ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ಚಕಮಕಿಯಲ್ಲಿ ಆರು ಉಗ್ರರ ಹತ್ಯೆ

Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಸಂಜೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಆರು ಉಗ್ರರು ಸಾವನ್ನಪ್ಪಿದ್ದಾರೆ. ಭಾರತೀಯ ವಾಯುಪಡೆಗೆ ಸೇರಿದ ಗರುಡ್‌ ಕಮಾಂಡೊ ಪಡೆಯ ಸದಸ್ಯರೊಬ್ಬರು ಹುತಾತ್ಮರಾಗಿದ್ದು, ಒಬ್ಬ ಸೈನಿಕನಿಗೆ ಗಾಯಗಳಾಗಿವೆ. ಉಗ್ರರಿಗೆ ಸೇರಿದ 6 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಮೃತ ಉಗ್ರರು ಲಷ್ಕರ್‌– ಎ– ತಯಬ ಮತ್ತು ಜೈಷ್‌– ಎ– ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಗೆ ಸೇರಿದವರು. ಇವರಲ್ಲಿ ಮುಂಬೈ ದಾಳಿಯ ಸಂಚುಕೋರ ಝಕಿ– ಉರ್– ರೆಹಮಾನ್ ಲಖ್ವಿಯ ಸೋದರಳಿಯ ಒವೈದ್‌, ಎಲ್‌ಇಟಿ ಕಮಾಂಡರ್‌ಗಳಾದ ಝರ್ಗಂ ಮತ್ತು ಮೆಹಮೂದ್‌ ಸಹ ಸೇರಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ.ವೈದ್‌ ತಿಳಿಸಿದ್ದಾರೆ.

‘ಇದೊಂದು ಯಶಸ್ವಿ ಕಾರ್ಯಾಚರಣೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಹಾಜಿನ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಗೆ ಮುಂದಾಗಿದ್ದವು. ಸೇನೆಯ 13ನೇ ರಾಷ್ಟ್ರೀಯ ರೈಫಲ್ಸ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಘಟಕ ಹಾಗೂ ಕೇಂದ್ರ ಮೀಸಲು ಪೊಲೀಸ್‌ ಪಡೆಯ 45ನೇ ತುಕಡಿಯನ್ನು ಒಳಗೊಂಡ ಜಂಟಿ ತಂಡ ಈ ಕಾರ್ಯಾಚರಣೆಗೆ ಇಳಿದಿತ್ತು. ಚಂದರ್‌ಗೇರ್‌ನಲ್ಲಿ ತಂಡವು ಅಡಗುತಾಣ ಸಮೀಪಿಸುತ್ತಿದ್ದಂ‌ತೆಯೇ ಉಗ್ರರು ಗುಂಡಿನ ದಾಳಿ  ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ತಂಡದ ಸದಸ್ಯರು ಪ್ರತಿದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT