ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತಿ’ಯ ಜ್ವಾಲೆ ಎಲ್ಲವನ್ನೂ ಸುಡುತ್ತದೆ

ಕರ್ಣಿ ಸೇನಾ ಬೆದರಿಕೆ: ಚಲನಚಿತ್ರದ ವಿರುದ್ಧ ಕಾವೇರಿದ ಹೋರಾಟಕ್ಕೆ ರಾಜಸ್ಥಾನ ಬಿಜೆಪಿ, ಕಾಂಗ್ರೆಸ್ ನಾಯಕರ ಬೆಂಬಲ
Last Updated 18 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜೈಪುರ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಲನಚಿತ್ರ ಬಿಡುಗಡೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜಸ್ಥಾನದ ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರು ಬೆಂಬಲ ಸೂಚಿಸಿದ್ದಾರೆ.

‘ರಾಣಿ ಪದ್ಮಿನಿ (ಪದ್ಮಾವತಿ) 16,000 ಮಹಿಳೆಯರ ಜತೆ ಅಗ್ನಿಪ್ರವೇಶ (ಜೌಹಾರ್) ಮಾಡಿದ್ದರು. ಗೌರವ ಉಳಿಸಿಕೊಳ್ಳಲು ಇಂತಹ ಅಭೂತಪೂರ್ವ ಧೈರ್ಯ ತೋರಿದ್ದ ಮಹಿಳೆಯ ಚರಿತ್ರೆಯನ್ನು ತಿರುಚುವುದನ್ನು ಸಹಿಸಿಕೊಳ್ಳಲಾಗದು’ ಎಂದು ಸಚಿವೆ ಕಿರಣ್ ಮಹೇಶ್ವರಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಶೋಕ್ ಪರ್ನಾಮಿ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಸಂಜಯ್ ಸಿಂಗ್ ಅವರು ‘ಇತಿಹಾಸವನ್ನು ತಿರುಚುವುದನ್ನು ಸಹಿಸಿಕೊಳ್ಳಲಾಗದು’ ಎಂದು ಹೇಳಿದ್ದಾರೆ. ‘ನಾನಿನ್ನೂ ಸಿನಿಮಾವನ್ನು ನೋಡಿಲ್ಲ. ಆದರೆ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳು ಸಿನಿಮಾದಲ್ಲಿ ಇದ್ದರೆ ಅವನ್ನು ತೆಗೆದುಹಾಕುವುದು ಒಳಿತು’ ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್.ಸಿಂಗ್ ಹೇಳಿದ್ದಾರೆ.

ಚಲನಚಿತ್ರದ ವಿರುದ್ಧ ಪ್ರತಿಭಟನೆಗಳು ಜೋರಾಗುತ್ತಿರುವುದನ್ನು ಪ್ರಶ್ನಿಸಿದ ಚಿತ್ರದ ನಟಿ ದೀಪಿಕಾ ಪಡುಕೋಣೆ ಅವರಿಗೆ ರಜಪೂತ ಕರ್ಣಿ ಸೇನಾ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

‘ದೀಪಿಕಾ ಅವರ ಮಾತುಗಳು ಪ್ರಚೋದನಕಾರಿಯಾಗಿವೆ. ಅದನ್ನು ಸವಾಲಾಗಿ ಸ್ವೀಕರಿಸಿರುವ ಕಾರಣಕ್ಕೇ ಡಿಸೆಂಬರ್‌ 1ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದೇವೆ. ಎಲ್ಲಾ ಸಮುದಾಯಗಳು ಮತ್ತು ಜಾತಿಗಳ ಜನ ನಮಗೆ ಬೆಂಬಲ ಸೂಚಿಸಿದ್ದಾರೆ. ಚಿತ್ರ ಬಿಡುಗಡೆಯಾದರೆ ಗುರುಗ್ರಾಮ, ಪಟ್ನಾ ಮತ್ತು ಭೋಪಾಲ್‌ಗಳಲ್ಲಿ ಭಾರಿ ಸಾರ್ವಜನಿಕ ಸಭೆ ಮತ್ತು ರ‍್ಯಾಲಿ ನಡೆಸುತ್ತೇವೆ’ ಎಂದು ಕರ್ಣಿ ಸೇನಾದ ನಾಯಕ ಲೋಕೇಂದ್ರ ಸಿಂಗ್ ಕಾಲವಿ ತಿಳಿಸಿದ್ದಾರೆ.

‘ಸುಪ್ರೀಂ’ನಲ್ಲಿ ಅರ್ಜಿ: ‘ಐತಿಹಾಸಿಕ ವ್ಯಕ್ತಿ ಪದ್ಮಾವತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಚಿತ್ರ ನಿರ್ಮಿಸಿರುವ ನಿರ್ದೇಶಕ ಬನ್ಸಾಲಿ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು’ ಎಂದು ಎಂ.ಎಲ್.ಶರ್ಮಾ ಎಂಬ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠವು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿ ಮಾಡಿದೆ.

‘ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಿನಿಮಾದ ವಿರುದ್ಧ ಪ್ರತಿಭಟನೆ ಜೋರಾಗುತ್ತಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ. ಸಿನಿಮಾ ಬಿಡುಗಡೆ ಬಗ್ಗೆ ಎದ್ದಿರುವ ಗೊಂದಲಗಳನ್ನು ಶೀಘ್ರವೇ ಬಗೆಹರಿಸಿ’ ಎಂದು ರಾಜಸ್ಥಾನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಅವರು ಸೆನ್ಸಾರ್‌ ಮಂಡಳಿಗೆ (ಸಿಬಿಎಫ್‌ಸಿ) ಪತ್ರ ಬರೆದಿದ್ದಾರೆ.

**

ಗೋವಾ ಚಿತ್ರೋತ್ಸವ ಬಹಿಷ್ಕರಿಸಿ’

ನವದೆಹಲಿ: ‘ಪದ್ಮಾವತಿ ಸಿನಿಮಾ ವಿರೋಧಿಸುತ್ತಿರುವುದು ಸಾಂಸ್ಕೃತಿಕ ದಮನಕ್ಕೆ ಸ್ಪಷ್ಟ ನಿದರ್ಶನ. ಚಿತ್ರದ ನಟರು, ನಿರ್ದೇಶಕ ಮತ್ತು ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಹಿರಿಯ ನಟಿ ಶಬಾನಾ ಅಜ್ಮಿ ಟ್ವಿಟರ್‌ನಲ್ಲಿ ಕರೆ ನೀಡಿದ್ದಾರೆ.

‘ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಬಹುಶಃ ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧಪಡಿಸುತ್ತಿರಬಹುದು. ಈ ಚಿತ್ರೋತ್ಸವಕ್ಕೆ ಭಾರತೀಯ ಚಿತ್ರರಂಗದಿಂದ ಘನತೆ ಬಂದಿದೆ ಎಂಬುದು ಅವರಿಗೂ ಗೊತ್ತಿದೆ. ಹೀಗಿದ್ದೂ ಅವರು ಪದ್ಮಾವತಿ ಬಗ್ಗೆ ಮಾತನಾಡದೆ ಸುಮ್ಮನಿದ್ದಾರೆ. ಇಡೀ ಭಾರತೀಯ ಚಿತ್ರರಂಗ ಪದ್ಮಾವತಿಯ ಪರವಾಗಿ ನಿಲ್ಲಬೇಕು. ಭಾರತೀಯ ಚಿತ್ರರಂಗ ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಬಹಿಷ್ಕರಿಸಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಸಿನಿಮಾವನ್ನು ಪ್ರಮಾಣೀಕರಿಸದೆ ಅರ್ಜಿಯನ್ನು ವಾಪಸ್ ಕಳುಹಿಸಿದ ಸೆನ್ಸಾರ್ ಮಂಡಳಿ ನಡೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಿನಿಮಾವನ್ನು ಪ್ರಮಾಣೀಕರಿಸುವುದು ಸಾಂವಿಧಾನಿಕ ಸಂಸ್ಥೆ ಸೆನ್ಸಾರ್‌ ಮಂಡಳಿಯ ಕೆಲಸ ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT