ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಡೋರಿನ ಜಲಪಾತ

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹೀಗೊಮ್ಮೆ;

ಎನ್ನ ಸಣ್ಣ ಚಿಣ್ಣ

ಕೇಳಿದನಿಂತು

ಲೋಡೋರಿಗೆಂತು

ಇಳಿವುದದು

ನೀರೆಂದು

ಮೇಲಾಗಿ ನೇಮಿಸಿದನವ ಈ ಕೆಲಸವ

ಪ್ರಾಸದಲಿ ಇರಲೆಂದು

ಕ್ಷಣದಲಿ ಹೇಳೆಂದು

ಬಂದಳಲ್ಲಿ ಓರ್ವ ಮಗಳು

ತರುವಾಯ ಇನ್ನೋರ್ವಳು

ಒತ್ತಾಯಿಸಲೆಂದು

ತಮ್ಮನ ಬಿನ್ನಹವ

ಮೊರೆತ ಭೋರ್ಗರೆತಗಳನೊಳಗೊಂಡು

ಲೋಡೋರಿಗೆ ನೀರು ಬರುವುದೆಂತೆಂದು

ನನ್ನನು ಕೇಳಲೆಂದು

ಅನೇಕ ಬಾರಿಯಿದನು

ಕಂಡಂತೆ ಇವರು.

ಗಮಕದಲಿ ನಾ ಹೇಳಿದೆನು ಅಂತು

ಯಮಕದಲಿ ಸರಕು ನನದೆಂದು

ಅಲ್ಲದೆ ನನ್ನ ಕಾಯಕವಿದೆಂದು

ಅವರ ವಿನೋದಕೆಂದು

ನಾ ಹಾಡಬೇಕೆಂದ

ರಾಜಕವಿಯು ನಾನೆಂದು

ಅವರಿಗೆ ರಾಜ ನಾನೆಂದು.

ಕುಂದ ದೊಣೆಯ

ತನ್ನುಗಮದಿಂದ ಪುಟಿವ;

ತನ್ನ ಚಿಲುಮೆಗಳಿಂದ

ಘಟ್ಟಗಳಲಿ,

ಇದರ ಪುಟ್ಟ ತೊರೆಗಳೂ ಕಿರು ಝರಿಗಳೂ;

ಪಾಚಿಯ ಮೂಲಕವೂ ಪೊದೆಯ ಮೂಲಕವೂ,

ಓಡುವುದು ತೆವಳುವುದು

ಕೆಲಕಾಲ ವಿರಮಿಸುವ ತನಕ

ತನ್ನದೇ ಪುಟ್ಟ ಕೊಳದಲಿ.

ಮತ್ತೆ ಅಲ್ಲಿಂದ ತೆರಳುವಲ್ಲಿ,

ಎದ್ದೇಳುತ್ತ ಬೆಚ್ಚಿಬೀಳುತ್ತ,

ಲಾಳದ ಮೂಲಕ ಓಡುವುದು

ಮತ್ತದರಿಂದ ದೂರ ಸಾಗುವುದು,

ಹುಲ್ಲು ಮಾಳದಲಿ ಮತ್ತು ಕಾಡುದಾರಿಯಲಿ,

ಬಿಸಿಲಲಿ ನೆಳಲಲಿ,

ಕಾನ ಆಸರೆಯಲಿ

ಕಡಿದಾದ ಬಂಡೆಗಳಲಿ ಕಳವಳದಿ,

ದಡಬಡಿಸುತ್ತ,

ಗಡಬಡಿಸುತ್ತ.

ಇಲ್ಲಿ ಬರುತ್ತದೆ ಮೆರುಗಿನಲಿ,

ಅಲ್ಲಿ ಇರುತ್ತದೆ ಮಸುಕಿನಲಿ;

ಈಗ ಹೊಗೆಯುಗುಳುತ ಮತ್ತು ನೊರೆಯಾಗುತ

ಗಲಿಬಿಲಿಯಲಿ ಮುನಿಸಿನಲಿ,

ಈ ಕ್ಷಿಪ್ರ ಪ್ರವಾಹದಲಿ

ಮಣಿವವರೆಗೆ,

ತನ್ನ ಕಡಿದಾದ ಪ್ರಪಾತವ

ಸೇರುವುದು.

ಬಲವಾದ ಜಲಪಾತವಿದು

ನಂತರ ಧುಮುಕುವುದು

ಎರಗುತ್ತ ರೇಗುತ್ತ

ಕದನಾಸಕ್ತವೋ ಎಂಬಂತೆ

ತನ್ನ ಗವಿಗಳಲ್ಲಿ ಶಿಲೆಗಳಲ್ಲಿ;

ಏಳುತ್ತ ಎಗರುತ್ತ,

ಮುಳುಗುತ್ತ ನುಸುಳುತ್ತ,

ಊದುತ್ತ ಉಡುಗುತ್ತ,

ವರ್ಷಿಸುತ್ತ ಕೊನರುತ್ತ,

ಹಾರುತ್ತ ಬೀರುತ್ತ,

ಮುರಿಕಿಸುತ್ತ ಸುರುಳಿ ಸುತ್ತುತ್ತ,

ನೀರ್ಸುಳಿಯಾಗಿ ಬೀಸುತ್ತ,

ಸೂಸುತ್ತ ನಲಿಯುತ್ತ,

ಓಲುತ್ತ ನುಲಿಚುತ್ತ,

ಅತ್ತಿತ್ತ ಸುತ್ತಮುತ್ತ

ಎಡೆಬಿಡದೆ ಪುಟಿದೇಳುತ್ತ!

ಬಡಿಯುತ್ತ ಕಾದಾಡುತ್ತ,

ಒಂದು ಹರ್ಷವೀವ ದೃಶ್ಯ;

ಬೆರಗುಗೊಳಿಸುತ, ಚಕಿತಗೊಳಿಸುತ,

ಮರುಳೈಸುತ್ತ ಮತ್ತು ತನ್ನುಲಿವಿನಿಂದ ಕಿವಿ ಕೆಪ್ಪವಾಗಿಸುತ.

ಕೂಡುತ್ತ, ಹೂಡುತ್ತ

ಹಿಂಜರಿಯುತ್ತ ಜೋರಾಗುತ್ತ,

ಹಾರಾಡುತ್ತ ತೂರಾಡುತ್ತ,

ಅಂಬುತ್ತ ಅಗಲುತ್ತ,

ನುಸುಳುತ್ತ ಪಸರುತ್ತ,

ಭರಗುಡುತ್ತ ಬುಸುಗುಡುತ್ತ,

ಹನಿಯುತ್ತ ಕುಣಿಯುತ್ತ,

ಬಡೆಯುತ್ತ ಒಡೆಯುತ್ತ,

ಮಿರುಗುತ್ತ ತಿರುಚುತ್ತ,

ಧಣಧಣಿಸುತ್ತ ಸೆಣಸುತ್ತ,

ಅಲುಗುತ್ತ ಅದುರುತ್ತ,

ಸುರಿಯುತ್ತ ಮೊರೆಯುತ್ತ,

ಬೀಸುತ್ತ ಓಲಾಡುತ್ತ

ಮೀಟುತ್ತ ದಾಟುತ್ತ,

ಹೊನಲಿಡುತ್ತ ಪೊರಮಡುತ್ತ,

ಓಡುತ್ತ ಜಡವಾಗುತ್ತ,

ನೊರೆಗೂಡುತ್ತ ತಿರುಗಾಡುತ್ತ,

ಗುಳುಗುಳಿಸುತ್ತ ಸುಳಿಸುತ್ತುತ್ತ,

ತೊಟ್ಟಿಕ್ಕುತ್ತ ಕುಪ್ಪಳಿಸುತ್ತ,

ಜರುಗುತ್ತ ಜಗ್ಗುತ್ತ,

ಗೊಣಗುತ್ತ ಹೆಣಗುತ್ತ,

ಏಳುತ್ತ ಸೀಳುತ್ತ,

ಮುಗ್ಗರಿಸುತ್ತ ಮುಲುಕುತ್ತ;

ಮಿರುಗುತ್ತ ಕರಗುತ್ತ,

ಸೇರುತ್ತ ಮೆರೆಯುತ್ತ,

ಬಿಳುಪಾಗುತ್ತ ಹೊಳಪಾಗುತ್ತ,

ಮಿಡುಕುತ್ತ ನಡುಗುತ್ತ,

ಅವಸರದಿ ಚಲಿಸುತ್ತ ಬಿರಬಿರನೆ ಓಡುತ್ತ,

ಗುಡುಗಾಡುತ್ತ ಹೊರಳಾಡುತ್ತ;

ಹೋಳಾಗುತ್ತ ಹೊನಲಾಗುತ್ತ ಜಾರುತ್ತ,

ಇಳಿಯುತ್ತ ಗದ್ದರಿಸುತ್ತ ಚಾಚುತ್ತ ಒರಗುತ್ತ,

ನೂಕುತ್ತ ಸಿಗಿಯುತ್ತ ಹೆಣಗುತ್ತ,

ಸಿಂಪಡಿಸುತ್ತ ಸ್ಫುರಿಸುತ್ತ ಅಲೆಯಾಗುತ್ತ,

ಉಲಿಯುತ್ತ ಪುಟಿಯುತ್ತ ತಿರುಗುತ್ತ,

ನೀರ್ಗುಳ್ಳೆಗಳೇಳುತ್ತ ಕದಡಿಸುತ್ತ ಇಮ್ಮಡಿಸುತ್ತ,

ಗುನುಗುತ್ತ ಮೊಳಗುತ್ತ ಮುಗ್ಗರಿಸುತ್ತ;

ದಡಬಡಿಸುತ್ತ ಅಪ್ಪಳಿಸುತ್ತ ಜರ್ಜರಿಸುತ್ತ;

ಹಿಂದಿರುಗುತ್ತ ತುಡಿಯುತ್ತ ಸಂಧಿಸುತ್ತ ಹರಡುತ್ತ,

ತಳುವುತ್ತ ತೊಂಡಲೆಯುತ್ತ ಸುಳಿದಾಡುತ್ತ ಚಿಮುಕಿಸುತ್ತ,

ಮುನ್ನುಗ್ಗುತ್ತ ಜಿಗಿಯುತ್ತ ಮಿನುಗುತ್ತ ನರ್ತಿಸುತ್ತ,

ಸುರುಳಿಸುತ್ತ ಸರಸರ ಸದ್ದು ಮಾಡುತ್ತ ಸಾಗುತ್ತ ಮರಳುತ್ತ,

ಮಿಣುಕುತ್ತ ಹರಿಯುತ್ತ ಆವಿಯಾಗುತ್ತ ಕಾಂತಿ ಸೂಸುತ್ತ,

ನುಗ್ಗುತ್ತ ನೂಕುತ್ತ ತಿಕ್ಕುತ್ತ ಚಿಮ್ಮುತ್ತ,

ಜೋಲಾಡುತ್ತ ಹೊಡೆಯುತ್ತ ತಟ್ಟುತ್ತ ತಾಡುತ್ತ,

ನಿಡುಸುರುಳಿಯಾಗುತ್ತ ಗರಗರನೆ ತಿರುಗುತ್ತ

ಸುರುಳಿಯಾಗಿ ಹರಿಯುತ್ತ ಹೊರಳುತ್ತ,

ಗುಮ್ಮುತ್ತ ಬಿದ್ದೇಳುತ್ತ ತಾಗುತ್ತ ಜಿಗಿಯುತ್ತ,

ಎರಗುತ್ತ ಎರಚುತ್ತ ಸಿಡಿಸುತ್ತ ಘರ್ಷಿಸುತ್ತ

ಅಂತು, ಎಂದೂ ಅಂತ್ಯವಾಗದೆ ನಿರಂತರ ಪತನ ನಿರತ,

ಉಲಿತಗಳೂ ಚಲಿತಗಳೂ ಅನವರತವೂ ಸಮ್ಮಿಳಿತಗೊಳ್ಳುತ್ತ,

ಎಲ್ಲವೂ ಒಮ್ಮೆಲೆ ಹುಯಿಲಿನೊಡನೆ ನೆಲೆಗೊಳ್ಳುತ್ತ,

ಇಂತು ಕೆಳಗಿಳಿವುದಾ ವಾರಿ ಲೋಡೋರಿಗೆ.

ಇಂಗ್ಲಿಷ್‌ ಮೂಲ: ರಾಬರ್ಟ್‌ ಸೌದಿ

ಅನುವಾದ: ಶೈಲಜಾ ಹೂಗಾರ

ಇದೆಲ್ಲಿಯದು?
‘The Cataract of Lodore’ 1820ರಲ್ಲಿ ಇಂಗ್ಲಿಷ್‌ ಕವಿ ರಾಬರ್ಟ್‌ ಸೌದಿ ಬರೆದ ಕವನ. ಇಂಗ್ಲಂಡ್‌ನ ಕುಂಬ್ರಿಯಾ ಪ್ರದೇಶದಲ್ಲಿರುವ ಲೋಡೋರ್‌ ಜಲಪಾತವನ್ನು ವರ್ಣಿಸಿ ಬರೆದದ್ದು. 1809ರಲ್ಲೇ ತಮ್ಮ ಪತ್ನಿ ಮತ್ತು ಚಿಕ್ಕ ಮಗನನ್ನು ಕುರಿತು ಬರೆದ ಪತ್ರದಲ್ಲಿ ಅವರು ಭಾಗಶಃ ಇದನ್ನು ಉಲ್ಲೇಖಿಸಿದ್ದರು. ಆದರೆ ಪ್ರಕಟವಾಗಿದ್ದು 1823ರಲ್ಲಿ. ವಿಷಾದದ ಸಂಗತಿ ಎಂದರೆ 1816ರಲ್ಲೇ ಅವರ ಚಿಕ್ಕ ಮಗ ಹರ್ಬರ್ಟ್‌ ತೀರಿಕೊಂಡ. ‘ಜಿಗಿಯುತ್ತ ಪುಟಿಯುತ್ತ’ ಇರುವ ಜಲಪಾತ ಕೊನೆಗೆ ‘ಒಮ್ಮೆಲೆ ನೆಲೆಗೊಳ್ಳುವ’ ಬಗೆಯನ್ನು ಬಹುಶಃ ಅವರ ಮಗನ ಸ್ಮರಣೆಯೆಂದೂ ಭಾವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT