ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಹಣ್ಣಿನ ‘ಅಪ್ಪ’

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಈ ಮುದ್ದಾದ ಜೇನುಬಣ್ಣದ ತಿಂಡಿಗೆ ತುಳುನಾಡಿನಲ್ಲಿ ಅಪ್ಪ ಎಂದು ಕರೆಯುತ್ತಾರೆ. ಉರುಟುರುಟಾಗಿ ನೋಡಿದವರ ಬಾಯಲ್ಲಿ ನೀರೂರಿಸುವ ಈ ತಿಂಡಿ ಹಲಸಿನ ಹಣ್ಣಿನ ಸೀಸನ್ನಿನಲ್ಲಿ ಮನೆ ಮನೆಯ ತಿಂಡಿ.

ಸ್ವಲ್ಪ ನಮ್ಮ ಕರಾವಳಿಯ ಹಲಸಿನ ಮರಗಳ ಪರಿಚಯವಾಗಲಿ. ಹಲಸು, ಮಾವು ಇರದ ಮನೆಗಳು ಇಲ್ಲಿಲ್ಲ. ಅಂಗಳದ ಮೂಲೆಯಲ್ಲೋ, ಅಡಿಕೆ ತೋಟದ ಬದಿಯಲ್ಲೋ ಒಂದಕ್ಕಿಂತ ಹೆಚ್ಚು ಮರಗಳು ತಪ್ಪದೆ ಇರುತ್ತವೆ. ಹಲಸು ಗುಜ್ಜೆ (ಎಳೆ ಹಲಸಿಗೆ ಗುಜ್ಜೆ ಎನ್ನುತ್ತಾರೆ.) ಬಿಡುವ ಕಾಲ ಚಳಿಗಾಲ. ಮೊದಲಿನ ಕಾಲದಲ್ಲಿ ಹಲಸು ಹಸಿವಿಗಾಧಾರ. ಬಾಯಿಗೆ ಅದೆಷ್ಟು ರುಚಿಯಾದರೂ ಇದನ್ನು ಹೆಚ್ಚುವಾಗ ಅವಿರತವಾಗಿ ಸ್ರವಿಸುವ ಮೇಣದ್ದೇ ಕಷ್ಟ. ಕಿತ್ತರೂ ಬಿಡದ ಹಾಗೆ ಅಂಟಿಕೊಳ್ಳುತ್ತದೆ.

ವಿಪರೀತ ಜಗಳವಾಡುವ ಮಕ್ಕಳಿಗೆ ಹಾಸ್ಯಕ್ಕೆ ಹಲಸಿನಕಾಯಿ ಮೇಣ ಎಂದು ಹಿರಿಯರು ಕರೆಯುವುದಿದೆ. ಈ ಹಣ್ಣು ಹೆಚ್ಚುವುದೂ ಒಂದು ಕಲೆ. ಹಿಂದಿನ ಕಾಲದ ಕಡುಕಷ್ಟದ ಬದುಕಿನಲ್ಲಿ ಅನೇಕ ಜೀವಗಳು ಉಳಿದುಕೊಂಡಿದ್ದರೆ ಅದು ಹಲಸಿನಿಂದ. ಬಡತನದ ದಿನಗಳಲ್ಲಿ ಅದೇ ಮುಖ್ಯ ಆಹಾರ. ಒಂದು ಹಣ್ಣು ಇದ್ದರೆ ಕುಟುಂಬದ ಇಡಿಯ ದಿನದ ಹಸಿವು ನೀಗಿಸುವ ಆಪದ್ಬಾಂಧವ. ಹಲಸಿನಲ್ಲಿ ಎರಡು ವರ್ಗ. ಒಂದು ಹಣ್ಣಾಗುವಾಗ ಮೆತ್ತಗಿನ ತೊಳೆಯ ’ತುಳುವ’; ಇನ್ನೊಂದು ಕಳಿತಾಗ ಗಟ್ಟಿಯಾಗಿರುವ ತೊಳೆಗಳ ’ಬಕ್ಕೆ’. ಇದು ತುಳುನಾಡಿನಲ್ಲಿ ವಾಡಿಕೆಯ ಹೆಸರು.

ತುಳುವ ತರಕಾರಿಯಾಗಿ, ಚಿಪ್ಸ್ ಮಾಡಲು, ಹಪ್ಪಳಕ್ಕೆ ಉತ್ತಮ, ಹಣ್ಣಾಗಿ ಮಧ್ಯಮ. ಬಕ್ಕೆ ಅಂದರೆ ಶ್ರೇಷ್ಠ ವರ್ಗ. ಬಲಿತ ಕಾಯಿಯ ತೊಳೆಗಳು ಪಲ್ಯ, ಕೊದ್ದೆಲ್ ಬೋಳ್ ಕೊದ್ದೆಲ್, ಚಿಪ್ಸ್, ಹಪ್ಪಳಕ್ಕೆ ಬೇಕೇ ಬೇಕು. ಇನ್ನು ಈ ದೊಡ್ಡ ಗಾತ್ರದ ಹಣ್ಣಿನ ತೂಕ ಒಂದೊಂದು ಹಣ್ಣೂ ಹತ್ತು ಹದಿನೈದು ಕಿಲೋ ತೂಕವಿರುತ್ತದೆ. ಹಣ್ಣಾದಾಗ ಘಮಘಮ ಸುತ್ತಮುತ್ತವಿಡೀ ಹರಡಿಕೊಳ್ಳುತ್ತದೆ.

ಅಪ್ಪ ಎಂದರೆ ಅಪ್ಪಟ ಕರಾವಳಿಯ ಸಾಂಪ್ರದಾಯಿಕ ತಿಂಡಿ. ಚೆನ್ನಾಗಿ ಹಣ್ಣಾದ ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ ಸಣ್ಣದಾಗಿ ತುಂಡರಿಸಿ ಅಥವಾ ಚೂರಿಯಲ್ಲಿ ಹೆಚ್ಚಿ ಇಟ್ಟುಕೊಳ್ಳಬೇಕು. ತೊಳೆಗಳು ಬಲು ಸಿಹಿಯಾಗಿದ್ದರೆ ಬೆಲ್ಲ ಸ್ವಲ್ಪ ಕಮ್ಮಿ ಸಾಕು. ಬಾಣಲೆಯಲ್ಲಿ ತುಸು ನೀರು ಹಾಕಿ ಅದು ಕುದಿಯುವಾಗ ಬೆಲ್ಲ ಹಾಕಿ ದ್ರವರೂಪಕ್ಕೆ ಮಾಡಿಕೊಳ್ಳಬೇಕು.

ಈಗ ಹೆಚ್ಚಿದ ತೊಳೆಗಳನ್ನು ಬೆಲ್ಲದ ದ್ರಾವಣಕ್ಕೆ ಹಾಕಿ ಚೆನ್ನಾಗಿ ಬೆರಕೆ ಮಾಡಿಕೊಂಡು ಒಂದೆರಡು ನಿಮಿಷ ಕಳೆದು ತೆಗೆದು ಬದಿಗಿಡಿ. ಬೆಳ್ತಿಗೆ ಅಕ್ಕಿಯನ್ನು ತೆಂಗಿನ ತುರಿಯ ಜೊತೆ ನಯವಾಗಿ ರುಬ್ಬಿ ಅದನ್ನು ಬೆಲ್ಲ, ಹಲಸಿನ ತೊಳೆಯ ಪಾಕದ ಜೊತೆಗೆ ಕಲಸಿಡಬೇಕು. ಹಣ್ಣಿನಲ್ಲಿ ಹೇರಳವಾಗಿ ನೀರಿನಂಶ ಇರುವ ಕಾರಣ ಕಾದ ಬೆಲ್ಲದ ದ್ರವಕ್ಕೆ ಹಾಕಿದ್ದೇ ಆದರೆ ಹಿಟ್ಟು ನೀರಾಗುವುದಿಲ್ಲ. ಮಾರನೆಯ ದಿನಕ್ಕೆ ಕೆಡುವುದೂ ಇಲ್ಲ.

ಅಪ್ಪದ ಕಾವಲಿ ಇಲ್ಲದ ಮನೆಗಳು ನಮ್ಮಲ್ಲಿಲ್ಲ. ಏಳು ಅಥವಾ ಐದು ಗುಳಿಗಳಿರುವ ಈ ಕಾವಲಿ ಒಲೆ ಅಥವಾ ಸ್ಟವ್ ನಲ್ಲಿಟ್ಟು ಅದರ ಗುಳಿಗಳಿಗೆ ಒಂದೆರಡು ಚಮಚ ತುಪ್ಪ ಇಲ್ಲದಿದ್ದರೆ ತೆಂಗಿನೆಣ್ಣೆ ಹಾಕಬೇಕು. ಅದು ಕಾಯ್ದಾಗ ಹಿಟ್ಟು ತೆಗೆದು ಗುಳಿಗಳಲ್ಲಿ ಮುಕ್ಕಾಲು ಭಾಗ ಹಾಕಿ ಮುಚ್ಚಿ ಬೇಯಿಸಿ. ಐದು ನಿಮಿಷದಲ್ಲಿ ಘಮಘಮ ಬೀರುವ ಸುವಾಸನೆ. ಅದು ಬೆಂದ ಗುರುತು. ಮುಚ್ಚಳ ತೆಗೆದು ನೋಡಿದರೆ ಉಬ್ಬಿ ಬಂದ ಅಪ್ಪ ಜೇನು ಹಳದಿ ಬಣ್ಣದಲ್ಲಿರುತ್ತದೆ. ಚೂಪಾದ ಕಡ್ಡಿಗಳಿಂದ ತೆಗೆದು ಮಗುಚಿ ಹಾಕಬಹುದು. ಕ್ಷಣಾರ್ಧದಲ್ಲಿ ಬೆಂದು ವಿರಕ್ತರ ಬಾಯಿಯಲ್ಲೂ ನೀರೂರಿಸುತ್ತದೆ ಅಪ್ಪ.

ತೆಗೆದು ಇರಿಸಿ ಪುನಃ ಗುಳಿಗಳಿಗೆ ಹಿಟ್ಟು ತುಂಬಬೇಕು. ಹಲಸಿನ ಹಣ್ಣಿನ ಅಪ್ಪದ ಹಾಗೇ ಮುಳ್ಳುಸೌತೆಕಾಯಿ, ಸೌತೆ, ಬಾಳೆಯ ಹಣ್ಣು. ಅಕ್ಕಿ– ಬೆಲ್ಲದ ಅಪ್ಪ ಆಗುತ್ತದೆ. ಅದ್ಯಾಕೆ ಇಷ್ಟೊಂದು ಸವಿ ಸವಿ ತಿಂಡಿಗೆ ’ಅಪ್ಪ’ ಎನ್ನುವ ಹೆಸರು ಬಂತು ಎಂದು ಕೇಳಿದರೆ ಅದು ಹಿಂದಿನ ಕಾಲದ ಹೆಸರು ಬದಲಾಯಿಸಲಿಕ್ಕೆ ಆಗುವುದಿಲ್ಲ ಅಂತ ಉತ್ತರ ಬರುತ್ತದೆ ಖಡಕ್ಕಾಗಿ.

ಕಾಸರಗೋಡು ಜಿಲ್ಲೆಯ ಸುಪ್ರಸಿದ್ಧ ಮಧೂರು ಗಣಪನ ದೇವಸ್ಥಾನದಲ್ಲಿ ಪ್ರಸಾದ ರೂಪವಾಗಿ ದೊರೆಯುವುದು ಅಪ್ಪ ಎನ್ನುವ ಈ ಅಪರೂಪದ ತಿನಿಸು. ಈ ಕ್ಷೇತ್ರದಲ್ಲಿ (ಮಲೆಯಾಳದಲ್ಲಿ ದೇವಸ್ಥಾನಕ್ಕೆ ಕ್ಷೇತ್ರ ಅಂತ ಕರೆಯುತ್ತಾರೆ) ಗಣಪತಿಗೆ ಸಲ್ಲಿಸುವ ವಿಶಿಷ್ಟ ಪೂಜೆ ಅಂದರೆ ಅದು ಸಹಸ್ರ ಅಪ್ಪದ ಸೇವೆ. ಭಕ್ತರು ಯಾರೂ ಆ ಸೇವೆ ಮಾಡಿಸಬಹುದು. ನಿತ್ಯದ ಪ್ರಸಾದವೂ ಅಪ್ಪವೇ.

ಮೂಡಪ್ಪ ಸೇವೆ ಎಂಬ ವಿಶೇಷ ಪೂಜಾ ಕ್ರಮದಲ್ಲಿ ಗಣಪತಿಯ ಸುತ್ತ ಅಪ್ಪಗಳನ್ನು ತುಂಬುತ್ತಾರೆ. ಈ ಅಪ್ಪ ಅಕ್ಕಿ, ಬೆಲ್ಲ, ತೆಂಗಿನತುರಿಯಿಂದ ತಯಾರಿಸುತ್ತಾರೆ. ಪುರಾತನ ಕಾಲದಿಂದ ಇಂದಿನ ತನಕ ಮಧೂರಿನ ಅಪ್ಪದ ರುಚಿ ಕೊಂಚವೂ ಬದಲಾಗಿಲ್ಲ. ಕರಾವಳಿಯ ’ಅಪ್ಪ’ದ ಸಮಾನ ಅಪ್ಪ ಅತಳ, ವಿತಳ, ಪಾತಾಳ ಲೋಕದಲ್ಲೂ ಸಿಗದು.

ಬಾಣಲೆಯಲ್ಲಿ ಎಣ್ಣೆ ಅಥವ ತುಪ್ಪ ಹಾಕಿ ಬೇಯಿಸುವಾಗ ಅಪ್ಪ ಅದರಲ್ಲಿ ಮುಳುಗಿ ಬೆಂದು ಅಧಿಕ ಎಣ್ಣೆ ಅಥವಾ ತುಪ್ಪ ಹೀರಿಕೊಳ್ಳುತ್ತದೆ. ಬದಲಾಗಿ ಗುಳಿಯ ಕಾವಲಿಯಲ್ಲಿ ತಯಾರಿಸುವಾಗ ಎರಡು ಚಮಚೆ ತುಪ್ಪದಲ್ಲಿ ಐದಾರು ಅಪ್ಪ ಮಾಡಬಹುದು. ಈ ಸಿಹಿತಿಂಡಿಯ ರುಚಿ ಅದ್ಭುತ. ಬಾಯಲ್ಲಿ ಹಾಕಿದಾಗ ಮೆದುವಾಗಿ ಸವಿ, ಸವಿ.

ಸಕ್ಕರೆಗಿಂತ ಬೆಲ್ಲ ಉತ್ತಮ. ಎಣ್ಣೆಗಿಂತ ತುಪ್ಪ ಉತ್ತಮ. ಎಳೆಯರಿಂದ ಹಿಡಿದು ಹಿರಿಯರ ತನಕ ತುಳುನಾಡಿನ ಅಚ್ಚುಮೆಚ್ಚಿನ ಸಿಹಿ ಇದು. ತಿಂದಷ್ಟೂ ಸ್ವಾದ. ಅದೆಂಥ ಘನ ಗಾಂಭೀರ್ಯದವರೂ ಒಂದು ತಿಂದಾದ ಮೇಲೆ ತಮಗರಿವಿಲ್ಲದೇ ಇನ್ನೊಂದಕ್ಕೆ ಕೈ ಹಾಕುತ್ತಾರೆ. ಅಪ್ಪ ತಯಾರಿಸಲು ಗುಳಿಯ ಕಾವಲಿ ಬಳಸುವ ಕಾರಣ ಗುಳಿಯಪ್ಪ ಎಂದೂ ಕರೆಯುತ್ತಾರೆ.

ಕೇರಳದಲ್ಲಿ ಅಪ್ಪಂ ಎಂದು ಕರೆಯುವ ಈ ತಿಂಡಿಗೆ ಅಕ್ಕಿ, ಬೆಲ್ಲ, ತೆಂಗಿನತುರಿ ಹಾಕಿಯೂ ತಯಾರಿಸುತ್ತಾರೆ. ತುಪ್ಪವನ್ನು ಅಪ್ಪದ ಕುಳಿಗಳಿಗೆ ಹಾಕಿ ಮಾಡುವ ಅಪ್ಪ ’ನೆಯ್ಯಪ್ಪಂ’ . ಅದು ಗ್ರಾಹಕರ ಬಲು ಬೇಡಿಕೆಯ ತಿನಿಸು. ಮಲಯಾಳ ರಾಜ್ಯದಲ್ಲಿ ಹೋಟೆಲ್ ಅಂದರೆ ಅಲ್ಲಿ ’ಅಪ್ಪಂ’, ಅಥವಾ ’ನೆಯ್ಯಪ್ಪಂ’ಗೆ ರಾಜಮರ್ಯಾದೆ. ರಸ್ತೆ ಪಕ್ಕದ ಸಾಂಪ್ರದಾಯಿಕ ಹೋಟೆಲುಗಳಾದ ’ತಟ್-ಕಡ’ ತೆಂಗಿನ ಮಡಲಿನ ಒಣ ಗರಿಗಳೇ ಇಲ್ಲಿ ಗೋಡೆ; ಮಣ್ಣಿನ ನೆಲ, ತೂಗುವ ನೇಂದ್ರ ಬಾಳೆಹಣ್ಣಿನ ಗೊನೆ, ಕಟ್ಟಂಚಾಯ (ಬ್ಲ್ಯಾಕ್ ಟೀ)ಯ ಜೊತೆಗೆ ನೆಯ್ಯಪ್ಪಂ ಇದ್ದರೆ ಸ್ವರ್ಗವೇ ಅದು. ಕೇರಳದಲ್ಲಿ ಬ್ಲ್ಯಾಕ್ ಟೀಗೆ ಪ್ರಾಧಾನ್ಯ ಹೆಚ್ಚು.

ತಾವು ತಿಂದಾಗ, ಮಡದಿ ಮಕ್ಕಳಿಗೆ ನಾಲ್ಕು ಕಟ್ಟಿಸಿಕೊಂಡೇ ಏಳುವವರು. ಭರ್ಜರಿಯ ರೆಸ್ಟುರಾಗಳೂ ನೆಯ್ಯಪ್ಪಕ್ಕೆ ಮೊದಲ ಪ್ರಾಧಾನ್ಯ ಕೊಟ್ಟು ತಯಾರಿಸುವುದಿದೆ. ಗ್ರಾಹಕರು ಅದರ ಸವಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಕಂಡುಬಂದರೂ ಒಪ್ಪುವುದಿಲ್ಲ.

ಮಲಯಾಳಂ ಚಿತ್ರರಂಗದ ಮೇರು ನಟರಾದ ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ ಗೋಪಿ, ಜಗದಿ, ಇನ್ನಸೆಂಟ್, ಜಯರಾಂ, ಇಂದ್ರನ್ಸ್, ಶ್ರೀನಿವಾಸ್, ಹರಿಶ್ರೀ ಅಶೋಕನ್ ಇವರೆಲ್ಲ ಅತ್ಯಂತ ಸಹಜವಾಗಿ ಇಂಥ ಚಾಯ-ಕಡ ( ಚಹಾ ಮಾತ್ರ ಸಿಗುವ ಹೋಟೆಲ್) , ಅಥವಾ ತಟ್ಟ್- ಕಡ ಗಳಲ್ಲಿ ಚಹಾ, ತಿನಿಸು ಸೇವಿಸುವ ಸರಳತನ(ಫಿಲಂಗಳಲ್ಲಿ) ಅವರನ್ನು ಜನಮಾನಸಕ್ಕೆ ಸಮೀಪವಾಗಿಸುತ್ತದೆ. ಕೇರಳದಲ್ಲಿ ಕಾಸರಗೋಡಿನಿಂದ ಆರಂಭಿಸಿ ತಿರುವನಂತಪುರದ ತನಕವೂ ಜೇನು ವರ್ಣದ ನೆಯ್ಯಪ್ಪಂ ಬಲು ಜನಪ್ರಿಯ ತಿನಿಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT