ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಸೇನಾಧಿಕಾರಿಯ ಸವಿ ಸವಿ ನೆನಪು...

Last Updated 19 ನವೆಂಬರ್ 2017, 4:05 IST
ಅಕ್ಷರ ಗಾತ್ರ

ಬಾಗಲಕೋಟೆ: ಒಂದಿಲ್ಲೊಂದು ಜೀವಪರ ಚಟುವಟಿಕೆಗಳ ಕಾರಣ ಸದಾ ಲವಲವಿಕೆಯಿಂದ ಬೀಗುವ ಇಲ್ಲಿನ ಬಸವೇಶ್ವರ ಕಲಾ ಕಾಲೇಜು ಕ್ಯಾಂಪಸ್, ಶನಿವಾರ ಹಳೆಯ ವಿದ್ಯಾರ್ಥಿಯೊಬ್ಬರು ಹೊತ್ತು ತಂದಿದ್ದ ಸವಿ ಸವಿ ನೆನಪುಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಿತು.

ಭಾರತೀಯ ವಾಯುಪಡೆಯ ನಿವೃತ್ತ ಲೆಫ್ಟನೆಂಟ್ ಕರ್ನಲ್ ಜಿ.ಎಲ್‌.ಹಿರೇಮಠ ಪತ್ನಿಯೊಂದಿಗೆ ಬಾಗಲಕೋಟೆಗೆ ಬಂದಿದ್ದರು. 44 ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ಆಡಿ–ನಲಿದು ಪದವೀಧರರಾಗಿ ತೆರಳಿದ್ದ ಹಿರೇಮಠ, ಮತ್ತೆ ಕುಟುಂಬದೊಂದಿಗೆ ಬಂದು ಹಳೆಯ ನೆನಪುಗಳನ್ನು ತಾಜಾ ಮಾಡಿಕೊಂಡರು.

ಮೂಲತಃ ಬಾಗಲಕೋಟೆಯವರೇ ಆದ ಹಿರೇಮಠ, ಸತತ 35 ವರ್ಷಗಳ ಕಾಲ ವಾಯುಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದ ನಂತರ ಬೆಳಗಾವಿಯ ಕೆ.ಎಲ್‌.ಇ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಾ ಅಲ್ಲಿಯೇ ನೆಲೆಸಿದ್ದಾರೆ.

ದೇಶ ಸುತ್ತಿ ಬಂದಿದ್ದರು: ಟಾಟಾ ಕಂಪೆನಿ ವಿನ್ಯಾಸ ಮಾಡಿಕೊಟ್ಟಿದ್ದ ಹೆಕ್ಸಾ ಎಸ್‌ಯುವಿಯಲ್ಲಿ ಪತ್ನಿಯೊಂದಿಗೆ ದೇಶದ ನಾಲ್ಕೂ ದಿಕ್ಕಿನ ಗಡಿಗಳನ್ನು ಮುಟ್ಟಿ ಬಂದಿದ್ದರು. ‘Touching the borders with glory’ ಧ್ಯೇಯದೊಂದಿಗೆ ಸುಮಾರು 18,100 ಕಿ.ಮೀ ಸುತ್ತಿ ಬಂದಿದ್ದ ಜಿ.ಎಲ್‌.ಹಿರೇಮಠ, 64 ವರ್ಷಗಳ ಇಳಿ ವಯಸ್ಸಿನಲ್ಲೂ ಸತತ ಎರಡು ತಿಂಗಳ ತಾವೇ ವಾಹನ ಚಾಲನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ದೇಶದ ಎಲ್ಲಾ ವಿಮಾನ ನಿಲ್ದಾಣ, ಪ್ರಮುಖ ದೇವಸ್ಥಾನ, ಪ್ರಾರ್ಥನಾ ಮಂದಿರ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಆ ಬಗ್ಗೆ ಸಾಕ್ಷ್ಯಚಿತ್ರ ರೂಪಿಸಿಕೊಂಡು ಬಂದಿದ್ದ ಅವರು, ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿ ಅನುಭವ ಹಂಚಿಕೊಂಡರು. ಮಕ್ಕಳಿಗೆ ದೇಶಸೇವೆ, ನೆಲದ ಪ್ರೇಮದ ಬಗ್ಗೆ ಪಾಠ ಹೇಳಿಕೊಟ್ಟರು. ಸೇನೆಯಲ್ಲಿ ಕೆಲಸದ ರೀತಿ ಹಾಗೂ ಸೇವೆಯ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಪ್ರಾಚಾರ್ಯರ ಮಗ: ಕಾಲೇಜಿನ ಪ್ರಾಚಾರ್ಯ ಡಾ.ಎಲ್‌.ಜಿ. ಹಿರೇಮಠ ಅವರ ಮಗ ಜಿ.ಎಲ್.ಹಿರೇಮಠ 1973ರಲ್ಲಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಕಾಲೇಜಿನ ಮೊದಲ ಪ್ರಾಚಾರ್ಯ ಡಾ.ಎಸ್.ಸಿ.ನಂದೀಮಠ ಅವರ ಪುತ್ರಿ ಉಮಾ ಅವರನ್ನು ಮದುವೆಯಾಗಿದ್ದಾರೆ. ಉಮಾ ಕೂಡ ವಾಯುಪಡೆ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಕಾಲೇಜಿನಲ್ಲಿ ಜೂನಿಯರ್ ಆಗಿದ್ದ ಪ್ರಾಚಾರ್ಯರ ಮಗಳನ್ನೇ ಮದುವೆಯಾದ ಸಂಗತಿಯನ್ನು ಈ ವೇಳೆ ಹಂಚಿಕೊಂಡರು. ನಿಮ್ಮದು ಪ್ರೇಮವಿವಾಹವೇ ಎಂಬ ಮಾಧ್ಯಮದವರ ಪ್ರಶ್ನೆಗೆ ತುಂಟ ನಗೆ ಬೀರಿದರು.

ತಮ್ಮ ‘ಭಾರತ ಯಾತ್ರೆ’ ಸಂದರ್ಭದಲ್ಲಿ ಒಮ್ಮೆಯೂ ಹುಷಾರು ತಪ್ಪದೇ ನಿಗದಿತ ಅವಧಿಯಲ್ಲಿ ಚಾಲನೆ ಮುಗಿಸಿದ ಸಂತಸವನ್ನು ಹಂಚಿಕೊಂಡರು. ಇಬ್ಬರು ಮಕ್ಕಳ ಪೈಕಿ ಕಿರಿಯ ಮಗ ಸುಜಿತ್ ಹಿರೇಮಠ ಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಬಗ್ಗೆ ಹೇಳಿದರು. ಈ ವೇಳೆ ದಂಪತಿಯ ಜೊತೆಗೆ ಇದ್ದು, ವಿದ್ಯಾರ್ಥಿಗಳೊಂದಿಗೆ ಸಂವಾದದ ಸಮನ್ವಯಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT