ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ ಸಿನಿಮಾ ಹಬ್ಬ

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜಗತ್ತಿನ ಸಮಕಾಲೀನ ಸಿನಿಮಾಗಳ ಪ್ರದರ್ಶನ, ಚರ್ಚೆ, ಸಂವಾದಕ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವಗಳು ಬಹುದೊಡ್ಡ ವೇದಿಕೆ. ಅಂಥದೊಂದು ವೇದಿಕೆ ಪಣಜಿಯಲ್ಲಿ ಸಿದ್ಧವಾಗಿದೆ. ನಾಳೆಯಿಂದ ಅಲ್ಲಿ ಭಾರತದ 48ನೇಯ ಅಂತರರಾಷ್ಟ್ರೀಯ ಸಿನಿಮೋತ್ಸವ. ಇದರ ಬೆನ್ನಲ್ಲೇ ತಿರುವನಂತಪುರ, ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು ಹಾಗೂ ಪುಣೆ ಮತ್ತಿತರ ಕಡೆ ಅಂತರರಾಷ್ಟ್ರೀಯ ಸಿನಿಮೋತ್ಸವಗಳು ನಡೆಯುತ್ತವೆ. ಮುಂದಿನ ಮೂರು ತಿಂಗಳು ದೇಶದ ಪ್ರಮುಖ ನಗರಗಳಲ್ಲಿ ‘ಸಿನಿಮಾ ಹಬ್ಬ’.

ಗೋವಾ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರವಾಸಿಗರಿಗೆ ಅಲ್ಲಿನ ಬೀಚುಗಳು ಅಚ್ಚುಮೆಚ್ಚು. ಮೋಜು, ಮಸ್ತಿಗೆ ಇದ್ದ ಮುಕ್ತ ಅವಕಾಶಕ್ಕೆ ಈಗ ಕಡಿವಾಣ ಬಿದ್ದಿದೆ. ಆದರೂ, ಗೋವಾ ಇನ್ನೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಈ ಪುಟ್ಟ ರಾಜ್ಯದಲ್ಲಿ ಸಿನಿಮಾ ಉದ್ಯಮ ಬೆಳೆದಿಲ್ಲ. ಸಿನಿಮಾ ಸಂಸ್ಕೃತಿಯೂ ಅಷ್ಟಾಗಿಲ್ಲ. ವರ್ಷಕ್ಕೆ ಒಂದು ಕೊಂಕಣಿ ಸಿನಿಮಾ ಅಲ್ಲಿ ನಿರ್ಮಾಣವಾದರೆ ಅದೇ ದೊಡ್ಡದು. ಆದರೆ, ಗೋವಾದ ಸುಂದರ ಪರಿಸರ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣ. ಈ ವಿಶ್ವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆಯುವ ಸಿನಿಮೋತ್ಸವಕ್ಕೆ ಈಗ ಮಹತ್ವ ಬಂದಿದೆ. ಸಿನಿಮಾ ನೋಡಿ ಬೇಸರವಾದರೆ ಬೀಚುಗಳಲ್ಲಿ ಸುತ್ತಾಡುವ ಅವಕಾಶವಂತೂ ಇದೆ.

7-8 ದಿನಗಳು ಅತ್ತಿತ್ತ ತಿರುಗಿ ನೋಡದೆ ಸಿನಿಮಾ ನೋಡುವ ದೊಡ್ಡ ಸಂಖ್ಯೆಯ ಆಸಕ್ತರು ಪಣಜಿ ಸಿನಿಮೋತ್ಸವಕ್ಕೆ ಬರುತ್ತಾರೆ. ಪಣಜಿ, ಅಂತರರಾಷ್ಟ್ರೀಯ ಸಿನಿಮೋತ್ಸವದ ಕಾಯಂ ನೆಲೆ ಆದ ಮೇಲೆ ಜಗತ್ತಿನ ಸಿನಿಮಾ ಮಂದಿಯ ಗಮನ ಗೋವಾದ ಮೇಲೆ ನೆಟ್ಟಿದೆ. ಸಿನಿಮೋತ್ಸವದ ಹೆಸರಿನಲ್ಲಿ ಅಲ್ಲಿ ಪ್ರ್ರವಾಸೋದ್ಯಮ ಸಮೃದ್ಧವಾಗಿ ಬೆಳೆಯುತ್ತಿದೆ.

2004ಕ್ಕಿಂತ ಮೊದಲು ಪ್ರತಿವರ್ಷ ದೇಶದ ಒಂದೊಂದು ಪ್ರಮುಖ ನಗರಗಳಲ್ಲಿ ಈ ಸಿನಿಮೋತ್ಸವ ನಡೆಯುತ್ತಿತ್ತು. ಆಗ ಒಂದು ಬಗೆಯ ವೈವಿಧ್ಯ ಇತ್ತು. ಸಿನಿಮೋತ್ಸವ ಸಂಘಟಿಸಲು ರಾಜ್ಯಗಳ ನಡುವೆ ಪೈಪೋಟಿ ಇರುತ್ತಿತ್ತು. ಈಗ ಒಂದು ಬಗೆಯ ಏಕತಾನತೆ. ಪಣಜಿ ಸಿನಿಮೋತ್ಸವದ ಆಕರ್ಷಣೆ ಹೆಚ್ಚು ಕಾಲ ಉಳಿಯದು ಎಂಬ ಸಿನಿಕ ಮಾತುಗಳು ಇತ್ತೀಚೆಗೆ ಕೇಳಿ ಬರುತ್ತಿವೆ.

ಪಣಜಿ ಸಿನಿಮೋತ್ಸವ ದೇಶದ ಗೌರವ ಹಾಗೂ ಪ್ರತಿಷ್ಠೆಯ ಸಂಕೇತ. ಅದು ಅಧಿಕೃತ ಸಿನಿಮೋತ್ಸವ. ಅದಕ್ಕೆ ಹಣಕಾಸಿನ ಕೊರತೆ ಇಲ್ಲ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಸಿನಿಮೋತ್ಸವ ಸಂಘಟಿಸಬೇಕು ಎಂಬುದಷ್ಟೇ ಮುಖ್ಯ. ಇದರಿಂದಾಗಿ ಸಿನಿಮೋತ್ಸವಕ್ಕೆ ಅದ್ದೂರಿತನ ಅನಾಯಾಸವಾಗಿ ಒದಗಿಬರುತ್ತಿದೆ.

ಸಿನಿಮೋತ್ಸವದ ಎಂಟು ದಿನ ಬೆಳಿಗ್ಗೆ 8.30ರಿಂದ ರಾತ್ರಿ 11.30ರವರೆಗೆ ಏಳು ತೆರೆಗಳಲ್ಲಿ ನಿರಂತರ ಸಿನಿಮಾಗಳ ಪ್ರದರ್ಶನ ನಡೆಯುತ್ತದೆ. ಈ ಸಿನಿಮಾಗಳ ನಿರ್ದೇಶಕರು, ನಟ, ನಟಿಯರು ಮತ್ತು ತಂತ್ರಜ್ಞರ ಜತೆ ಸಂವಾದಕ್ಕೆ, ಚರ್ಚೆಗೆ ಅವಕಾಶವಿದೆ. ಗುಂಪು ಚರ್ಚೆ ಬೇಡವೆಂದರೆ ಆಸಕ್ತರು ಸಿನಿಮೋತ್ಸವ ನಡೆಯುವ ಐನಾಕ್ಸ್ ಅಂಗಳದಲ್ಲಿ ಕೂತು ಚರ್ಚೆ ಮಾಡಬಹುದು. ದೇಶದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪತ್ರಿಕಾಗೋಷ್ಠಿಗೆ ಅವಕಾಶವಿದೆ. ಸಿನಿಮೋತ್ಸವಕ್ಕೆ ಬಂದ ನಟಿ, ನಟಿಯರು, ತಂತ್ರಜ್ಞರ ಜತೆ ಮಾತನಾಡುವ ಅವಕಾಶ ಸಿಗುತ್ತದೆ. ಅನೇಕರಿಗೆ ಅನಾಯಾಸವಾಗಿ ದೇಶವ್ಯಾಪಿ ಪ್ರಚಾರ ಸಿಗುತ್ತದೆ! ಬದಲಾಗುತ್ತಿರುವ ತಂತ್ರಜ್ಞಾನ ಇತ್ಯಾದಿ ಕುರಿತು ಓಪನ್ ಫೋರಂ ಹೆಸರಿನಲ್ಲಿ ನಿತ್ಯ ಚರ್ಚೆ ಇರುತ್ತದೆ. ಸಿನಿಮಾ ನೋಡಿ ದಣಿದವರಿಗೆ ಐನಾಕ್ಸ್ ಅಂಗಳದಲ್ಲೇ ಕಾಫಿ, ಚಹ, ತಣ್ಣನೆ ಬಿಯರ್ ಕುಡಿಯುತ್ತ ಹರಟೆ ಹೊಡೆಯಲು ಅವಕಾಶವಿದೆ. ಇಲ್ಲಿ ಕಾಲ ಕಳೆಯುವುದು ಕೆಲವರಿಗೆ ಖುಷಿಯ ಸಂಗತಿ.

ಸಿನಿಮೋತ್ಸವದ ಭಾಗವಾಗಿ ‘ಫಿಲಂ ಬಜಾರ್’ ಹೆಸರಿನಲ್ಲಿ ಮೂರು ದಿನ ಸಿನಿಮಾಗಳು ಮಾರಾಟ, ಬಂಡವಾಳ ಹೂಡಿಕೆ, ಸಹಯೋಗದಲ್ಲಿ ಸಿನಿಮಾ ನಿರ್ಮಾಣ, ಪರಸ್ಪರ ಪ್ರಾಯೋಜಕತ್ವದ ಮಾತುಕತೆಗೂ ಅವಕಾಶವಿದೆ. ಭಾರತೀಯ ಸಿನಿಮಾ ನಡೆದು ಬಂದ ದಾರಿಯನ್ನು ಬಿಂಬಿಸುವ ಚಿತ್ರಗಳು ಹಾಗೂ ಪೋಸ್ಟರ್‌ಗಳ ಪ್ರದರ್ಶನವೂ ಇದೆ. ಐನಾಕ್ಸ್ ಚಿತ್ರಮಂದಿರದ ಎದುರೇ ಮಾಂಡೋವಿ (ಮಹದಾಯಿ) ನದಿ ಹರಿಯುತ್ತದೆ. ಸಿನಿಮೋತ್ಸವ ಮುಗಿಯುವರೆಗೆ ಸಂಜೆ ಆರರಿಂದ ಹತ್ತರವರೆಗೆ ಪಣಜಿ ಹಾಗೂ ಸುತ್ತಲಿನ ಹಳ್ಳಿಗಳ ಜನ ಜಾತ್ರೆಯೋಪಾದಿಯಲ್ಲಿ ಸೇರುತ್ತಾರೆ. ಕೊಂಕಣಿ, ಮರಾಠಿ, ಹಿಂದಿ ಮತ್ತಿತರ ಭಾಷೆಗಳಲ್ಲಿ ಮಾತಾಡುತ್ತ, ಅತ್ತಿತ್ತ ಸಡಗರದಿಂದ ಓಡಾಡುತ್ತ ಸಂಭ್ರಮ ಹೆಚ್ಚಿಸುತ್ತಾರೆ. ಎಲ್ಲವೂ ಸೇರಿ ಸಿನಿಮೋತ್ಸವಕ್ಕೆ ಹಬ್ಬದ ಸ್ವರೂಪ ಬಂದು ಬಿಡುತ್ತದೆ.

ಜಗತ್ತಿನ ಸಿನಿಮೋತ್ಸವಗಳು
ಕಾನ್ಸ್, ಬರ್ಲಿನ್, ವೆನಿಸ್ ಅಂತರರಾಷ್ಟ್ರೀಯ ಸಿನಿಮೋತ್ಸವಗಳು ಜಗತ್ತಿನ ಪ್ರಮುಖ ಸಿನಿಮೋತ್ಸವಗಳು. ಈಗ ಸಿನಿಮಾ ನಿರ್ಮಿಸುವ ಎಲ್ಲಾ ದೇಶಗಳಲ್ಲೂ ಅಂತರರಾಷ್ಟ್ರೀಯ ಹೆಸರಿನ ಸಿನಿಮೋತ್ಸವಗಳು ನಡೆಯುತ್ತಿವೆ. ಜಗತ್ತಿನಾದ್ಯಂತ ಸುಮಾರು 1000 ಸಿನಿಮೋತ್ಸವಗಳು ನಡೆಯುತ್ತವೆ ಎಂಬ ಅಂದಾಜಿದೆ. ಕಾನ್ಸ್ ಚಿತ್ರೋತ್ಸವ 1946ರಲ್ಲಿ ಆರಂಭವಾಯಿತು. ವಿಶ್ವದ ಮೊದಲ ಸಿನಿಮೋತ್ಸವ ನಡೆದದ್ದು ಎಲ್ಲಿ? ಅದರ ಮೂಲ ಸ್ವರೂಪ ಹೇಗಿತ್ತು. ಹೇಗೆ ಬದಲಾಗುತ್ತ ಹೋಯಿತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ.

ದೇಶದ ಮೊದಲ ಪ್ರಧಾನಿ ಜವಹಾರಲಾಲ್ ನೆಹರೂ ಅವರ ಆಸಕ್ತಿಯಿಂದಾಗಿ 1952ರಲ್ಲಿ ಭಾರತದಲ್ಲಿ ಅಂತರರಾಷ್ಟ್ರೀಯ ಸಿನಿಮೋತ್ಸವ ಆರಂಭವಾಯಿತು. ವಿಶ್ವ ಸಿನಿಮಾಗಳನ್ನು ಭಾರತೀಯರೂ ನೋಡುವಂತಾಗಬೇಕು ಎಂಬುದು ಸಿನಿಮೋತ್ಸವದ ಆಶಯ. ಅದರಿಂದ ವಿಭಿನ್ನ ಸಂಸ್ಕತಿಗಳ ಪರಿಚಯವಾಗುತ್ತದೆ. ಭಾರತೀಯ ಸಿನಿಮಾ ತಂತ್ರಜ್ಞರಿಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಪರಿಚಯವಾಗುತ್ತದೆ. ಅದರಿಂದ ಭಾರತದ ಸಿನಿಮೋದ್ಯಮ ಬೆಳೆಯುತ್ತದೆ ಎನ್ನುವುದು ನೆಹರೂ ಅವರ ಕಾಳಜಿಯಾಗಿತ್ತು.

1952ರ ಜನವರಿ 24ರಿಂದ ಫೆಬ್ರುವರಿ 1ರವರೆಗೆ ಮುಂಬೈನಲ್ಲಿ ಭಾರತದ ಮೊದಲ ಸಿನಿಮೋತ್ಸವ ನಡೆಯಿತು. ನೆಹರೂ ಅವರೇ ಸಿನಿಮೋತ್ಸವ ಉದ್ಘಾಟಿಸಿದ್ದರು. ಅದು ಏಷ್ಯಾದಲ್ಲಿ ನಡೆದ ಮೊದಲ ಸಿನಿಮೋತ್ಸವವೂ ಆಗಿತ್ತು. ನಂತರದ ವರ್ಷಗಳಲ್ಲಿ ಏಷ್ಯಾದ ಇತರ ರಾಷ್ಟ್ರಗಳಲ್ಲೂ ಸಿನಿಮೋತ್ಸವಗಳು ಆರಂಭವಾದವು. 1952ರ ಸಿನಿಮೋತ್ಸವದಲ್ಲಿ ಜಗತ್ತಿನ 23 ದೇಶಗಳ ಸಿನಿಮಾಗಳು ಪ್ರದರ್ಶನವಾಗಿದ್ದವು. ಈ ವರ್ಷ ಪಣಜಿ ಸಿನಿಮೋತ್ಸವದಲ್ಲಿ ನೂರು ದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಸಿನಿಮಾ ಬಹು ದೊಡ್ಡ ಮನರಂಜನಾ ಉದ್ಯಮ. ಹೀಗಾಗಿ ವಿಶ್ವ ಸಿನಿಮಾಗಳ ಬಗ್ಗೆ ಎಲ್ಲರಿಗೂ ಕುತೂಹಲ.

2019ರ ಸಿನಿಮೋತ್ಸವ 50ನೆಯದು. ಆ ವೇಳೆಗೆ ಪಣಜಿಯ ಮೀರಾಮಾರ್ ಪ್ರದೇಶದಲ್ಲಿ ಸಿನಿಮೋತ್ಸವ ಕಾಂಪ್ಲೆಕ್ಸ್ ತಲೆ ಎತ್ತಲಿದೆ. ಸುವರ್ಣ ಸಿನಿಮೋತ್ಸವ ಇನ್ನಷ್ಟು ಅದ್ದೂರಿಯಾಗಲಿದೆ.

* * *

1952ರ ಮೊದಲ ಸಿನಿಮೋತ್ಸವದಲ್ಲಿ ಆವಾರ (ಹಿಂದಿ), ಪಾತಾಳ ಭೈರವಿ(ತೆಲುಗು) ಆಮ್ರಭೂಪಾಲಿ(ಮರಾಠಿ), ಬಬ್ಲ (ಬೆಂಗಾಳಿ) ಮತ್ತಿತರ ಭಾರತೀಯ ಭಾಷೆಗಳ ಸಿನಿಮಾಗಳು ಸೇರಿದಂತೆ ಒಟ್ಟು 40 ಸಿನಿಮಾಗಳು ಹಾಗೂ ಸುಮಾರು 100 ಕಿರುಚಿತ್ರಗಳು ಪ್ರದರ್ಶನವಾಗಿದ್ದವು. 1965ರ ಸಿನಿಮೋತ್ಸದಲ್ಲಿ ಸ್ಪರ್ಧಾ ವಿಭಾಗ ಆರಂಭವಾಯಿತು. ಅತ್ಯುತ್ತಮ ಚಿತ್ರಗಳಿಗೆ ಬಹುಮಾನ ನೀಡುವ ಪರಿಪಾಠ ಆರಂಭವಾಯಿತು. ವಿಶ್ವ ಪ್ರಮುಖ ಸಿನಿಮಾ ತಜ್ಞರಿರುವ ತೀರ್ಪುಗಾರರ ಸಮಿತಿ ಬಹುಮಾನಿತ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. 1965ರಲ್ಲಿ ಶ್ರೀಲಂಕಾದ ಸಿನಿಮಾ ‘ಗಂಪೆರಲಿಯೆ’ ಮೊದಲ ಬಹುಮಾನ ಪಡೆದು ವಿಶ್ವದ ಗಮನ ಸೆಳೆಯಿತು. 1980ರಲ್ಲಿ ಗೋವಿಂದ ನಿಹಲಾನಿ ನಿರ್ದೇಶನದ ಆಕ್ರೋಶ್, 2012ರಲ್ಲಿ ಪಂಜಾಬಿ ಚಿತ್ರ ‘ಆನ್ಹೇ ಘೋರೆ ದಾದಾನ್’ ಅತ್ಯುತ್ತಮ ಸಿನಿಮಾಗಳೆಂಬ ಮನ್ನಣೆ ಪಡೆದಿವೆ. ತೀರ್ಪುಗಾರರ (ಜ್ಯೂರಿ) ಪ್ರಶಸ್ತಿಯನ್ನು ಹಲವು ಭಾರತೀಯ ಸಿನಿಮಾಗಳು ಪಡೆದಿವೆ. 

ನಿರೀಕ್ಷೆಗೂ ಮೀರಿ ಯಶಸ್ವಿ
ಪಣಜಿ, ಅಂತರರಾಷ್ಟ್ರೀಯ ಸಿನಿಮೋತ್ಸವದ ಕಾಯಂ ಮೇಲೆ ಆದ ಮೇಲೆ ದಕ್ಷಿಣ ರಾಜ್ಯಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಸಿನಿಮೋತ್ಸವಗಳಿಗೆ ಹೆಚ್ಚಿನ ಒತ್ತು ಸಿಕ್ಕಿದೆ. ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಈ ಸಿನಿಮೋತ್ಸವಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿವೆ. ಬೆಂಗಳೂರು ಸಿನಿಮೋತ್ಸವವನ್ನೇ ತೆಗೆದುಕೊಳ್ಳಿ. ಮೊದಲು ಮೂರ್ನಾಲ್ಕು ಕಡೆ ಸಿನಿಮಾಗಳ ಪ್ರದರ್ಶನ ನಡೆಯತ್ತಿತ್ತು. ಒಂದು ಸಿನಿಮಾ ನೋಡಿ, ಇನ್ನೊಂದು ಚಿತ್ರಮಂದಿರಕ್ಕೆ ಹೋಗಬೇಕೆಂದರೆ ಕನಿಷ್ಠ ಒಂದೂವರೆ ತಾಸು ಬೇಕಾಗುತ್ತಿತ್ತು.

ಕಳೆದ ಎರಡು ವರ್ಷಗಳಿಂದ ಒರಾಯಿನ್ ಮಾಲ್‍ನಲ್ಲಿ ಸಿನಿಮೋತ್ಸವ. ಅಲ್ಲಿನ ಹತ್ತು ತೆರೆಗಳಲ್ಲಿ ಸಿನಿಮಾಗಳ ಪ್ರದರ್ಶನ. ಈಗ ಅಲ್ಲಿಗೆ ಮೆಟ್ರೊ ರೈಲು ಸೌಕರ್ಯವಿದೆ. ಬರುವ ಫೆಬ್ರುವರಿಯಲ್ಲಿ ನಡೆಯುವ ಸಿನಿಮೋತ್ಸವ ಹೆಚ್ಚು ಜನರನ್ನು ಸೆಳೆಯಲಿದೆ. ತಿರುವನಂತಪರ, ಚೆನ್ನೈ, ದೆಹಲಿ, ಪುಣೆ ಮತ್ತು ಕೋಲ್ಕತ್ತಗಳ ಸಿನಿಮೋತ್ಸವಗಳಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗುತ್ತಲೇ ಇದೆ. ಆದರೆ ಈ ಸಿನಿಮೋತ್ಸವಗಳಿಗೆ ಸಂಪನ್ಮೂಲದ ಕೊರತೆ ಇದೆ. ಇವುಗಳಿಗೆ ಆಯಾ ರಾಜ್ಯ ಸರ್ಕಾರಗಳ ಆರ್ಥಿಕ ಬೆಂಬಲ ಸಿಗುತ್ತಿದೆ. ಇವುಗಳಿಗೂ ಕೇಂದ್ರ ಸರ್ಕಾರದ ಹಣಕಾಸಿನ ನೆರವು ಸಿಗುವಂತಾಗಬೇಕು.

ಪಣಜಿ ಸಿನಿಮೋತ್ಸವದ ಸಂಘಟಕರಿಗೆ ಭಾರತೀಯ ಸಿನಿಮಾಗಳೆಂದರೆ ಬಾಲಿವುಡ್ ಸಿನಿಮಾಗಳು ಎಂಬ ಭಾವನೆ ಇದೆ. ದಕ್ಷಿಣ ಭಾರತದ ಸಿನಿಮಾಗಳು ಹಾಗೂ ತಂತ್ರಜ್ಞರ ಬಗ್ಗೆ ಒಂದು ಬಗೆಯ ಉಪೇಕ್ಷೆ, ಅಸಡ್ಡೆ. ತಮಿಳು, ತೆಲುಗು ಭಾಷೆಯ ಸಿನಿಮಾಗಳು ಈಗ ಜಗತ್ತಿನ ಗಮನ ಸೆಳೆಯುತ್ತಿವೆ. ಆದರೆ, ಪಣಜಿಯಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಗೋವಾ ಸರ್ಕಾರದ ಅಸಹಕಾರ ಧೋರಣೆ ಖಂಡಿಸಿ ಹಿಂದೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿಮೋತ್ಸವವನ್ನೇ ಬಹಿಷ್ಕರಿಸಿತ್ತು. ಕನ್ನಡ ಸಿನಿಮಾಗಳು, ತಂತ್ರಜ್ಞರ ಬಗ್ಗೆ ಸಿನಿಮೋತ್ಸವದ ಸಂಘಟಕರು ಅನಾದರ ತೋರಿದ ಹಲವು ದೂರುಗಳಿವೆ. ಅಂಥದೊಂದು ಪ್ರಸಂಗವನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

2006ರ ಸಿನಿಮೋತ್ಸವದಲ್ಲಿ ದಿ.ರಾಜ್‍ಕುಮಾರ್ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲು ಅವರು ಅಭಿನಯಿಸಿದ್ದ ‘ಬಂಗಾರದ ಮನುಷ್ಯ’ ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಿನಿಮೋತ್ಸವದ ಮಾಹಿತಿ ಹೊತ್ತಿಗೆಯಲ್ಲಿ ರಾಜ್‍ಕುಮಾರ್ ಪರಿಚಯ ಬರಹದ ಜತೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಚಿತ್ರ ಪ್ರಕಟವಾಗಿತ್ತು! ಇದು ಅಚಾತುರ್ಯವೋ ಅಥವಾ ಸಂಘಟಕರ ಅಸಡ್ಡೆಯೋ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದದ ಬಗೆಗಿನ ಅನಾದರ ಹೀಗೆ ಅನಾವರಣಗೊಂಡಿತ್ತು. ರಾಜ್‍ಕುಮಾರ್ ಅವರಂತಹ ದೊಡ್ಡ ನಟರ ಪರಿಚಯವೇ ಸಂಘಟಕರಿಗೆ ಇಲ್ಲ ಎಂದಾದರೆ ಉಳಿದವರ ಪರಿಸ್ಥಿತಿ ಏನು?

ಕನ್ನಡ ಚಿತ್ರರಂಗವನ್ನು ಉಪೇಕ್ಷಿಸಿದ ಇನ್ನೂ ಕೆಲ ಉದಾಹರಣೆಗಳಿವೆ. ಈ ಧೋರಣೆಯನ್ನು ಪ್ರತಿಭಟಿಸಿದರೂ ಪ್ರಯೋಜನವೇನೂ ಆಗಿಲ್ಲ. ಸಿನಿಮೋತ್ಸವದ ಸಂಘಟಕರಿಗೆ ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಸಿನಿಮಾಗಳು ಎಂಬ ಭಾವನೆ ತಲೆಯಲ್ಲಿದೆ. ದಕ್ಷಿಣ ಭಾರತದ ಪ್ರಮುಖ ಕಲಾವಿದರು ಸಿನಿಮೋತ್ಸವಕ್ಕೆ ಬರುವುದು ಅಪರೂಪ. ಸಿನಿಮಾ ಶಾಲೆಗಳ ವಿದ್ಯಾರ್ಥಿಗಳು ಮತ್ತು ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.
ಮಹಾರಾಷ್ಟ್ರದ ಸಿನಿಮಾಸಕ್ತರು ಮತ್ತು ಯುವಜನರು ಸಿನಿಮೋತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಗೋವಾದ ಆಕರ್ಷಣೆ. ಮೂರು ದಿನಗಳ ಕಾಲ ಅವರದೇ ಅಬ್ಬರ. ಮೂರು ದಿನಗಳ ನಂತರವೂ ಉಳಿಯುವವರು ಸಿನಿಮಾಸಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT