ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಳೆಗೆ ಸೈನಿಕ ಹುಳು ಬಾಧೆ; ಮುನ್ನೆಚ್ಚರಿಕೆಗೆ ಮನವಿ

Last Updated 19 ನವೆಂಬರ್ 2017, 3:59 IST
ಅಕ್ಷರ ಗಾತ್ರ

ಮಳವಳ್ಳಿ: ಈ ಬಾರಿ ರೈತರು ತಡವಾಗಿ ನಾಟಿ ಮಾಡಿದ ಪರಿಣಾಮ ಭತ್ತದ ಬೆಳೆಗೆ ಹಲವು ರೋಗಗಳು ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ. ನೆಟ್ಕಲ್, ಗುಳಘಟ್ಟ, ದುಗ್ಗನಹಳ್ಳಿ, ತಳಗವಾದಿ, ಹಿಟ್ಟನಹಳ್ಳಿ, ಕಿರುಗಾವಲು, ಬಂಡೂರು, ಚಿಕ್ಕಮಾಳಿಗೆಕೊಪ್ಪಲು ಮೊದಲಾದ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಸೈನಿಕ ಅಥವಾ ತೆನೆ ಹುಳು ಬಾಧೆ ಕಾಣಿಸಿಕೊಂಡಿದೆ.

ಅನಿಯಮಿತ ಮಳೆ, ಒಣಹವೆ, ಭತ್ತದ ಪೈರನ್ನು ಒತ್ತಾಗಿ ನಾಟಿ ಮಾಡಿರುವುದು, ಬದುಗಳ ಸುತ್ತ ಕಳೆಗಳನ್ನು ನಿರ್ಮೂಲನೆ ಮಾಡದಿರುವುದರಿಂದ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ.

ಮರಿ ಹುಳುಗಳು ಗುಂಪಾಗಿ ಹಗಲಿನ ವೇಳೆ ನೆರಳಿನಲ್ಲಿ ಆಶ್ರಯಪಡೆದುಕೊಂಡು ಸಂಜೆಯಿಂದ ಬೆಳಗ್ಗಿನವರೆಗೆ ಭತ್ತದ ಗರಿ, ತೆನೆ ಹಾಗೂ ಹಾಲುದುಂಬುವ ಕಾಳನ್ನು ತಿಂದು ನಾಶ ಮಾಡುತ್ತಿವೆ. ಇದರ ಪರಿಣಾಮ ಬೆಳೆ ಒಣ ಹುಲ್ಲಿನಂತೆ ಕಾಣಿಸಿಕೊಳ್ಳುತ್ತಿದೆ.

ಹತೋಟಿ: ಬದುಗಳ ಸುತ್ತ ಇರುವ ಆಶ್ರಯ ಸಸ್ಯಗಳನ್ನು ನಾಶ ಪಡಿಸಬೇಕು. ಸಂಜೆ 6 ಗಂಟೆಯ ನಂತರ ಕೀಟನಾಶಕಗಳಾದ ಅಸಿಫೇಟ್ 75 ಎಸ್.ಪಿ 1ಗ್ರಾಂ ಅಥವಾ ಡೈಕ್ಲೋರೋವಾಸ್ 76 ಡಬ್ಲ್ಯೂ.ಎಸ್ಸಿ 1.5 ಮಿ.ಲೀ, ಅಥವಾ ಟ್ರೈಜೋಪಾಸ್ 40ಇಸಿ 2ಮಿ.ಲೀ ಕ್ವಿನಾಲ್ವಾಸ್ 25ಇ.ಸಿ 2.5 ಮಿ.ಲೀ ಅಥವಾ ಕ್ಲೋರಿಪಾಸ್ 20 ಇ.ಸಿ 2 ಮಿ.ಲೀ ರಸಾಯನಿಕವನ್ನು ಪ್ರತಿ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.

ಒಂದು ಎಕರೆ ಪ್ರದೇಶಕ್ಕೆ 250 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಿ ಬದುಗಳ ಸುತ್ತ ಬೆಳೆದಿರುವ ಹುಲ್ಲುಗಳಿಗೂ ಸಿಂಪರಣೆ ಮಾಡಬೇಕೆಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಕಂದು ಜಿಗಿ ಹುಳುವಿನ ಬಾಧೆಯಿಂದ ಭತ್ತದ ಬೆಳೆ ಸುಟ್ಟಂತೆ ಕಾಣಿಸುತ್ತದೆ. ಇದನ್ನು ನಿಯಂತ್ರಿಸಲು ಪ್ರತಿ 5 ಅಡಿಗೆ ಒಂದರಂತೆ ಪೂರ್ವ ಪಶ್ಚಿಮವಾಗಿ ಇಕ್ಕಲುಗಳನ್ನು ತೆಗೆದು ನೀರು ಹೆಚ್ಚಾಗಿ ನಿಲ್ಲದಂತೆ ನೋಡಿಕೊಳ್ಳಬೇಕು. ಇಮಿಡೋಕ್ಲೋಪಿಡ್ ರಾಸಾಯನಿಕವನ್ನು ಸಿಂಪಡಿಸುವುದರಿಂದ ರೋಗದಿಂದ ಮುಕ್ತಿ ಪಡೆಯಬಹುದಾಗಿದೆ. ರೋಗವನ್ನು ನಿಯಂತ್ರಿಸಲು ಕೃಷಿ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ರೈತರು ಕೃಷಿ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬಹುದು.

ಮಳವಳ್ಳಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಭತ್ತಕ್ಕೆ ರೋಗ ಕಾಣಿಸಿಕೊಂಡಿದೆ. ತಡವಾಗಿ ಭತ್ತದ ನಾಟಿ ಮಾಡಿರುವುದರಿಂದ ರೋಗ ಬಂದಿರಬಹುದು ಎಂದು ಅಂದಾಜಿಸಿ ಕೃಷಿ ಇಲಾಖೆಯಿಂದ ಕೀಟನಾಶಕ, ರಾಸಾಯನಿಕವನ್ನು ನೀಡಲಾಗುತ್ತಿದೆ. ಹೋಬಳಿ ಮಟ್ಟದ ರೈತ ಸಂಪರ್ಕ ಕಚೇರಿಗೆ ರೈತರು ಭೇಟಿ ನೀಡಿ ಕೀಟನಾಶಕವನ್ನು ಪಡೆಯಬಹುದಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಕೀಟ ನಾಶಕವನ್ನು ಸಿಂಪಡಿಸುವುದರ ಮೂಲಕ ರೋಗವನ್ನು ನಿರ್ಮೂಲನೆ ಮಾಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಪರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT