ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೊ ಡ್ರೋನ್‌, ಪಾಠ ಮಾಡುವ ರೋಬಾಟ್

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅದು ಅಂಗೈ ಮೇಲೆ ಇಟ್ಟುಕೊಳ್ಳಬಹುದಾದಷ್ಟು ಚಿಕ್ಕ ಡ್ರೋನ್‌. ಚಾಲನೆ ಕೊಟ್ಟರೆ ನೂರು ಮೀಟರ್‌ಗಳಷ್ಟು ಎತ್ತರಕ್ಕೆ ಹಾರುವ ಶಕ್ತಿ ಹೊಂದಿದೆ. ಪುಟ್ಟ ಗಾತ್ರದ ಇದರ ಸೊಬಗಿಗೆ ಮಕ್ಕಳು ಮಾರು ಹೋಗಿದ್ದರು!

‘ಬೆಂಗಳೂರು ತಂತ್ರಜ್ಞಾನ ಸಮಾವೇಶ’ದಲ್ಲಿ ಮಕ್ಕಳಿಗೆ ಮತ್ತು ಜತೆಗೆ ಬಂದಿದ್ದ ಪೋಷಕರ ಪಾಲಿಗೆ ಪುಟಾಣಿ ಡ್ರೋನ್‌ ಮಳಿಗೆ ಆಕರ್ಷಣೀಯ ಕೇಂದ್ರವೇ ಆಗಿತ್ತು. ಅದರ ಸಾಧ್ಯತೆ, ಕ್ಷಮತೆ ಮತ್ತು ಇತರ ವಿಷಯಗಳಬಗ್ಗೆ ಪ್ರಶ್ನೆಗಳನ್ನು ಹಾಕುತ್ತಿದ್ದರು. ಡ್ರೋನ್‌ ಅನ್ನು ಈಗ ಕೃಷಿಯಿಂದ ಮೊದಲ್ಗೊಂಡು ಸೇನಾ ಬಳಕೆವರೆಗೆ ಸಾಕಷ್ಟಯ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಆದರೆ, ಇಷ್ಟು ಚಿಕ್ಕ ಡ್ರೋನ್‌ಗಳು ಇದೇ ಮೊದಲು. ಇದನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸ
ಲಾಗುತ್ತಿದೆ.

‘ಡ್ರೋನ್‌ ಜಗತ್ತಿನಲ್ಲಿ ವ್ಯಾಪಕಗೊಳ್ಳಲಿರುವ ಕ್ರಾಂತಿಕಾರಕ ತಂತ್ರಜ್ಞಾನ. ಈ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಲು, ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಲು ಐಐಟಿ ಬಾಂಬೆಯ ನವೋದ್ಯಮ ‘ದ್ರೋಣ ಏವಿಯೇಷನ್‌’ ಪುಟ್ಟ ಡ್ರೋನ್‌ಗಳ ಅಭಿವೃದ್ಧಿಪಡಿಸಿದೆ. ಇದರ ಕುರಿತು ಮಕ್ಕಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ’ ಎಂದು ನಾಯರ್‌ವೊಯಾನ್ಸ್‌ ಸಂಸ್ಥೆಯ ಗೌರವ್‌ ನಾಯರ್‌ ತಿಳಿಸಿದರು.

ಡ್ರೊನ್‌ ಎಂದರೇನು, ಅದನ್ನು ಹೇಗೆ ತಯಾರಿಸಲಾಗುತ್ತದೆ, ಯಾವ ಉದ್ದೇಶಕ್ಕಾಗಿ ಬಳಸಬಹುದು ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ ಡ್ರೋನ್‌ ಅನ್ನು ಮಕ್ಕಳಿಂದಲೇ ಅಭಿವೃದ್ಧಿಪಡಿಸುವ ಕೌಶಲವನ್ನೂ ಹೇಳಿಕೊಡಲಾಗುತ್ತದೆ. ಈ ಕಾರ್ಯಾಗಾರದಲ್ಲಿ 10 ವರ್ಷ ಮೇಲ್ಪಟ್ಟ ಮಕ್ಕಳು ಭಾಗವಹಿಸಬಹುದು. ಪುಟ್ಟ ಡ್ರೊನ್‌ ಬೆಲೆ ಸುಮಾರು ₹ 5,000 ಆಗುತ್ತದೆ ಎಂದು ಅವರು ಹೇಳಿದರು.

ಪಾಠ ಮಾಡುವ ಕುಬ್ಜ ರೋಬಾಟ್‌ಗಳು: ಕುಳ್ಳಗಿನ, ಬಿಳಿ ಬಣ್ಣದ ಮಾನವರೂಪಿ ರೋಬಾಟ್‌ಗಳು ಮಕ್ಕಳಿಗೆ ಪಾಠ ಮಾಡುತ್ತವೆ. ಅವರಿಗೆ ಪ್ರಶ್ನೆಗಳನ್ನೂ ಕೇಳುತ್ತವೆ. ಪಿಸು ಮಾತಿನಲ್ಲಿ ಉತ್ತರವನ್ನೂ ನೀಡುತ್ತವೆ. ಹಾಡು ಹೇಳಿಕೊಂಡು ಕುಣಿಯುತ್ತವೆ. ಇವುಗಳ ಹೆಸರು ‘ನಿನೊ’.

ನಗರದ ಸಿರೇನಾ ಟೆಕ್ನಾಲಜೀಸ್‌ ಮಾನವರೂಪಿ ನಿನೊ ರೋಬಾಟ್‌ ಅಭಿವೃದ್ಧಿಪಡಿಸಿದೆ. ಹಸಿರು ಬಣ್ಣದ ಕಣ್ಣುಗಳನ್ನು ಪಿಳುಕಿಸುತ್ತಾ ಓಡಾಡುವ ಇವುಗಳ ಕೆಲಸ ಮಕ್ಕಳನ್ನು ರಂಜಿಸುತ್ತಲೇ ಪಾಠ ಹೇಳಿಕೊಡುವಂತಹದ್ದು. ಯಾವುದೇ ಶಿಕ್ಷಣ ಸಂಸ್ಥೆ ಬಯಸಿದರೆ ಅಲ್ಲಿ ಸಿರೇನಾ ಸಂಸ್ಥೆ ರೋಬಾಟಿಕ್‌ ಲ್ಯಾಬ್‌ ಸ್ಥಾಪಿಸುತ್ತದೆ. ಮಾನವರೂಪಿ ‘ನಿನೊ’ ಅಲ್ಲದೇ ಇನ್ನು ಹಲವು ರೀತಿಯ ರೋಬಾಟ್‌ ಗಳೂ ಇವರ ಲ್ಯಾಬ್‌ನಲ್ಲಿವೆ.

‘ಮಕ್ಕಳಿಗೆ ಕೌಶಲ ಕಲಿಕೆಯಲ್ಲಿ ಇವು ನೆರವಾಗುತ್ತವೆ. ಎಲ್‌ಕೆಜಿಯಿಂದ 12 ನೇ ತರಗತಿವರೆಗಿನ ಮಕ್ಕಳ ಕಲಿಕೆಗೆ ರೋಬಾಟಿಕ್‌ ಲ್ಯಾಬ್‌ ನೆರವಾಗುತ್ತದೆ. ಮುಖ್ಯವಾಗಿ ರೋಬಾಟ್‌ಗಳ ರಚನೆ, ಅಭಿವೃದ್ಧಿ, ಜೋಡಣೆ ಮತ್ತು ಅವುಗಳಿಗೆ ಪ್ರೋಗ್ರಾಮಿಂಗ್ಗ್‌ ರೂಪಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ’ ಎಂದು ಸಿರೇನಾ ಟೆಕ್ನಾಲಜೀಸ್‌ನ ವಿನೋದ್‌ ತಿಳಿಸಿದರು.

ಬಿದಿರನ ಪರಿಸರ ಸ್ನೇಹಿ ಸೈಕಲ್‌: ಬಿದಿರಿನ ಸೈಕಲ್‌ ಬಗ್ಗೆ ಕೇಳಿದ್ದೀರಾ? ಅಚ್ಚರಿ ಎನಿಸಿದರೂ ನಿಜ. ಆಧುನಿಕ ತಂತ್ರಜ್ಞಾನ ಮತ್ತು ಬಿದಿರನ್ನು ಸೇರಿಸಿ ಮಾಡಿರುವ ಈ ಪರಿಸರ ಸ್ನೇಹಿ ಹೈಬ್ರೀಡ್‌ ಸೈಕಲ್‌ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

  ಬಿದಿರನ್ನು ಬಳಸಿ ಸೈಕಲ್‌ ಫ್ರೇಮ್‌ ಮಾಡಲಾಗಿದೆ. ಶಾಕ್‌ ಅಬ್ಸರ್ವರ್‌ ಮತ್ತು ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ಲೋಹವನ್ನು ಬಳಸಲಾಗಿದೆ. ಲಿಥಿಯಂ ಬ್ಯಾಟರಿಯನ್ನೂ ಅಳವಡಿಸಿದ್ದು, ಎತ್ತರದ ಪ್ರದೇಶದಲ್ಲಿ ಸಾಗುವಾಗ ಬ್ಯಾಟರಿಯಿಂದ ಚಾಲನೆಗೊಳ್ಳುತ್ತದೆ.

‘ಬಹುಪಾಲು ಬಿದಿರು ಬಳಸಿ ತಯಾರಿಸಿದ್ದೇವೆ. ಇಂಗಾಲ ಹೊರ ಸೂಸುವಿಕೆಯನ್ನು ತಗ್ಗಿಸಲು ಸಮಾಜಕ್ಕೆ ನಮ್ಮದೊಂದು ಸಣ್ಣ ಕೊಡುಗೆ. ಈ ಪ್ರಯತ್ನದಿಂದ ಹೆಚ್ಚು ಉದ್ಯೋಗವೂ ಸೃಷ್ಟಿ ಆಗುತ್ತದೆ. ಬಿದಿರು ಗಟ್ಟಿಯಾದದ್ದು, 10 ವ‌ರ್ಷಗಳವರೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಿದಿರಿನಿಂದ ತಯಾರಿಸಿದ ಸೈಕಲ್‌ ಫ್ರೇಮ್‌ನ ತೂಕ ಎರಡು ಕೆ.ಜಿ. ಕಳೆದ ಒಂದೂವರೆ ವರ್ಷಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇಲ್ಲಿಯವರೆಗೆ 35 ಸೈಕಲ್‌ಗಳು ಮಾರಾಟ ಆಗಿವೆ. ಸೈಕಲ್‌ ಬೆಲೆ ₹ 45,000’ ಎಂದು ಐಸಿಇ ವೆಂಚರ್ಸ್‌ ಎಲ್‌ಎಲ್‌ಪಿ ಉತ್ಪಾದನಾ ವಿಭಾಗದ ಮುಖ್ಯಸ್ಥ ಶಂಕರ್‌ ಬಳವಟ್ಟಿ ತಿಳಿಸಿದರು.

’ಚತುರ ಕನ್ನಡಿ’ಯ ಚಮತ್ಕಾರ: ‘ಮಾಯಾ ಕನ್ನಡಿ’ಗಳನ್ನು ಪೌರಾಣಿಕ ಅಥವಾ ಫ್ಯಾಂಟಸಿ ಸಿನಿಮಾಗಳಲ್ಲಿ ನೋಡಿದ್ದ ನೆನಪು ಹಳೆ ತಲೆಮಾರಿನವರಲ್ಲಿ ಇದ್ದೇ ಇರುತ್ತದೆ. ಹೆಚ್ಚು ಕಮ್ಮಿ ಅದನ್ನೇ ಹೋಲುವ ‘ಚತುರ ಕನ್ನಡಿ’ ಅಥವಾ ‘ಸ್ಮಾರ್ಟ್‌ ಮಿರರ್‌’ ಎಲ್ಲರಲ್ಲೂ ಕೌತುಕ ಮೂಡಿಸಿತ್ತು. ಅದರ ಮುಂದೆ ನಿಂತಾಗ ನಿಂತ ವ್ಯಕ್ತಿಯ ಚಹರೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುತ್ತವೆ. ಕಣ್ಣಿನ ಸುತ್ತ ಇರುವ ನೆರಿಗೆಗಳು, ರೆಪ್ಪೆ ಸುತ್ತಲಿನ ಗಾಢ
ಬಣ್ಣ ಎಷ್ಟಿದೆ ಎಂಬುದರ ವಿವರ ನೀಡುತ್ತದೆ.

ತಂತ್ರಜ್ಞಾನ ಪ್ರದರ್ಶನ ನೋಡಲು ಶನಿವಾರ 50 ಸಾವಿರಕ್ಕೂ ಅಧಿಕ ಜನ ಅದರಲ್ಲೂ ವಿದ್ಯಾರ್ಥಿಗಳು ಬಂದಿದ್ದರು. ರೋಬಾಟ್‌, ಕೃತಕ ಬುದ್ಧಿಮತ್ತೆ, ಏವಿಯಾನಿಕ್ಸ್‌, ಜೈವಿಕ ತಂತ್ರಜ್ಞಾನ, ವರ್ಚುವಲ್‌ ರಿಯಾಲಿಟಿ ಮುಂತಾದ ಉತ್ಪನ್ನಗಳು ಮತ್ತು ಮಾಹಿತಿಯನ್ನು ಪಡೆಯಲು ಬೆಂಗಳೂರು ಮತ್ತು ಹೊರ ಊರುಗಳಿಂದ ಬಂದಿದ್ದರು. ನಾಲ್ಕು ಹಾಲ್‌ಗಳಲ್ಲಿ ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಕುರಿತು ಮೂರು ದಿನಗಳೂ ತಜ್ಞರಿಂದ ಸಂವಾದ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT