ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಸೇರಿದ ‘ವಿಶೇಷ ಪೊಲೀಸ್ ಪಡೆ’!

ಪೊಲೀಸರ ಸೋಗಲ್ಲಿ ಸುಲಿಗೆ; ದರೋಡೆಕೋರರ ಗ್ಯಾಂಗ್‌ ಸೆರೆ; ಒಬ್ಬ ಶಿಕ್ಷಕ, ಇನ್ನೊಬ್ಬ ಮಾಜಿ ಗೃಹರಕ್ಷಕ
Last Updated 18 ನವೆಂಬರ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶೇಷ ಪೊಲೀಸ್ ಪಡೆ’ಯ ಸೋಗಿನಲ್ಲಿ ನಗರದ ಹೊರವಲಯದ ಹೆದ್ದಾರಿಗಳು ಹಾಗೂ ನೈಸ್ ರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರರ ಗ್ಯಾಂಗ್ ಮತ್ತೆ ತಲಘಟ್ಟಪುರ ಪೊಲೀಸರ ಬಲೆಗೆ ಬಿದ್ದಿದೆ.

‘ಕನಕಪುರ ತಾಲ್ಲೂಕು ನರಸಿಂಹಯ್ಯನದೊಡ್ಡಿಯ ರಘು (34), ಆನೇಕಲ್‌ನ ದೊಡ್ಡಯ್ಯ (48) ಹಾಗೂ ಕೃಷ್ಣಗಿರಿಯ ಹರೀಶ್ (31) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅರ್ಧ ಕೆ.ಜಿ.ಚಿನ್ನ, ₹ 4 ಲಕ್ಷ ನಗದು, ಕೃತ್ಯಕ್ಕೆ ಬಳಸುತ್ತಿದ್ದ ಬೊಲೆರೋ ಜೀಪು, ಇನೋವಾ ಕಾರು, ನಕಲಿ ನೋಂದಣಿ ಫಲಕಗಳು, ಪೊಲೀಸ್ ಸಮವಸ್ತ್ರ, ಲಾಠಿ, ನಕಲಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ತಿಂಗಳ ಅವಧಿಯಲ್ಲಿ ನೈಸ್ ರಸ್ತೆಯಲ್ಲಿ ನಾಲ್ಕು ಸುಲಿಗೆಗಳು ನಡೆದಿದ್ದವು. ಈ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ತಲಘಟ್ಟಪುರ ಪೊಲೀಸರಿಗೆ, ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರಘು ಮೇಲೆ ಸಂಶಯ ವ್ಯಕ್ತವಾಗಿತ್ತು. ಮೊಬೈಲ್ ಕರೆಗಳ ಜಾಡು ಹಿಡಿದು ಆತನನ್ನು ವಶಕ್ಕೆ ಪಡೆದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಗೃಹರಕ್ಷಕ ವೃತ್ತಿ: ಮೊದಲು ಗೃಹರಕ್ಷಕನಾಗಿದ್ದ ರಘು, ರಾಮನಗರದ ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಖಾಕಿ ಉಡುಪು ಧರಿಸುತ್ತಿದ್ದ ಈತನಿಗೆ, ಪೊಲೀಸರ ಸೋಗಿನಲ್ಲಿ ಜನರನ್ನು ಬೆದರಿಸಿ ಸುಲಭವಾಗಿ ಹಣ ಸಂಪಾದಿಸಬಹುದು ಎಂಬ ದುರಾಲೋಚನೆ ಬಂದಿತ್ತು.

ಕೆಲ ಯುವಕರಿಗೆ ಹಣದ ಆಮಿಷವೊಡ್ಡಿ ಗ್ಯಾಂಗ್ ಕಟ್ಟಿಕೊಂಡ ಆತ, ಕರ್ತವ್ಯದಲ್ಲಿರುವಾಗಲೇ ಹೆದ್ದಾರಿಗಳಲ್ಲಿ ಹಲವರಿಂದ ಸುಲಿಗೆ ಮಾಡಿದ್ದ. ನೈಸ್ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ವಿಹರಿಸುವ ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತರುವಾಯ ಗೃಹರಕ್ಷಕ ಹುದ್ದೆಯನ್ನು ತ್ಯಜಿಸಿ, ವೃತ್ತಿಪರ ಸುಲಿಗೆಕೋರನಾದ. ಈ ಆರೋಪಿಗಳು 2016ರಲ್ಲೇ ತಲಘಟ್ಟಪುರ, ಗಿರಿನಗರ, ಕೆಂಗೇರಿ, ರಾಜರಾಜೇಶ್ವರಿನಗರ, ಹುಳಿಮಾವು, ಎಲೆಕ್ಟ್ರಾನಿಕ್‌ಸಿಟಿ, ಕಗ್ಗಲೀಪುರ, ಹಾರೋಹಳ್ಳಿ, ಬಿಡದಿ, ತಾವರೆಕೆರೆ ಹಾಗೂ ಕುಂಬಳಗೋಡು ಠಾಣೆಗಳ ವ್ಯಾಪ್ತಿಯಲ್ಲಿ 15 ವಾಹನ ಸವಾರರಿಂದ ಸುಲಿಗೆ ಮಾಡಿದ್ದರು.

ಈ ಸರಣಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ತಲಘಟ್ಟಪುರ ಪೊಲೀಸರು, 2016ರ ಡಿಸೆಂಬರ್‌ನಿಂದ ನಿತ್ಯವೂ ಸಂಜೆ ವೇಳೆ ಮಫ್ತಿಯಲ್ಲಿ ನೈಸ್ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಗಸ್ತು ತಿರುಗಲಾರಂಭಿಸಿದ್ದರು. ಅದೇ ತಿಂಗಳ 19ರಂದು ರಘು ಪೊಲೀಸರ ಬಲೆಗೆ ಬಿದ್ದಿದ್ದ. ಇದೇ ಸಮಯದಲ್ಲೇ ದೊಡ್ಡಯ್ಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಬಂಧಿತನಾಗಿ ಜೈಲು ಸೇರಿದ್ದ. ಅಲ್ಲಿ ಪರಸ್ಪರರ ನಡುವೆ ಸ್ನೇಹ ಬೆಳೆದಿತ್ತು.

ದೊಡ್ಡಯ್ಯನನ್ನೂ ತನ್ನ ಗ್ಯಾಂಗ್‌ಗೆ ಸೇರಿಸಿಕೊಂಡ ರಘು, ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದ. ಅಲ್ಲದೆ, ಕಾರಾಗೃಹದ ಗೆಳೆಯನಿಗೂ ಬಿಡುಗಡೆ ಭಾಗ್ಯ ಕೊಡಿಸಿದ್ದ. ಆನೇಕಲ್‌ನ ‘ರಾಯಲ್’ ಶಾಲೆಯಲ್ಲಿ ಶಿಕ್ಷಕನಾಗಿದ್ದ ತನ್ನ ಸಂಬಂಧಿ ಹರೀಶ್‌ನನ್ನೂ ದೊಡ್ಡಯ್ಯ ಇತ್ತೀಚೆಗೆ ಗ್ಯಾಂಗ್‌ಗೆ ಸೇರಿಸಿದ್ದ.

ಖಾಕಿ ಬಟ್ಟೆ ಹೊಲಿಸಿಕೊಂಡರು: ಕೃತ್ಯಕ್ಕೆ ಹೋಗುವಾಗ ತಾನು ಸಬ್‌ಇನ್‌ಸ್ಪೆಕ್ಟರ್‌ ವೇಷದಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದ ರಘು, ಚನ್ನಪಟ್ಟಣದಲ್ಲಿ ಸಮವಸ್ತ್ರ ಹೊಲಿಸಿಕೊಂಡಿದ್ದ. ಆರೋಪಿ ದೊಡ್ಡಯ್ಯ ಹಾಗೂ ಹರೀಶ್, ರೌಡಿ ನಿಗ್ರಹ ದಳದ ಅಧಿಕಾರಿಗಳಂತೆ ಸಫಾರಿ ಬಟ್ಟೆಯನ್ನು ಹೊಲಿಸಿಕೊಂಡಿದ್ದರು.

ಹೆದ್ದಾರಿ ಹಾಗೂ ನೈಸ್ ರಸ್ತೆಗಳಲ್ಲಿ ಗಸ್ತಿನ ರೂಪದಲ್ಲಿ ಸಂಚರಿಸಲು ಜೀಪನ್ನು ಖರೀದಿಸಿದ್ದ ಆರೋಪಿಗಳು, ಅದಕ್ಕೆ ‘ಪೊಲೀಸ್’ ಎಂದು ಸ್ಟಿಕ್ಕರ್ ಅಂಟಿಸಿದ್ದರು. ಅಲ್ಲದೆ, ಸರ್ಕಾರಿ ವಾಹನಗಳಿಗೆ ಬಳಸುವ ‘ಜಿ’ ಅಕ್ಷರವುಳ್ಳ ನಕಲಿ ನೋಂದಣಿ ಫಲಕವನ್ನು ಅದಕ್ಕೆ ಅಳವಡಿಸಿಕೊಂಡಿದ್ದರು. ‌

**

‘ಜನ ದೂರು ಕೊಡಲ್ಲ’

‘ಪೊಲೀಸರ ವೇಷದಲ್ಲಿ ಹೋಗಿ ಸುಲಿಗೆ ಮಾಡಿದರೆ, ಜನ ಅವರ ಮೇಲೆಯೇ ಅನುಮಾನಪಡುತ್ತಾರೆ. ಅಲ್ಲದೆ, ಠಾಣೆಗೆ ಹೋಗಿ ಪೊಲೀಸರ ವಿರುದ್ಧವೇ ದೂರು ಕೊಡಲು ಹೆದರುತ್ತಾರೆ. ಈ ಕಾರಣದಿಂದ ಪೊಲೀಸ್ ವೇಷದಲ್ಲೇ ಸುಲಿಗೆಗೆ ಇಳಿದಿದ್ದೆವು’ ಎಂದು ರಘು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

**

ಶಿಕ್ಷಕನನ್ನು ಸೇರಿಸಿಕೊಂಡಿದ್ದೇಕೆ?

‘ಸುಲಿಗೆ ಮಾಡಲು ವಾಹನಗಳನ್ನು ಅಡ್ಡಗಟ್ಟಿದಾಗ ಬಹುತೇಕ ಸವಾರರು ಇಂಗ್ಲೀಷ್‌ನಲ್ಲೇ ಮಾತನಾಡುತ್ತಿದ್ದರು. ನಮಗೆ ಆ ಭಾಷೆ ಬಾರದ ಕಾರಣ ಅವರಿಗೆ ಅನುಮಾನ ಬರುತ್ತಿತ್ತು. ಹೀಗಾಗಿ, ನಮ್ಮ ತಂಡದಲ್ಲಿ ಒಬ್ಬಾತ ಇಂಗ್ಲಿಷ್ ಬಲ್ಲವನು ಬೇಕೆಂದು ಹರೀಶ್ ಅವರನ್ನು ಸೇರಿಸಿಕೊಂಡಿದ್ದೆವು’ ಎಂದು ರಘು ಹೇಳಿಕೆ ಕೊಟ್ಟಿದ್ದಾನೆ. ಪೊಲೀಸರು ಹರೀಶ್ ಅವರನ್ನು ಶಾಲೆಯಲ್ಲೇ ವಶಕ್ಕೆ ಪಡೆದಿದ್ದಾರೆ.

**

ರಘು ವಿರುದ್ಧ ಈಗಾಗಲೇ ರೌಡಿಪಟ್ಟಿ ತೆರೆಯಲಾಗಿದೆ. ಗೂಂಡಾ ಕಾಯ್ದೆ ಪ್ರಯೋಗಿಸುವ ಸಂಬಂಧ ಪೊಲೀಸ್ ಕಮಿಷನರ್‌ಗೆ ಪ್ರಸ್ತಾವ ಸಲ್ಲಿಸುತ್ತೇನೆ.

–ಎಸ್‌.ಡಿ.ಶರಣಪ್ಪ, ಡಿಸಿಪಿ, ದಕ್ಷಿಣ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT