ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಜಲ್ ಗೋರಿಕಲ್ಲು!

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪತ್ರಿಕೆಗಳಲ್ಲಿ ಪ್ರಕಟವಾಗುವ ಪದಬಂಧ, ಸುಡೊಕು ಇತ್ಯಾದಿ ಪಜಲ್‌ಗಳನ್ನು ನೀವು ಗಮನಿಸಿರಬಹುದು. ಮೆದುಳನ್ನು ಹರಿತಗೊಳಿಸುವ ಪಜಲ್‌ಗಳು ಬುದ್ಧಿಶಕ್ತಿಗೆ ಒರೆಗಲ್ಲು. ಮರೆವಿನ ರೋಗವನ್ನು ದೂರ ಮಾಡುವ ಪಜಲ್ ಬಿಡಿಸುವ ಕೆಲಸವು ಅತ್ಯಂತ ಆರೋಗ್ಯದಾಯಕ ಚಟ. ವಿಶ್ವದಾದ್ಯಂತ ಹಲವಾರು ಜನ ಇವುಗಳನ್ನು ಬಿಡಿಸುವ ಹವ್ಯಾಸಕ್ಕೆ ಅಂಟಿಕೊಂಡಿರುತ್ತಾರೆ. ಗೋರಿ ಕಲ್ಲಿನ ಮೇಲೆಯೇ ಪಜಲ್‌ಅನ್ನು ಕೆತ್ತಿರುವ ಅಚ್ಚರಿಯ ಸಂಗತಿಯ ಹಿಂದೆ ಕಥೆಯೊಂದು ಅಡಗಿದೆ.

ಕೆನಡಾದ ವೆಲ್ಲೆಸ್ಲಿ ಪಟ್ಟಣದ ಡಾಕ್ಟರ್ ಸಾಮ್ಯುಯಲ್ ಬೀನ್ ಎನ್ನುವವರ ಮೊದಲ ಹೆಂಡತಿ ಹೆನ್ರಿಯೆಟ್ಟಾಳು ಮದುವೆಯಾದ ಏಳು ತಿಂಗಳಲ್ಲೇ ತೀರಿಕೊಂಡಳು. ದುರದೃಷ್ಟವಶಾತ್, ಮರು ಮದುವೆಯಾದ ಕೆಲವೇ ತಿಂಗಳಲ್ಲಿ ಎರಡನೇ ಹೆಂಡತಿ ಸುಸಾನಾಳೂ ಗತಿಸಿದಳು. ಡಾ. ಬೀನ್‌ ಅವರು ಅತ್ಯಂತ ಪ್ರೀತಿ ಪಾತ್ರರಾಗಿದ್ದ ತಮ್ಮ ಪತ್ನಿಯರ ಕಳೇಬರಗಳನ್ನು ಓಂಟಾರಿಯೋದಲ್ಲಿನ ವೆಲ್ಲೆಸ್ಲಿ ಟೌನ್‌ಶಿಪ್‌ನ ಕ್ರಾಸ್‌ಹಿಲ್ ಹತ್ತಿರವಿರುವ ರಶಸ್ ಸ್ಮಶಾನದಲ್ಲಿ, ಅಕ್ಕ ಪಕ್ಕದಲ್ಲಿ ಹೂಳಿಸಿದರು. ಈ ಇಬ್ಬರು ಹೆಂಡತಿಯರು ಪಜಲ್ ಪ್ರಿಯರಾಗಿದ್ದರಿಂದ, ಮುದ್ದಿನ ಮಡದಿಯರ ಗೌರವಾರ್ಥವಾಗಿ ವಿಶೇಷ ರೀತಿಯ ಗೋರಿಕಲ್ಲನ್ನು ನಿರ್ಮಿಸಬೇಕು ಎಂದು ಡಾಕ್ಟರ್ ನಿಶ್ಚಯಿಸಿದರು. ಅದರಂತೆ ಗೋರಿಕಲ್ಲಿನ ಮೇಲೆ ಪಜಲ್ ಅನ್ನು ಕೆತ್ತಲಾಯಿತು. ಮುಂದಿನ ಎಂಬತ್ತು ವರ್ಷಗಳ ಕಾಲ, ಹಲವಾರು ಇತಿಹಾಸ ತಜ್ಞರು, ಗುಪ್ತ ಲಿಪಿ ಶಾಸ್ತ್ರಜ್ಞರು ಇದರಲ್ಲಿರುವ ತೊಡಕಿನ ಸಮಸ್ಯೆಯನ್ನು ಬಿಡಿಸಲು ಬಹಳವಾಗಿ ಪ್ರಯತ್ನ ಪಟ್ಟರು.

ಮೂಲ ಗೋರಿಕಲ್ಲು ಬಿಸಿಲು, ಗಾಳಿ, ಮಳೆಗೆ ಹೊಡೆತಕ್ಕೆ ಸಿಲುಕಿ ಬಹಳಷ್ಟು ಶಿಥಿಲಗೊಂಡಿತ್ತು. ಆದ್ದರಿಂದ ಬಾಳಿಕೆ ಬರುವಂಥ ಗ್ರಾನೈಟ್ ಕಲ್ಲಿನಲ್ಲಿ ಅದರ ಪ್ರತಿಕೃತಿಯನ್ನು ನಿರ್ಮಿಸಿ 1982ರಲ್ಲಿ ಬದಲಾಯಿಸಲಾಯಿತು. ಇಂದಿಗೂ ರಶಸ್ ಸ್ಮಶಾನದಲ್ಲಿ ಇದನ್ನು ನೋಡಬಹುದಾಗಿದೆ. ಈ ಗೋರಿಕಲ್ಲು 3 ಅಡಿ ಉದ್ದವಿದ್ದು ಅದರ ಮೇಲೆ ಮೃತ ಮಹಿಳೆಯರಿಬ್ಬರ ಹೆಸರನ್ನು ನಮೂದಿಸಲಾಗಿದೆ. ಇದರ ಮೇಲ್ಭಾಗದಲ್ಲಿ ಆಗಸಕ್ಕೆ ತೋರುಬೆರಳನ್ನು ಚಾಚಿರುವ ಚಿತ್ರವನ್ನು ಕೆತ್ತಿ  GONE HOME ಎಂಬುದಾಗಿ ಬರೆಯಲಾಗಿದೆ. ಹೆಸರುಗಳ ಕೆಳಭಾಗದಲ್ಲಿರುವ ಗ್ರಿಡ್‌ನಲ್ಲಿ 225 ಇಂಗ್ಲಿಷ್ ಅಕ್ಷರಗಳನ್ನು ಹಾಗೂ ಅಂಕೆಗಳನ್ನು ಯಾವ ಕ್ರಮಬದ್ಧತೆಯೂ ಇಲ್ಲದೆ ಮನಬಂದಂತೆ ಬರೆಯಲಾಗಿದೆ. ಇದರ ಕೆಳಗೆ READER MEET US IN HEAVEN ಎಂಬುದಾಗಿ ಬರೆಯಲಾಗಿದೆ.

ಸಾಕಷ್ಟು ಜನರು ಕುತೂಹಲಭರಿತರಾಗಿ, ಗೋರಿಕಲ್ಲಿನ ಮೇಲೆ ಕೆತ್ತಿಸಿರುವ ಗೂಡಾರ್ಥದ ಸಂದೇಶವೇನು ಎಂಬುದಾಗಿ ಡಾಕ್ಟರ್ ಬೀನ್ ಅವರನ್ನು ಕೇಳಿಕೊಂಡರೂ ಅವರು ಅದರಲ್ಲಿನ ರಹಸ್ಯವನ್ನು ಬಹಿರಂಗಪಡಿಸಲಿಲ್ಲ. ಡಾ.ಬೀನ್ ಅವರು 1904ರಲ್ಲಿ ಕ್ಯೂಬಾ ದೇಶದ ಪ್ರವಾಸದಲ್ಲಿದ್ದಾಗ ದೋಣಿಯಿಂದ ಆಯ ತಪ್ಪಿ ನೀರೊಳಗೆ ಬಿದ್ದು ಮುಳುಗಿ ಹೋದರು. ಗೋರಿ ಕಲ್ಲಿನ ಮೇಲಿದ್ದ ಪಜಲ್ ರಹಸ್ಯವೂ, ಅವರೊಂದಿಗೆ ಜಲಸಮಾಧಿಯಾಯಿತು.

ಡಾಕ್ಟರ್ ಬೀನ್ ಅವರ ಪತ್ನಿಯರನ್ನು ಹೂಳಿ 80 ವರ್ಷಗಳ ನಂತರ, ಅಂದರೆ 1947ರಲ್ಲಿ ಮೊದಲ ಬಾರಿಗೆ ಗೋರಿಕಲ್ಲಿನ ಮೇಲಿದ್ದ ಗೂಢಲಿಪಿಯ ರಹಸ್ಯವನ್ನು ಸ್ಮಶಾನವನ್ನು ನೋಡಿಕೊಳ್ಳುವ ಜಾನ್ ಎಲ್ ಹ್ಯಾಮಂಡ್ ಎಂಬಾತನು ಭೇದಿಸಿದನು. ಈತ ಗೋರಿಕಲ್ಲಿನ ಮೇಲೆ ಕೆತ್ತಿದ್ದ ಅಕ್ಷರಗಳನ್ನು ನಕಲು ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋಗಿ, ಹಲವಾರು ತಿಂಗಳುಗಳ ಕಾಲ ಸತತ ಪ್ರಯತ್ನ ಮಾಡಿ ಕೊನೆಗೆ ಅದನ್ನು ಬಿಡಿಸುವಲ್ಲಿ ಸಫಲನಾದನು.

ಗೋರಿಕಲ್ಲಿನ ಮೇಲಿರುವ ಗೂಢಾರ್ಥವನ್ನು ಬಿಡಿಸಲು ಎಡಭಾಗದ ಏಳನೆಯ ಕಾಲಮ್ಮಿನಿಂದ ಮತ್ತು ಮೇಲಿಂದ ಏಳನೆಯ ಅಕ್ಷರದಿಂದ ಪ್ರಾರಂಭಿಸಿ ಜಿಗ್ ಜಾಗ್ ರೀತಿಯಲ್ಲಿ ಓದುತ್ತಾ ಹೋಗಬೇಕು. ಇದನ್ನು ಸರಿಯಾಗಿ ಬಿಡಿಸಿದಾಗ ಈ ಕೆಳಕಂಡಂತೆ ಓದಬಹುದು.

IN MEMORIAM
HENRIETTA 1ST WIFE OF S BEAN M. D. WHO DIED 27TH SEP 1865 AGED 23 YEARS 2 MONTHS & 17 DAYS & SUSANNA HIS 2ND WIFE WHO DIED 27TH APRIL 1867 AGED 26 YEARS 10 MONTHS & 15 DAYS 2 BETTER WIVES 1 MAN NEVER HAD THEY WERE GIFTS FROM GOD BUT ARE NOW IN HEAVEN MAY GOD HELP ME S. B. TO MEET THEM THERE

ಮೂಲ ಗೋರಿಕಲ್ಲಿನಲ್ಲಿ ಕೆತ್ತಲಾಗಿರುವ ಅಕ್ಷರಗಳನ್ನು ಪ್ರತಿಕೃತಿಯಲ್ಲಿ ಮೂಡಿಸುವಾಗ ಕೆಲವು ಅಕ್ಷರಗಳು ತಪ್ಪಾಗಿವೆಯೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT