ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಕರ್ನಾಟಕ

ಡಿಜಿಲಾಕರ್, ಇ–ಸೈನ್ ವ್ಯವಸ್ಥೆಯತ್ತ ಸರ್ಕಾರದ ಹೆಜ್ಜೆ
Last Updated 18 ನವೆಂಬರ್ 2017, 20:26 IST
ಅಕ್ಷರ ಗಾತ್ರ

ಬೆಂಗಳೂರು: ಆಧಾರ್‌ ಸಂಖ್ಯೆ ಬಳಸಿಕೊಂಡು ಸಂಪೂರ್ಣ ಡಿಜಿಟಲ್‌ ಆಡಳಿತ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಎಲ್ಲ ಇಲಾಖೆಗಳ ಸೇವೆಗಳನ್ನೂ ಆಧಾರ್‌ ಮೂಲಕವೇ ನೀಡಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಇದಕ್ಕಾಗಿ ಎಲ್ಲರೂ 12 ಅಂಕಿಗಳ ವಿಶಿಷ್ಟ ಸಂಖ್ಯೆಯನ್ನು ಹೊಂದುವುದು (ಆಧಾರ್) ಕಡ್ಡಾಯಗೊಳಿಸಲು ಹೊಸ ಕಾನೂನು ರೂಪಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇ–ಆಡಳಿತ) ರಾಜೀವ್‌ ಚಾವ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವ್ಯವಸ್ಥೆ ಜಾರಿ ಆದ ಬಳಿಕ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಪ್ರಮಾಣ ಪತ್ರ ಮತ್ತು ದಾಖಲೆ ಪತ್ರಗಳನ್ನು ಡಿಜಿಲಾಕರ್‌ ಮೂಲಕವೇ ನೀಡ
ಲಾಗುತ್ತದೆ. ಇದಕ್ಕಾಗಿ ಇ–ಆಡಳಿತ ವಿಭಾಗದ ಡಿಜಿಲಾಕರ್‌ನಲ್ಲಿ ಆಧಾರ್‌ ಆಧಾರಿತ ನಾಗರಿಕರ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಅಲ್ಲದೆ, ಸರ್ಕಾರದ ದಾಖಲೆಗಳ ಸಂಗ್ರಹ, ದಾಖಲಾತಿ ಪರಿಶೀಲನೆ ಮತ್ತು ಹಂಚಿಕೆಯೂ ಈ ಮೂಲಕವೇ ಆಗುತ್ತದೆ.

ಸರ್ಕಾರ ವಿದ್ಯುನ್ಮಾನ ಸಹಿ (ಇ–ಸೈನ್) ವ್ಯವಸ್ಥೆಯನ್ನೂ ಅನುಷ್ಠಾನಗೊಳಿಸಲಿದೆ. ಆಧಾರ್‌ ಆಧಾರಿತ ವಿದ್ಯುನ್ಮಾನ ಸಹಿ ಬಳಕೆ ಮಾಡುವುದರಿಂದ ದಾಖಲೆ ಪಡೆಯಲು ಖುದ್ದಾಗಿ ಹಾಜರಾಗಿ ಸಹಿ ಮಾಡಬೇಕಾದ ಅಗತ್ಯವೂ ಇರುವುದಿಲ್ಲ ಎಂದು ಚಾವ್ಲಾ ತಿಳಿಸಿದರು.

ಇದನ್ನು ಪೈಲಟ್‌ ಯೋಜನೆಯಾಗಿ ಎರಡು ಇಲಾಖೆಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಂದಾಯ ಇಲಾಖೆಯಲ್ಲಿ ಜಾತಿ ಮತ್ತು  ಆದಾಯ ಪ್ರಮಾಣ ಪತ್ರ ವಿತರಿಸಲು ಹಾಗೂ ಆಹಾರ ಇಲಾಖೆಯಲ್ಲಿ ಪಡಿತರ ಚೀಟಿ ಹಂಚಲು ಡಿಜಿಲಾಕರ್‌ ತಂತ್ರಜ್ಞಾನ ಬಳ
ಸಿಕೊಳ್ಳಲಾಗುತ್ತದೆ. ಸರ್ಕಾರವೇ ಸಾರ್ವಜನಿಕರಿಗೆ ಡಿಜಿಲಾಕರ್‌ ಖಾತೆಯನ್ನು ತೆರೆದುಕೊಡಲಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿ ಆಗಲಿದೆ ಎಂದರು.

‘ಈಗ ಆಧಾರ್‌ ಬಳಕೆಗಾಗಿ ಆಡಳಿತಾತ್ಮಕ ಆದೇಶ ನೀಡಿದ್ದೇವೆ. ಇದಕ್ಕೆ ಕಾನೂನು ಚೌಕಟ್ಟು ರೂಪಿಸದಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಕಾಯ್ದೆಯ ಕರಡು ಸಿದ್ಧವಾಗಿದೆ. ಕಾಯ್ದೆಯ ಕರಡನ್ನು ಆದಷ್ಟು ಶೀಘ್ರವೇ ಸಚಿವ ಸಂಪುಟದ ಮುಂದೆ ತರಲಾಗುವುದು’ ಎಂದು ತಿಳಿಸಿದರು.

‘ವಿದ್ಯುನ್ಮಾನ ಸಹಿ ವ್ಯವಸ್ಥೆ ಕ್ರಾಂತಿಕಾರಕ. ಸಾರ್ವಜನಿಕರು ದಾಖಲೆ ಪತ್ರ ಪಡೆಯಲು ಸಹಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಪಾಠ ನಿಲ್ಲುತ್ತದೆ. ಸೇವಾ ಕೇಂದ್ರಕ್ಕೆ ಹೋಗಿ, ಆನ್‌ಲೈನ್‌ ಮೂಲಕ ನಿರ್ದಿಷ್ಟ ಪ್ರಮಾಣ ಪತ್ರ ಪಡೆಯಲು ಬೆರಳಚ್ಚು ಒತ್ತಿ, ವಿದ್ಯುನ್ಮಾನ ಸಹಿ ದೃಢೀಕರಿಸಿದರೆ ಸಾಕು, ಪ್ರಮಾಣ ಪತ್ರ ಅದೇ ಕ್ಷಣದಲ್ಲಿ ಸಿಗುತ್ತದೆ’ ಎಂದು ರಾಜೀವ್‌ ಚಾವ್ಲಾ ತಿಳಿಸಿದರು.

‘ಪ್ರತಿ ವಿದ್ಯುನ್ಮಾನ ಸಹಿಗೆ ₹ 5 ಶುಲ್ಕವಾಗುತ್ತದೆ. ಸರ್ಕಾರವೇ ಈ ವೆಚ್ಚಭರಿಸಲಿದೆ. ಬೇರೆ ರಾಜ್ಯಗಳಲ್ಲೂ ವಿದ್ಯುನ್ಮಾನ ಸಹಿ ವ್ಯವಸ್ಥೆ ಜಾರಿಗೆ ತಂದಿಲ್ಲ. ನಾವು ಈ ವ್ಯವಸ್ಥೆಯನ್ನು ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ ಕಂಪ್ಯೂಟಿಂಗ್‌(ಸಿಡಾಕ್‌) ನೆರವಿನಿಂದ ಅಭಿವೃದ್ಧಿಪಡಿಸಿದ್ದೇವೆ’ ಎಂದು ಹೇಳಿದರು.

ರಾಜ್ಯದಲ್ಲಿ 6.18 ಕೋಟಿ ಆಧಾರ್‌:

ರಾಜ್ಯದಲ್ಲಿ 6.18 ಕೋಟಿ ಜನ ಆಧಾರ್‌ ಹೊಂದಿದ್ದಾರೆ. ಆದರೆ, 1.41 ಲಕ್ಷ ಡಿಜಿಲಾಕರ್‌ ಖಾತೆಗಳಿವೆ. ಎಲ್ಲ ನಾಗರಿಕರು ಉಚಿತವಾಗಿ ವೈಯಕ್ತಿಕ ಡಿಜಿಲಾಕರ್‌ ಖಾತೆ ಹೊಂದಬಹುದು. ಇದರಲ್ಲಿ ಜನನ ಪ್ರಮಾಣ ಪತ್ರದಿಂದ ಹಿಡಿದು ಎಲ್ಲ ವೈಯಕ್ತಿಕ ದಾಖಲೆ ಪತ್ರಗಳನ್ನೂ ಸಂಗ್ರಹಿಸಿಟ್ಟುಕೊಳ್ಳಬಹುದು. ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳು ಡಿಜಿಲಾಕರ್‌ ವ್ಯವಸ್ಥೆಯನ್ನು ಈಗಾಗಲೇ ಹೊಂದಿವೆ.

* ಡಿಜಿಲಾಕರ್‌ ವ್ಯವಸ್ಥೆ ಭಾರತವನ್ನು ಕಾಗದ ಮುಕ್ತ, ಸಮಕ್ಷಮ ಮುಕ್ತ, ನಗದು ರಹಿತ ಮತ್ತು ಸಮ್ಮತಿ ಮೂಲಕ ಆಡಳಿತ ನಡೆಸುವ ಕ್ರಾಂತಿಕಾರಕ ಸಾಧನ.

- ನಂದನ್‌ ನಿಲೇಕಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT