ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸಿ’

ಹೊಡೆದದ್ದು ತಪ್ಪು: ನಿವೃತ್ತ ಅಧಿಕಾರಿಗಳು
Last Updated 18 ನವೆಂಬರ್ 2017, 19:18 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಮೇಲೆ ನ.9ರ ರಾತ್ರಿ ಹಲ್ಲೆ ನಡೆಸಿದ್ದ ಎಸಿಪಿ ಮಂಜುನಾಥ್‌ ಬಾಬು ವಿರುದ್ಧ ‘ಶೆಟ್ಟಿ ಲಂಚ್ ಹೋಮ್’ ಮಾಲೀಕ ರಾಜೀವ್ ಶೆಟ್ಟಿ ಅವರು ಆರ್‌.ಟಿ.ನಗರ ಠಾಣೆಗೆ ಭಾನುವಾರ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಅಂದಿನ ಘಟನೆಯಿಂದ ಕುಟುಂಬ ಸದಸ್ಯರೆಲ್ಲ ದಿಗ್ಬ್ರಾಂತರಾಗಿದ್ದಾರೆ. ಎಸಿಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆರ್‌.ಟಿ.ನಗರ ಠಾಣೆಗೆ ದೂರು ಕೊಡುತ್ತಿದ್ದೇನೆ. ಅವರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಗೃಹ
ಸಚಿವರ ಮೊರೆ ಹೊಗುತ್ತೇನೆ’ ಎಂದರು.

‘ಎಸಿಪಿ ಅವರ ಕಾರ್ಯವ್ಯಾಪ್ತಿಯಲ್ಲೇ ನನ್ನ ಮನೆ ಹಾಗೂ ಹೋಟೆಲ್ ಇದೆ. ಹೀಗಾಗಿ, ನನ್ನ ಹಾಗೂ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು ಕೋರುತ್ತೇನೆ’ ಎಂದು ಹೇಳಿದರು.

ಸೂಚನೆ ಪಾಲಿಸಲಿಲ್ಲ: ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರು ಶನಿವಾರ ಎಸಿಪಿ ಮಂಜುನಾಥ್ ಬಾಬು ಹಾಗೂ ಆ ದಿನ ಹೊಯ್ಸಳ ವಾಹನದಲ್ಲಿ ಹೋಟೆಲ್ ಬಳಿ ತೆರಳಿದ್ದ ಎಲ್ಲ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿದರು.

‘ರಾತ್ರಿ 12 ಗಂಟೆಯಾದರೂ ಯುವಕರು ಹೋಟೆಲ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಬೇಗ‌ನೇ ಹೋಟೆಲ್ ಬಂದ್ ಮಾಡುವಂತೆ ಅದರ ಮಾಲೀಕರಿಗೆ ಹಿಂದೆಯೂ ಸೂಚನೆ ಕೊಟ್ಟಿದ್ದೆ. ಆ ಸೂಚನೆ ಪಾಲಿಸದ ಕಾರಣಕ್ಕೆ ನಾನೇ ಹೋಟೆಲ್‌ಗೆ ಹೋಗಿ ಬಾಗಿಲು ಮುಚ್ಚಿಸಿದ್ದೆ’ ಎಂದು ಮಂಜುನಾಥ್‌ ಬಾಬು ಅವರು ಡಿಸಿಪಿಗೆ ಹೇಳಿಕೆ ಕೊಟ್ಟಿದ್ದಾರೆ.

ಹೊಡೆಯುವ ಅಧಿಕಾರವೇ ಇಲ್ಲ: ‘ಪೊಲೀಸರಿಗೆ ಸಾರ್ವಜನಿಕರ ಮೇಲೆ ಲಾಠಿ ಬೀಸುವ ಅಧಿಕಾರವೇ ಇಲ್ಲ. ಎಸಿಪಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವುದು ತಪ್ಪು’ ಎಂದು ನಿವೃತ್ತ ಡಿಜಿಪಿ ಎಸ್‌.ಟಿ.ರಮೇಶ್ ಅಭಿಪ್ರಾಯಪಟ್ಟರು.

‘ಕರ್ತವ್ಯಲೋಪ ಎಸಗುವ ಕೆಳಹಂತದ ಸಿಬ್ಬಂದಿಯನ್ನು ಡಿಸಿಪಿ/ಎಸ್ಪಿ ಅವರು ಕೂಡಲೇ ಅಮಾನತು ಮಾಡಿಬಿಡುತ್ತಾರೆ. ಆದರೆ, ಎಸಿಪಿ ಗೆಜೆಟೆಡ್ ಅಧಿಕಾರಿಯಾಗಿರುವ ಕಾರಣ ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ರಾಜಕಾರಣಿಗಳ ಶ್ರೀರಕ್ಷೆ ಸಿಕ್ಕಿಬಿಡುತ್ತದೆ.’

‘ಡಿಸಿಪಿ ಕಮಿಷನರ್‌ಗೆ ಸಲ್ಲಿಸುವ ವರದಿಯು ಗೃಹ ಇಲಾಖೆಯನ್ನು ಸೇರುತ್ತದೆ. ವಿಧಾನಸೌಧದಲ್ಲಿ ಕೆಲಸ ಹೇಗೆ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅದು ‘ನಿಧಾನ’ಸೌಧ. ಗೃಹಇಲಾಖೆ ತಕ್ಷಣಕ್ಕೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ’ ಎಂದು ಹೇಳಿದರು.

1993ರ ಹೈಕೋರ್ಟ್ ಆದೇಶ: ‘1993ರಲ್ಲಿ ವಿಲ್ಸನ್‌ ಗಾರ್ಡನ್‌ ಠಾಣೆ ವ್ಯಾಪ್ತಿಯ ಊರ್ವಶಿ ಚಿತ್ರಮಂದಿರದ ಬಳಿ ಒಬ್ಬ ಬಾದಾಮಿ ಹಾಲಿನ ಅಂಗಡಿ ಇಟ್ಟುಕೊಂಡಿದ್ದ. ಕೊನೆಯ ಪ್ರದರ್ಶನ ಮುಗಿಯುವವರೆಗೂ ಆತ ವ್ಯಾಪಾರ ಮಾಡುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಥಳೀಯ ಪೊಲೀಸರು, ತಡರಾತ್ರಿವರೆಗೆ ಅಂಗಡಿ ತೆರೆದಿದ್ದಕ್ಕೆ ಗಲಾಟೆ ಮಾಡಿ ಆತನಿಗೆ ಲಾಠಿಯಿಂದ ಹೊಡೆದಿದ್ದರು’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ನೆನಪಿಸಿಕೊಂಡರು.

‘ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿತ್ತು. ನಂತರ ಹೈಕೋರ್ಟ್ ಮೊರೆ ಹೋದ ಆ ವ್ಯಾಪಾರಿ, ‘ಸಿನಿಮಾ ಬಿಡುವ ಸಮಯದಲ್ಲಿ ನನಗೆ ಹೆಚ್ಚು ವ್ಯಾಪಾರವಾಗುತ್ತದೆ. ಆದರೆ, ಪೊಲೀಸರು ದಬ್ಬಾಳಿಕೆ ನಡೆಸಿ ಅಂಗಡಿ ಮುಚ್ಚಿಸುತ್ತಿದ್ದಾರೆ’ ಎಂದು ರಿಟ್ ಅರ್ಜಿ ಸಲ್ಲಿಸಿದ್ದ. ಅದರ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ‘ಬಾರ್‌ಗಳ ವಹಿವಾಟಿಗೆ ಮಾತ್ರ ಗಡುವು ನಿಗದಿ ಮಾಡಲಾಗಿದೆ. ಆದರೆ, ಹೋಟೆಲ್‌ಗಳಿಗೆ ಅಂಥ ಯಾವುದೇ ಗಡುವು ಇಲ್ಲ. ಹೀಗಾಗಿ, ವ್ಯಾಪಾರಿ ಎಷ್ಟು ಹೊತ್ತು ಬೇಕಾದರೂ ವಹಿವಾಟು ನಡೆಸಬಹುದು’ ಎಂದು ಆದೇಶಿಸಿತ್ತು. ಹೋಟೆಲ್/ಅಂಗಡಿಗಳ ವಹಿವಾಟಿನ ಅವಧಿ ಕುರಿತು ಕರ್ನಾಟಕ ಪೊಲೀಸ್ ಕಾಯ್ದೆಯಲ್ಲೂ ಯಾವುದೇ ಉಲ್ಲೇಖವಿಲ್ಲ’ ಎಂದು ಶಿವರಾಂ ಹೇಳಿದರು.

**

ಸೋಮವಾರದವರೆಗೆ ಗಡುವು

‘ಡಿಸಿಪಿ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುವುದಾಗಿ ಕಮಿಷನರ್ ಭರವಸೆ ನೀಡಿದ್ದರು. ಆದರೆ, ಹಲ್ಲೆ ನಡೆದು ಒಂಬತ್ತು ದಿನ ಕಳೆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಸೋಮವಾರದ (ನ.20) ಒಳಗೆ ಎಸಿಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ವಿಳಂಬ ನೀತಿ ಅನುಸರಿಸಿದರೆ, ಹೋಟೆಲ್ ಮಾಲೀಕರೆಲ್ಲ ಪ್ರತಿಭಟನೆ ಪ್ರಾರಂಭಿಸಬೇಕಾಗುತ್ತದೆ’ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ.

**

ಮುಂದುವರಿದ ಆಕ್ರೋಶ

ಪ್ರಕರಣ ಬೆಳಕಿಗೆ ಬಂದು ನಾಲ್ಕು ದಿನಗಳಾದರೂ ಎಸಿಪಿ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಮುಂದುವರಿದಿದೆ.

‘ಕರ್ತವ್ಯಲೋಪ ಎಸಗುವ ಕೆಳಹಂತದ ಪೊಲೀಸರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸುವ ಕಮಿಷನರ್, ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಎಸಿಪಿ ಮಂಜುನಾಥ್ ಬಾಬು ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅನುರಾಗ್ ಪಂಡಿತ್ ಎಂಬುವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಇನ್ನೂ ಕ್ರಮವಾಗಿಲ್ಲವೇ. ಬಹುಶಃ ತುಂಬ ಮಹತ್ವದ ವರದಿಯನ್ನೇ ಸಿದ್ಧಪ‍ಡಿಸುತ್ತಿರಬೇಕು‘ ಎಂದು ಸವಿತಾ ಕೃಷ್ಣ ಎಂಬುವರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT