ ಗಮನಕ್ಕೆ ಬಂದು ‘ಹೀಗೂ ಉಂಟೆ!’ ಅನ್ನಿಸುತ್ತದೆ.

ಮತ್ತೆ ಈ ಸ್ವಂತಿ ತೆಗೆಯುವ ಹುಚ್ಚಾದರೂ ಎಷ್ಟರಮಟ್ಟಿಗೆ ಎನ್ನುವಿರಿ... ಬದುಕುಳಿದರೆ ತಾನೆ ಈ ಮಾಯಾಜಗತ್ತಿನಲ್ಲಿ ಸ್ವಂತಿ ಅಪ್ಲೋಡಿಸಿದ್ದನ್ನು ನೋಡಿ ಖುಷಿಪಡಬಹುದು ಎಂಬ ಅರೆಕ್ಷಣದ ಎಚ್ಚರವೂ ಇಲ್ಲದೇ ಜೀವವನ್ನೇ ಬಲಿಗೊಟ್ಟು ಸ್ವಂತಿ ತೆಗೆಯುವ ಗೀಳು. ಮೊನ್ನೆಮೊನ್ನೆ ಕೆರೆಯಲ್ಲಿ ನಾಯಕ ನಟರ ಫೋಸಿನಲ್ಲಿ ಸ್ವಂತಿಗೆ ನಿಂತ ಹುಡುಗರಿಗೆ ಸ್ವಲ್ಪ ದೂರದಲ್ಲಿ ಬೆನ್ನ ಹಿಂದೆಯೇ ನೀರಿನಲ್ಲಿ ಮುಳುಗುತ್ತಿದ್ದ ಅವರದೇ ಗೆಳೆಯ ಕಾಣಲೇ ಇಲ್ಲ, ಅಷ್ಟೇಕೆ ಸ್ವಂತಿ ತೆಗೆದುಕೊಳ್ಳವ ಭರಾಟೆಯಲ್ಲಿದ್ದ ಅವರಿಗೆ ಮುಳುಗುತ್ತ ಗೆಳೆಯ ಮಾಡಿದ್ದಿರಬಹುದಾದ ಪ್ರಾಣಭಯದ ಚೀತ್ಕಾರವೂ ಕೇಳಿರಲೇ ಇಲ್ಲ. ಕೊನೆಗೂ ಆ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸತ್ತ ಮತ್ತು ಗೆಳೆಯರು ಸ್ವಂತಿಯನ್ನು ಎಲ್ಲ ಕಡೆ ಖುಷಿಯಿಂದ ಪ್ರದರ್ಶಿಸಿದರು. ಇದು ವರದಿಯಾದ ಕೆಲವೇ ದಿನಗಳಲ್ಲಿ ಮೂವರು ಹುಡುಗರು ರಾಮನಗರದ ಬಳಿ ಚಲಿಸುತ್ತಿರುವ ರೈಲಿನ ಹಿನ್ನೆಲೆಯಲ್ಲಿ ಸ್ವಂತಿ ತೆಗೆದುಕೊಳ್ಳುವ ಹುಚ್ಚಿನಲ್ಲಿದ್ದಾಗ ಹಿಂದಿನಿಂದ ರೈಲು ವೇಗವಾಗಿ ಬಂದು ಗುದ್ದಿ, ಮೂವರೂ ಗುರುತು ಸಿಗದಷ್ಟು ಛಿದ್ರವಾಗಿ ಹೋಗಿದ್ದರು. ಇನ್ನೊಬ್ಬ ಹುಡುಗ ಕಲ್ಲುಕ್ವಾರಿಯೊಂದರ ಬಳಿ ಸ್ವಂತಿ ತೆಗೆದುಕೊಳ್ಳುವುದರಲ್ಲಿ ಎಷ್ಟರಮಟ್ಟಿಗೆ ಮಗ್ನನಾಗಿದ್ದ ಎಂದರೆ ಕಾಲು ಆಯತಪ್ಪಿ ಕ್ವಾರಿಯ ನೀರಿನಲ್ಲಿ ಬಿದ್ದು ಮುಳುಗಿಯೇಹೋದ. ಪ್ರಾಣವನ್ನೇ ಬಲಿ ತೆಗೆದುಕೊಳ್ಳುವಷ್ಟರ ಮಟ್ಟಿಗಿನ ಈ ‘ಸ್ವಂತೀ ಭಸ್ಮಾಸುರ’ನಿಗೆ ಏನು ಹೇಳೋಣ?

ನಮಗೆಲ್ಲರಿಗೂ ಮನದಾಳದಲ್ಲಿ ಹತ್ತಾರು ಜನರ ಮುಂದೆ ‘ಚಂದ’ ಕಾಣಬೇಕು, ನಾಕು ಮಂದಿ ನಡುವೆಯೂ ಎದ್ದು ಕಾಣುವಂತಿರಬೇಕು, ಹತ್ತಾರು ಜನ ನಮ್ಮನ್ನು ಮೆಚ್ಚಿಕೊಳ್ಳಬೇಕು, ಎಲ್ಲರ ಹೊಗಳಿಕೆಗೆ ಪಾತ್ರವಾಗಬೇಕು ಎನ್ನುವ ಹಪಾಹಪಿ ಸ್ವಲ್ಪವಾದರೂ ಇದ್ದೇ ಇರುತ್ತದೆ. ಎಲ್ಲರ ಮೆಚ್ಚಿಗೆ, ಹೊಗಳಿಕೆಯು ಬೆಚ್ಚನೆಯ ಪ್ರೀತಿಯ (ಭ್ರಾಮಕ) ಅನುಭವ ಕೊಡುವುದೂ ಸುಳ್ಳಲ್ಲ. ಇದು ಒಂಥರದ ಆತ್ಮವಿಶ್ವಾಸವನ್ನೂ ತುಂಬಬಹುದು. ಆದರೆ ನಾವು ನಾವಾಗಿ ಖುಷಿಯಿಂದ ಇರಲು ಸದಾ ಹೀಗೆ ಬೇರೆಯವರು ನಮ್ಮನ್ನು ಗಮನಿಸಿ, ಲೈಕೊತ್ತಿ ಮೆಚ್ಚಿಕೊಳ್ಳುವುದೇ ಅಡಿಗಲ್ಲಾಗಬೇಕೆ?

ಕಿರಿ ಮತ್ತು ಹಿರಿ ತೆರೆಯ ತಾರೆಯರಿಗೇನೋ ಥರಹೇವಾರಿ ಉಡುಗೆಗಳಲ್ಲಿ, ಭಾವಭಂಗಿಗಳಲ್ಲಿ ಫೋಟೊಗಳನ್ನು ಅಪ್ಲೋಡಿಸುತ್ತಲೇ ಇದ್ದು, ‘ನನ್ನ ಸೌಂದರ್ಯ ಇನ್ನೂ ಮಾಸಿಲ್ಲ’ ಎಂದು ಅಭಿಮಾನಿಗಳಿಗೆ ರುಜುವಾತುಪಡಿಸಬೇಕಾದ ಅನಿವಾರ್ಯ ಇರಬಹುದು, ಹೀಗಾಗಿ ಸೋಶಿಯಲ್ ಮೀಡಿಯಾದ ಗೋಡೆಗಳಿಗೆ ಚಿತ್ರ ಅಂಟಿಸುವುದು ಅವರಿಗೆ ಅಗತ್ಯವಿರಬಹುದು. ಆದರೆ ಬದುಕಿನ ವಿವಿಧ ರಂಗಗಳಲ್ಲಿ ನಮ್ಮದೇ ಆದ ರೀತಿಯಲ್ಲಿ ಸಕ್ರಿಯರಾಗಿರುವ ನಮಗೆಲ್ಲರಿಗೆ ಫೋಟೊಗಳ ಮೂಲಕ ನಮ್ಮ ಬಾಹ್ಯಸೌಂದರ್ಯ, ನಮ್ಮ ನೆಮ್ಮದಿ, ನಮ್ಮ ಖುಷಿ, ನಮ್ಮ ಸೃಜನಶೀಲತೆ ಇತ್ಯಾದಿಗಳನ್ನು ಸಾರಿ ಹೇಳುವ, ಅದಕ್ಕೆ ಲೈಕೊತ್ತಿಸಿಕೊಳ್ಳುವ ಅನಿವಾರ್ಯತೆಯಾದರೂ ಏನಿದೆ? ಬದುಕಿನ ಮತ್ತು ಬದುಕುವ ಖುಷಿಯ ಕ್ಷಣಗಳನ್ನು ಅದಿರುವ ಹಾಗೆಯೇ ಅನುಭವಿಸುತ್ತ, ಆ ಕ್ಷಣಗಳನ್ನು ಮನದಾಳದಲ್ಲಿ ಕಾಪಿಟ್ಟು, ಮತ್ತೆ ಮತ್ತೆ ಅನುಭವಿಸುವ ಬದಲಿಗೆ ಆ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು, ನೂರಾರು ಮಂದಿಯ ಕಣ್ಣಿಗೆ ಬೀಳುವಂತೆ ಮಾಡುವುದರಲ್ಲಿಯೇ ಭ್ರಾಮಕ ನೆಮ್ಮದಿಯನ್ನು ಅನುಭವಿಸುತ್ತಿದ್ದೇವೆಯೇ? ಸೃಜನಶೀಲರಾಗಿರುವುದು, ಬದುಕನ್ನು ಅದರೆಲ್ಲ ಸ್ವಾದಗಳೊಂದಿಗೆ ಅನುಭವಿಸುವುದು ಎಂದರೆ ‘ಆನ್‍ಲೈನ್’ನಲ್ಲಿ ಎಷ್ಟರಮಟ್ಟಿಗೆ ನಮ್ಮ ಹಾಜರಾತಿ ಇದೆ ಎಂದು ತೋರ್ಪಡಿಸುವುದೇ?

ಮನುಷ್ಯರಾದ ನಾವು ಸಮಾಜಜೀವಿಗಳು, ನಮ್ಮ ದುಃಖದಂತೆಯೇ ನಮ್ಮ ಖುಷಿಯನ್ನು ಹತ್ತು ಜನರ ಹತ್ತಿರ ಹಂಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ, ಬದುಕಿನ ಯಾವುದೋ ವಿಶೇಷ ಕ್ಷಣಗಳನ್ನು, ಯಾವುದೋ ಸಂತಸದ ಅಥವಾ ಬೇಸರದ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಹತ್ತಾರು ಜನ ಆಪ್ತರೊಂದಿಗೆ ಹಂಚಿಕೊಳ್ಳುವುದನ್ನು ಅರ್ಥ ಮಾಡಿಕೊಳ್ಳಬಹುದು. ಎಂದೋ ಒಮ್ಮೆ ‘ಸುಪ್ರಸಿದ್ಧ’ರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದನ್ನು ಹತ್ತಾರು ಜನರೊಂದಿಗೆ ಹಂಚಿಕೊಂಡು ಖುಷಿಪಡುವ ಪ್ರದರ್ಶನ ಪ್ರಿಯತೆಗೂ ಅದರದ್ದೇ ಒಂದು ಪುಟ್ಟ ಪುಳಕದ ಅರ್ಥವಾದರೂ ಇದೆ. ಅಲ್ಲದೇ ಒಬ್ಬೊಬ್ಬರಿಗೇ ಕಳಿಸುವ ಅಥವಾ ತೋರಿಸುವ ಅಗತ್ಯವಿಲ್ಲದೇ, ಹಲವಾರು ಜನ ಆಪ್ತೇಷ್ಟರೊಂದಿಗೆ ಒಮ್ಮೆಲೆ ಫೋಟೋ ಹಂಚಿಕೊಳ್ಳುವುದೂ ಸೋಶಿಯಲ್ ಮೀಡಿಯಾದಲ್ಲಿ ಸಾಧ್ಯ, ಹೀಗಾಗಿ ಹಂಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಎಲ್ಲಿ ಹೋಗುತ್ತೇವೆ, ಯಾರೊಂದಿಗೆ ಇದ್ದೇವೆ, ಹ್ಯಾಗೆ ಕಾಲ ಕಳೆದೆವು, ಯಾವ ಪ್ರವಾಸಿ ತಾಣಕ್ಕೆ ಹೋದೆವು, ಯಾರೊಂದಿಗೆ ಮಾತನಾಡಿದೆ, ಏನು ತಿಂದೆವು ಇತ್ಯಾದಿ ಇತ್ಯಾದಿಗಳನ್ನು ಆಪ್ತೇಷ್ಟರು ಬಿಡಿ, ಪರಿಚಿತರೇ ಅಲ್ಲದ, ಮುಖಪುಟವೆಂಬ ವರ್ಚುವಲ್ ಲೋಕದಲ್ಲಿ ಗೆಳೆಯ/ತಿಯರಾದ ಸಾವಿರಾರು ಜನರೊಂದಿಗೆ ಹಂಚಿಕೊಳ್ಳುತ್ತಲೇ ಇರಬೇಕೆಂಬ ಈ ಅನಂತ ಹಪಾಹಪಿತನಕ್ಕೆ ಯಾವ ಹೆಸರಿದೆ?

ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು, ನಮ್ಮ ದೇಹದ ಬಗ್ಗೆ ನಮಗೆ ಅಭಿಮಾನ, ಪ್ರೀತಿ ಇರಬೇಕು ಎಲ್ಲ ನಿಜವೇ. ದೇಹವೆಂಬ ದೇಗುಲವನ್ನು ಸ್ವಸ್ಥವಾಗಿಟ್ಟುಕೊಂಡು ಆರೋಗ್ಯದಿಂದ ನಳನಳಿಸುವಂತೆ ಕಾಣುತ್ತಿರಬೇಕು. ಆದರೆ ಈ ಪ್ರೀತಿ, ಅಭಿಮಾನವು ಪ್ರಕಟವಾಗುವುದಕ್ಕೆ, ಬಹಿರಂಗದಲ್ಲಿ ವ್ಯಕ್ತವಾಗುವುದಕ್ಕೆ, ಅಷ್ಟೇ ಅಲ್ಲ ನೂರಾರು ಜನರ ಕಣ್ಣಿಗೆ ಬೀಳುವಂತೆ ನಿರಂತರವಾಗಿ ಪ್ರದರ್ಶನಕ್ಕಿಡುತ್ತಲೇ ಇರಬೇಕೆಂಬ ನಮ್ಮ ಪಾತಾಳದ ತಲುಬಿಗೆ ಲಕ್ಷ್ಮಣ ರೇಖೆಯಾದರೂ ಯಾವುದು? ನನ್ನ ಮಟ್ಟಿಗೆ ನಾನು ಚಂದವೇ ಎಂಬ ಆತ್ಮವಿಶ್ವಾಸಕ್ಕೆ ನೂರಾರು ಲೈಕುಗಳು, ಕಾಮೆಂಟುಗಳು ‘ಬೋಪರಾಕ್’ನ ಮುದ್ರೆಯೊತ್ತುವ ಅಗತ್ಯವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT